ಸುಶೀಲ್ ಕುಮಾರ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ..!
* ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಮೇಲೆ ಕೊಲೆ ಆರೋಪ
* ಬಂಧನದ ಭೀತಿಯಲ್ಲಿ ತಲೆ ಮರೆಸಿಕೊಂಡಿರುವ ಒಲಿಂಪಿಕ್ ಪದಕ ವಿಜೇತ
* ಜೂನಿಯರ್ ನ್ಯಾಷನಲ್ ಚಾಂಪಿಯನ್ 23 ವರ್ಷದ ಕುಸ್ತಿಪಟು ಸಾಗರ್ ರಾಣಾ ಹತ್ಯೆ ಆರೋಪ
ನವದೆಹಲಿ(ಮೇ.17): ಇತ್ತೀಚೆಗೆ ಇಲ್ಲಿನ ಛತ್ರಾಸಾಲ್ ಕ್ರೀಡಾಂಗಣದಲ್ಲಿ ನಡೆದ ಗಲಾಟೆಯಲ್ಲಿ ಕುಸ್ತಿಪಟುವೊಬ್ಬ ಸಾವನ್ನಪ್ಪಿದ ಪ್ರಕರಣದಲ್ಲಿ 2 ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಹೆಸರು ಸಹ ತಳುಕು ಹಾಕಿಕೊಂಡಿದ್ದು, ಸುಶೀಲ್ ತಲೆಮರಿಸಿಕೊಂಡಿದ್ದಾರೆ.
ಜೂನಿಯರ್ ನ್ಯಾಷನಲ್ ಚಾಂಪಿಯನ್ 23 ವರ್ಷದ ಕುಸ್ತಿಪಟು ಸಾಗರ್ ರಾಣಾ ಹತ್ಯೆಯಾಗಿದೆ. ಛತ್ರಾಸಾಲ್ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿದ್ದ ರಾಣಾ ಮೇ 05ರಂದು ಹತ್ಯೆಯಾಗಿದ್ದರು. ಈ ಗಲಾಟೆಯ ವೇಳೆ ಇಬ್ಬರು ರಾಣಾ ಸ್ನೇಹಿತರು ಗಾಯಗೊಳಗಾಗಿದ್ದರು. ಈ ಗಲಾಟೆಯ ವೇಳೆ ಸುಶೀಲ್ ಕುಮಾರ್ ಹಾಗೂ ಮತ್ತವರ ಸ್ನೇಹಿತರು ಮೇ 04ರಂದು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಸುಶೀಲ್ ಕುಮಾರ್ ಸೇರಿದಂತೆ ಗಲಾಟೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಒಟ್ಟು 6 ಮಂದಿ ವಿರುದ್ಧ ಶನಿವಾರ ದೆಹಲಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಸುಶೀಲ್ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದ್ದು, ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಸತತ ಪ್ರಯತ್ನ ನಡೆಸುತ್ತಿದ್ದಾರೆ.
ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಟೋಕಿಯೋ ಒಲಿಂಪಿಕ್ಸ್ ಕನಸು ಭಗ್ನ!
ಒಟ್ಟಿನಲ್ಲಿ ದೇಶದ ದಿಗ್ಗಜ ಕುಸ್ತಿಪಟುವಿನ ಮೇಲೆಯೇ ಈ ಕೊಲೆ ಆರೋಪ ಕೇಳಿ ಬಂದಿರುವುದು ಅವರ ಅಭಿಮಾನಿಗಳನ್ನು ಆಘಾತಕ್ಕೀಡಾಗುವಂತೆ ಮಾಡಿದೆ. ಒಂದು ಕಡೆ ದೇಶದ 8 ಕುಸ್ತಿಪಟುಗಳು ಟೋಕಿಯೋ ಒಲಿಂಪಿಕ್ಸ್‌ಗೆ ಭಾಗವಹಿಸಲು ಅರ್ಹತೆ ಗಿಟ್ಟಿಸಿಕೊಂಡ ಬೀಗುತ್ತಿದ್ದರೆ, ಮತ್ತೊಂದೆಡೆ ಸುಶೀಲ್ ಘಟನೆ ಕುಸ್ತಿ ಕ್ರೀಡೆಗೆ ಕಪ್ಪುಚುಕ್ಕೆಯಾಗುವ ಸಾಧ್ಯತೆಯಿದೆ.
ಸುಶೀಲ್ ಕುಮಾರ್ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಇದಾದ ಬಳಿಕ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ರಜತ ಪದಕಕ್ಕೆ ಮತ್ತಿಕ್ಕಿದ್ದನ್ನು ಸ್ಮರಿಸಬಹುದಾಗಿದೆ.