ತಮ್ಮ ಹೆಸರನ್ನೇ ‘ನೇತಾಜಿ ಗಾಂಧಿ’ ಎಂದೇ ಬದಲಾಯಿಸಿಕೊಂಡ ತರುಣ ಗಾಂಧಿ!
ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ತನ್ನ ಹೆಸರನ್ನೇ ‘ನೇತಾಜಿ ಗಾಂಧಿ’ಎಂದು ಬದಲಿಸಿಕೊಂಡು ನಾಡಿನ ವಿವಿಧೆಡೆ ಗಾಂಧಿ ತತ್ವಗಳನ್ನು ಪ್ರಚಾರ ಮಾಡುತ್ತಾ, ಉಪನ್ಯಾಸಗಳನ್ನು ನೀಡುತ್ತಾ ಗಾಂಧಿ ಆದರ್ಶ, ತತ್ವವಿಚಾರಗಳನ್ನು ಯುವಪೀಳಿಗೆಯಲ್ಲಿ ಜೀವಂತಗೊಳಿಸುವ ಕೈಂಕರ್ಯದಲ್ಲಿ ತೊಡಗಿರುವವರೇ ವಿಜಯಪುರ ಜಿಲ್ಲೆಯ ಆಲಮಟ್ಟಿ ಹತ್ತಿರದ ಬೇನಾಳ್ ಎಂಬ ಗ್ರಾಮದ ನಿಲೇಶ್ ಬೇನಾಳ್.
ಅಕ್ಟೋಬರ್ 2 ಬಂದರೆ ಸಾಕು ದೇಶದೆಲ್ಲೆಡೆ ಗಾಂಧಿಜಯಂತಿ ಸಂಭ್ರಮ ಸಡಗರ ಕಳೆಗಟ್ಟುತ್ತದೆ. ದೇಶವಷ್ಟೇ ಏಕೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಅಂದು ಗಾಂಧೀಜಿ ಸ್ಮರಿಸುವ ಚಟುವಟಿಕೆಗಳು ನಡೆಯುತ್ತವೆ. ಅಂದು ಖಾದಿ ಬಟ್ಟೆಗಳ ಮೇಲೆ ಖಾದಿ ಉತ್ಪನ್ನಗಳ ಮೇಲೆ ರಿಯಾಯತಿ ಘೋಷಿಸುವ ಮೂಲಕ ಸರ್ಕಾರ ಖಾದಿ ಬಳಕೆಗೆ ಪ್ರೋತ್ಸಾಹ ನೀಡಿದರೆ, ಗಾಂಧಿ ತತ್ವಗಳಾದ ಸತ್ಯ, ಅಹಿಂಸೆ, ದುಶ್ಚಟಗಳ ನಿವಾರಣೆ, ಸ್ವಾವಲಂಬನೆ ಇತ್ಯಾದಿ ಅವರ ಬದುಕಿನ ಅಂಶಗಳ ಮೇಲೆ ಬೆಳಕು ಚೆಲ್ಲುವ ವಿಚಾರಗಳತ್ತ ವಿವಿಧ ಉಪನ್ಯಾಸಗಳು ಜರಗುತ್ತವೆ. ಗಾಂಧೀ ಬದುಕಿನ ಧಾರೆಗಳನ್ನು ಶಾಲೆಗಳಲ್ಲಿ ಮಕ್ಕಳಿಗೆ ತಿಳಿಸುತ್ತೇವೆ. ಹೀಗೆ ಎಲ್ಲ ವಿಧದಲ್ಲಿಯೂ ಗಾಂಧೀಜಿಯವರ ಸ್ಮತಿಯನ್ನು ಮಾಡುತ್ತೇವೆ.
ಆದರೆ ಇವೆಲ್ಲವುಗಳಿಗಿಂತ ವಿಭಿನ್ನವಾಗಿದೆ ವಿಜಯಪುರದ ಯುವಕನ ಕತೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಹತ್ತಿರದ ಬೇನಾಳ್ ಎಂಬ ಗ್ರಾಮದ ನಿಲೇಶ್ ಬೇನಾಳ್ ಎಂಬ ಯುವಕ ಸುಮಾರು ವರ್ಷಗಳ ಹಿಂದೆ ತನ್ನ ಹೆಸರನ್ನೇ ನೇತಾಜಿ ಗಾಂಧಿ ಎಂದು ಬದಲಿಸಿಕೊಂಡು ಕಳೆದ ಇಪ್ಪತ್ತೈದು ವರ್ಷಗಳಿಂದ ನಾಡಿನ ವಿವಿಧೆಡೆ ಗಾಂಧಿ ತತ್ವಗಳನ್ನು ಪ್ರಚಾರ ಮಾಡುತ್ತ ಸಾಗುತ್ತಿರುವುದು ಬಹಳಷ್ಟು ಜನರಿಗೆ ಗೊತ್ತಿರದ ಸಂಗತಿ. ಅನನ್ಯ ಗಾಂಧೀ ಪ್ರೇಮ ಇವರ ಮೂಲ ಊರು ಬಸವನಬಾಗೇವಾಡಿ ತಾಲೂಕಿನ ಬೇನಾಳ್ ಗ್ರಾಮ. ಇದು ಕೃಷ್ಣಾ ನದಿ ನೀರಿನಲ್ಲಿ 1997 ರಲ್ಲಿ ಮುಳುಗಡೆಯಾದ ಪ್ರದೇಶ. ಶರಣ ದಂಪತಿಗಳಾದ ಇವರ ತಂದೆ ಉಮೇಶಪ್ಪ ತಾಯಿ ಕಾಶೀಬಾಯಿಯವರ ಹನ್ನೊಂದು ಜನ ಮಕ್ಕಳಲ್ಲಿ ಇವರು ಕೊನೆಯವರು.
ರಾಷ್ಟ್ರಪಿತನ ಒಂದೂವರೆ ಶತಮಾನದ ಸ್ಮರಣೆ; ಭಾರತದಲ್ಲಿ ಏನೇನು ಕಾರ್ಯಕ್ರಮ?
ಇವರು ಹುಟ್ಟಿದ್ದು 31 ಡಿಸೆಂಬರ್ 1975 ರಲ್ಲಿ. ಬಾಲ್ಯದ ಓದು ಬೇನಾಳದಲ್ಲಿಯೇ ಸಾಗಿತು. ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಕರ್ನಾಟಕದ ಗಾಂಧಿ ಹೆಸರಿನ ಆಲಮಟ್ಟಿಯ ಮಂಜಪ್ಪ ಹರ್ಡೆಕರ್ ಮೆಮೋರಿಯಲ್ ಜ್ಯೂನಿಯರ್ ಕಾಲೇಜಿನಲ್ಲಿ ಮತ್ತು ಮುದ್ದೇಬಿಹಾಳದ ಎಮ್.ಜಿ.ವ್ಹಿ.ಸಿ ಕಾಲೇಜಿನಲ್ಲಿ ಪದವಿ ಮುಗಿಸಿದರು. ತಂದೆ ತೀರಿಹೋಗಿ ಇಪ್ಪತ್ತು ವರ್ಷವಾದರೆ ತಾಯಿ ತೀರಿಹೋಗಿ ಏಳು ವರ್ಷವಾಯಿತಂತೆ. ಹನ್ನೊಂದು ಜನರಲ್ಲಿ ಏಳು ಜನ ಈಗಿಲ್ಲ. ಇವರ ಹಿರಿಯ ಸಹೋದರನಿಗೆ ಈಗ 64 ವರ್ಷ. ಸಹೋದರಿಗೆ 60 ವರ್ಷ ಇವರಿಗೀಗ 44 ವರ್ಷ ವಯಸ್ಸು.
ಇವರು ತಮ್ಮ ಬಗ್ಗೆ ಎಲ್ಲಿಯೂ ಪ್ರಚಾರ ಬಯಸದ ವ್ಯಕ್ತಿ. ನನಗೆ ಬರವಣಿಗೆ ಮೂಲಕ ಪರಿಚಿತವಾದರು. ಕಳೆದ ವರ್ಷ ಶಿಕ್ಷಣ ಇಲಾಖೆಯಿಂದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಆಲಮಟ್ಟಿ ಜವಾಹರ್ ನವೋದಯ ವಿದ್ಯಾಲಯಯಲ್ಲಿ ಜರುಗಿದಾಗ ಮುಖತಃ ಇವರನ್ನು ನೋಡುವ ಅವಕಾಶ ಸಿಕ್ಕಿತು. ಎರಡು ದಿನಗಳಲ್ಲಿ ಸಮ್ಮೇಳನದ ಬಿಡುವಿನ ಸಮಯ ಇವರ ಬದುಕಿನ ಕುರಿತು. ನೇತಾಜಿ ಗಾಂಧೀಜಿ ಕುರಿತ ಇವರ ಪ್ರೇಮದ ಬಗ್ಗೆ ತಿಳಿಯುವ ಸದವಕಾಶ ನನಗೆ ದೊರೆಯಿತು.
ಪ್ರತಿ ವರ್ಷ ತನ್ನ ಉದ್ಯೋಗದ ಆದಾಯದಲ್ಲಿ ವರ್ಷದಲ್ಲಿ ಕನಿಷ್ಟ ಎರಡು ಅಥವ ಮೂರು ಸಲವಾದರೂ ದೇಶದೆಲ್ಲೆಡೆ ಸಂಚರಿಸುವ ಇವರು ಬಾಪೂಜಿಯ ಹೆಜ್ಜೆಗುರುತುಗಳು ಎಲ್ಲೆಲ್ಲಿವೆಯೋ? ಅಲ್ಲಿಗೆ ತೆರಳಿ ಅಲ್ಲಿನ ಅನುಭವಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಆ ಸ್ಥಳದ ಮಹತ್ವ ಬಾಪೂಜಿ ಕುರಿತು ತಿಳಿಸುತ್ತಾರೆ. ಅಷ್ಟೇ ಅಲ್ಲ ಗಾಂಧೀಜಿ ಬದುಕಿನ ಸ್ಥಳಗಳನ್ನು ಸ್ಮಾರಕಗಳನ್ನು ನೋಡಿಕೊಂಡು ಬಂದು ಅವುಗಳ ಪೋಟೋಗಳನ್ನು ಗಾಂಧೀಜಿಯವರ ಅಪರೂಪದ ಭಾವಚಿತ್ರಗಳನ್ನು ಲ್ಯಾಮಿನೇಷನ್ ಮಾಡಿ ಶಾಲಾ ಕಾಲೇಜುಗಳಲ್ಲಿ ಬಾಪೂ ಬದುಕಿನ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿರುವರು.
ಇವರ ಹೆಸರೇ ನೇತಾಜಿ ಗಾಂಧಿ. ಇದು ಇವರ ಶೀಕಿಯ ಹೆಸರಲ್ಲ. ಇವರ ಆಧಾರ ಕಾರ್ಡ್ ಮತದಾರರ ಗುರುತಿನ ಪತ್ರ. ಮತ್ತು ಬ್ಯಾಂಕ್ ಖಾತೆ. ವಿಳಾಸದ ಎಲ್ಲದರಲ್ಲೂ ಇವರು ನೇತಾಜಿ ಗಾಂಧಿ ಎಂದು ಬದಲಿಸಿಕೊಂಡಿರುವರು. ನೀವೇಕೆ ನೇತಾಜಿ ಮತ್ತು ಗಾಂಧೀಜಿ ಹೆಸರನ್ನು ಇಟ್ಟುಕೊಂಡಿರುವಿರಿ ಎಂದು ಕೇಳಿದರೆ ‘ಗಾಂಧಿ ಮಹಾತ್ಮ ನನ್ನ ಆತ್ಮವಾದರೆ ಬೋಸ್ ನೇತಾಜಿ ನನ್ನ ರಕ್ತ ಮಾಂಸ. ಅವರಿಬ್ಬರ ತ್ಯಾಗ ನಿಸ್ವಾರ್ಥ ತ್ಯಾಗ, ಬಲಿದಾನದ ಹೋರಾಟದಿಂದ ಪ್ರೇರಣೆಯಾಗಿ ಅವರಿಬ್ಬರ ಹೆಸರನ್ನು ಇಟ್ಟುಕೊಂಡಿದ್ದೇನೆ’ ಎನ್ನುತ್ತಾರೆ ನೇತಾಜಿ ಗಾಂಧಿ.
ಇಂದಷ್ಟೇ ಅಲ್ಲ, ಅನುದಿನವೂ ಇವರ ನೆನೆಯೋಣ!
ಪತ್ರಿಕೆಗಳಲ್ಲೂ ಛಾಪು ಮೂಡಿಸಿದವರು
2009 ರಿಂದ ವಿಜಯಪುರ ಜಿಲ್ಲಾ ಆಕಾಶವಾಣಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿರುವ ಈ ಜರ್ನಲಿಸ್ಟ್ ಗಾಂಧಿ. ಪತ್ರಿಕೋದ್ಯಮದಲ್ಲಿ ಡಿಪ್ಲೊಮ ಪದವಿಯನ್ನು ಮೈಸೂರು ಮಾನಸಗಂಗೋತ್ರಿಯ ವಿಶ್ವವಿದ್ಯಾಲಯದಿಂದ
ಪಡೆದಿದ್ದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎ.ಪದವಿಯನ್ನೂ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ.ಪದವಿಯನ್ನು ಇತಿಹಾಸ ವಿಷಯದಲ್ಲಿ ಪಡೆದಿರುವರು. ಇವರು 2002 ರಿಂದ 2009 ರವರೆಗೆ ಬೆಂಗಳೂರು ದೂರದರ್ಶನದ ಚಂದನವಾಹಿನಿಯಲ್ಲಿ ವಾರ್ತೆಗಳ ವಿಭಾಗದಲ್ಲಿ ಎಡಿಟೋರಿಯಲ್ ಅಸಿಸ್ಟಂಟ್ ಆಗಿಯೂ ಕೆಲಸ ಮಾಡಿದ್ದಾರೆ.ನಂತರ ಉಷಾಕಿರಣ ಕನ್ನಡ ದಿನಪತ್ರಿಕೆಯಲ್ಲಿ ಹಾವೇರಿ ಜಿಲ್ಲಾ ವರದಿಗಾರ ಮತ್ತು ಕಿರಿಯ ಸಂಪಾದಕನಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ತವರು ಜಿಲ್ಲೆಯಾದ ವಿಜಯಪುರಕ್ಕೆ 2009 ರಲ್ಲಿ ಬಂದ ನೇತಾಜಿ. ಜುಲೈ 1 ರಿಂದ ವಿಜಯಪುರ ಜಿಲ್ಲಾ ಆಕಾಶವಾಣಿ ವರದಿಗಾರಮಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವುಗಳ ನಡುವೆ ಅಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮಾಗಾಂಧೀಜಿಯವರು ಪ್ರಕಟ ಮಾಡುತ್ತಿದ್ದ ಯಂಗ್ ಇಂಡಿಯಾ ಜರ್ನಲ್‌ನ ಟೈಟಲ್‌ನ್ನು ಪಡೆದುಕೊಂಡು 2013 ಜನವರಿ 30 ರಂದು ಯಂಗ್ ಇಂಡಿಯಾ ಎಂಬ ವಾರಪತ್ರಿಕೆಯನ್ನು ಹುಟ್ಟುಹಾಕಿದರು. ಇದರಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಗಳನ್ನು ಮತ್ತು ಅವರ ಅಪರೂಪದ ಚಿತ್ರಗಳನ್ನು ಪ್ರಕಟಿಸುತ್ತಿರುವುದು ಹೆಮ್ಮೆಯ ಸಂಗತಿ.ಈ ಪತ್ರಿಕೆಯ ವಿಶೇಷ.
ಏನೆಂದರೆ ಯಾರಿಗೂ ದುಡ್ಡು ತಗೆದುಕೊಂಡು ಮಾರದೇ,ಕೇವಲ ಸದಸ್ಯತ್ವ ಮೂಲಕ ಮಾತ್ರ ನಡೆಸುತ್ತಾರೆ.ಜೊತೆಗೆ ಪತ್ರಿಕೆಗೆ ಯಾವುದೇ ಜಾಹೀರಾತು ಕೂಡ ಪಡೆಯದಿರುವುದು ಇವರ ಹೆಮ್ಮೆಯ ಆದರ್ಶ. ಉಪನ್ಯಾಸಕ್ಕೂ ಸೈ
ಇದರ ಜೊತೆಗೆ ರಾಷ್ಟ್ರಪಿತ ಮಹಾತ್ಮಾಗಾಂಧಿ ಫಿಲಾಸಿಫಿಕಲ್ ಯೂಥ್ ಪೋರಂ ಮತ್ತು ಸಮರ ಸೇನಾನಿ ನೇತಾಜಿ ತರುಣರ ಸಂಘ ಎನ್ನುವ 2 ಸಂಘಟನೆಗಳನ್ನು 25 ವರ್ಷಗಳ ಹಿಂದೆ ಸಮಾನ ಮನಸ್ಕ ಸ್ನೇಹಿತರನ್ನು ಸೇರಿಸಿಕೊಂಡು ಗಾಂಧೀಜಿಯವರ ಸರ್ವೋದಯ ತತ್ವದಡಿಯಲ್ಲಿ ಹುಟ್ಟು ಹಾಕಿದ್ದಾರೆ.
ಇದೇ ಸಂಸ್ಥೆಗಳ ಆಶ್ರಯದಲ್ಲಿ ಪ್ರತಿ ತಿಂಗಳೂ ಆಯ್ದ ಶಾಲೆ ಮತ್ತು ಕಾಲೇಜುಗಳಿಗೆ ತೆರಳಿ ಬಾಪೂ ಹೆಸರಿನ ಮೇಲೆ ‘ಕಾಲೇಜ್ ಟು ಕಾಲೇಜ್ ಗಾಂಧೀ ಥಾಟ್ಸ ಸರಣಿ’ ಉಪನ್ಯಾಸ ಮತ್ತು ರಸಪ್ರಶ್ನೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವರು.ಆತ್ಮತೃಪ್ತಿಗಾಗಿ ಬಾಪೂಜಿ ಮತ್ತು ನೇತಾಜಿಯವರ ತತ್ವ ಸಿದ್ದಾಂತಗಳನ್ನು ಅವರ ಬದುಕಿನ ಮೌಲ್ಯಗಳನ್ನು ಕುರಿತು ಕಾಲೇಜಿನಿಂದ ಕಾಲೇಜಿಗೆ ಹೋಗಿ ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ತಮ್ಮ ಉಪನ್ಯಾಸ ಮೂಲಕ ವಿಶ್ವನಾಯಕರ ಬಗ್ಗೆ ತಿಳಿಸುವ ಇವರ ಈ ಗುಣವನ್ನು ಮೆಚ್ಚಲೇಬೇಕು.
ಇಲ್ಲಿಯವರೆಗೆ ಇವರು 48 ಕಾಲೇಜುಗಳು 16 ಪ್ರೌಢಶಾಲೆಗಳಲ್ಲಿ,೬ ಪ್ರಾಥಮಿಕ ಶಾಲೆಗಳಲ್ಲಿಸುಮಾರು 19,600 ಮಕ್ಕಳಿಗೆ ಉಪನ್ಯಾಸ ನೀಡಿರುವರು.ಇದೊಂದು ಆತ್ಮತೃಪ್ತಿಯ ಕೆಲಸ,ಇದನ್ನು ಜೀವಿತಾವಧಿಯವರೆಗೂ ಮಾಡುವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.ಅಂದ ಹಾಗೆ ಇವರಿಗೆ ಇಬ್ಬರು ಗಂಡು ಮಕ್ಕಳು ಅವರ ಹೆಸರು ಕೂಡ ದೇಶಭಕ್ತರ ಹೆಸರೇ ಆಗಿರೋದು ವಿಶೇಷ ಮೊದಲ ಮಗ ೧೧ ವರ್ಷದ ಗಾಂಧಿ ತಿಲಕ್ ಟ್ಯಾಗೋರ್ . ಎರಡನೆಯವನು ೮ ವರ್ಷದ ಗಾಂಧಿ ಗೋಖಲೆ ಟ್ಯಾಗೋರ್.
ಈ ತಂದೆ ಮಕ್ಕಳ ಹೆಸರಲ್ಲಿ ಲೋಕಮಾನ್ಯ ತಿಲಕ್.ಗುರುದೇವ ಟ್ಯಾಗೋರ್. ಶಾಂತಿ ಮಾರ್ಗದ ನೇತಾರ ಗೋಖಲೆ,ಮಹಾತ್ಮಾ ಗಾಂದೀಜಿ ಮತ್ತು ನೇತಾಜಿ ಬೋಸ್ ಸೇರಿ ಹೋಗಿದ್ದಾರೆ. ಈ ಮೂವರ ಹೆಸರಲ್ಲಿ ಅಮರಜೀವಿಗಳು ಚಿರಸ್ಥಾಯಿಯಾಗಿ ನಿಂತಿದ್ದಾರೆ. ವಿಶ್ವವಂದ್ಯ ಗಾಂಧೀಜಿ ಸೇರಿದಂತೆ ಉಳಿದ ನೇತಾರರ ಮೇಲಿನ ಇವರ ಅಭಿಮಾನ ಹೀಗೆಯೇ ನಾಡಿನೆಲ್ಲೆಡೆ ಪಸರಿಸಲಿ ಎಂದು ಆಶಿಸೋಣ.ಇಲ್ಲಿಯವರೆಗೆ ಈ ತರುಣ ಗಾಂಧಿಗೆ ಸಮಾಜದ ಅನೇಕ ಸಂಘ ಸಂಸ್ಥೆಗಳು ಹಲವಾರು ಬಾರಿ ಸನ್ಮಾನಿಸಿ ಸತ್ಕರಿಸಿದ್ದಾರೆ. ಮಹಾತ್ಮ ಗಾಂಧೀಜಿ ಸ್ವಾಮಿ ವಿವೇಕಾನಂದ ಪ್ರಣೀತ 2019 ರ ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಿದ್ದವ್ವನ ಹಳ್ಳಿಯ ಬುದ್ದ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಗಾಂಧೀ ಶಾಂತಿ ಪ್ರತಿಷ್ಠಾನ ಇವರು ಈ ನೇತಾಜಿ ಗಾಂಧಿಗೆ ರಾಜ್ಯಮಟ್ಟದ ಸದ್ಬಾವನಾ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.ಅಂತೆಯೇ ಇದೇ ಸೆಪ್ಟಂಬರ್ ೨೧ ಧಾರವಾಡದ ಅಪ್ನಾದೇಶ ಬಳಗದವರು ರಾಜ್ಯ ಮಟ್ಟದ ಶ್ರಮಿಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು.ಇವರ ಪರಿಶ್ರಮ ಹೀಗೆಯೇ ಸಾಗಲಿ ಗಾಂಧೀ ಬದುಕನ್ನು ನೇತಾಜಿಯ ಶೌರ್ಯವನ್ನು ಮರೆಯುತ್ತಿರುವ ಇಂದಿನ ಪೀಳಿಗೆಗೆ ಇಂತವರ ಅವಶ್ಯಕತೆ ಇದೆ.ಅದು ಇನ್ನೂ ಹೆಚ್ಚು ಪ್ರಚುರವಾಗಲೆಂದು ಆಶಿಸೋಣ.
ಇವರ ಸಂಪರ್ಕ ಸಂಖ್ಯೆ 938056989
- ವೈ ಬಿ ಕಡಕೋಳ