ಅವಿಶ್ವಾಸ ನಿರ್ಣಯ ಮಂಡನೆ ಇತಿಹಾಸ ಕೆದಕುತ್ತಾ...!
ಅವಿಶ್ವಾಸ ನಿರ್ಣಯ ಮಂಡನೆ ಇತಿಹಾಸ ಗೊತ್ತೇ?
ಇದುವರೆಗೂ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು ಎಷ್ಟು ಬಾರಿ?
ಇಂದಿರಾ ವಿರುದ್ಧ 15 ಬಾರಿ ಅವಿಶ್ವಾಸ ನಿರ್ಣಯ ಮಂಡನೆ
ಶಾಸ್ತ್ರಿ, ದೇಸಾಯಿ, ನರಸಿಂಹ್ ರಾವ್, ವಾಜಪೇಯಿ ವಿರುದ್ಧವೂ ಮಂಡನೆ
ನವದೆಹಲಿ(ಜು.20): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಸದ್ಯ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಪ್ರಧಾನಿ ಮೋದಿ ಕಾರ್ಯವೈಖರಿ ಖಂಡಿಸಿ ಮಾತನಾಡುತ್ತಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯನ್ನು ಮತಕ್ಕೆ ಹಾಕಲಾಗುತ್ತದೆ.
ಹಾಗೆ ನೋಡಿದರೆ ಕೇಂದ್ರ ಸರ್ಕಾರವೊಂದರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗುತ್ತಿರುವುದು ಇದೇ ಮೊದಲೇನಲ್ಲ. ಸ್ವಾತಂತ್ರ್ಯೋತ್ತರ ಭಾರತದ ಪ್ರಜಾತಾಂತ್ರಿಕ ಇತಿಹಾಸದಲ್ಲಿ ಹಲವು ಬಾರಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿದೆ. ಪ್ರಜೆಗಳಿಂದ ಚುನಾಯಿತವಾದ ಸರ್ಕಾರವೊಂದು ಪ್ರಜೆಗಳ ವಿಶ್ವಾಸ ಕಳೆದುಕೊಂಡಿದೆ ಎಂಬುದರ ಪ್ರತೀಕವಾಗಿ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗುತ್ತದೆ. ಸದನದ ಸದಸ್ಯರ ವಿಶ್ವಾಸ ಕಳೆದುಕೊಳ್ಳುವ ಸರ್ಕಾರ ಅಧಿಕಾರದಿಂದ ನಿರ್ಗಮಿಸಬೇಕಾಗುತ್ತದೆ.
ಹಾಗಾದರೆ ಅವಿಶ್ವಾಸ ನಿರ್ಣಯ ಮಂಡನೆಯ ಕುರಿತು ಭಾರತದ ರಾಜಕೀಯ ಇತಿಹಾಸ ಏನು ಹೇಳುತ್ತದೆ ಎಂಬುದನ್ನು ನೋಡುವುದಾದರೆ, ಕಳೆದ ಬಾರಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು 15 ವರ್ಷಗಳ ಹಿಂದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ 2003ರಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು.
ಇದಕ್ಕೂ ಹಿಂದಿನ ಇತಿಹಾಸ ಕೆದಕುತ್ಥಾ ಹೋದಂತೆ ಈವರೆಗೂ ಒಟ್ಟು ಒಟ್ಟು 27 ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು ತಿಳಿಯುತ್ತದೆ. ಇದರಲ್ಲಿ ಕಾಂಗ್ರೆಸ್ ಸರ್ಕಾರಗಳದ್ದೇ ಸಿಂಹಪಾಲು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರಗಳ ವಿರುದ್ಧ ಈವರೆಗೆ ಒಟ್ಟು 23 ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿವೆ
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅತೀ ಹೆಚ್ಚು ಬಾರಿ ಅವಿಶ್ವಾಸ ನಿರ್ಣಯ ಮಂಡನೆ ಎದುರಿಸಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು. ಇಂದಿರಾ ಗಾಂಧಿ ಒಟ್ಟು 15 ಬಾರಿ ಅವಿಶ್ವಾಸ ನಿರ್ಣಯ ಮಂಡನೆ ಎಂಬ ಯುದ್ಧ ಗೆದ್ದಿದ್ದಾರೆ. ಸ್ವತಂತ್ರ್ಯ ಭಾರತದ ಮೊಟ್ಟ ಮೊದಲ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು, ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಸರ್ಕಾರದ ವಿರುದ್ಧ. 1963 ರಲ್ಲಿ ಜೆಬಿ ಕೃಪಲಾನಿ ಅವರು ನೆಹರೂ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದರು.
ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ, ಮತ್ತು ಮಾಜಿ ಪ್ರಧಾನಿ ಪಿವಿ ನರಸಿಂಹ್ ರಾವ್ ಕೂಡ ಒಟ್ಟು ಮೂರು ಬಾರಿ ಅವಿಶ್ವಾಸ ನಿರ್ಣಯ ಮಂಡನೆ ಎದುರಿಸಿದ್ದಾರೆ. ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಸರ್ಕಾರ ಕುಡ ಅವಿಶ್ವಾಸ ನಿರ್ಣಯ ಮಂಡನೆಯನ್ನು ಲೋಕಸಭೆಯಲ್ಲಿ ಎದುರಿಸಿತ್ತು. ಅವಿಶ್ವಾಸ ನಿರ್ಣಯ ಮಂಡನೆ ಎದುರಿಸಿದ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಇದು. ಆದರೆ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗುವ ಮೊದಲೇ ಮೊರಾರ್ಜಿ ದೇಸಾಯಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಒಟ್ಟು ಮೂರು ಬಾರಿ ಅವಿಶ್ವಾಸ ನಿರ್ಣಯ ಮಂಡನೆ ಎದುರಿಸಿದ್ದಾರೆ. 1996ರಲ್ಲಿ ಅವಿಶ್ವಾಸ ಮಂಡನೆಗೂ ಮೊದಲೇ ವಾಜಪೇಯಿ ಕೇವಲ 13 ದಿನ ಆಡಳಿತ ನಡೆಸಿ ಅಧಿಕಾರದಿಂದ ನಿರ್ಗಮಿಸಿದ್ದರು. ಮತ್ತೆ 1999ರಲ್ಲಿ ವಾಜಪೇಯಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ಆಗಲೂ ವಾಜಪೇಯಿ ಕೇವಲ 13 ತಿಂಗಳುಗಳ ಕಾಲ ಆಡಳಿತ ನಡೆಸಿ ಅಧಿಕಾರ ತ್ಯಜಿಸಿದ್ದರು. ಮತ್ತೆ 2004ರಲ್ಲಿ ಸೋನಿಯಾ ಗಾಂಧಿ ವಾಜಪೇಯಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು.
ಈ ಸುದ್ದಿಗಳನ್ನೂ ಓದಿ-ಲೋಕಸಭೆಯಲ್ಲಿ ಪ್ರಧಾನಿ ತಬ್ಬಿಕೊಂಡ ರಾಹುಲ್!
ರಾಹುಲ್ ಕಣ್ಣು ಹೊಡೆದಿದ್ದು ಯಾರಿಗೆ? ಯಾಕೆ?
ಈ ಸುದ್ದಿಯನ್ನು ಇಂಗ್ಲೀಷ್ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ-Modi government faces trust vote: History of no confidence motions in Indian Parliament