ಹಿಂಸೆ ಪ್ರೀತಿಗಳ ವಿಭಿನ್ನ ಲಯ: ಕರಾಳ ವರ್ಣಭೇದ ನೀತಿಯ ಕರಾಳ ಮುಖವಿದು!
ಕಪ್ಪು ಮತ್ತು ಶ್ವೇತ ವರ್ಣೀಯರ ವರ್ಣಭೇದ ನೀತಿ ಬಗ್ಗೆ ಈಗಾಗಲೇ ಹತ್ತು ಹಲವು ನಾಟಕ, ಸಿನಿಮಾಗಳು ಬಂದಿವೆ. ಆದರೆ ಲೂಯಿಸ್ ನಿಕೋಸಿಯ 'ರಿದಂ ಆಫ್ ವಾಯ್ಲೆನ್ಸ್' ಈ ನೀತಿಯ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತದೆ.
ದಕ್ಷಿಣ ಆಫ್ರಿಕಾದ ಕರಾಳ ವರ್ಣಭೇದ ನೀತಿ, ಹಲವು ಹಿಂಸಾತ್ಮಕ ಹೋರಾಟಗಳಿಗೆ ಕಂಡು ಕೇಳರಿಯದ ರಕ್ತಪಾತಕ್ಕೆ ಕಾರಣವಾಗಿತ್ತು. 1948 ರಿಂದ 1990ರ ವರೆಗಿನ ದಕ್ಷಿಣ ಆಫ್ರಿಕಾದ ದಾರಣ ಚಿತ್ರಣವನ್ನು ನೀಡುವ ನಾಟಕ ಕಪ್ಪು ಹೋರಾಟಗಾರ ಹಾಗೂ ನಾಟಕಕಾರ ಲೂಯಿಸ್ ನಿಕೋಸಿಯ 'ರಿದಂ ಆಫ್ ವಾಯ್ಲೆನ್ಸ್'ನ ಕನ್ನಡ ರೂಪಾಂತರ 'ಆ ಲಯ ಈ ಲಯ'( ಕನ್ನಡಕ್ಕೆ- ನಟರಾಜ ಹೊನ್ನವಳ್ಳಿ) ನಾಟಕ, ಸಾಣೆ ಹಳ್ಳಿಯ ಶಿವಕುಮಾರ ರಂಗಪ್ರಯೋಗ ಶಾಲೆಯ ಈ ಸಾಲಿನ ವಿದ್ಯಾರ್ಥಿಗಳಿಂದ ಅಭ್ಯಾಸ ಕ್ರಮವಾಗಿ ಪ್ರದರ್ಶನ ಕಂಡಿತು.
ಕ್ರೌರ್ಯ ಹಾಗೂ ಹಿಂಸೆ ಮಾನವ ಪ್ರಾಣಿಯ ಹುಟ್ಟು ಗುಣ. ಈ ನೆಲೆಯಲ್ಲಿ ಬಣ್ಣ ಜಾತಿಗಳಿಂದ ತಾವೇ ಶ್ರೇಷ್ಠರು ಎಂಬ ಜನಾಂಗೀಯ ಮನೋಭಾವದ ಬಿಳಿಯ ಆಡಳಿತಗಾರರು ಪ್ರಪಂಚದ ಬೇರೆ ಬೇರೆ ಭಾಗಗಳನ್ನು ತಮ್ಮ ಬಂದೂಕಿನ ಬಲದಿಂದ ಅತಿಕ್ರಮಿಸಿಕೊಂಡು, ಅಲ್ಲಿನ ಮೂಲ ನಿವಾಸಿಗಳ ಮೇಲೆ ವರ್ಗ ದೌರ್ಜನ್ಯ ನಡೆಸಿರುವುದು ಈ ಜಗತ್ತಿನ ಕರಾಳ ಇತಿಹಾಸ. ದಕ್ಷಿಣ ಆಫ್ರಿಕಾದಲ್ಲಿ 1948 ರಿಂದ 1990ರ ವರೆಗೆ ತೀವ್ರವಾಗಿದ್ದ ವರ್ಣಭೇದ ನೀತಿ ಅಲ್ಲಿನ ಮೂಲ ನಿವಾಸಿಗಳಾದ ಕಪ್ಪು ಜನರನ್ನು ಕಾಫಿರರೆಂದು ಕೀಳಾಗಿ ಕಾಣುತ್ತಾ, ಅವರ ಮೇಲೆ ಬಿಳಿಯ ಆಡಳಿತಗಾರರ ನಿರಂತರ ದಬ್ಬಾಳಿಕೆಗೆ ಕಾರಣವಾಗಿತ್ತು. ಈ ನಾಟಕ ಆರಂಭವಾಗುವುದು ವರ್ಣಭೇದ ಅಸಮಾನತೆಯ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನದ ಚಿತ್ರಣದ ಮೂಲಕ. ಅವರ ಕಾವಲಿಗೆ ಕುಳಿತಿದ್ದ ಬಿಳಿಯ ಸೈನಿಕರಿಬ್ಬರ ಸಂಭಾಷಣೆ, ಅವರಿಗೆ ಕಪ್ಪು ಜನರ ಮೇಲಿನ ಮನದಾಳದ ಅಸಹನೆ, ತಮ್ಮ ಮೈಬಣ್ಣವೇ ಶ್ರೇಷ್ಠವೆಂಬ ಕ್ರೂರ ಜನಾಂಗೀಯ ಮನೋಭಾವ ಹಾಗೂ ಅಂದಿನ ಅಲ್ಲಿನ ಆಡಳಿತ ವ್ಯವಸ್ಥೆಯಲ್ಲಿದ್ದ ವಾಕ್ ಸ್ವಾತಂತ್ರ್ಯದ, ವ್ಯಕ್ತಿ ಸ್ವಾತಂತ್ರ್ಯದ ಹರಣತೆ ಮುಂತಾದವುಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಹಿಂದೆ ನಡೆದ ಹಿಂಸಾಚಾರದಲ್ಲಿ ತಾನು ಕರಿಯರನ್ನು ಹೇಗೆ ನಿರ್ದಯವಾಗಿ ಸಾಯಿಸಿದ್ದೆ ಎಂದು ಹೇಳುವ ಬಿಳಿಯ ಸೈನಿಕನ ಕ್ರೌರ್ಯ ಹಾಗೂ ಕರಿಯರನ್ನು ಪ್ರಾಣಿಗಳಿಗಿಂತ ಕೀಳಾಗಿ ನೋಡುವ ಮಾನಸಿಕ ಸ್ಥಿತಿ ಅಂದಿನ ಸನ್ನಿವೇಶದ ಕರಾಳತೆಗೆ ಹಿಡಿದ ಕನ್ನಡಿಯಾಗುತ್ತದೆ.
ಸಾಣೇಹಳ್ಳಿ ನಾಟಕೋತ್ಸವದಲ್ಲಿ ಕಾಳಿದಾಸನ ದೃಶ್ಯ ಕಾವ್ಯ- ಮೇಘದೂತ ದರ್ಶನ
ಇನ್ನೊಂದು ಬದಿಯಲ್ಲಿ ಕಪ್ಪು ವಿದ್ಯಾರ್ಥಿಗಳ ಹೋರಾಟ ಕಟ್ಟಿದ ವಿದ್ಯಾರ್ಥಿ ನಾಯಕ ಗಾಮ ಸಹಜವಾಗಿ ಆಫ್ರಿಕಾದ ಜನರಂತೆ ಸಂಗೀತ ನೃತ್ಯಪ್ರಿಯ. ಅದರಿಂದ ತನ್ನ ಹೋರಾಟಕ್ಕೆ ಬಲ ತುಂಬುತ್ತಿರುವ ಆತ ಹೋರಾಟದ ತಾತ್ವಿಕ ಅಂತ್ಯಕ್ಕೆ ಆಯ್ದುಕೊಂಡ ಲಯ ಮಾತ್ರ ಹಿಂಸೆಯದ್ದು.ಇತ್ತ ಈ ಕಪ್ಪು ವಿದ್ಯಾರ್ಥಿಗಳೆಲ್ಲ ಸ್ಟೂಡೆಂಟ್ಸ್ ಕ್ಲಬ್ ನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರೂ, ಅವರಿಗೆ ಅತ್ತ ಟೌನ್ ಹಾಲ್ ನಲ್ಲಿ ಸ್ಪೋಟಗೊಳ್ಳಲಿರುವ ಬಾಂಬಿನ ಬಗ್ಗೆ ಒಳಗೊಳಗಿನ ಆತಂಕ. ಕೊನೆಗೆ ಈ ಹಿಂಸೆಯಲ್ಲಿ ಬಲಿಯಾಗುವುದು ಗಾಮನ ತಮ್ಮ ತುಲಾ ಹಾಗೂ ಆತನಿಗೆ ಆಗಷ್ಟೇ ಪರಿಚಯವಾಗಿ ಇಷ್ಟವಾಗಿದ್ದ ಬಿಳಿಯ ಬೋಯರ್ ಹುಡುಗಿಯ ತಂದೆ. ಇಲ್ಲಿ ಹೋರಾಟದ ಫಲ ಹಿಂಸೆ ಹಾಗೂ ಬಲಿದಾನವೇ ಆಗಿದೆ. ಕುಣಿಯುವಂತೆ ಮೈಮರೆಯುವಂತೆ ಮಾಡುವ ಸಂಗೀತದ ಪ್ರೀತಿಯ ಲಯ ಹಾಗೂ ಜೀವಗಳ ಬಲಿ ಪಡೆಯುವ ಹಿಂಸೆಯ ಲಯದ ಹಿನ್ನೆಲೆಯಲ್ಲಿ ನಡೆಯುವ ಈ ನಾಟಕವನ್ನು ಬಹಳ ತೀವ್ರತೆಯಿಂದ ತನ್ಮಯತೆಯಿಂದ ಶಿವಕುಮಾರ ರಂಗಶಾಲೆಯ ರಂಗ ವಿದ್ಯಾರ್ಥಿಗಳು ಕಟ್ಟಿಕೊಟ್ಟಿದ್ದಾರೆ. ಮೂಲ ನಾಟಕಕ್ಕೆ ನ್ಯಾಯ ಒದಗಿಸುವಂತಹ ಬಿಗಿಯಾದ ಅನುವಾದ ನಟರಾಜ ಹೊನ್ನವಳ್ಳಿಯವರದ್ದು.
ಅಭ್ಯಾಸ ಕ್ರಮದ ಪ್ರಯೋಗವಾದ್ದರಿಂದ ಸೀಮಿತ ಪ್ರೇಕ್ಷಕರ ಎದುರು ನಡೆದ ಈ ನಾಟಕ ಇಡೀ ಬಯಲು ರಂಗಮಂದಿರವನ್ನು ಬಳಸಿಕೊಂಡು ಪ್ರೇಕ್ಷಕರನ್ನು ಬೇರೆ ಲೋಕಕ್ಕೇ ಕೊಂಡೊಯ್ಯಿತು. ಮುಖ್ಯ ವೇದಿಕೆ ಹಾಗೂ ಬಯಲು ರಂಗ ಮಂದಿರದ ಪೂರ್ಣ ಬಳಕೆ ಮಾಡಿಕೊಂಡು ಮಾಡಿದ ರಂಗ ವಿನ್ಯಾಸ ಗಮನಾರ್ಹವಾಗಿತ್ತು. ರಂಗ ವಿದ್ಯಾರ್ಥಿಗಳಿಂದ ಎನೆರ್ಜೆಟಿಕ್ ಪ್ರದರ್ಶನ ಹೊರಹೊಮ್ಮಿಸಿದ ಯುವ ನಿರ್ದೇಶಕಿ ಶ್ವೇತಾರಾಣಿ ಎಚ್ ಕೆ ನಿಜಕ್ಕೂ ಅಭಿನಂದನಾರ್ಹರು. ವಿನೀತ್ ಕುಮಾರ್ ಅವರ ಪರಿಣಾಮಕಾರಿ ಬೆಳಕು ಈ ನಾಟಕದ ಹೈಲೈಟ್.
'ನೆಮ್ಮದಿ ಅಪಾರ್ಟ್ಮೆಂಟ್' ಈಗಿನ ಕೌಟುಂಬಿಕ ಮೌಲ್ಯಗಳ ಪ್ರತಿಬಿಂಬ
ಸಾರ್ವಕಾಲಿಕವಾದ ಅಧಿಕಾರಶಾಹಿಯ ದಮನಕಾರಿ ನೀತಿಗಳ ವಿರುದ್ಧದ ಹೋರಾಟದ ಚಿತ್ರಣವನ್ನು ಸಮಗ್ರವಾಗಿ ನೀಡುವ ಇಂತಹ ಸವಾಲಿನ ನಾಟಕವನ್ನು ಅಭ್ಯಾಸ ಕ್ರಮದಲ್ಲಿ ಕೈಗೆತ್ತಿಕೊಂಡು ಹೊಸ ರಂಗ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಿರುವ ಸಾಣೆ ಹಳ್ಳಿಯ ರಂಗ ಪ್ರಯೋಗಶಾಲೆಯ ಪ್ರಯತ್ನ ಅಭಿನಂದನಾರ್ಹ.
-ಎಚ್ ಎಸ್ ನವೀನ ಕುಮಾರ್ ಹೊಸದುರ್ಗ