ಆರ್‌ ಕೇಶವಮೂರ್ತಿ

- ಹೀಗೆ ದರ್ಶನ್‌ ಚಿತ್ರದ ಉದ್ದಕ್ಕೂ ಆಗಾಗ ಕೊಡುವ ಕೌಂಟರ್‌ ಡೈಲಾಗ್‌ಗಳು ಅವರು ಸಿನಿಮಾ ಆಚೆಗೆ ಬಂದು ಧ್ವನಿಸುವುದಕ್ಕೆ ಶುರು ಮಾಡುತ್ತವೆ ಎನ್ನುವ ಹೊತ್ತಿಗೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಬಹುದು. ದಾಸನಿಗೆ ಇಂಥ ಪವರ್‌ಫುಲ್‌ ಸಂಭಾಷಣೆಗಳನ್ನು ಬರೆಯುವ ಮೂಲಕ ಇದು ಪಕ್ಕಾ ಡಿ ಬಾಸ್‌ ಅಭಿಮಾನಿಗಳ ಸಿನಿಮಾ ಎಂಬುದನ್ನು ಮೊದಲೇ ಹೇಳಿಬಿಡುತ್ತಾರೆ ಸಂಭಾಷಣೆಕಾರ ಚೇತನ್‌ ಕುಮಾರ್‌. ‘ಯಜಮಾನ’ನ ಗತ್ತು, ಗೈರತ್ತು ಎದ್ದು ನಿಲ್ಲುವುದೇ ಈ ಮಾಸ್‌ ಮಾತುಗಳಿಂದನಾ ಎನ್ನುವ ತೀವ್ರವಾದ ಕುತೂಹಲವಿದ್ದವರು ಸಿನಿಮಾ ನೋಡಬಹುದು. ಕತೆ ಸಿಂಪಲ್‌, ಮೇಕಿಂಗ್‌ ಅದ್ದೂರಿ, ಹಾಡುಗಳು ಸೂಪರ್‌, ದರ್ಶನ್‌ ಡ್ಯಾನ್ಸ್‌ ಮಸ್ತಿ... ಇವಿಷ್ಟುಸೇರಿದರೆ ‘ಯಜಮಾನ’ ಅಂತ ಅಂದುಕೊಳ್ಳಬಹುದು.

ಚಿತ್ರಮಂದಿರದ ಮುಂದೆ ದರ್ಶನ್ ಮಗನ 30 ಅಡಿ ಕಟೌಟ್‌!

ಕೋಕೋಕೋಲಾದಂತಹ ವಿದೇಶಿ ಪಾನಿಯಗಳು ಬಂದು ಎಳೆನೀರಿನಂತಹ ದೇಸಿ ಪಾನಿಗಳನ್ನು ಮಹತ್ವ ಹಾಳು ಮಾಡಿದವು. ಟೆಕ್ಸ್‌ಟೈಲ್‌ ಕಂಪನಿಗಳು ಬಂದ ನೇಕಾರರ ಕೆಲಸ ಕಿತ್ತುಕೊಂಡವು. ಹೀಗೆ ನಮಗೇ ಗೊತ್ತಿಲ್ಲದೆ ನಮ್ಮದೇ ಯಜಮಾನಿಕೆಯ ಕಸುಗಳನ್ನು ತಣ್ಣಗೆ ಕಿತ್ತುಕೊಳ್ಳುತ್ತಿರುವ ಕಾರ್ಪೋರೆಟ್‌ ಕಂಪನಿಗಳ ಮಾಫಿಯದ ಕತ್ತಲಿನ ಕತೆಯೇ ‘ಯಜಮಾನ’ ಚಿತ್ರದ್ದು. ಇನ್ನೊಂಚೂರು ವಿವರಣೆ ಬೇಕು ಎನ್ನುವುದಾದರೆ ಒಂದು ಊರು ಇದೆ. ಅದರ ಹೆಸರು ಹುಲಿದುರ್ಗ. ಅಲ್ಲಿನ ಎಲ್ಲರ ಕಸಬು ತಾವೇ ಬೆಳೆ ಬೆಳೆದು ಗಾಣ ತಿರುಗಿಸಿ ತೆಗೆದ ಎಣ್ಣೆಯನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುವ ಜನ. ತಮ್ಮ ದುಡಿಮೆಗೆ, ತಮ್ಮ ಸಂಪಾದನೆಗೆ ತಾವೇ ಯಜಮಾನರಂತಿರುವ ಊರಿಗೆ ಒಂದು ಕಾರ್ಪೋರೆಟ್‌ ಕಂಪನಿ ಆಗಮಿಸುತ್ತದೆ. ಗೋಲ್ಡನ್‌ ಈಗಲ್‌ ಎಂಬುದು ಅದರ ಪೂರ್ಣನಾಮ. ಒಂದಕ್ಕೆ ಎರಡು ಪಟ್ಟು ದುಡ್ಡು ಕೊಟ್ಟು ಹಳ್ಳಿಯಿಂದ ಎಣ್ಣೆ ಖರೀದಿ ಮಾಡಿ ಅದನ್ನು ಮತ್ತಷ್ಟುಕಡಿಮೆಗೆ ಮಾರುವುದಾಗಿ ಈ ಕಂಪನಿ ಹೇಳಿಕೊಳ್ಳುತ್ತದೆ. ಆದರೆ, ಹೆಚ್ಚಿನ ದುಡ್ಡು ಕೊಟ್ಟು ತೆಗೆದುಕೊಂಡ ಎಣ್ಣೆಯನ್ನು ಕಡಿಮೆಗೆ ಹೇಗೆ ಮಾರಲು ಸಾಧ್ಯ? ಎನ್ನುವ ಪ್ರಶ್ನೆ ಹಳ್ಳಿ ರೈತರಿಗಿಂತ ಚಿತ್ರದ ನಾಯಕನಿಗೆ ಕಾಡುತ್ತದೆ. ಆತನ ಅದರ ಹಿಂದಿನ ಮರ್ಮ ಹೇಳುತ್ತಾನೆ. ಜನ ನಂಬಲ್ಲ. ದುಡ್ಡಿನ ಆಸೆ ಬೇರೆ. ಮುಂದೆ ಏನಾಗುತ್ತದೆ? ಕತೆ ಬಾಂಬೆಗೆ ಶಿಫ್ಟ್‌ ಆಗುತ್ತದೆ. ಈ ಆ್ಯಕ್ಷನ್‌ ಪ್ಯಾಕ್‌ನಲ್ಲಿ ಸಿನಿಮಾ ಸಾಗುತ್ತದೆ. ಹೀಗಾಗಿ ಉಳಿದಿದ್ದನ್ನು ಹೇಳುವುದು ಮತ್ತು ಕೇಳುವುದಕ್ಕಿಂತ ನೋಡುವುದು ವಾಸಿ.

ಇದು ಕಲಬೆರಕೆ ವಿಷಯದ ಕತೆ. ನಾವು ರೆಗ್ಯುಲರ್‌ ಬಳಸುವ ಅಡುಗೆ ಎಣ್ಣೆಯ ಕತೆ. ಕರ್ನಾಟಕದ ಒಂದು ಹಳ್ಳಿಯಿಂದ ಮುಂಬಯಿ ನಗರದವರೆಗೂ ಪಯಣಿಸುವ ಈ ಚಿತ್ರಕ್ಕೆ ಹಾಡುಗಳು ಮತ್ತು ಡೈಲಾಗ್‌ ಲೈಫ್‌ ಜಾಕೆಟ್‌ನಂತೆ ಕೆಲಸ ಮಾಡಿವೆ. ಇಡೀ ಸಿನಿಮಾ ದರ್ಶನ್‌ಮಯ ಎಂದರೆ ತಪ್ಪಾಗಲಾರದು. ಒಂದು ರೂಪಾಯಿ ಹಾಡು, ಬಸಣ್ಣಿ ಹಾಡಿನ ಡ್ಯಾನ್ಸ್‌ನಲ್ಲಿ ದರ್ಶನ್‌ ಸ್ಟೆಪ್‌ಗಳು ಸೂಪರ್‌ ಅನಿಸುವುದು ಈ ಚಿತ್ರದ ಮತ್ತೊಂದು ಬೋನಸ್‌ ಪಾಯಿಂಟ್‌. ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ತೆರೆ ಮೇಲೆ ಪರಿಚಯವಾಗುವ ದೃಶ್ಯದ ಹೊರತಾಗಿ ಉಳಿದಂತೆ ಬಹುತೇಕ ಕಡೆ ಅವರು ಬಂದು ಹೋಗುವುದಕ್ಕೆ ಸೀಮಿತ ಎನ್ನುವಂತಿದೆ ಅವರ ಪಾತ್ರ. ತಾನ್ಯ ಹೋಪ್‌ ಪಾತ್ರ ಕ್ರಿಕೆಟ್‌ ಟೀಮ್‌ನ ಎಕ್ಸ್‌ಟ್ರಾ ಪ್ಲೇಯರ್‌ನಂತೆ ಕಾಣುತ್ತಾರೆ. ಇನ್ನು ದೇವರಾಜ್‌, ರವಿಶಂಕರ್‌, ಮಿಠಾಯಿ ಸೂರಿ ಪಾತ್ರಧಾರಿ ಧನಂಜಯ್‌, ದತ್ತಣ್ಣ ಅವರ ಪಾತ್ರಗಳು ಚಿತ್ರದ ತೂಕವನ್ನು ಹೆಚ್ಚಿಸುತ್ತವೆ. ಆದರೂ ಇಡೀ ಸಿನಿಮಾ ದರ್ಶನ್‌ ಹಾಗೂ ಅನೂಪ್‌ ಸಿಂಗ್‌ ಠಾಕೂರ್‌ ಅವರ ನೆರಳಿನಲ್ಲೇ ಸಾಗುತ್ತದೆ. ಈ ಇಬ್ಬರನ್ನು ನಂಬಿಕೊಂಡೇ ನಿರ್ದೇಶಕರು ಕತೆ ಕಟ್ಟಿದಂತಿದೆ.

'ಯಜಮಾನ' ಪೈರಸಿ ಕಂಡು ಬಂದರೆ ಈ ಸಂಖ್ಯೆಗೆ ಸಂಪರ್ಕಿಸಿ

ಮುಂಬಯಿಯಲ್ಲಿ ಕನ್ನಡದಲ್ಲಿ ನಡೆಯುವ ಕೋರ್ಟ್‌ ದೃಶ್ಯಗಳು, ಟೀವಿ ವಾಹಿನಿಯ ವರದಿಗಾರ್ತಿಯ ಪಾತ್ರ, ಮುಂಬಯಿಯಲ್ಲಿ ನಡೆಯುವ ಆಯಿಲ್‌ ಬ್ಯುಸಿನೆಸ್‌ ಈ ಎಳೆಯಲ್ಲಿ ಲಾಜಿಕ್‌ ಹುಡುಕಿದರೆ ನಿರಾಸೆ ಆಗುವುದು ಗ್ಯಾರಂಟಿ. ಲಾಜಿಕ್‌ ಬಿಟ್ಟು ನೋಡಿದರೆ ಮಾತ್ರ ‘ಯಜಮಾನ’ ನಿಮ್ಮ ಸನಿಹಕ್ಕೆ ಬರುತ್ತಾನೆ. ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಾಹಣ ಚಿತ್ರದ ಮೇಕಿಂಗ್‌ನ ಬೆಲೆ ಹೆಚ್ಚಿಸಿದೆ.