ಈ ಕಾರಣಕ್ಕೆ ’ಕವಲುದಾರಿ’ ಅನಂತ್‌ನಾಗ್‌ಗೆ ಸ್ಪೆಷಲ್!

ಹೇಮಂತ್ ರಾವ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ’ಕವಲುದಾರಿ’ ಚಿತ್ರ ಬಿಡುಗಡೆಯಾಗಿದೆ. ವಿಭಿನ್ನ ಕಥಾಹಂದರವನ್ನು ಹೊಂದಿರುವ ಈ ಚಿತ್ರ ಪ್ರೇಕ್ಷಕರ ಮನೆ ಗೆದ್ದಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ವಿಮರ್ಶೆ. 

Kannada movie Kavaludari review here

’ಕವಲುದಾರಿ ’ ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ನಿರ್ದೇಶಿಸಿದ ಹೇಮಂತ್‌ರಾವ್ ಅವರ ಎರಡನೆಯ ಸಿನಿಮಾ ಇದು. 

ಮಹಾನಗರದ ಪರಿಸರದಲ್ಲಿ ತಂದೆ-ಮಕ್ಕಳ ಸಂಬಂಧದ ಸೂಕ್ಷ್ಮಗಳನ್ನು ಮೊದಲ ಸಿನಿಮಾದಲ್ಲಿ ಅನ್ವೇಷಿಸಿದ ಹೇಮಂತ್, ಕವಲುದಾರಿ ಚಿತ್ರದಲ್ಲಿ ಮಹಾನಗರದ ಅಪರಾಧ ಜಗತ್ತಿನ ಒಳಸುಳಿಗಳ ಹುಡುಕಾಟಕ್ಕೆ ಕೈ ಹಾಕಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಹೇಮಂತ್‌ರಾವ್ ಈ ಸಿನಿಮಾವನ್ನು ಸವಿವರವಾಗಿ ಕಟ್ಟಿಕೊಡುತ್ತಾರೆ. 

ಅನಂತ್ ನಾಗ್ ಬಗ್ಗೆ ನೀವು ತಿಳಿಯಬೇಕಾದ ಇಂಟರೆಸ್ಟಿಂಗ್ ವಿಚಾರಗಳಿವು!

ಅವರೊಬ್ಬ ಅಸಾಧಾರಣ ಕಸಬುದಾರ. ತಾನು ಹೇಳುವ ಕತೆಯನ್ನು ಅಚ್ಚುಕಟ್ಟಾಗಿ ಹೇಳುವುದರ ಜೊತೆಗೇ ಪರಿಣಾಮಕಾರಿಯಾಗಿಯೂ ಹೇಳಬಲ್ಲ ಪ್ರತಿಭೆ. ಹೀಗಾಗಿ ಹಳೆಯ ಕೊಲೆ ಪ್ರಕರಣವೊಂದನ್ನು ಬೇಧಿಸುವ ಸಾಧಾರಣ ಕತೆ ಅವರ ಕೈಯಲ್ಲಿ ಮಹಾನಗರದ ಕತೆಯೂ ಆಗಿಬಿಡುತ್ತದೆ. ಸಣ್ಣ ಸಣ್ಣ ವಿವರಗಳನ್ನೂ ಕೂಡ ಅವರು ಅತ್ಯಂತ ಶ್ರದ್ಧೆಯಿಂದ ನಿರೂಪಿಸುತ್ತಾರೆ. ತಾನೇನು ಹೇಳುತ್ತಿದ್ದೇನೆ ಅನ್ನುವ ಸ್ಪಷ್ಟತೆ ಮತ್ತು ಅದನ್ನು ಹೀಗೆಯೇ ಹೇಳಬೇಕು ಅನ್ನುವ ತಂತ್ರಗಾರಿಕೆ ಎರಡೂ ಬೆರೆತಿರುವ ‘ಕವಲುದಾರಿ’ ಸಿನಿಮಾ ನಿರ್ದೇಶಕನ ತನ್ಮಯತೆಯಲ್ಲೇ ನಮ್ಮನ್ನು ಸೆರೆಹಿಡಿಯುತ್ತದೆ.

ಕಾಲಿನ ಹಿಮ್ಮಡಿಯ ಗಾಯಕ್ಕೆ ಒಂದು ಬ್ಯಾಂಡ್ ಏಯ್ಡ್ ಅಂಟಿಸಿಕೊಂಡು ಬೆಳಗ್ಗೆ ಕೆಲಸಕ್ಕೆ ಹೊರಡುವ ಟ್ರಾಫಿಕ್ ಸಬ್‌ಇನ್ಸ್‌ಪೆಕ್ಟರ್ ಶ್ಯಾಮ್‌ಗೆ ಕ್ರೈಮ್ ವಿಭಾಗದಲ್ಲಿ ಕೆಲಸ ಮಾಡುವ ಆಸೆ. ಪೊಲೀಸ್ ಇಲಾಖೆಯಲ್ಲಿ ಕೆಲಸದಲ್ಲಿರುವ ಕಾರಣಕ್ಕೇ ಅವನಿಗೆ ಮದುವೆಯಾಗಲು ಹುಡುಗಿ ಸಿಗುವುದಿಲ್ಲ. ಈ ಮಧ್ಯೆ ಫ್ಲೈಓವರ್ ನಿರ್ಮಾಣದ ಹಂತದಲ್ಲಿ ಸಿಕ್ಕ ಮೂಳೆಗಳ ಚೂರು ಅವನೊಳಗಿನ ಪತ್ತೇದಾರನನ್ನು ಬಡಿದೆಬ್ಬಿಸುತ್ತದೆ. ಅದರ ಜಾಡು ಹಿಡಿದು ಹೊರಟವನಿಗೆ ಎದುರಾಗುವ ಅನುಭವಗಳೇ ಕವಲುದಾರಿಯ ಕಥಾವಸ್ತು.

ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಮುತ್ತಣ್ಣ, ಪ್ರಸಾರವಿಲ್ಲದ ಕ್ರೈಮ್ ಪತ್ರಿಕೆಯ ಸಂಪಾದಕ, ಒಂದು ಹಳೆಯ ಕೊಲೆ, ಒಂಚೂರು ರಾಜಕಾರಣ, ಅದಕ್ಕೆ ಮೆತ್ತಿಕೊಂಡಿರುವ ಅಪರಾಧ ಜಗತ್ತು- ಇವನ್ನೆಲ್ಲ ಇಟ್ಟುಕೊಂಡು ಹೇಮಂತ್ ತಮ್ಮ ಕಥಾಪ್ರಯಾಣ ಆರಂಭಿಸುತ್ತಾರೆ. ಅವರು ಕತೆ ಹೇಳುವ ಕ್ರಮದಲ್ಲೇ ಪ್ರೇಕ್ಷಕನನ್ನೂ ಒಳಗೊಳ್ಳುವ ಆಪ್ತತೆಯೂ ಇರುವುದರಿಂದ, ಅವರ ಮುಂದಿನ ಕೆಲಸ ಸಲೀಸಾಗಿದೆ. ಯಾವ ಅವಸರವೂ ಇಲ್ಲದೇ ಕತೆಯನ್ನು ಎಳೆಯೆಳೆಯಾಗಿ ಹೇಳುವ ಹೇಮಂತ್‌ಕುಮಾರ್, ಸಿನಿಮಾವೊಂದು ಸಣ್ಣಕತೆಯಲ್ಲ, ಕಾದಂಬರಿ ಎಂಬ ಭಾವನೆಯನ್ನೂ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚೌಕಟ್ಟಿನಲ್ಲಿ ಬದುಕುವ ಮನುಷ್ಯ, ಆ ಚೌಕಟ್ಟನ್ನು ಮೀರಲು ನಿರ್ಧರಿಸಿದರೆ ಯಾವ ಕೆಲಸ ಮಾಡುವುದಕ್ಕೂ ಹೇಸುವುದಿಲ್ಲ ಎಂಬ ಅಪರಾಧೀ ಜಗತ್ತಿನ ಸ್ಥಾಪಿತ ಸಿದ್ಧಾಂತವನ್ನೇ ಆಧಾರವಾಗಿಟ್ಟುಕೊಂಡು ಮುಂದೆ ಸಾಗುವ ಕತೆಯಿದು. ನಿಮಗೆ ವಿವರಗಳಲ್ಲಿ ಆಸಕ್ತಿಯಿದ್ದರೆ, ಕವಲುದಾರಿ ನಿಮ್ಮ ಕೈ ಹಿಡಿಯುತ್ತದೆ. ಕೊನೆಯಲ್ಲಿ ಏನಾಗುತ್ತದೆ ಎಂಬ ಕುತೂಹಲವಷ್ಟೇ ಇದ್ದರೆ ಚಿತ್ರ ನಿಮ್ಮನ್ನು ಕೊಂಚ ಕಾಯಿಸುತ್ತದೆ, ತುಂಬ ಸತಾಯಿಸುತ್ತದೆ. ಅಪರಾಧಿಯೊಬ್ಬನನ್ನು ಬೆನ್ನಟ್ಟಿ ಹೋಗಿ, ಅವನ ಜಾಗ ಕಂಡುಹಿಡಿದು, ಅವನು ಅಲ್ಲಿಂದ ಮರಳಿ ಬರುವುದನ್ನೇ ಕಾಯುತ್ತಾ ತಾಳ್ಮೆ ಕಳೆದುಕೊಳ್ಳುವ ಶ್ಯಾಮ್‌ಗೆ ಮುತ್ತಣ್ಣ ಹೇಳುತ್ತಾನೆ: ಸಣ್ಣ ಮೀನುಗಳೇ ತಿಮಿಂಗಲ ಇರುವ ಜಾಗ ತೋರಿಸುವುದು. ತಾಳ್ಮೆಯಿಂದ ಕಾಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. 

ಕವಲುದಾರಿಯಲ್ಲಿ ನಿರ್ದೇಶಕ ಹೇಮಂತ್ ರಾವ್ ಸಂದರ್ಶನ

ಈ ಕಾಲದ ಕತೆಯ ಆರಂಭ ಎಪ್ಪತ್ತರ ದಶಕದ್ದು. ತುರ್ತುಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ದೇಶದ ರಾಜಕೀಯಕ್ಕೆ ಕಳ್ಳರು, ಕ್ರೂರಿಗಳು, ರೌಡಿಗಳು ಮತ್ತು ಸಮಾಜಘಾತಕ ಶಕ್ತಿಗಳು ಪ್ರವೇಶ ಪಡೆದದ್ದರ ಪ್ರಸ್ತಾಪ ಸಿನಿಮಾದಲ್ಲಿ ಮತ್ತೆ ಮತ್ತೆ ಬರುತ್ತದೆ. ಪೊಲೀಸ್ ಅಧಿಕಾರಿ ದುಷ್ಟರ ಕೊಳೆಯನ್ನು ತನ್ನ ಮೈಗೆ ಮೆತ್ತಿಕೊಳ್ಳುತ್ತಾನೆ. ಸಮಾಜವನ್ನು ಸ್ಪಚ್ಛವಾಗಿಡುತ್ತಾನೆ. ಅವನ ಮೈಮೇಲೆ ಖಾಕಿ ಇದ್ದರೂ ಒಳಗಿರುವುದು ಬಿಳಿಯ ಯೂನಿಫಾರ್ಮ್ ಎಂಬಂಥ ಮಾತುಗಳನ್ನು ಆಡಿಸುತ್ತಲೇ, ಈ ಸಮಾಜ ಮುರಿದುಹೋಗಿದೆ.

ಇಲ್ಲಿ ಒಂದು ಆ್ಯಂಬುಲೆನ್ಸ್ ಹೋಗಲು ಜಾಗ ಬಿಡುವುದಿಲ್ಲ, ಯಾರಿಗೋಸ್ಕರ ಕೆಲಸ ಮಾಡಬೇಕು ಎಂಬ ಎಲ್ಲರ ಹತಾಶೆಯನ್ನು ಪ್ರತಿಬಿಂಬಿಸುತ್ತಲೇ, ಜಪಾನಿನಲ್ಲಿ ಮುರಿದುಹೋದದ್ದನ್ನು ಚಿನ್ನದಿಂದ ಜೋಡಿಸುತ್ತಾರಂತೆ. ಮುರಿದುಹೋದಾಗಲೇ ಕಟ್ಟಲು ಸಾಧ್ಯ ಎಂಬ ಆಶಾವಾದದ ಮಾತನ್ನೂ ಆಡಿಸುವ ಹೇಮಂತ್,  ತಾನೊಬ್ಬ ಜವಾಬ್ದಾರಿಯ ನಿರ್ದೇಶಕ ಅನ್ನುವುದನ್ನೂ ಸಾಬೀತು ಮಾಡುತ್ತಾರೆ.

ಅಪರಾಧದ ಕತೆಯಲ್ಲಿ ಸಾಮಾನ್ಯವಾಗಿ ಕಲ್ಪನೆಯೇ ಹೆಚ್ಚಿರುತ್ತದೆ. ಕತೆಗೆ ಅಸಾಧಾರಣ ವೇಗವೂ ಇರಬೇಕಾಗುತ್ತದೆ. ಇವೆರಡನ್ನೂ ಹೇಮಂತ್‌ರಾವ್ ಮೀರಿದ್ದಾರೆ. ಅಪರಾಧ ಮತ್ತು ನಾವು ಬದುಕುವ ಸಮಾಜ ಬೇರೆಯಲ್ಲ, ಎಲ್ಲ ಕ್ರೈಮೂ ಇಲ್ಲಿಯೇ ನಡೆಯುತ್ತದೆ, ನಾವು ಸಜ್ಜನ ಅಂದುಕೊಂಡಿರುವ ವ್ಯಕ್ತಿಗೊಂದು ಹೀನ ಚರಿತ್ರೆ ಇಲ್ಲ ಎಂದು ಹೇಳುವಂತಿಲ್ಲ, ನಮ್ಮನ್ನು ದಾರಿತಪ್ಪಿಸುವ ಸುಳ್ಳುಗಳ ನಡುವೆಯೇ ನಾವು ಸತ್ಯದ ಹುಡುಕಾಟ ನಡೆಸಬೇಕು ಎನ್ನುವ ಮಾತುಗಳಲ್ಲಿ ಕವಲುದಾರಿ ಸ್ಪಷ್ಟವಾಗುತ್ತಾ ಹೋಗುತ್ತದೆ.

ಮುತ್ತಣ್ಣನ ಪಾತ್ರ ವಹಿಸಿರುವ ಅನಂತ್‌ನಾಗ್ ಚಿತ್ರದ ಜೀವಾಳ. ಒಮ್ಮೆ ಮೌನದಲ್ಲಿ ಮತ್ತೊಮ್ಮೆ ಮಾತಿನಲ್ಲಿ ಇನ್ನೊಮ್ಮೆ ಮೊನಚುನೋಟದಲ್ಲಿ ಕೆಲವೊಮ್ಮೆ ಉತ್ಕಟ ದುಃಖದಲ್ಲಿ ಅವರು ಚಿತ್ರದಲ್ಲಿ ಒಂದಾಗಿದ್ದಾರೆ. ಪತ್ರಕರ್ತನಾಗಿ ಅಚ್ಯುತರಾವ್ ಪತ್ರಕರ್ತನ ಹತಾಶೆ, ಯಾತನೆ ಮತ್ತು ಉಡಾಫೆಯನ್ನು ಕಟ್ಟಿಕೊಡುತ್ತಾರೆ. ಅವಿನಾಶ್ ಪಾತ್ರ ಇಡೀ ಕತೆಗೆ ಅನಗತ್ಯ ವಿವರದಂತೆ ಸೇರಿಕೊಂಡಿದೆ. ಸುಮನ್ ರಂಗನಾಥ್ ತುಂಟತನವೂ ಮಜವಾಗಿದೆ. ರಿಷಿ ಇಡೀ ಚಿತ್ರವನ್ನು ಪಳಗಿದ ಟ್ರಾಫಿಕ್ ಇನ್ಸ್‌ಪೆಕ್ಟರ್ ಥರ ಮುನ್ನಡೆಸಿಕೊಂಡು ಹೋಗುತ್ತಾರೆ.

ಚರಣ್‌ರಾಜ್ ಹಿನ್ನೆಲೆ ಸಂಗೀತ ನಮ್ಮನ್ನು ಆವರಿಸಿಕೊಳ್ಳುವ ಪರಿಯೇ ವಿಚಿತ್ರ. ಅದು ಪ್ರೇಕ್ಷಕನನ್ನೂ ಸಿನಿಮಾವನ್ನೂ ಒಂದು ಲಯದಲ್ಲಿ ಬಂಧಿಸಿಬಿಡುತ್ತದೆ. ಅದ್ವೈತ್ ಗುರುಮೂರ್ತಿ ನಿರ್ದೇಶಕರ ಕಣ್ಣನ್ನು ಹಿಂಬಾಲಿಸಿರುವ ರೀತಿ ಅಚ್ಚರಿಗೊಳಿಸುತ್ತದೆ.

ಪುನೀತ್ ನಿರ್ಮಾಣದ ಮೊದಲ ಸಿನಿಮಾ ಇದು. ಯಾವುದೇ ನಿರ್ಮಾಣ ಸಂಸ್ಥೆಗೆ ಗೌರವ ತರುವಂಥ ಕೃತಿ ಇದು. ಇಂಥ ಸಿನಿಮಾವೊಂದನ್ನು ನಿರ್ಮಿಸುವುದಕ್ಕೆ ಮುಂದಾದ ಅಶ್ವಿನಿ ಪುನೀತ್ ಅಭಿನಂದನೆಗೆ ಅರ್ಹರು.

- ಜೋಗಿ 
 

Latest Videos
Follow Us:
Download App:
  • android
  • ios