ಚಿತ್ರ ವಿಮರ್ಶೆ: ಪಾಪ್‌ಕಾರ್ನ್ ಮಂಕಿ ಟೈಗರ್
ಈಚಿತ್ರದ ಒಂದು ಇಮೇಜ್. ಹರಿಯುವ ನದಿಯಲ್ಲಿ ನಿಂತ ಧನಂಜಯ. ನೀರತ್ತ ಬಾಗಿ ಬೊಗಸೆಯಲ್ಲಿ ನೀರು ಹಿಡಿದಿದ್ದಾರೆ. ನೋಡುತ್ತಿದ್ದಂತೆಯೇ ಬೊಗಸೆ ತೆರೆದರೆ ನೀರ ಮೇಲೆ ರೆಕ್ಕೆ ಬಿಚ್ಚಿದ ಬಣ್ಣದ ಚಿಟ್ಟೆ ಮಲಗಿದೆ. ಬಹುಶಃ ಅದು ಸತ್ತಿದೆ.
ರಾಜೇಶ್ ಶೆಟ್ಟಿ
ಇಂಥದ್ದೊಂದು ತಣ್ಣನೆಯ ವಿಷಾದ ಭರಿತ ಕ್ರೌರ್ಯ ಇಡೀ ಸಿನಿಮಾದಲ್ಲಿ ಹಾಸು ಹೊದ್ದು ಮಲಗಿದೆ. ಎಲ್ಲಿ ಎಡವಿ ಬಿದ್ದರೂ ಅಲ್ಲಿ ರಕ್ತ ಸಿಗುತ್ತದೆ. ನೋವು ಎದುರಾಗುತ್ತದೆ. ಮನುಷ್ಯನ ಸಣ್ಣತನಗಳು ಸುಡುಸುಡು ಸುಡುತ್ತದೆ. ಮಿತಿಮೀರಿದ ದುರಾಸೆ, ಪ್ರೇಮ ವೈಫಲ್ಯದ ಸಂಕಟ, ಸಂಬಂಧಗಳ ಗೋಜಲು, ವಿನಾಕಾರಣ ದ್ವೇಷ, ಒಬ್ಬರನ್ನೊಬ್ಬರು ಇರಿದು ಮಲಗಿಸುವ ಕ್ರೋಧ, ಹಣದ ದಾಹ, ಹೊಟ್ಟೆ ತುಂಬಾ ಎಣ್ಣೆ, ಮೈತುಂಬಾ ರಕ್ತ ಎಲ್ಲವನ್ನೂ ದುನಿಯಾ ಸೂರಿ ಎಷ್ಟೊಂದು ತೀವ್ರವಾಗಿ ಕಟ್ಟಿಕೊಟ್ಟಿದ್ದಾರೆ ಎಂದರೆ ಉಸಿರು ಕಟ್ಟಿದಂತೆ ಭಾಸವಾಗುತ್ತದೆ. ಹೆಚ್ಚು ಹೊತ್ತು ಅಲ್ಲಿ ಇರಲಾಗುವುದಿಲ್ಲ.
ಚಿತ್ರ ವಿಮರ್ಶೆ: ಶಿವಾಜಿ ಸುರತ್ಕಲ್
ಅದು ಈ ಸಿನಿಮಾದ ಶಕ್ತಿಯೋ ಮಿತಿಯೋ ಎಂದು ಅರ್ಥವಾಗುವ ಹೊತ್ತಿಗೆ ಮತ್ತದೇ ಜಾಗಕ್ಕೆ ಹೋಗಲು ಮನಸ್ಸು ಹಿಂಜರಿಯುತ್ತದೆ. ಸೂರಿಗೆ ವಿಷಾದ ಕಟ್ಟಿಕೊಡುವುದು ಚೆನ್ನಾಗಿ ಗೊತ್ತಿದೆ. ಕೆಲವರ ಬದುಕನ್ನು ಇದ್ದಿದ್ದು ಇದ್ದಂತೆ ಈ ಸಿನಿಮಾದಲ್ಲಿ ಇಟ್ಟಿದ್ದಾರೆ. ಹಾಗಾಗಿ ಇಲ್ಲಿ ಹಾಡುಗಳಿಲ್ಲ. ತಮಾಷೆಯಿಲ್ಲ. ಲವಲವಿಕೆಯಿಲ್ಲ. ಬದುಕೇ ಒಂದು ಯಜ್ಞಕುಂಡ ಎಂಬಂತೆ ಕತೆ ಹೇಳಿದ್ದಾರೆ.
ಒಂದೊಂದು ಪಾತ್ರಗಳು ಕೂಡ ಇಲ್ಲಿ ಒಳಗೊಳಗೆ ಬೆಂಕಿಯನ್ನು ಅಡಗಿಸಿಟ್ಟುಕೊಂಡ ಕೆಂಡ. ಧನಂಜಯನ ಕಣ್ಣುಗಳೇ ಸಾಕು ಇಡೀ ಪಾತ್ರವನ್ನು ತಿಂದು ಹಾಕಲು. ಅದರಲ್ಲೂ ಬಹಳ ದಿನಗಳ ನಂತರ ಮರಳಿ ಬಂದ ನಿವೇದಿತಾ ಇಲ್ಲಿ ನಟಿಸಿಲ್ಲ, ಧಗಧಗಿಸಿದ್ದಾರೆ. ದುರಂತವನ್ನೇ ಬದುಕಾಗಿಸಿಕೊಂಡ ಹೆಣ್ಣೊಬ್ಬಳು ತನಗಾಗಿ, ತನ್ನವನಿಗಾಗಿ ಹಂಬಲಿಸುವ, ಕೆರಳುವ, ಒದ್ದಾಡುವ ಹುಡುಗಿಯಾಗಿ ನಿವೇದಿತಾ ಅಷ್ಟು ಸುಲಭಕ್ಕೆ ಚಿತ್ತದಿಂದ ಆಚೆ ಹೋಗಲು ಸಾಧ್ಯವಿಲ್ಲ. ಇಲ್ಲಿ ಪ್ರತಿಯೊಬ್ಬ ನಟ ಕೂಡ ಸಿನಿಮಾವನ್ನುಜೀವಿಸಿದ್ದಾರೆ. ಅದೇ ಈ ಸಿನಿಮಾದ ಗೆಲುವು. ಹಿನ್ನೆಲೆ ಸಂಗೀತದಲ್ಲಿ ಚರಣ್‌ರಾಜ್, ಛಾಯಾಗ್ರಹಣದಲ್ಲಿ ಶೇಖರ್ ವಿಜೃಂಬಿಸಿದ್ದಾರೆ ಅನ್ನುವುದೇ ಸೂಕ್ತ. ಅವರಿಂದಾಗಿಯೇ ಇದೊಂದು ಅದ್ಭುತ ಮೇಕಿಂಗ್ ಸಿನಿಮಾ ಅನ್ನಿಸುತ್ತದೆ.
ನಿರ್ದೇಶಕರಿಗೆ ಪ್ರೇಮ ವೈಫಲ್ಯ ಮತ್ತು ಅಂಡರ್‌ವರ್ಲ್ಡ್ ಮನಸ್ಸಿನಾಳದಲ್ಲಿ ಉಳಿದುಬಿಟ್ಟಿದೆ. ಅವೆರಡನ್ನೇ ಇಟ್ಟುಕೊಂಡು ಕತೆಯೇ ಇಲ್ಲದೆ ಸಿನಿಮಾ ಮಾಡುವ ಸಾಮರ್ಥ್ಯ ಅವರಿಗಿದೆ. ಅದೇ ಕಾರಣಕ್ಕೆ ಈ ಚಿತ್ರದ ಮೊದಲಾರ್ಧದಲ್ಲಿ ಇಂತಿ ನಿನ್ನ ಪ್ರೀತಿಯ,ದ್ವಿತೀಯಾರ್ಧದಲ್ಲಿ ಕಡ್ಡಿಪುಡಿ ಛಾಯೆ. ಇನ್ನೂ ಎಷ್ಟು ಬೇಕು ಈ ನೋವು ಈ ಸಾವು.
#MovieReview: ಈ ಜಂಟಲ್‌ಮನ್ ನಿಜಕ್ಕೂ 'ನಂಬರ್ ಒನ್..!'
ಸೂರಿ ಮೂಲತಃ ಚಿತ್ರಕಾರ. ಕ್ಯಾನ್ವಾಸ್‌ಗೆ ಬಣ್ಣಗಳನ್ನು ಎಸೆದು ಅಬ್ ಸ್ಟ್ರಾಕ್ಟ್ ಪೇಂಟಿಂಗ್ ಮಾಡುವುದು ಅವರಿಗೆ ಇಷ್ಟ. ಅದೇ ಥರ ಈ ಸಿನಿಮಾದಲ್ಲಿ ಕೆಲವು ದೃಶ್ಯಗಳನ್ನು ಸುಮ್ಮನೆ ಎಸೆದುಬಿಡುತ್ತಾರೆ. ಯಾರಿಗೆ ಹೇಗೆ ತಾಗುತ್ತದೋ ಗೊತ್ತಿಲ್ಲ. ಒಮ್ಮೆ ಮುಂದೆ ಹೋಗುತ್ತಾರೆ, ಆಮೇಲೆ ನಾಲ್ಕು ಹೆಜ್ಜೆ ಹಿಂದೆ ಬರುತ್ತಾರೆ. ಅದೆಲ್ಲವೂ ಅರ್ಥವಾಗಲು ತಾದಾತ್ಮ್ಯ ಬೇಕು. ಬಹಳಷ್ಟು ದೃಶ್ಯಗಳು ಹೇಳುವುದಕ್ಕಿಂತ ಹೇಳದೇ ಉಳಿಯುವುದೇ
ಜಾಸ್ತಿ. ಆ ಗುಣವೇ ಈ ಸಿನಿಮಾದ ಶಕ್ತಿ. ಅಳ್ಳೆದೆಯವರಿಗೆ ಈ ಸಿನಿಮಾ ನೀರಿಳಿಯದ ಗಂಟಲೊಳ್ ಪಾಪ್ ಕಾರ್ನ್ ತುರುಕಿದಂತೆ. ಸಿನಿಮಾ ವ್ಯಾಮೋಹಿಗಳಿಗೆ ಈ ಸಿನಿಮಾ ಪಾಠದಂತೆ. ಯಾವ ಪಾಠ ಕಲಿಯಬಹುದು ಅನ್ನುವುದು ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತದೆ.
"