ಯುದ್ಧ ಬೇಕೆಂದವರು ಎಳ್ಳಷ್ಟು, ಯುದ್ಧದ ಸಂಕಷ್ಟ ಬಹಳಷ್ಟು: ಬೇರೆ ದಾರಿ ಇದೆ ಹುಡುಕಿದಷ್ಟು!

ಉಗ್ರರು ಭಾರತದ ಮೇಲೆ ದಾಳಿ ನಡೆಸಿದ ಕೂಡಲೇ, ಯುದ್ಧ ಸಾರೋಣ ಎಂಬ ಸಾಮಾನ್ಯವಾಗಿ ಕೇಳಿ ಬರುತ್ತದೆ. ಯುದ್ಧವಾದರೆ ದೇಶದ ಪ್ರತಿಯೊಬ್ಬ ನಾಗರಿಕನೂ ಡಿಸ್ಟರ್ಬ್ ಆಗುತ್ತಾನೆ. ಯೋಧನಿಗೂ ಸಂಸಾರವಿರುತ್ತದೆ. ಅವರ ಆತಂಕ, ಆರ್ಥಿಕ ಪರಿಸ್ಥಿತಿ...ಬೇಕಾ ಯುದ್ಧ? 

Lessons from Pulwama terror attack anybody listening

- ತೇಜಸ್ವಿನಿ ಹೆಗಡೆ

'ನಮ್ಮಲ್ಲಿ ಸಾಯುವುದಂತೂ ತೀರ ಸುಲಭ; ಹೆಣ ಸುಡುವುದು ಮತ್ತೂ ಸುಲಭ. ಇಲ್ಲಿ ಬದುಕುವುದೇ ಕಷ್ಟ ನೋಡಿ!' – ಈ ಸಾಲು ಬರುವುದು ಶಿವರಾಮ ಕಾರಂತರ ‘ಬೆಟ್ಟದ ಜೀವ’ ಕಾದಂಬರಿಯಲ್ಲಿ. ಮೊದಲ ಬಾರಿ ಈ ಸಾಲನ್ನು ಓದಿದಾಗಿನಿಂದಲೂ ಇದು ನನ್ನ ಕಾಡುತ್ತಲೇ ಇದೆ.. ನಿನ್ನೆಯಿಂದ ಕಾಶ್ಮೀರವನ್ನು ನೆನೆದು ಈ ಸಾಲು ಹೆಚ್ಚು ನೆನಪಿಗೆ ಬರುತ್ತಿದೆ! ನಾನೀಗ ಆಲೋಚಿಸುತ್ತಿರುವುದು ನಿನ್ನೆ ಹುತಾತ್ಮರಾದ ಸೈನಿಕರ ಬಗ್ಗೆ ಮಾತ್ರವಲ್ಲ… ಅದಕ್ಕಿಂತ ಮುಂಚೆಯೂ ವಿನಾಕಾರಣ ತಮ್ಮ ಬದುಕನ್ನು ಭಯೋತ್ಪಾದನೆಗೆ ಬಲಿದಾನ ಮಾಡಿದ ಸೈನಿಕರ ಕುರಿತು… ಮುಂದೆಯೂ ನಡೆಯಬಹುದಾದ ಇಂಥಾ ವಿಕೃತ ಕಾರ್ಯಗಳನ್ನು ಎಷ್ಟರ ಮಟ್ಟಿಗೆ ತಡೆಯಬಹುದು ಎಂಬುದರ ಕುರಿತು. 

ಪಾತಾಳದಲ್ಲಿ ಅಡಗಿದರೂ ಬಿಡೆವು

ನಿನ್ನೆ ಮಾತ್ರವಲ್ಲ ಈ ಮೊದಲು ನಮ್ಮ ದೇಶದ ಮುಗ್ಧ ಜನರ ಮೇಲೆ, ಸೈನಿಕರ ಮೇಲೆ ಇಂಥಾ ದಾಳಿಯಾದಾಗೆಲ್ಲಾ ಎಲ್ಲರಿಗೂ ಆಕ್ರೋಶ ಉಕ್ಕುತ್ತದೆ. ಇದಕ್ಕೆ ಕಾರಣರಾದವರ ಮೇಲೆ ಯುದ್ಧ ಸಾರಿ ಒಂದೇ ಸಲ ಎಲ್ಲವನ್ನೂ ನಿರ್ನಾಮ ಮಾಡಿಬಿಡುವುದು ಒಳ್ಳೆಯದಲ್ಲವೇ ಎಂದೆನಿಸಿದೆ. ಅನ್ನಿಸುತ್ತಲೂ ಇರುತ್ತದೆ. ಆದರೆ ನಿಧಾನಕ್ಕೆ ಆಲೋಚಿಸಿದಾಗ ಈ ಪ್ರಕ್ರಿಯೆಯಲ್ಲಿ ನಮ್ಮ ಮತ್ತಷ್ಟು ಸೈನಿಕರು ಬಲಿಯಾಗುವರಲ್ಲ? ಯುದ್ಧವಾದರೆ ನಮ್ಮ ದೇಶದ ಅಭಿವೃದ್ಧಿ ಮತ್ತಷ್ಟು ಕುಂಠಿತವಾಗಿಬಿಡುವುದಲ್ಲ ಎಂದೆನಿಸಿ ಹತಾಶಳಾಗುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಅಗಲಿದವರ ಮನೆಯವರ ಪರಿಸ್ಥಿತಿ ನೆನೆದು  ತಳಮಳಗೊಳ್ಳುತ್ತೇನೆ. :(‘ಉರಿ’ಯಂಥ ಸರ್ಜಿಕಲ್ ಸ್ಟ್ರೈಕೋ ಅಥವಾ ಈ ಮೊದಲೂ ನಡೆದಿರಬಹುದಾದ ಅನೇಕಾನೇಕ ಸರ್ಜಿಕಲ್ ಸ್ಟ್ರೈಕ್‌ಗಳಂಥವೋ..) ಆಗಲಿ ಒಂದಿಷ್ಟು ಅಂಥವು. ನಿರ್ನಾಮವಾಗಲಿ ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳಿಗೆ ಕುಮ್ಮಕ್ಕು ಕೊಡುವ ಮನಸ್ಥಿತಿಗಳು. ಆದರೆ ಉರಿಯಲ್ಲಾದಂತೆ ಒಬ್ಬನೇ ಒಬ್ಬ ನಮ್ಮ ಸೈನಿಕ ತನ್ನ ಪ್ರಾಣ ತ್ಯಾಗ ಮಾಡದಂತೆ ಅವು ನಡೆಯಲಿ. ನಮ್ಮವರ ರಕ್ತ ಮತ್ತೆ ಹರಿಯದಂಥ ಕಾರ್ಯಾಚರಣೆ ಆಗಲಿ. ಅದು ರಾಜತಾಂತ್ರಿಕ ಮಟ್ಟದಲ್ಲೋ ಇನ್ನಾವ ರೀತಿಯಲ್ಲೋ ಒಟ್ಟಿನಲ್ಲಿ ಒಂದು ಸಲ ತೀವ್ರ ಕ್ರಮ ತೆಗೆದುಕೊಂಡು ಮತ್ತೆ ಮತ್ತೆ ಇಂಥ ದುಷ್ಕೃತ್ಯ ನಡೆಯದಂತಾಗಲಿ. ಅದೇನೇ ಆದರೂ, ಅದು ನಮ್ಮ ದೇಶಕ್ಕೆ, ಸೈನಿಕರಿಗೆ ಮತ್ತೆ ಯಾವುದೇ ಹಾನಿಯಾಗದ ರೀತಿಯಲ್ಲಿ ಆಗಲಿ.ಇದಕ್ಕೆ ಕಾರಣರಾದ ಭಯೋತ್ಪಾದಕ ಸಂಘಟನೆಗೆ ಮತ್ತು ಅಂಥ ಅಸಂಖ್ಯಾತ ಸಂಘಟನೆಗಳಿಗೆ ನೀರೆರೆದು ಪೋಷಿಸುತ್ತಿರುವ ಪಾಕಿಸ್ತಾನ ಮತ್ತು ಚೀನಾದಂಥ ದೇಶವನ್ನು ಹಿಮ್ಮೆಟ್ಟಿಸುವ ರೀತಿಯಲ್ಲಿ ಪರಿಣಾಮಕಾರಿಯಾಗಿರಲಿ ಎಂದೇ ಆಶಿಸುತ್ತೇನೆ, ಹಾಗೆಯೇ ಪ್ರಾರ್ಥಿಸುತ್ತಿರುವೆ.
 
ಹೌದು, ಬರೀ ಪಾಕಿಸ್ತಾನ ಬೈದು ಏನು ಪ್ರಯೋಜನ? ಅದಕ್ಕೆ ಸಕಲ ರೀತಿಯಲ್ಲೂ ಟೆಕ್ನಾಲಜಿಯನ್ನೊದಗಿಸಿ ಬೆನ್ನೆಲೆಬುಗಾಗಿ ನಿಂತು ನಮ್ಮ ದೇಶಕ್ಕೆ ತೊಂದರೆ ಕೊಡುತ್ತಿರುವುದು ಚೀನಾ ಕೂಡ ಹೌದು. 

ಸರಕಾರದೊಂದಿಗೆ ನಾವಿದ್ದೇವೆ: ರಾಹುಲ್ ಗಾಂಧಿ

ಭಾರತದಲ್ಲಿ ಚೀನಾ ವಸ್ತುಗಳದ್ದೇ ಕಾರುಬಾರು:


ಆದರೆ ಇಂದು ನಮ್ಮ ದೇಶದಲ್ಲಿ ಅತಿ ಹೆಚ್ಚು ಮಾರಟಕ್ಕಿರುವುದು ಮೇಡ್ ಇನ್ ಚೈನಾ ಪ್ರಾಡಕ್ಟ್ಸ್! ನಾವು ಎಷ್ಟು ಜನ ಇದನ್ನು ಗಮನಿಸುತ್ತೇವೆ? ಅದರ ಆರ್ಥಿಕ ಸುಭದ್ರತೆಗೆ ನಾಮ್ಮ ಕೊಡುಗೆ ಅಪಾರ. ಎಲ್ಲ ರೀತಿಯಲ್ಲೂ ಒಮ್ಮಿಂದೊಮ್ಮೆಗೇ ಬ್ಯಾನ್ ಮಾಡಿಕೊಳ್ಳಲೂ ನಮಗೆ ಸಾಧ್ಯವಾಗದಿರಬಹುದು. ಈಗಾಗಲೇ ನಾವು ಕೊಂಡಿರಬಹುದಾದ ವಸ್ತುವೂ ಇದ್ದಿರಬಹುದು. ಹೀಗಾಗಿ ನಮ್ಮ ಕೈಲಾದ ಮಟ್ಟಿಗೆ, ಮುಂದಾದರೂ ನಾವು ಅವರ ವಸ್ತುಗಳನ್ನು ಬ್ಯಾನ್ ಮಾಡಿಕೊಂಡರೆ ಅದೂ ಒಂದು ರೀತಿ ಪ್ರೊಟೆಸ್ಟ್ ಆಗದೇ? ಇದು ಮಾಡಲು ಸಾಧ್ಯವೇ? ಇದರ ಕುರಿತು ಆಲೋಚಿಸಬೇಕಾಗಿದೆ. 

ರಾಜತಾಂತ್ರಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಬೈಯುವಷ್ಟು, ಅದನ್ನು ದೂರವಿಡಲು ಸಾಧ್ಯವಿರುವಷ್ಟು ನಮಗೆ ಚೀನಾವನ್ನು ಎದುರು ಹಾಕಿಕೊಳ್ಳಲಾಗುತ್ತಿಲ್ಲ! ಅದು ಅಷ್ಟು ಬಲಿಷ್ಠವಾಗಿದೆ. ಜೈಶ್-ಎ-ಮಹಮ್ಮದ್ ಗ್ರೂಪನ್ನು ಭಯೋತ್ಪಾದಕ ಗುಂಪು ಮತ್ತು ಅದನ್ನು ಪಾಕಿಸ್ತಾನ ಸಲಹುತ್ತಿದೆ ಎಂದು ಗೊತ್ತಿದ್ದರೂ, ಚೀನಾ ಮಾತ್ರ ಒಪ್ಪುತ್ತಿಲ್ಲ. ಹೀಗಾಗಿ ಅದು ಕುಮ್ಮಕ್ಕು ಕೊಡುತ್ತಿರುವುದು ತಿಳಿದರೂ ಸರ್ಕಾರಿ ಮಟ್ಟದಲ್ಲಿ ಅದನ್ನು ಮುಟ್ಟಲಾಗುತ್ತಿಲ್ಲ. ‘ಪಾಕಿಸ್ತಾನದ ಸೈನಿಕರೂ ಮನುಷ್ಯರೇ, ಅಲ್ಲಿಯೂ ರಕ್ತ ಹರಿಯುತ್ತದೆ ಯುದ್ಧವಾದರೆ..’ ಎಂಬಿತ್ಯಾದಿ ಬ್ಲಾಬ್ಲಾಬ್ಲಾಕ್ಕೋಸ್ಕರ ನಾನು ಯುದ್ಧ ವಿರೋಧಿಸುತ್ತಿಲ್ಲ. ಅಲ್ಲಿಯ ಸೈನ್ಯ ತನ್ನ ಕುಕೃತ್ಯಕ್ಕೆ ಮತ್ತು ಕುತ್ಸಿತ ಬುದ್ಧಿಯಿಂದಾಗಿಯೇ ಈ ದಾರಿ ಆಯ್ದುಕೊಂಡಿದೆ. ಅದರ ಉದ್ದೇಶ ತನ್ನ ದೇಶದ ರಕ್ಷಣೆಗಿಂತ ಹೆಚ್ಚಾಗಿ ಭಾರತವನ್ನು ಅಸ್ಥಿರಗೊಳಿಸುವುದು, ಅಲ್ಲಿ ರಕ್ತ ಹರಿಸುವುದೇ ಆಗಿದೆ. ಹೀಗಾಗಿ ನನಗೆ ಅಲ್ಲಿಯ ಸೈನಿಕರ ಬಗ್ಗೆ ಕರುಣೆ ತೋರುವವರ ಕುರಿತೇ ಕರುಣೆಯುಂಟಾಗುತ್ತದೆ. 

ಯೋಧರಿಗೂ ಸಂಸಾರವಿದೆ!ನನ್ನ ಆಲೋಚನೆಯೆಲ್ಲಾ ನಮ್ಮ ದೇಶವನ್ನು ಕಾಯುತ್ತಿರುವ ನಮ್ಮ ಸೈನಿಕರ ಪ್ರಾಣದ ಕುರಿತು. ಹೀಗಾಗಿ ಯುದ್ಧ ಯಾವುದೇ ಕಾರಣಕ್ಕೂ ಸರಿಯಾದ ಪರಿಹಾರವಲ್ಲ.

ನಮ್ಮ ಸೈನ್ಯ ಯಾವತ್ತೂ ಬೇರೆ ದೇಶದ ಮೇಲೆ ದಂಡೆತ್ತಿ ಹೋಗಿಲ್ಲ. ಅಲ್ಲಿ ಬಾಂಬ್ ಹಾಕಿಸುತ್ತಿಲ್ಲ.. ಭಯೋತ್ಪಾದಕರಿಗೆ ಟ್ರೈನಿಂಗ್ ಕೊಟ್ಟು ಕಳಿಸುತ್ತಿಲ್ಲ. ಹೀಗಾಗಿ ಅದೇನೇ ತೀವ್ರ ಕಾರ್ಯಾಚರಣಯೇ ಆಗಿದ್ದರಲಿ, ಖಂಡಿತ ನಡೆಸಲಿ. ಉಗ್ರರನ್ನು ಮತ್ತು ಅದಕ್ಕೆ ಪೋಷಿಸುತ್ತಿರುವ ಅಲ್ಲಿಯ ಸರಕಾರವನ್ನು ಸದೆಬಡಿಯಲಿ. ರಾಜತಾಂತ್ರಿಕ ಮಟ್ಟದಿಂದ ಹಿಡಿದು ಸೇನಾ ಕಾರ್ಯಚರಣೆ, ಸರ್ಜಿಕಲ್ ಸ್ಟ್ರೈಕ್ ಏನಾದರೂ ಸರಿ. ಆದರೆ ನಮ್ಮವರ ರಕ್ತ ಮತ್ತೆ ಚೆಲ್ಲದಿರಲಿ.  ದೇಶದ ಆರ್ಥಿಕತೆಗೆ ನಷ್ಟ ಆಗದಿರಲಿ. ಕಾರಣ, ಆ ಉಗ್ರರು ಮತ್ತು ಅದಕ್ಕೆ ಕುಮ್ಮಕ್ಕು ಕೊಡುತ್ತಿರುವ ಕೆಲವು ದೇಶಗಳು ಬಯಸುತ್ತಿರುವುದೇ ಇದನ್ನು! 

ಒಗ್ಗಟ್ಟಿನಲ್ಲಿ ಬಲವಿದೆ ನಿಜ… 
ಆದರೆ ನಮ್ಮ ದೇಶದಲ್ಲೇ ಅದರ ಕೊರತೆ ಮೊದಲಿನಿಂದಲೂ ಎದ್ದು ಕಾಣುತ್ತಿದೆ. ಇದು ನಮಗಂಟಿದ ಶಾಪವೇನೋ ಅನ್ನಿಸುತ್ತಿದೆ. ಈ ಒಡೆದು ಆಳುವ ನೀತಿಯಿಂದಲೇ ಮೊಘಲರಿಂದ ಹಿಡಿದು ಬ್ರಿಟೀಷರವರೆಗೂ ಬಂದು ಆಳಿದರು, ಮತ್ತಷ್ಟು ಒಡೆದು ಹೋದರು. ನೆನಪಿರಲಿ, ಸೈನ್ಯದಲ್ಲಿ ಎಲ್ಲಾ ಜಾತಿ, ಧರ್ಮದವರಿದ್ದಾರೆ. ಅಲ್ಲಿ ಹರಿವ ರಕ್ತದ ಕೋಡಿಯಲ್ಲಿ ಯಾರು ಯಾವ ಧರ್ಮದವರೆಂಬ ಹೆಸರು ಬರೆದಿಲ್ಲ. ನಮ್ಮ ಸೈನ್ಯ ಮತ್ತು ಸರ್ಕಾರ ದೇಶದ ಭದ್ರತೆಗೆ ಏನೇ ನಿಲುವು ತಳೆದರೂ ಅದಕ್ಕೆ ನಮ್ಮ ಬೆಂಬಲವಿರಲಿ.  ಆಕ್ರೋಶದಲ್ಲಿ ತೆಗೆದುಕೊಳ್ಳುವ ನಿರ್ಧಾರ ನಮಗೂ ಹಾನಿ ತರಬಹುದು. 

ಇನ್ನು ಬಹು ಮುಖ್ಯವಾಗಿ… ಮತ್ತೆ ಮತ್ತೆ ನಾನು ಸೈನ್ಯದ ಕುರಿತೇ ಆಲೋಚಿಸುತ್ತಿರುವುದರಿಂದ. ಮಾಧ್ಯಮವಿರಲಿ, ನಾವಿರಲಿ… ಏನೇ ದುರಂತ ನಡೆದರೂ (ಅದು ರೇಪ್ ಆಗಿರಲಿ, ಪ್ರಕೃತಿ ವಿಕೋಪವಾಗಿರಲಿ, ಇಂಥಾ ನರಮೇಧ ಕೃತ್ಯವೇ ಆಗಿದ್ದಿರಲಿ..) ಆ ಕ್ಷಣಕ್ಕೆ ತೀವ್ರವಾಗಿ ಸ್ಪಂದಿಸುತ್ತೇವೆ, ದುಃಖಿಸುತ್ತೇವೆ.. ಖಂಡಿಸುತ್ತೇವೆ. ಆದರೆ ಆಮೇಲೆ ಅದು ನಮ್ಮಿಂದ ಮರೆಯಾಗಿಬಿಡುತ್ತದೆ. ನಿನ್ನೆ ಬಲಿದಾನಗೈದ ಹುತಾತ್ಮರ ಮನೆಯವರಿಗೆ ಏನು ಪರಿಹಾರ, ಭರವಸೆ, ಭದ್ರತೆಯ ಅಭಯ ನೀಡಲಾಗುತ್ತಿದೆಯೋ ಅದೆಲ್ಲಾ ದೊರಕಿದೆಯೇ? ಅವರ ಮನೆಯವರಿಗೆ ಎಲ್ಲಾ ಸೌಕರ್ಯ ಲಭಿಸಿತೇ? ನೌಕರಿ ಕೊಡಿಸುವ ಭರವಸೆ ಕಾರ್ಯರೂಪಕ್ಕೆ ಬಂದಿದೆಯೇ? ಅವರ ಮಕ್ಕಳು ಓದುತ್ತಿದ್ದಾರೆಯೇ? ಎಂಬಿತ್ಯಾದಿ ವಿವರಗಳನ್ನೂ ಕೆಲವು ತಿಂಗಳ ನಂತರ ಅಥವಾ ನಿರಂತರ ಮಾಧ್ಯಮದಲ್ಲಿ ಬರುತ್ತಿದ್ದರೆ ನಾವೂ ಎಚ್ಚೆತ್ತುಕೊಳ್ಳುತ್ತೇವೆ. ಯಾರಿಗೆ ಅನ್ಯಾಯವಾದರೂ ನಾವು ಧ್ವನಿಯೆತ್ತೋಣ. ಈ ಕ್ಷಣಕ್ಕೆ ಅವರೊಂದಿಗಿರುವುದು ಮಾತ್ರವಲ್ಲ, ನಮಗಾಗಿ ಜೀವತೆತ್ತ ಅವರ ಜೊತೆ ಪ್ರತಿ ಹಂತದಲ್ಲೂ ಇರೋಣ.

ಯಾರಿಗೂ ಕೊಡಲಾಗೋಲ್ಲ ಜೀವ

ಈ ಜಗತ್ತಿನಲ್ಲಿ ಯಾರೂ ಯಾರಿಗೂ ಜೀವ ಕೊಡುವುದು ಸುಲಭವಲ್ಲ. ದುಡ್ಡು ಕೊಟ್ಟರೂ ನಾವು ನಮ್ಮವರಿಗಾದರೂ ಅರೆಕ್ಷಣ ಆಲೋಚಿಸದೇ ಸಾಯಲು ಸಾಧ್ಯವೇ? ಭಾವೋದ್ರೇಕದಲ್ಲಿ ತಕ್ಷಣ ಹೇಳಿಬಿಡಬಹುದು. ಆದರೆ ನಿಜಕ್ಕೂ ಸಾಯುವ ಪ್ರಸಂಗ ಬಂದಾಗ?! ಬದುಕು ಎಲ್ಲದಕ್ಕಿಂತ ದೊಡ್ಡದು. ಅದನ್ನೇ ತ್ಯಾಗ ಮಾಡುತ್ತಾರೆ ಅವರು. ಕೊಡುವ ಸಂಬಳಕ್ಕೋಸ್ಕರ ಸೇರುತ್ತಾರೆ ಎನ್ನುವವರು ಅವರಿಗೆ ಅವರೇ ಅವಮಾನ ಮಾಡಿಕೊಂಡಂತೇ. ನನಗೆ ನನ್ನ ಜೀವ ಮುಖ್ಯ, ಬೇಡಿಯಾದರೂ ಬದುಕಿಯೇನು ಎಂದು ಸೈನಿಕರು ಶಸ್ತ್ರ ಕೆಳಗಿಟ್ಟರೆ ನಮ್ಮ ಬದುಕನ್ನು ಕಲ್ಪಿಸಿಕೊಳ್ಳುವುದು ದುಸ್ಥರವೇ. ಅಂಥದ್ದರಲ್ಲಿ ಜೀವ ಎಷ್ಟು ಹೊತ್ತಿಗೂ ಹೋಗಬಹುದು ಎಂದೂ ತಿಳಿದೂ ಸೈನಕ್ಕೆ ಜನ ಸೇರುತ್ತಾರಲ್ಲ, ಇಂಥಾ ದುಷ್ಕೃತ್ಯಕ್ಕೆ ಬಲಿಯಾಗುತ್ತಾರಲ್ಲ, ಅಂಥವರ ಶ್ರೇಷ್ಠ ಬಲಿದಾನವನ್ನು, ಅವರ ಧೈರ್ಯದ ಗುಂಡಿಗೆಯನ್ನು ನಮಿನೋಣ. 

ದಿವಸ ನಾವು ನಮಗಾಗಿ, ನಮ್ಮವರಿಗಾಗಿ ಪ್ರಾರ್ಥಿಸುವಾಗ ಅವರೆಲ್ಲರಿಗೂ ಪ್ರಾರ್ಥಿಸೋಣ. ಅವರ ಮನೆಯವರಿಗೆ ಆರ್ಥಿಕ, ಸಾಮಾಜಿಕ ಭದ್ರತೆ ಪೂರ್ತಿ ಲಭಿಸಿದೆಯೇ ಎಂಬುದರ ಕುರಿತು ವರದಿ ಕೇಳೋಣ. ಅವರನ್ನು ವಿನಾಕಾರಣ ಹತ್ಯೆಗೈದವರಿಗೆ ತಕ್ಕ ಶಾಸ್ತಿ ಮಾಡುವುದರ ಜೊತೆಗೇ, ಇವೆಲ್ಲವೂ ಆಗಬೇಕಾದ್ದು ಅತ್ಯಗತ್ಯ. ಆಗ ಮಾತ್ರ ಬಲಿದಾನಗೈದವರ ಆತ್ಮಕ್ಕೆ ಸಂಪೂರ್ಣ ಶಾಂತಿ ಸಿಗಬಹುದು.

#ಜೈಹಿಂದ್!

Latest Videos
Follow Us:
Download App:
  • android
  • ios