ಅವರು ಇವರ ಜಗತ್ತನ್ನು ಬಗ್ಗಿ ನೋಡಿದರೆ ಇವರು ಅವರ ಜಗತ್ತನ್ನು ತಲೆಯೆತ್ತಿ ನೋಡುತ್ತಾರೆ!
ಕೊರೋನಾ ಎಂಬ ಕಾಯಿಲೆ ಒಂದು ನಮ್ಮನ್ನೆಲ್ಲ ಹುರಿಗಡಲೆಯ ಹಾಗೆ ಒಡೆದು ಎರಡೆರಡು ಮಾಡಿ ಎಸೆದಿರುವ ಹೊತ್ತಲ್ಲಿ ಈ ಜಗತ್ತಿಗೂ ನಮಗೂ ಎಂಥಾ ಸಂಬಂಧ ಅನ್ನೋದನ್ನು ಹುಡುಕುತ್ತಾ ಹೊರಟರೆ ಎದುರಾಗುವುದು ಬರೀ ಆಧ್ಯಾತ್ಮವೇ. ಅದನ್ನೂ ಮೀರಿದ್ದು ಮತ್ತೇನೋ ಇದೆ ಅನ್ನುವುದನ್ನು ಈ ಪ್ರಬಂಧ ಸೂಚಿಸುತ್ತದೆ.
- ಕುಸುಮಬಾಲೆ ಆಯರಳ್ಳಿ
ಕಟ್ಟುತ್ತಿರುವ ಹೊಸತೋಟದಮನೆಯ ಒಳಗೆ ಹಳೆಮಂಚ ಹಾಕಿಕೊಂಡು ಸೆಟಲ್ ಆಗಿ, ನೂರೆಂಟು ಫೋನುಗಳ ಜೊತೆಗೇ ಕಿಟಕಿ ನೋಡುತ್ತಾ ಕೂತ್ತಿದ್ದೆ. ಅಪ್ಪನ ಜೊತೆ ಯಾರೋ ಪ್ಯಾಂಟಿನ ಆಸಾಮಿ ಬಂದರು. ಅಪ್ಪನದೇ ವಯಸ್ಸು. ಮಂಚದ ಮೇಲೆ ಇಟ್ಟುಹೋದ ಅವರ ಬ್ಯಾಕ್‌ಪ್ಯಾಕ್ ಕಡೆ ಕೈತೋರಿಸಿ ಕಣ್ಣುಮಿಟುಕಿಸಿದ ಮಗ. ಅದು ವೈಲ್‌ಕ್ರಾಫ್ಟ್ ಬ್ರಾಂಡಿನದ್ದು. ಅವರು ಬಂದು ನನ್ನ ಮುಂದಿದ್ದ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕೂರೋ ಹೊತ್ತಿಗೆ ನಾನು ‘ಸೂಪರ್ 30’ ಸಿನೆಮಾ ತೆರೆದು ನಾಕು ಸೀನು ನೋಡಿ, ಇದ್ರಲ್ಲಿ ಹೃತಿಕ್ ಸ್ವಲ್ಪ ಯಶ್ ಥರ ಕಾಣ್ತಾನಲ್ಲ, ಅಂದುಕೊಳ್ಳುವಾಗ ಅವರನ್ನು ‘ಹದಿನಾರಿನ ಪುಟ್ರಾಜು’ ಅಂತ ಪರಿಚಯಿಸಿದರು ಅಪ್ಪ. (ಹದಿನಾರು ಅಂದರೆ ನಮ್ ಪಕ್ಕದೂರು, ಯದುನಾಡು ಅದರ ಮೂಲ ಹೆಸರು) ರಾಸಾಯನಿಕ ಕೃಷಿ ಮಾರಕ ಅಂತ ನಾನು ಅಪ್ಪನೊಡನೆ ವಾದಕ್ಕಿಳಿದಾಗೆಲ್ಲ ‘ಪುಟ್ರಾಜುಗಿಂತ ಗೊತ್ತಾ?’ ಅಂತ ನಡುವೆ ಅವರ ಹೆಸರು ತರುತ್ತಿದ್ದ ಕಾರಣ ಪುಟ್ರಾಜು ಬಗ್ಗೆ ಒಳಗೇ ವಿಚಿತ್ರ ಕೋಪವಿತ್ತು.
ಸಕ್ಸಸ್, ಅಧ್ಯಾತ್ಮದ ಬಗ್ಗೆ ತಲೈವಾ ಏನ್ ಹೇಳ್ತಿದ್ದಾರೆ ಕೇಳಿಸ್ಕೊಳಿ!
‘ಈ ಗೊಬ್ಬರದಂಗಡಿ ಯಾಕಿಟ್ರಿ’ ಅಂತ ಕೇಳಿದೆ. ಅವರು ಶುರುಮಾಡಿದರು. ಆ ಕಾಲದಲ್ಲೆ ಬಿಎಸ್ಸಿ ಓದಿದ್ದು, ಬೆಳೆದದ್ದು ಅಂಗಡಿ, ಸಂಸಾರ, ಸಂಪಾದನೆ, ಸರಳತೆ. ಹಳ್ಳಿಯ ಜನರ ಮನಸ್ಥಿತಿಗಳು.. ಮಾತಾಡುತ್ತಾ ಹೋದರು. ಒಬ್ಬ ಮನುಷ್ಯತ್ವವಿಲ್ಲದ ವ್ಯಾಪಾರಿಯ ಕಳೆಯಿದ್ದಂತೆ ಕಂಡಿದ್ದ ಮುಖ, ಮಾತು, ಮಳೆ ನಿಲ್ಲುವ ಹೊತ್ತಿಗೆ ಮೃದುಭಾಷೀ ಸಜ್ಜನನ ಮುಖದಂತೆ ಕಾಣತೊಡಗಿತು. ನನ್ನ ಒಳ ಜಗತ್ತಿನಲ್ಲಿ ಕಲ್ಪಿಸಿಕೊಂಡಿದ್ದ ಮನುಷ್ಯನೊಬ್ಬನ ಚಿತ್ರ ನನ್ನೊಳಗೇ ಬದಲಾಗಿಹೋಗಿತ್ತು. ಕಿಟಕಿಯಲ್ಲಿ ತೊಟ್ಟಿಕ್ಕುತ್ತಿದ್ದ ಮಳೆ ನೋಡುತ್ತಾ ಯೋಚಿಸಿದೆ. ನಮ್ಮಪ್ಪನೂ ಇವರ ಹಾಗೇ ಓದೀಗೀದೀ ಒಂದ್ ಮೇಷ್ಟ್ರ ಕೆಲ್ಸವಾದರೂ ಇದ್ದಿದ್ದರೆ? ನಾವೂ ತಿಂಗಳಿಗೊಂದಿಷ್ಟುಕಾಸು ಅಂತ ಕಂಡು ಹದವಾದ ಬದುಕು ಕಂಡಿದ್ದರೆ? ಪುಟ್ರಾಜು ಅವ್ರ ಮೃದುತ್ವ, ತಿಳುವಳಿಕೆಗಳು ನನ್ನ ಸುತ್ತ ಆಗ ಯಾರಿಗಾದರೂ ಇದ್ದಿದ್ದರೆ? ಬದುಕು ಹೀಗಿರುತ್ತಿರಲಿಲ್ಲ. ಮರುಕ್ಷಣ ನನ್ನ ಮರುಳಿಗೆ ನಾನೇ ನಕ್ಕೆ. ನಮ್ಮ ಬದುಕು ಇದಾಗದೇ ಇನ್ನೊಂದೇ ಆಗಿದ್ದರೆ? ಹಿಂದಿನ ತಿರುವಿನಲ್ಲಿ ನಾವು ಅತ್ತ ಹೊರಳಿ ನಡೆದಿದ್ದರೆ ಅಂತ ಇತ್ತ ಹೊರಳಿ ಬಹುದೂರ ಸಾಗಿದ, ಬಹುಶಃ ಸಾವಿನವರೆಗೂ ಯೋಚಿಸುತ್ತಲೇ ಇರುತ್ತೇವೆ. ನಡೆದುಬಂದ ದಾರಿಯ ಜಗತ್ತಿಗಿಂತ ಕಾಲಿಡದ ದಾರಿಯ ಕನಸಿನ ಜಗತ್ತೇ ಯಾವಾಗಲೂ ಹಿತ.
ಮಗನಿಗೆ ವೃತ್ತಗಳ ಪಾಠ ಮಾಡುತ್ತಿದ್ದೆ. ಚಿಕ್ಕ ವೃತ್ತ, ಅದಕ್ಕಿಂತ ದೊಡ್ಡ ವೃತ್ತ, ಅದಕ್ಕಿಂತ ದೊಡ್ಡದು. ನನ್ನ ದೊಡ್ಡಮ್ಮ ಸುಮಾರು ಐದು ದಶಕದಿಂದ ಒಂದೇ ಊರಿನಲ್ಲಿ, ಒಂದೇ ಬೀದಿಯಲ್ಲಿ ಬದುಕುತ್ತಿದ್ದಾರೆ. ಅವರ ಸಣ್ಣ ವೃತ್ತ ಅವರ ಜಗತ್ತು. ಅದರಾಚೆಗೊಂದಿದೆ. ಅದವರಿಗೆ ಗೊತ್ತೂ ಇಲ್ಲ. ಬೇಕಾಗೂ ಇಲ್ಲ. ವೈಸ್ ವರ್ಸಾ. ನಮ್ಮ ಕುಟುಂಬದ ಕೆಲವರು ಹತ್ತಾರು ದೇಶದಲ್ಲಿ ಹಂಚಿಹೋದ ಮಕ್ಕಳ ಮನೆಗಳಿಗೆ ವಿಮಾನ ಹತ್ತಿಳಿಯುತ್ತಾ ಮೈಸೂರು ಬೆಂಗಳೂರನ್ನೆ ಹಳ್ಳಿ ಮಾಡಿಕೊಂಡಿದ್ದಾರೆ. ಅವರು ಇನ್ನೊಂದೇ ವೃತ್ತದಲ್ಲಿದ್ದಾರೆ. ಅದರಾಚೆ ಈಚೆಗಳ ವೃತ್ತಗಳಿಗೆ ಅಪರಿಚಿತರಾಗಿ. ಇದು ವೃತ್ತಗಳ ಜಗತ್ತಾದರೆ, ಆರ್ಥಿಕ ಸಾಮಾಜಿಕ ಜಗತ್ತುಗಳು ಮೆಟ್ಟಿಲುಗಳ ಹಾಗೆ ಮೇಲೆ ಕೆಳಗಾಗಿವೆ. ಅವರು ಇವರ ಜಗತ್ತನ್ನು ಬಗ್ಗಿ ನೋಡಿದರೆ, ಇವರು ಅವರ ಜಗತ್ತನ್ನು ತಲೆಎತ್ತಿ ನೋಡುತ್ತಾರೆ. ಅರ್ನಬ್ ಗೋಸ್ವಾಮಿ ದೇಶಕ್ಕೇ ಕೇಳುತ್ತದೆಂದು ಕಿರುಚಾಡುವಾಗ ಅನಿಸುತ್ತದೆ. ನೀನು ಯಾವೂರ ದಾಸಯ್ಯ ಅಂತಲೇ ಗೊತ್ತಿರದ ಕೋಟ್ಯಂತರ ಜನರ ಜಗತ್ತೊಂದಿದೆ ಕಣಯ್ಯಾ ಅಂತ ಅವನಿಗೆ ಹೇಳಬೇಕು. ಅದು ಯಾವಾಗಲೂ ಹಾಗೆ. ಇಲ್ಲಿ ಏನಾಗಬೇಕು? ಅಂತ ತಲೆಕೆಡಿಸಿಕೊಳ್ಳೋರ ಜಗತ್ತು ಬೇರೆ. ಅವರೇನು ಮಾಡುತ್ತಾರೋ ಅದಕ್ಕೆ ಒಳಗಾಗುವವರ ಜಗತ್ತೇ ಬೇರೆ. ಮಜಾ ಅಂದರೆ ಅವರು ಯಾವ ಜನರ ಬಗ್ಗೆ ಮಾತಾಡುತ್ತಾರೋ ಅವರಿಗೆ ಇವರ ಜಗತ್ತಿನ ಪರಿಚಯವೂ ಇರುವುದಿಲ್ಲ.
ನೋವನ್ನು ತಿರಸ್ಕರಿಸಬೇಡಿ, ತಬ್ಬಿಕೊಳ್ಳಿ; ಟಾಂಗ್ಲಿನ್ ಧ್ಯಾನ!
ಶಿವಮೊಗ್ಗ, ದಾವಣಗೆರೆಗಳನ್ನು ‘ಆ ದೇಸ’ ಅನ್ನುತ್ತಾ, ಕರ್ನಾಟಕ, ಭಾರತ ಎಂಬುದೇನೂ ಗೊತ್ತಿರದೇ ಪ್ರಜೆಯಾಗಿ ಬದುಕಿ, ಆ ಇನ್ನೊಂದು ಜಗತ್ತನ್ನು ನೋಡದೇ ಸತ್ತೂ ಹೋಗುತ್ತಾರೆ. ಜೊತೆಯಲ್ಲೇ ಸಾಗುವ ಎರಡು ಜಗತ್ತುಗಳು ಪರಸ್ಪರ ಅಪರಿಚಿತವಾಗಿ ಬದುಕಿ, ಸಾಯುವ ವಿಸ್ಮಯ ಇದು. ಇಲ್ಲಿ ಇಸವಿಗಳಿರುವುದು ಕ್ಯಾಲೆಂಡರಿಗೆ ಮಾತ್ರ. ಅದು 2020 ಅಂತ ತೋರಿಸಿದ ಮಾತ್ರಕ್ಕೇ ಜಗತ್ತಿನ ಎಲ್ಲರೂ ಅದೇ ಇಸವಿಯಲ್ಲಿರುವುದಿಲ್ಲ. ಕೆಲವರದ್ದು ಇನ್ನೂ 1980, ಮತ್ತೆ ಕೆಲವರದು 2040, ಹಾಗೆ ಅವರಿರುವ ಇಸವಿಯ ಜಗತ್ತಿನಲ್ಲೂ, 20ರ ಜಗತ್ತಿನಲ್ಲೂ ಒಟ್ಟಿಗೇ ಬದುಕುತ್ತಾರೆ. ಇದು ಎರಡು ಕಾಲಗಳಲ್ಲಿ ಬದುಕ್ತಿರೋರ ಎರಡು ಜಗತ್ತಿನ ಜುಗಲ್ಬಂದಿ. ನಮ್ಮೊಳಗೂ ಹೊರಗೂ ಎರಡು ಜಗತ್ತುಗಳು ಜೇನುಗೂಡಿನ ಷಟ್ಬುಜದ ಹಾಗೆ ಅಕ್ಕಪಕ್ಕ ಮಾತ್ರ ಇಲ್ಲ. ಲೇಯರ್ ಬೈ ಲೇಯರು ಕೂಡ ಇವೆ ಅನಿಸುತ್ತದೆ. ಪದ್ಮನಾಭನಗರ ಬೇರೆ ಜಗತ್ತು. ಜೊತೆಗೇ ಇರುವ ಕದಿರೇನಹಳ್ಳಿಯೇ ಬೇರೆ. ಮೈಸೂರಿನ ಸರಸ್ವತೀಪುರಂ ಮತ್ತು ಕುಕ್ಕರಹಳ್ಳಿಗಳು ಒಂದಕ್ಕೊಂದು ಅಂಟಿಕೊಂಡ ಎರಡು ಜಗತ್ತುಗಳು. ಜೊತೆಯಲ್ಲಿದ್ದೂ ಬೇರೆ. ಥೇಟು ಮನುಷ್ಯರ ಹಾಗೆಯೇ.
ಜಗತ್ತಿಗೆ ಕಾಣುವ ನಾವು, ನಮ್ಮೊಳಗೇ ಇರುವ ಜಗತ್ತು ಎರಡೂ ಬೇರೆ. ಬರೆಯುವವರಂತೂ ಬರೆಯುವಾಗ ಯಾರೋ, ಬರೆದ ಮೇಲೆ ಬೇರೆ ಯಾರೋ. ಸಾಹಿತ್ಯ, ಸಿನೆಮಾ ಎಲ್ಲದರ ಮೂಲ ಉದ್ದೇಶವೇ ಇನ್ನೊಂದು ಜಗತ್ತನ್ನು ಪರಿಚಯಿಸುವುದಾ ಅನಿಸುತ್ತದೆ. ನನಗೆ ಗೊತ್ತಿರದ ಪರಿಸರ ತೋರಿಸುವ ಯಾವುದೇ ಕತೆ ಇನ್ನೊಂದು ಜಗತ್ತಿನ ದರ್ಶನ ಮಾಡಿಸುತ್ತದೆ. ಪ್ರತಿಸಲವೂ ಇನ್ನೆಷ್ಟಿವೆಯೋ ನೋಡದೇ ಉಳಿದವು ಅನಿಸುವಂತೆ ಮಾಡುತ್ತವೆ.
ಮೂರೂ ಮತ್ತೊಂದು ಜನರ ಸಂಘಟನೆಯಲ್ಲೊಬ್ಬನನ್ನು ‘ಕರ್ನಾಟಕದ ಪ್ರತಿನಿಧಿ’ ಅಂತ ಮಾಡಿದರು ಅಂದುಕೊಳ್ಳಿ, ಅವನು ಕರ್ನಾಟಕದ ಭೂಪಟವನ್ನೂ, ಜನಸಂಖ್ಯೆಯನ್ನೂ ನೋಡಿ ತಾನೆಂಬುವ ತಾನದರ ಪ್ರತಿನಿಧಿ ಅಂತ ಎಂತಾ ಭ್ರಮೆಯ ಜಗತ್ತಿನಲ್ಲಿರುತ್ತಾನೆಂದರೆ.. ಪಕ್ಕದ ಮನೆಯವರಿಗೇ ಅವನ ಪರಿಚಯವಿರುವುದಿಲ್ಲ. ಭ್ರಮೆಯ ಜಗತ್ತು. ವಾಸ್ತವ ಅವರಿವಾದರೂ ಒಪ್ಪಿ ಇಳಿಯಲು ಬಯಸದ ನಶೆಯ ಜಗತ್ತು ಅದು. ಸಿನೆಮಾ ಧಾರಾವಾಹಿಗಳ ಕತೆ ಮಾಡುವ ಹೊಸಬರನ್ನು ನೋಡಬೇಕು. ಇನ್ನೊಂದು ಜಗತ್ತಿನೊಳಗೆ ಮುಳುಗಿ ತೇಲುವವರ ಉದಾಹರಣೆಗಾಗಿ.. ಧಾರಾವಾಹಿಗೆ ಬರೆಯುವಾಗ ಕನಸಿನಲ್ಲಿ ಕೂಡ ಜಿಕೆ ಗೋವಿಂದರಾವ್, ಪದ್ಮಾ ಕುಮಟಾ ಬರ್ತಿದ್ದರು ನನಗೆ. ಇಡೀ ಕರ್ನಾಟಕಕ್ಕೆ ನಮ್ಮ ಧಾರಾವಾಹಿ ನೋಡೋದು ಬಿಟ್ಟು ಬ್ಯಾರೆ ಕ್ಯಾಮೆ ಇಲ್ಲ ಎಂಬ ಭ್ರಮೆ. ಬ್ರೇಕಿಂಗ್ ನ್ಯೂಸುಗಳಿಗೀಗ ಅಂತದೇ ಭ್ರಮೆ. ಏನು ಬ್ರೇಕು ಮಾಡಿದರೂ ನಮ್ಮ ದೊಡ್ಡಮ್ಮನಂತವರ ಲೋಕದೊಳಗೆ ಪ್ರವೇಶಿಸಲು ಸಾಧ್ಯವೇ ಇಲ್ಲವಲ್ಲ ನಿಮಗೆ! ಹೋದ್ವರ್ಷ ನನ್ ಚಿಕ್ ತಾತನ ಮಗ ಸೊಸೆ ಬಂದಿದ್ದರು. ಅಮೇರಿಕಾವಾಸಿಗಳು. ಮಾತಾಡುತ್ತಾ ಅಂದಳು ‘ನಾವಿರೋದ್ ಸ್ವಲ್ಪ ಸಿಟಿಯಿಂದ ದೂರ. ಅದ್ ಹಳ್ಳಿ ಥರಾನೇ ಇದೆ. ಹಸು ಸಾಕಿದಾರೆ. ಚೀಸ್ ಎಲ್ಲ ಅಲ್ಲೆ ಸಿಗತ್ತೆ. ಇನ್‌ಫ್ಯಾಕ್ಟ್ ನಾವೂ ಎರಡು ಹಸು ತಗೊಳಣ ಅಂತಿದೀವಿ.’ ‘ಅಪ್ಪಿ ತಪ್ಪಿ ಯಾರೆದುರೂ ಇದೆಲ್ಲ ಮಾತಾಡಬೇಡ ತಾಯಿ. ನಮ್ ಬಳಗ ಎಲ್ಲ ಹಳ್ಳಿಯೋರು. ಅಯ್ಯೋ ಹಸಾ ಮೇಯ್ಸಕ್ ಅಲ್ಲೀಗಂಟಾ ಹೋಗ್ಬೇಕಾ ಅಂದಾರು’ ಅಂದೆ. ಅವರ ಕಲ್ಪನೆಯ ಜಗತ್ತಿನ ಅಮೆರಿಕಾದ ಗಾಜು ಒಡೆಯದಿರುವುದೇ ಸರಿ ತಾನೇ?
ಈ 5 ಟಿಪ್ಸ್ ಫಾಲೋ ಮಾಡಿ, ಖುಷಿಯಾಗಿರಲಿಲ್ಲವೆಂದರೆ ನಮ್ಮನ್ನು ಕೇಳಿ!
ಎರಡಿಲ್ಲ, ಹಲವಿಲ್ಲ, ಒಂದೇ. ಯಾಕೋ ಕೊರೋನ ದಿನಗಳಲ್ಲಿ ಹಾಗನಿಸಿತ್ತು. ಗೆಳೆಯ ವಿಕಾಸ್ ನೇಗಿಲೋಣಿ ಹೇಳಿದ ಸಿನೆಮಾ ‘ಈ ಮಾ ಯ’ ನೋಡಿದ್ದೆ. ಮಲಯಾಳಂ. ಕ್ರಿಶ್ಚಿಯನ್ ಕುಟುಂಬ. ಒಂದು ಸಾವಿನ ಮನೆಯ, ಮಣ್ ಮಾಡುವವರೆಗಿನ ಕತೆ. ಆದರೆ ಅದು ಡಿಟ್ಟೋ ಡಿಟ್ಟೋ ನಮ್ಮನೆಗಳಲ್ಲಿ ಜರುಗುವಂತದೇ ಫ್ರೇಮ್ ಟು ಫ್ರೇಮು. ಸತ್ತವರ ಮನೆಯ ಗೋಳಿನ ಟೋನ್ ಪಕ್ಕಾ ಇಲ್ಲಿಯದ್ದೇ. ಅಂದರೆ ಅವರ ಲೋಕಕ್ಕೂ ನಮ್ಮ ಲೋಕಕ್ಕೂ ಎಲ್ಲೋ ಉಂಟೇ ಉಂಟು ಸಂಬಂಧ! ಕೊರೋನಾ ಆದಾಗ ಇಟಲಿಯ ಡಾಕ್ಟರೊಬ್ಬಳು ತನ್ನ ಫೋನಲ್ಲಿ ವೀಡಿಯೋ ಮಾಡಿ, ನೀವು ನಮ್ಮ ಹಾಗಾಗಬೇಡಿ ಎಚ್ಚರ! ಅಂದದ್ದು ಒಂದು ಗಂಟೆಯೊಳಗೆ ನಮ್ಮೂರ ಪಡ್ಡೆಗಳ ಮೊಬೈಲಲ್ಲಿ ಬಂದುಬಿದ್ದಿತ್ತು. ಎರಡೆಲ್ಲಿ?
ಎರಡು ಅಥವಾ ಹಲವುಗಳ ಮೂಲ ಒಂದೆಯೇ ಇರಬಹುದೇನೋ. ಆ ಒಂದನ್ನು ತಲುಪಲು ಎರಡೆರಡು ಹಾದಿ. ಈ ಹಾಡು ನೆನಪಾಗುತ್ತಿದೆ ಈ ಹೊತ್ತಿಗೆ.‘ಹರಿಯ ಹೃದಯದಿ ಹರನ ಕಂಡೆನು. ಹರನ ಹೃದಯದಿ ಹರಿಯನು. ಹೆಣ್ಣಿನೆದೆಯಲಿ ಗಂಡ ಕಂಡೆನು. ಗಂಡಿನೆದೆಯಲಿ ಹೆಣ್ಣನು. ಕಣ್ಣಿನೆದೆಯಲಿ ಕುರುಡು ಕಂಡೆನು. ಕುರುಡಿನೆದೆಯಲಿ ಕಣ್ಣನು’.
ಅವರಿಗೆ ಇನ್ನೊಂದು ಜಗತ್ತೇ ಗೊತ್ತಿಲ್ಲದೇ ಸತ್ತೋಗ್ತಾರಲ್ಲಾ. ಛೇ ಅಂದುಕೊಳ್ಳುವುದೇ ಪರಮ ಮೂರ್ಖತನ. ಇನ್ನೊಂದರ ಅಪರಿಚಿತತೆಯೇ ನಮ್ಮನ್ನು ನೆಮ್ಮದಿಯಾಗಿಡುವ ಸ್ಥಿತಿ. ನಾನು ನಮ್ಮೂರಿನಲ್ಲಿ ಸುಖವಾಗಿದ್ದೆ. ಬೆಂಗಳೂರಿನಲ್ಲೂ ಸುಖವಾಗಿದ್ದೆ. ನಡುವೆ ಸಾಗಿದ ರೈಲುಹಳಿಗಳ ಮೇಲೆಲ್ಲೋ ಖುಷಿಯ ಕೊಂಡಿ ಕಳಚಿಕೊಂಡೆ. ಬಿಳಿಕೆರೆ ಮಾದಪ್ಪನ ಜಾತ್ರೆಯಲ್ಲಿ ಸಿಗುವ ಹತ್ರೂಪಾಯಿಯ ಐಸ್ಕ್ರೀಮು ವ್ಯಾಕ್ ಅನಿಸುವುದು ಐಬ್ಯಾಕೋ, ಪೋಲಾರ್ ಬೇರ್‌ಗಳಿಗೆ ಕಾಲಿಟ್ಟು ಬಂದದ್ದರಿಂದ. ನನ್ನ ವಾರಗೆಯ ಹುಡುಗಿಯರು ಅಲ್ಲಿ ಕೊಳ್ಳುವ ಇಪ್ಪತ್ರೂಪಾಯಿಯ ಜುಮುಕಿ ಡಬ್ಬಾ. ಜಯನಗರದ ಭವಾನಿ ಕಂಗನ್ಸ್‌ನಲ್ಲಿ ನನ್ ಹೇರ್‌ಕಟ್ಟಿಗೆ ಸೂಟಾಗೋದು ಸಿಗತ್ತೆ. ದಿನವೂ ತೋಟದ ಬದಿಯಿಂದ ಹಾರುವ ವಿಮಾನಗಳು ಕೂಡ ‘ಮೇಲೆ ಕೂತವರಿಗೆ ಇದೆಲ್ಲ ಹೇಗೆ ಕಾಣಬಹುದು?’ ಅಂತ ಕುತೂಹಲ ಹುಟ್ಟಿಸದೇ ವಿಮಾನ ಪ್ರಯಾಣ ಪರಮ ಬೋರು. ಅದಕ್ಕೇ ಚೆಂದದ ಹುಡುಗಿಯರನ್ನು ನಿಲ್ಲಿಸುವುದು ಅಂತ ತರ್ಕಿಸುತ್ತೇನೆ. ‘ನಾಕು ಸಲ ಹೋಗಿ ಬಂದ್ರೆ ನಮ್ ಸಿಟಿ ಬಸ್ಟಾಂಡಿಗೂ ಅದಕ್ಕೂ ಹೆಚ್ಚೇನೂ ವ್ಯತ್ಯಾಸ ಇಲ್ಲ ಅನಿಸತ್ತೆ ಅಣ್ಣ’ ಅಂತ ಪಾಪ ನಮ್ ಗುರುಮಲ್ಲಣ್ಣನ ಖುಷೀನೂ ಹಾಳುಮಾಡ್ತೀನಿ. ಹಾಳಾಗಿಹೋಗಲಿ ಗಂಡನಿಗೆ ಸುಲಭವಾಗಿ ಸಿಗುವ ಟ್ರಾನ್ಸ್‌ಫರ್ ತಗೊಂಡು ಮುಂಬೈಗೋ, ಕಲಕತ್ತೆಗೋ ಹೋಗಿ ಬರಲಾ? ನೆಂಟರಿಷ್ಟರ ಕಣ್ಣಲ್ಲಿ ಹುಟ್ಟಿಸಲಾ ಹೊಟ್ಟೆಕಿಚ್ಚು? ಅದಾಗದು. ‘ಇರುವುದೊಂದೇ ಭೂಮಿ’ ಅಂತ ಗೊತ್ತಾಗಿದೆ. ಈ ತುಂಡುಭೂಮಿ, ಅದರ ಹಿಂದಿರುವ ಕತೆಗಳು. ಬಿಟ್ಟರೆ ಬಿಟ್ಟೇ ಹೋಗುತ್ತದೆ. ನಾನು ಹಿಡಿದರೆ ಇನ್ನೊಂದಾದರೂ ತಲೆಮಾರು. ಮಕ್ಕಳೂ ಇದ್ದಾರು ಸಿಟಿಗೆ ಹತ್ತಿರ. ಅಲ್ಲಿಗೆರಡು. ಅಷ್ಟುಸಾಕು. ನಮಗೆ ನಾವು ಸ್ವಾರ್ಥಿಗಳ ಹಾಗೆ ಬದುಕಿ ಹೋಗುವ ಬದಲು ತೆಂಗಿನ ಗರಿಗಳಲ್ಲಿ ಪೊರಕೆ ಮಾಡಿಸಿದರೂ ನಾಕು ಜನಕ್ಕೆ ಬದುಕು ಕೊಡಬಲ್ಲೆ ಅನಿಸುತ್ತದೆ. ತೋಟಗಾರಿಕಾ ಇಲಾಖೆಯವರು ಅಲೆಸುವಾಗ, ಇವತ್ತು ಮೈಕೈ ಎಲ್ಲಾ ಮುಳ್ಳು ಚುಚ್ಚಿ ಕಿತ್ತ ನಿಂಬೆಹಣ್ಣನ್ನು ‘ಒಂದ್ರೂಪಾಯ್ಗೆ ನಾಕು’ ಅಂತಷ್ಟೇ ಉತ್ತರಿಸಿದ ಅಂಗಡಿಯವನ ವರಸೆ ಕೇಳಿದಾಗ ಅಳುಬಂದು ‘ಬೇಕಿತ್ತಾ ಇದೆಲ್ಲ? ಸಿಟಿ ಬಿಟ್ಬಂದೆ. ರೂರಲ್ ಎಕಾನಮಿ, ಮಣ್ಣು ಅಂತೆಲ್ಲ ಫೇಸ್ಬುಕ್ಕಿನಲ್ಲಿ ಬರೆದರೆ ಕಮೆಂಟು ಸಿಗಬಹುದಷ್ಟೆ. ಕಾಸಲ್ಲ. ಜಗತ್ತು ಯಾರಿಂದಲೂ ಬದಲಾಗಲ್ಲ. ಅದು ನದಿ, ಅದರ ಹರಿವು ಅದಕ್ಕಿದೆ’ ಅಂತೆಲ್ಲ ನನ್ ಬುದ್ಧಿ ನಂಗೇ ಬುದ್ಧಿ ಹೇಳಿ ನನ್ನೊಳಗೂ ಎರಡಾಗುತ್ತದೆ. ನನ್ನ ಖುಷಿ ಹೋದದ್ದೇ ಎರಡಿದೆ ಎಂಬ ಅರಿವಿನಿಂದ. ಅರಿವೇ ತಪ್ಪಾ?
ಇವತ್ ತೋಟದಿಂದ ಬರ್ತಾ, ನಮ್ಮೂರಿನ ಅಂಗನವಾಡಿಯ ಮಂಜುಳಕ್ಕ ನಿಲ್ಸಿ, ಯಾವ್ದೋ ಊರಿನ ಯಾವ್ದೋ ಜಾಗದ ಸಮಸ್ಯೆ ಹೇಳಿ, ಏನಾದರೂ ಮಾಡಬಹುದಾ ಕೇಳಿದರು. ‘ನಿಮ್ಮದಾ ಜಾಗ?’ ಅಂದೆ. ‘ಇಲ್ಲ, ಒಂದಜ್ಜಿಯದು’ ಅಂದ್ರು. ‘ಅವ್ರು ನಿಮ್ ನೆಂಟರಾ’ ಅಂದೆ. ‘ಇಲ್ಲ’ ಅಂದ್ರು. ‘ಮತ್ತೆ?’ ಕೇಳಿದೆ. ‘ಮಾಡ್ಬೇಕಲ್ಲವ್ವಾ..ನಮ್ ಕೈಲಾದಷ್ಟು. ಊರ್ಗೆಲ್ಲ ಲೈಟಾಕಕಾಗ್ದೇ ಓದ್ರೂ ಒಂದ್ ದೀಪನಾರ ಹಚ್ದೆ ಅನ್ನೋ ಖುಷಿಲ್ ಸಾಯಣಾಂತ’ ಅಂದರು. ಯೋಚಿಸುತ್ತಾ ಮಲಗಿದ್ದೆ. ನಿದ್ದೆಯ ನಡುವೆ ದಯಾನಂದ್ ಸಾಗರ್ ಕಾಲೇಜು ಎದುರಿನ ಮೂರನೇ ಕ್ರಾಸಿನ ಎರಡನೇ ಮನೆಯ ಮೇಲೆ ಇನ್ನೂ ಇದ್ದಂತೆ. ಒಂದಷ್ಟುವರುಷ ಒಂಟಿತನ ನೀಗಿಸಿದ ಮಲ್ಲೇಶ್ವರದ ರಸ್ತೆಗಳು ಆಗಾಗ ತೋಟದವರೆಗೂ ಬಂದು ಕಷ್ಟಸುಖ ಕೇಳಿಕೊಂಡು ಹೋಗುತ್ತವೆ. ಹಾಸ್ಟೆಲಿನ ಎದುರಿಗಿದ್ದ ಕದಂಬದ ಬಿಹಾರಿ ಹುಡುಗನಿಗೆ ಯಾವ ಶಿಫೆä್ಟೕ.
ಸುಮ್ಮನೇ ಯೋಚಿಸಿದರೆ ಒಂದು ಜಗತ್ತಿನೊಳಗೆ ಎರಡು ಜಗತ್ತಾಗಿ, ಇನ್ನೂ ಆಳಕ್ಕಿಳಿದರೆ ಹಲವು ಜಗತ್ತಾಗಿ ಬದುಕುತ್ತಿದ್ದೇವೆ. ಎಷ್ಟುಜಗತ್ತುಗಳು ಕಾಣುತ್ತವೋ ಅಷ್ಟುಮಾತ್ರ ಅನುಭವ. ಅಷ್ಟುಮಾತ್ರವೇ ಅದೃಷ್ಟ. ಈ ಒಂದು ಜಗತ್ತಿನೊಳಗಡಗಿರುವ ಎಲ್ಲ ಜಗತ್ತುಗಳನ್ನೂ ನಾ ಕಂಡೆ ಅನ್ನುವವರು ಎಲ್ಲುಂಟು ಹೇಳಿ ಈ ಜಗತ್ತಿನೊಳಗೆ?