ಮಳೆಗಾಲ ಶುರು; ಕೊಡಗು ಉಳಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ !

ಕಳೆದ ವರ್ಷ ಕೊಡಗು ಮಾತ್ರವಲ್ಲ ಪಶ್ಚಿಮಘಟ್ಟದ ಹಲವೆಡೆ ಭೂಮಿ ಬಿರಿಯಿತು, ಸಾವು ನೋವುಗಳಾದುವು. ಸಾಕಷ್ಟು ಸಹಾಯವು ಹರಿದು ಬಂತು. ಇದರಿಂದ ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಕೊಡಗನ್ನು ಸುರಕ್ಷಿತ ಪ್ರದೇಶವನ್ನಾಗಿ ಪರಿವರ್ತಿಸಿರಬಹುದು ಎನ್ನುವ ಭಾವನೆ ನನ್ನಲ್ಲಿತ್ತು. ಮೊನ್ನೆ ಕೊಡಗಿನ ಭೂಕುಸಿತವಾಗಿದ್ದ ಪ್ರದೇಶಕ್ಕೆ ಹೋಗಿದ್ದೆ. ರಸ್ತೆಯ ಇಕ್ಕೆಲಗಳಲ್ಲಿ ಬಿರಿದ ಭೂಮಿಯ ಕೆಂಬಣ್ಣದ ಒಡಲು ಯಥಾವತ್ತಾಗಿದೆ. ಅಲ್ಲಲ್ಲಿ ಕೊಚ್ಚಿ ಹೋದ ಮನೆಗಳ ಪಳೆಯುಳಿಕೆ. ಭವಿಷ್ಯದಲ್ಲಿ ಹೀಗಾಗದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. 

Tips to prevent Kodagu during rain

ಸುಧಾಕರ ಭಂಡಾರಿ ಸಾಜಾ

ಮಿಲೇನಿಯಂ ವರ್ಷದಲ್ಲಿ ಮಹಾ ಪ್ರಳಯವಾಗುತ್ತದೆ ಎನ್ನುವ ವದಂತಿ ಬಂದಾಗ ಹೆಚ್ಚಿನವರು ಕೊಡಗಲ್ಲಿದ್ದರೆ ಸುರಕ್ಷಿತವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಅವರೆಲ್ಲರ ಭರವಸೆಗಳನ್ನು ಸುಳ್ಳು ಮಾಡಿ ಕೇವಲ ಕೊಡಗು ಮಾತ್ರವಲ್ಲ ಪಶ್ಚಿಮಘಟ್ಟದ ಹಲವೆಡೆ ಭೂಮಿ ಬಿರಿಯಿತು, ಸಾವು ನೋವುಗಳಾದುವು, ಅಪಾರ ಆಸ್ತಿ ನಷ್ಟವಾಯಿತು. ಸಾಕಷ್ಟು ಸಹಾಯವು ಹರಿದು ಬಂತು. ಇದರಿಂದ ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಕೊಡಗನ್ನು ಸುರಕ್ಷಿತ ಪ್ರದೇಶವನ್ನಾಗಿ ಪರಿವರ್ತಿಸಿರಬಹುದು ಎನ್ನುವ ಭಾವನೆ ನನ್ನಲ್ಲಿತ್ತು.

ಮೊನ್ನೆ ಕೊಡಗಿನ ಭೂಕುಸಿತವಾಗಿದ್ದ ಪ್ರದೇಶಕ್ಕೆ ಹೋಗಿದ್ದೆ. ರಸ್ತೆ ದುರಸ್ತಿ ಕಾರ್ಯ ಮುಗೀತಾ ಬಂದಿದೆ. ಕೆಲವೆಡೆ ಡಾಂಬರೀಕರಣಕ್ಕೆ ತಯಾರಿ ನಡೆಯುತ್ತಿತ್ತು. ಮಕ್ಕಂದೂರು, ಮುಕ್ಕೋಡ್ಲು, ಮದೆನಾಡು, ತಾಲತ್ ಮನೆ ಮುಂತಾದೆಡೆ ರಸ್ತೆಯ ಇಕ್ಕೆಲಗಳಲ್ಲಿ ಬಿರಿದ ಭೂಮಿಯ ಕೆಂಬಣ್ಣದ ಒಡಲು ಯಥಾವತ್ತಾಗಿತ್ತು. ದಾರಿಗೆ ಅಡ್ಡಿಯಾಗುವ ಹೆಚ್ಚಿನ ಮಣ್ಣನ್ನು ತೆಗೆದು ಉಳಿದ ಭಾಗವನ್ನು ಹಾಗೇ ಬಿಡಲಾಗಿತ್ತು. ಕೊಚ್ಚಿ ಹೋದ ಮನೆಗಳ ಪಳೆಯುಳಿಕೆ ಅಲ್ಲಲ್ಲಿ ಗೋಚರವಾಗುತ್ತಿತ್ತು. ಇದೆಲ್ಲದರ ಮಧ್ಯೆ ನಿಚ್ಚಳವಾಗಿ ಕಂಡುಬರುವ ವಿಷಯವೇನೆಂದರೆ ಭವಿಷ್ಯದಲ್ಲಿ ಹೀಗಾಗದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ. ಇಂತಹ ಘೋರ ಅನಾಹುತ ಸಂಭವಿಸಲು ಕಾರಣಗಳೇನು? ಮುಂದೆ ಹೀಗಾಗದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಯಾರೂ ಗಂಭೀರ ಚಿಂತನೆ ನಡೆಸಿಲ್ಲ ಎನ್ನುವ ಗುಮಾನಿ ಬರುತ್ತಿದೆ.

ನಿತ್ಯಹರಿದ್ವರ್ಣಗಳ ನಡುವೆ ಮೈದುಂಬಿ ಹರಿವ ಸೀತೆ!

ಇಷ್ಟರಲ್ಲೇ ಮುಂಗಾರು ಮಲೆನಾಡಿನಲ್ಲಿ ತನ್ನ ಶಕ್ತಿ ಪ್ರದರ್ಶನಕ್ಕೆ ತುದಿಗಾಲಲ್ಲಿ ನಿಂತಿದೆ. ಈ ಸಲದ ಮಳೆ ಕೊಡಗಿನ ಪಾಲಿಗೆ ನಿರ್ಣಾಯಕ. ಕಳೆದ ಬಾರಿ ಮಳೆಯ ರುದ್ರನರ್ತನಕ್ಕೆ ಸಿಲುಕಿ ನಲುಗಿದ ಪ್ರದೇಶಗಳಲ್ಲಿ ಈ ಸಾರಿ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ಹೆಚ್ಚಿನ ಹಾನಿ ಆಗುವುದು ಖಚಿತ. ಊರಗಲ ಬಿರಿದು ನಿಂತ ಬೆಟ್ಟಗಳ ಸಡಿಲ ಮಣ್ಣಿನೊಳಗೆ
ಜಲರಾಶಿ ನುಗ್ಗಿದರೆ ಸಂಭವಿಸಬಹುದಾದ ಭೂಕುಸಿತವನ್ನು ನಿಯಂತ್ರಿಸುವುದು ಕಷ್ಟಸಾಧ್ಯ.

ಕೊಡಗಿನ ಭೂಕುಸಿತ ಬಾಧಿತ ಪ್ರದೇಶದಲ್ಲಿ ತ್ವರಿತವಾಗಿ ನಡೆಯಬೇಕಾದ ಕೆಲಸ.

ಭೂ ಸವಕಳಿ ತಡೆಯುವ ಪರಿಣಾಮಕಾರಿ ವಿಧಾನಗಳೆಂದರೆ ಅರಣ್ಯೀಕರಣ, ಭೂಸವಕಳಿ ನಿರೋಧಕ ಹೊದಿಕೆಗಳು (ಜಿಯೋಸಿಂಥೆಟಿಕ್ಸ್), ಯೋಜಿತ ಇಳಿಜಾರು ರಚನೆ ಮತ್ತು
ವೈಜ್ಞಾನಿಕ ತಡೆಗೋಡೆಗಳ ನಿರ್ಮಾಣ.

1. ಮಳೆ ನೀರು ನಿರ್ವಹಣಾ ವ್ಯವಸ್ಥೆ: ಬಿರಿದ ಭೂಮಿಯನ್ನು ಮಳೆ ನೀರಿನಿಂದ ರಕ್ಷಿಸುವುದು ಮೊದಲ ಆದ್ಯತೆ. ಮಳೆಗಾಲದಲ್ಲಿ ಮೇಲಿಂದ ಬರುವ ನೀರಿನ ಓಟವನ್ನು ತಜ್ಞರ ಮಾರ್ಗದರ್ಶನದಲ್ಲಿ ಬಾದಿತ ಪ್ರದೇಶದ ಕಡೆಗೆ ಹೋಗದಂತೆ ತಿರುಗಿಸುವುದು.

ಜಗತ್ತಿನ ಅತಿ ಎತ್ತರದ ಕಟ್ಟಡಗಳ ಬಗ್ಗೆ ನಿಮಗೆ ಮಾಹಿತಿ ಇದೆಯೇ?

2 . ಭೂ ಸವಕಳಿ ತಡೆ ನಿರ್ಮಾಣ: ಬಿರಿದ ಬೆಟ್ಟದ ಮೇಲ್ಮೈಯನ್ನು ಪರೀಕ್ಷಿಸಿ ಅಗತ್ಯವಿರುವಷ್ಟು ತಡೆಗೋಡೆ, ತಡೆಬೇಲಿ ಮತ್ತು ತಡೆ ಹೊದಿಕೆಗಳನ್ನು ಬಳಸಿಕೊಂಡು, ಮಣ್ಣಿನ ರೀತಿ, ವಿಧ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಸೂಕ್ತ ರೀತಿಯ ತಡೆಗಳನ್ನು ನಿರ್ಮಿಸಬೇಕು.

3. ಹಸಿರು ಹೊದಿಕೆಯ ರಕ್ಷೆ: ಹುಲ್ಲು ಮತ್ತು ಕೆಲವು ಪೊದೆ ಸಸ್ಯಗಳನ್ನು ಬೆಳೆಸುವುದರಿಂದ ಭೂಮಿಯ ಮೇಲ್ಪದರಕ್ಕೆ ರಕ್ಷಣೆ ದೊರೆಯುತ್ತದೆ. ಸಸ್ಯ ಭಾಗ ಮಳೆನೀರಿಂದ ರಕ್ಷಣೆ ನೀಡಿದರೆ, ಸೊಂಪಾದ ಬೇರು ಮಣ್ಣನ್ನು ಹಿಡಿದಿಡಲು ಸಹಾಯ ಮಾಡುವುದು. ಪ್ರತಿಕೂಲ ವಾತಾವರಣದಲ್ಲೂ ಸಂಪನ್ನವಾಗಿ ಬೆಳೆಯುವ ಸ್ಥಳೀಯ ಹುಲ್ಲು, ಲಾವಂಚ, ಕಾಡುಕಬ್ಬು, ಮುಂತಾದ ಹುಲ್ಲುತಳಿಗಳು ಮತ್ತು ಸ್ಥಳೀಯ ಪೊದೆಗಳು, ಮಂದಾರ, ಬಿದಿರು ಅಥವಾ ಮುಡಿವಾಳದಂತಹ ಪೊದೆ ಸಸ್ಯಗಳ ಎಳೆಯ ಗಿಡಗಳನ್ನೇ ಹುಡುಕಿ ತಂದು ನೆಡಬೇಕು. ಈ ಗಿಡಗಳ ಬೇರುಗಳು ಪೂರ್ಣಪ್ರಮಾಣದಲ್ಲಿ ಬೆಳೆದಾಗ ಮಣ್ಣನ್ನು ಹಿಡಿದಿಡುತ್ತದೆ ಮತ್ತು ಹವಾಮಾನ ವೈಪರೀತ್ಯದ ವಿರುದ್ಧ ಸ್ಥಿರವಾಗಿ ನಿಂತು ಭೂಸವಕಳಿಯನ್ನು ತಡೆಯುತ್ತದೆ.ಜೊತೆಗೆ ತಡೆ ಹೊದಿಕೆಯನ್ನೂ ಬಳಸಬಹುದು. ಪಾಲಿಮರಿಕ್ ೩ ಡಿ ಹೊದಿಕೆ, ಗೋಣಿನಾರಿನ ಹೊದಿಕೆ ಮತ್ತು ತೆಂಗಿನ ನಾರಿನ ಹೊದಿಕೆ ಉತ್ತಮ.

Tips to prevent Kodagu during rain

4. ರಕ್ಷಣೆಯ ಪೂರ್ವ ಸಿದ್ಧತೆ: ಇದನ್ನೆಲ್ಲಾ ಕಾರ್ಯಗತಗೊಳಿಸಲು ಮುಖ್ಯವಾಗಿ ರಾಜಕೀಯ ಇಚ್ಛಾಶಕ್ತಿಯಿರಬೇಕು. ಸರಕಾರ ಕೂಡಲೇ ಈ ವಿಷಯದ ಬಗ್ಗೆ ವಿಶೇಷ ಅನುಭವವುಳ್ಳ ತಜ್ಞರ ತಂಡವನ್ನು ರಚಿಸಿ ಕಾರ್ಯಪ್ರವೃತ್ತವಾಗಬೇಕು.

5 . ಮುಂದಿನ ಹೆಜ್ಜೆ: ಇದು ತಕ್ಷಣದ ಅಗತ್ಯವಾದರೆ ಕೊಡಗನ್ನು ಸುರಕ್ಷಿತವಾಗಿಸಲು ಕೆಲವು ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಜಲಶಕ್ತಿಯ ರುದ್ರನರ್ತನಕ್ಕೆ ಪಶ್ಚಿಮಘಟ್ಟದ ಒಡಲ ಮಣ್ಣು ಸಡಿಲಗೊಂಡು, ಜಲಶಕ್ತಿ ಮಡಿಲನ್ನು ಸೀಳಿ ಭೂ ಕುಸಿತಕ್ಕೆ ನಾಂದಿ ಹಾಡಿದೆ. ಹೀಗಾಗಿ ಕಾಡನ್ನು ಬೆಳೆಸುವ ಕ್ರಿಯೆ ನಿರಂತರವಾಗಿ ನಡೆಯಬೇಕು. 

ದೀರ್ಘಕಾಲಿಕ ಯೋಜನೆಗಳು:

- ರಸ್ತೆಯ ಇಕ್ಕೆಲಗಳಲ್ಲಿ, ಚರಂಡಿಗಳಲ್ಲಿ, ಮೋರಿಗಳಲ್ಲಿ ನೀರು ನಿಲ್ಲದಂತೆ ಮಳೆಗಾಲಕ್ಕೆ ಮುನ್ನ ಹಾಗೂ ಮಳೆಗಾಲದಲ್ಲಿ ನಿಯಮಿತವಾಗಿ ಸ್ವಚ್ಛಗೊಳಿಸುವುದು.

- ಭಾರವಿರುವ ಸರಕು ಸಾಗಣೆಯ ವಾಹನಗಳ ಓಡಾಟಕ್ಕೆ ಮುಖ್ಯವಾಗಿ ಬೇಸಿಗೆಕಾಲ ಮತ್ತು ಮಳೆಗಾಲದಲ್ಲಿ ನಿರ್ಬಂಧ.

- ಮುಂದೆ ಕಟ್ಟಡ ಕಟ್ಟಲು ಸಾಂಪ್ರದಾಯಿಕ ಕಲ್ಲು, ಇಟ್ಟಿಗೆ, ಸಿಮೆಂಟಿನ ವಿಧಾನಗಳನ್ನು ಬಿಟ್ಟು ಅಧುನಿಕ ಜಿಪ್ಸಂ ಮತ್ತು ಫೈಬರ್ ಮಿಶ್ರಣದಿಂದ ತಯಾರಿಸುವ ಮನೆಗಳನ್ನು ಕಟ್ಟಲು ಪ್ರೋತ್ಸಾಹಿಸುವುದು. ಇದು ಸಾಂಪ್ರದಾಯಿಕ ಕಟ್ಟದಷ್ಟೇ ಬಲಿಷ್ಟ ಆದರೆ ಅದರ ಶೇಕಡಾ ಮೂವತ್ತರಷ್ಟು ಮಾತ್ರ ಭಾರ ಹೊಂದಿದೆ. ಇದು ಭೂಕಂಪ ನಿರೋಧಕ ಮತ್ತು ಪ್ರವಾಹ ನಿರೋಧಕ ಶಕ್ತಿಯನ್ನು ಹೊಂದಿದೆ.

- ಕೊಡಗಿನ ಇತರ ಕಾಡಿಲ್ಲದ ಪ್ರದೇಶಗಳನ್ನು ಗುರುತಿಸಿ, ಕೂಡಲೇ ಸೂಕ್ತ ತಳಿಯ ಸಸ್ಯಗಳನ್ನು ನೆಡುವುದು.

- ಕೊಡಗಿನ ಶಿಖರಗಳಿಗೆ ಗಿಡಗಳ ಹೊದಿಕೆಯೊಂದಿಗೆ ಹುಲ್ಲುಹಾಸಿನ ರಕ್ಷಣೆ ಒದಗಿಸುವುದು.

- ಅರಣ್ಯ ನಾಶ, ಮರಗಳ ಕಳ್ಳಸಾಗಣೆ ಮತ್ತು ಗಣಿಗಾರಿಕೆಯನ್ನು ಸರಕಾರ ಮತ್ತು ಸಾರ್ವಜನಿಕರ ಸಹಕಾರದಿಂದ ಹತ್ತಿಕ್ಕುವುದು.

- ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಗಣಿಗಾರಿಕೆ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸುವುದು.

- ಸ್ಥಳೀಯರಿಗೆ ಕಾಡನ್ನು ಬೆಳೆಸಿ ಉಳಿಸುವುದರ ಬಗ್ಗೆ ತರಬೇತಿ ನೀಡಿ ಕೊಡಗಿನ ಎಲ್ಲಾ ಗ್ರಾಮಗಳಲ್ಲೂ ‘ಪರಿಸರ ರಕ್ಷಣ ಸೇನೆ’ಯನ್ನು ರಚಿಸುವುದು. ಮೇಲಿನ ಯೋಜನೆಗಳನ್ನು ಕಾರ್ಯಗತಗೊಳಿಸಲು ಪರಿಸರ ಪ್ರೇಮಿಗಳು, ಸ್ವಸಹಾಯ ಗುಂಪುಗಳು ಮತ್ತು ಸೇವಾ ಸಂಸ್ಥೆಗಳ ಸೇವೆಯನ್ನು ಬಳಸಿಕೊಳ್ಳಬಹುದು. ಹಣಕಾಸಿನ ಸಹಾಯಕ್ಕೆ ಮುಖ್ಯವಾಗಿ ಪಶ್ಚಿಮ ಘಟ್ಟದಿಂದ ಔಷಧಗಳಿಗೆ ಸಸ್ಯ ಪಡೆದು ಲಾಭ ಸಂಪಾದಿಸಿದವರು, ಇತರ ಪ್ರಾಯೋಜಕರು ತಮ್ಮ ಪ್ರಚಾರಕ್ಕೆ ಮೀಸಲಿಟ್ಟ ಬಜೆಟ್‌ನಿಂದ ಒಂದಂಶವನ್ನು ನೀಡಿಡುವಂತೆ ಮನವಿ ಮಾಡಬಹುದು. ಪ್ರತಿಯಾಗಿ ಅವರಿಂದ ಸಹಾಯಕ್ಕೊಳಪಟ್ಟ ಕಾಡು ಪ್ರದೇಶಕ್ಕೆ ಅವರ  ಹೆಸರನ್ನು ಜೋಡಣೆ ಮಾಡಬಹುದು. ಆ ಕಾಡಿನ ಸುತ್ತಮುತ್ತ ರಸ್ತೆಯ ಬದಿಯಲ್ಲಿ ಅರಣ್ಯ ಸಂಬಂಧಿತ ವಿಷಯಗಳೊಂದಿಗೆ ಅವರ ಹೆಸರನ್ನು ಪ್ರಚುರ ಪಡಿಸುವ ಅವಕಾಶ ಮತ್ತು ಆ ವನವನ್ನು ನಿರ್ವಹಿಸುವ ಜವಾಬ್ದಾರಿಯನ್ನೂ ಕೂಡಾ ಅವರಿಗೇ ಕೊಡಬಹುದು.

'ಮಾನವ'ನೆಂಬ ರೋಗ

ಈ ಹಸಿರು ಕವಚವನ್ನು ಮರು ಪ್ರತಿಷ್ಠಾಪಿಸುವುದು ಇಂದಿನ ಅಗತ್ಯ. ಪ್ರಪಂಚದಲ್ಲಿ ಅರಣ್ಯದ ಭಾಗ 31 ಪ್ರತಿಶತದಷ್ಟು ಕನಿಷ್ಟದಲ್ಲಿದೆ. ಭಾರತದಲ್ಲಿ ಕೇವಲ 23 ಪ್ರತಿಶತದಷ್ಟು ಮಾತ್ರವಿದೆ, ಪ್ರತಿವರ್ಷ ಅಸಂಖ್ಯ ಮರಗಳನ್ನು ಕಡಿಯಲಾಗುತ್ತಿದೆ. ಆರೋಗ್ಯವಂತ ಮರ ವರ್ಷಕ್ಕೆ 23 ಲಕ್ಷ ರೂಪಾಯಿ ಮೌಲ್ಯದ ಜೀವರಕ್ಷಕ ಆಮ್ಲಜನಕವನ್ನು ಮನುಕುಲಕ್ಕೆ ನೀಡುತ್ತದೆ. ಬದಲಾಗಿ ನಾವು ನಮ್ಮ ಲಾಭಕ್ಕೆ ಮರಗಳನ್ನು ಕಡಿಯುತ್ತಿದ್ದೇವೆ. ಪರಿಣಾಮ ಅರಿವಾಗುವುದರೊಳಗೆ ಕಾಲಮಿಂಚಿಹೋದರೆ? ಅದಕ್ಕೇ ಇರಬೇಕು ಫ್ರೆಡ್ರಿಕ್ ನೀಜ್ ಶಾ ಹೇಳಿದ್ದು ‘ಭೂಮಿಗೆ ಮೇಲ್ಪದರವೇ ಚರ್ಮ. ಆ ಚರ್ಮಕ್ಕೆ ರೋಗ ತಗುಲಿದೆ. ಅದರಲ್ಲೊಂದು ರೋಗದ ಹೆಸರು ಮಾನವ’. ಒಬ್ಬ ಮನುಷ್ಯನಿಗೆ ಆಮ್ಲಜನಕದ ಅಗತ್ಯತೆ ಪೂರೈಸಲು ಕನಿಷ್ಟ ಏಳರಿಂದ ಎಂಟು ಮರಗಳ ಅವಶ್ಯಕತೆಯಿದೆ ಎಂಬುದನ್ನು ಮನಗಂಡರೆ ಪರಿಸ್ಥಿತಿಯ ವಿಷಮತೆ ನಿಮಗೆ ಅರ್ಥವಾದೀತು.

ರೆಡ್ ಅಲರ್ಟ್

ಇದು ಕೇವಲ ಕೊಡಗಿನ ಸಮಸ್ಯೆಯಲ್ಲ, ಮನುಕುಲದ ಸಮಸ್ಯೆ.ತಕ್ಷಣ ಕಾರ್ಯಪ್ರವೃತ್ತರಾಗದಿದ್ದಲ್ಲಿ ವಾತಾವರಣ ಸಂಬಂಧಿ ಕಾಯಿಲೆಗಳಿಂದ ಮನುಕುಲ ನಶಿಸಿ ಹೋಗಬಹುದು. ಇದು ‘ಸ್ವಚ್ಛ ಭಾರತ್’ ಯೋಜನೆಯಂತೆ ‘ಹರಾ ಭಾರತ್’ ಯೊಜನೆಯಾಗಿ ಭಾರತವನ್ನೆಲ್ಲಾ  ಆವರಿಸಬೇಕು. ಇದರಿಂದ ಪರಿಸರ ವಿಕೋಪದಿಂದ ಸದ್ಯೋಭವಿಷ್ಯದಲ್ಲಿ ಅನುಭವಿಸಬಹುದಾದ ಹಲವಾರು ಹಸಿರು ಮನೆ ಸಂಬಂಧಿ ಮಾರಕ ಕಾಯಿಲೆಗಳು ಮತ್ತು ಪ್ರಕೃತಿ ವಿಕೋಪದಿಂದ ಘಟಿಸುವ ಭೀಕರ ಪರಿಣಾಮಗಳಿಂದ ನಾವು ಮುಕ್ತಿ ಪಡೆಯಬಹುದು. ಕೊಡಗಿನ ದುರ್ಘಟನೆ ನಮಗೆ  ಎಚ್ಚರಿಕೆಯ ಘಂಟೆಯಾಗಲಿ, ಮೊದಲು ಪಶ್ಚಿಮ ಘಟ್ಟವನ್ನು ಸರಿಪಡಿಸೋಣ,ನೊಂದವರ ಮತ್ತು ನೊಂದ ಪ್ರಕೃತಿಯ ನೋವನ್ನು ದೂರ ಮಾಡೋಣ. ಖ್ಯಾತ
ಕವಿ ಪಂಜೆ ಮಂಗೇಶ ರಾಯರು ಹೇಳಿದ ಈ ಸಾಲುಗಳನ್ನು ಸಾರ್ವಕಾಲಿಕ ಸತ್ಯವಾಗಿಸುವ ಹೊಣೆ ನಮ್ಮೆಲ್ಲರದು. 

 

 

Latest Videos
Follow Us:
Download App:
  • android
  • ios