ನಿತ್ಯಹರಿದ್ವರ್ಣಗಳ ನಡುವೆ ಮೈದುಂಬಿ ಹರಿವ ಸೀತೆ!
ಎಲ್ಲೆಲ್ಲೋ ಟೂರ್ ಮಾಡಲು ಪ್ಲ್ಯಾನ್ ಮಾಡುತ್ತೇವೆ. ಆದರೆ, ಸಮೀಪವೇ ಬ್ಯೂಟಿಫುಲ್ ಆಗಿರೋ ಪ್ಲೇಸಸ್ ಗಮನಕ್ಕೇ ಬರೋಲ್ಲ. ಆಗುಂಬೆ ರಸ್ತೆಯಲ್ಲಿ ಹೆಬ್ರಿಗೆ ಹೋಗುವಾಗ ಸೀತಾ ಫಾಲ್ಸ್‌ಗೆ ವಿಸಿಟ್ ಮಾಡಿದ್ದೀರಾ? ಹೇಗಿದೆ ಗೊತ್ತಾ ಈ ಅದ್ಭುತ ರಮ್ಯ ತಾಣ.
ಸುತ್ತಲೂ ದಟ್ಟ, ಹಚ್ಚ ಹಸಿರಿನಿಂದ ಕೂಡಿದ ಸೌಂದರ್ಯ ಲಹರಿ. ಸ್ವಚ್ಛಂದವಾದ ಕಾಡಿನ ನಡುವೆ ಜುಳು ಜುಳು ಹರಿವ ನೀರಿನ ನಾದ. ಬೃಹದಾಕಾರದ ಮರಗಳ ನಡುವೆ ಚಿಲಿಪಿಲಿ ಹಕ್ಕಿಗಳ ಕಲರವ. ಅಲ್ಲಲ್ಲಿ ಕಂಡೂ ಕಾಣದಂತೆ ಸರಸರ ಸದ್ದು ಮಾಡುತ್ತ ಹರಿದಾಡುವ ಸರೀಸೃಪಗಳು, ಕಾಡು ಪ್ರಾಣಿಗಳ ಕೂಗು, ಮುಂದಿನ ಹಾದಿಯೇ ಕಾಣದಂತೆ ಒತ್ತೊತ್ತಾಗಿ ಬೆಳೆದು ನಿಂತ ವೃಕ್ಷರಾಶಿ, ಹೆಬ್ಬಂಡೆಗಳ ನಡುವೆ ಪುಟ್ಟದೊಂದು ಕಾಲುದಾರಿ, ನಡೆದಷ್ಟು ಮನಸಿಗೆ ಮತ್ತಷ್ಟು ಉಲ್ಲಾಸ ಉತ್ಸಾಹ ನೀಡುವ ತಣ್ಣನೆಯ ವಾತಾವರಣ. ಗಗನದಿಂದ ತಿಳಿ ಹಾಲಿನಂತೆ ದುಮ್ಮುಕ್ಕುವ ಜಲಪಾತವನ್ನು ನೋಡವುದೇ ಕಣ್ಣಿಗೊಂದು ಹಬ್ಬ. ಇದುವೇ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಸೀತಾ ಫಾಲ್ಸ್ ಅಥವಾ ಕೂಡ್ಲು ತೀರ್ಥ ಜಲಪಾತ.
ಭೂಮಿ ಮೇಲೆ ಈಕೆ ಕಾಲಿಡದ ದೇಶವಿಲ್ಲ!
ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಖ್ಯಾತಿ ಗಳಿಸಿರುವ ಆಗುಂಬೆಯ ದಟ್ಟ ಕಾಡಿನ ನಡುವೆ ಸ್ವಚ್ಛಂದವಾದ ಈ ಜಲಪಾತವನ್ನು ಕಾಣಬಹುದು. ಪಶ್ಚಿಮ ಘಟ್ಟಗಳ ಮಧ್ಯಭಾಗದಲ್ಲಿ ಕಂಡುಬರುವ ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಇದೂ ಒಂದು. ಸೀತಾ ನದಿ ಮೂಲದಿಂದ ಹರಿದು ಬರುವ ಈ ಜಲಪಾತವು ಸುಮಾರು 250 ಅಡಿ ಎತ್ತರದಿಂದ ಮೈದುಂಬಿ ಹರಿಯುತ್ತದೆ.
ಎತ್ತ ನೋಡಿದರತ್ತ ಮುಗಿಲೆತ್ತರದ ಮರಗಳ ಸಮೂಹವೇ ಕಾಣ ಸಿಗುವ ಈ ಪ್ರದೇಶದಲ್ಲಿ ಚಾರಣ ಸಾಗುವುದೇ ಒಂದುಅದ್ಬುತ ಅನುಭವ. ಟಾರು ರಸ್ತೆಯ ಬಳಿಕ ಮಣ್ಣಿನ ರಸ್ತೆಯಲ್ಲಿ ಸುಮಾರು 4-5 ಕಿ.ಮೀ. ಕಾಲು ದಾರಿಯಲ್ಲೇ ಕ್ರಮಿಸಬೇಕು. ಸಾಗುತ್ತಾ ಸಾಗುತ್ತಾ ನೀರಿನ ಜುಳು ಜುಳು ನಾದವನ್ನು ಕೇಳುವಾಗ ಇನ್ನೇನು ಜಲಪಾತ ಕಣ್ಣೆದುರು ಬಂತೆದು ಕೊಳ್ಳುವಷ್ಟರಲ್ಲಿ ಊಹೆ ತಪ್ಪಾಗುತ್ತದೆ. ಮತ್ತೆ ಒಂದು ಕಿ.ಮೀ. ನಡೆಯಬೇಕು. ಕಲ್ಲು ಬಂಡೆಗಳಿಂದ ಕೂಡಿದ ಆಳವಾದ ರಸ್ತೆಯಲ್ಲಿ ಸಾಗುತ್ತಿದ್ದಂತೆ, ಪ್ರವಾಸಿಗನ ಮುಖದಲ್ಲಿ ಮಂದಹಾಸ ಹುಟ್ಟಿ ಕೊಳ್ಳುತ್ತದೆ. ಜಲಪಾತವನ್ನು ನೋಡುವ ತವಕದಲ್ಲಿಅದೆಷ್ಟೇ ದಣಿವಾದರೂ, ಆಯಾಸವಾದರೂ ವಿಶ್ರಾಂತಿ ಬೇಕೆನಿಸದು.
ಗಗನದಿಂದ ಅಮೃತಧಾರೆಯಂತೆ ಹರಿದು ಬರುವ ಈ ಜಲಪಾತವನ್ನು ಕಂಡಾಗ ಪ್ರವಾಸಿ ಸಾಗಿ ಬಂದ ದಣಿವೆಲ್ಲಾ ಮಂಗಮಾಯ. ದೊಪ್ಪನೆ ಹರಿದು ಬರುವ ನೀರಿನ ರಾಶಿ ಪ್ರವಾಸಿಗನನ್ನು ಯಾವುದೋ ಒಂದು ವಿಸ್ಮಯ ಲೋಕಕ್ಕೆ ಕರೆದೊಯ್ಯುವ ಅನುಭವವನ್ನು ನೀಡುತ್ತದೆ. ಜಲಪಾತ ಧುಮುಕ್ಕುವ ಜಾಗದಲ್ಲಿ ಆಳವಿಲ್ಲದ ಕಾರಣ ನೈಸರ್ಗಿಕ ಕೊಳವೇ ಇಲ್ಲಿ ನಿರ್ಮಾಣವಾಗಿದೆ. ಹಾಗಾಗಿ ಚಾರಣಿಗನಿರ್ಭಯವಾಗಿ ನೀರಿಗೆ ಇಳಿದು ಮೋಜು-ಮಸ್ತಿಯನ್ನು ಮಾಡಬಹುದು.
ಕೇರಳದಲ್ಲಿದೆ ವಿಶ್ವದ ಅತಿ ದೊಡ್ಡ ಪಕ್ಷಿ ಶಿಲ್ಪ!
ಹಾಲಿನ ರಾಶಿಯಂತೆ ಧುಮ್ಮಿಕ್ಕುವ ಜಲಧಾರೆ
ಹಾಲಿನ ರಾಶಿಯಂತೆ ಆಗಸದಿಂದ ಧರೆಗಿಳಿದಂತೆ ಕಂಗೊಳಿಸುವ ಈ ಜಲಪಾತವು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಪುರಾಣಗಳ ಪ್ರಕಾರ ಸುಮಾರು ಸಾವಿರಾರು ವರ್ಷಗಳ ಹಿಂದೆ ಈ ಸ್ಥಳದಲ್ಲಿ ಋಷಿ ಮುನಿಗಳು ಮತ್ತು ಸನ್ಯಾಸಿಗಳು ಕುಳಿತು ಧ್ಯಾನ ಮಾಡುತ್ತಿದ್ದರು ಎಂಬ ಐತಿಹ್ಯವಿದೆ. ಈ ಜಲಪಾತದ ನೀರಿನ ಮೂಲ ಸೀತಾ ನದಿಯಾಗಿದ್ದು, ಸೀತಾ ಫಾಲ್ಸ್ ಎಂದೇ ಕರೆಯುತ್ತಾರೆ. ಇಷ್ಟು ಮಾತ್ರವಲ್ಲದೆ ಈ ಜಲಪಾತದ ಮೇಲಿರುವ ಪ್ರದೇಶದಲ್ಲಿ ಮತ್ತೊಂದು ಜಲಪಾತವಿದ್ದು, ಅದು ಕಾಡಿನ ಒಳ ಭಾಗದಲ್ಲಿದೆ. ಇದನ್ನು ಮಂಗಗಳು ಮಾತ್ರ ತಲುಪಬಹುದಾಗಿರುವುದ್ದರಿಂದ ಮಂಗ ಜಲಪಾತ ಎಂದೂ ಹೆಸರುವಾಸಿಯಾಗಿದೆ.
ಚಾರಣ ಹೋಗುವುದು ಹೇಗೆ?
ನಿತ್ಯ ಹರಿದ್ವರ್ಣದ ದಟ್ಟ ಕಾಡಿನ ನಡುವೆ ಈ ಜಲಪಾತ ಇರುವುದರಿಂದ ಇದು ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಲ್ಪಡುತ್ತದೆ. ಹಾಗಾಗಿ ಪ್ರವಾಸಿಗರು ಅರಣ್ಯಇಲಾಖೆಯ ಕಛೇರಿಯಲ್ಲಿ ಪ್ರವೇಶ ಶುಲ್ಕವನ್ನು ಪಾವತಿಸಬೇಕು. ಮಕ್ಕಳಿಗೆ 50ರೂ, ಭಾರತೀಯರಿಗೆ 100 ರೂ. ಹಾಗೂ ವಿದೇಶಿಯರಿಗೆ 200 ರೂ. ಶುಲ್ಕವನ್ನು ವಿಧಿಸಲಾಗಿದೆ. ಕ್ಯಾಮೆರಾವಿದ್ದಲ್ಲಿ ಪ್ರತ್ಯೇಕ ಶುಲ್ಕವನ್ನು ಹೇರಲಾಗಿದೆ. ಮಧ್ಯ, ಸಿಗರೇಟು ಹೀಗೆ ನಿಷೇಧಿತ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ, ಸ್ಪಷ್ಟ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ತಮ್ಮಲ್ಲಿರುವ ವಸ್ತುಗಳ ಕುರಿತು ನಿಖರ ಮಾಹಿತಿಯನ್ನು ನೀಡಿ ಚಾರಣ ಮುಂದುವರಿಸಬೇಕು.
ಬೆಸ್ಟ್ ಟೈಂ ಯಾವಾಗ?
ಕೂಡ್ಲು ತೀರ್ಥ ಜಲಪಾತದ ಪ್ರವಾಸ ಕೈಗೊಳ್ಳಲು ಆಗಸ್ಟ್‌ನಿಂದ ಜನವರಿ ತಿಂಗಳು ಸೂಕ್ತ. ಯಾಕೆಂದರೆ ಈ ತಿಂಗಳಲ್ಲಿ ನೀರಿನ ಹರಿವು ಜಾಸ್ತಿ ಇರುವುದರಿಂದ ಜಲಪಾತ ವೀಕ್ಷಣೆಗೆ ಸಹಕಾರಿಯಾಗುತ್ತದೆ. ಎಪ್ರಿಲ್- ಮೇ ತಿಂಗಳಲ್ಲೂ ಇಲ್ಲಿಗೆ ಚಾರಣ ಕೈಗೊಳ್ಳಬಹುದು. ಆದರೆ ನೀರಿನ ಪ್ರಮಾಣ ಕೊಂಚ ಕಮ್ಮಿಇರುತ್ತದೆ. ಈ ಜಲಪಾತವು ಕಾಡಿನ ಮಧ್ಯ ಭಾಗದಲ್ಲಿಇರುವುದರಿಂದ ಯಾವುದೇ ರೀತಿಯ ಅಂಗಡಿ ಮುಂಗಟ್ಟುಗಳಾಗಲಿ, ಆಹಾರ ವ್ಯವಸ್ಥೆಯಾಗಲಿ ಇಲ್ಲ.
ಮಳೆಗಾಲದಲ್ಲಿ ಚಾರಣ ಮಾಡುವಾಗ ಜಿಗಣೆ ಸಮಸ್ಯೆ ಮತ್ತು ನೀರಿನ ಹರಿವು ಹೆಚ್ಚಿರುವುದರಿಂದ ಪರ್ಯಾಯ ಕ್ರಮವನ್ನು ಕೈಗೊಳ್ಳುವುದು ಉತ್ತಮ. ಬೆಳಿಗ್ಗೆ 9.30 ರಿಂದ ಸಂಜೆ 4.30ರವರೆಗೆ ಈ ಜಲಪಾತ ವೀಕ್ಷಣೆಗೆ ಸಮಯಾವಕಾಶವನ್ನು ನೀಡಲಾಗಿದೆ.
ಹೇಗೆ ಹೋಗಬಹುದು?
ಮಂಗಳೂರಿನಿಂದ 110 ಕಿ.ಮೀ, ಉಡುಪಿಯಿಂದ 45 ಕಿ.ಮೀ. ಹಾಗೂ ಹೆಬ್ರಿಯಿಂದ 23 ಕಿ.ಮೀ. ಹಾಗೂ ಆಗುಂಬೆಯಿಂದ 123 ಕಿ.ಮೀ., ಕುಂದಾಪುರದಿಂದ 69 ಕಿ.ಮೀ.ದೂರದಲ್ಲಿದೆ. ಬಸ್ಸುಗಳು ರಾಜ್ಯ ಹೆದ್ದಾರಿ ತನಕವಿದ್ದರೂ, ನಂತರ 10 ಕಿ.ಮೀ. ಮುಂದಕ್ಕೆ ಸಾಗಲು ಖಾಸಗಿ ವಾಹನಗಳಿದ್ದರೆ ಉತ್ತಮ, ಇಲ್ಲದಿದ್ದರೆ ಬಾಡಿಗೆ ಜೀಪುಗಳು ಅಥವಾ ವಾಹನಗಳ ಮೂಲಕ ತೆರಳಬಹುದು.
ಮನಸ್ಸಿಗೆ ಮುದ ನೀಡುವ ಈ ಫಾಲ್ಸ್ ಚಾರಣಿಗ ಪ್ರಿಯರು ಮಾತ್ರವಲ್ಲದೇ, ಕುಟುಂಬ ಸಮೇತವಾಗಿ ನೋಡಬಹುದು. ಅದರೆ ಇಂಥ ಜಲಪಾತವನ್ನು ನೋಡಲು ತೆರಳುವಾಗ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಕಡಿದಾದ ಪ್ರದೇಶದಲ್ಲಿ ಚಾರಣ ಸಾಗಬೇಕಿರುವುದರಿಂದ ಕೊಂಚ ಎಡವಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಕೂಡ್ಲು ತೀರ್ಥ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದ್ದು, ನಗರ ಜೀವನದ ಜಂಜಾಟಗಳಿಂದ ಅಲ್ಪ ವಿರಾಮ ಬೇಕೆನ್ನುವವರು ವೀಕ್ಷಿಸಲೇಬಹುದಾದ ಚಾರಣ ತಾಣವಾಗಿದೆ.
ಸುಷ್ಮಾ ಸದಾಶಿವ್
ವಿವೇಕಾನಂದಕಾಲೇಜು, ನೆಹರುನಗರ, ಪುತ್ತೂರು.