ಮೇಘಾ ಎಂ ಎಸ್

ಸಾಮಾನ್ಯವಾಗಿ ಸಂಜೆ ಹೊತ್ತು ಕಿಟಕಿ ಬಾಗಿಲು ಕ್ಲೋಸ್ ಮಾಡಿ, ಕಾಯಿಲ್ ಹಾಕಿ ಶತ್ರುವಿಂದ ದೂರ ಇರಲು ಪ್ರಯತ್ನಿಸುತ್ತೇವೆ. ಒಂದು ವೇಳೆ ಅದೇ ಸಮಯದಲ್ಲಿ ಕರೆಂಟ್ ಹೋದರೆ ಮೂಲೆಗಳಲ್ಲಿ ಅಡಗಿರುವ ನಮ್ಮ ಶತ್ರುಗಳು ಒಮ್ಮೆಲೆ ಗುಂಪಾಗಿ ಬಂದು ದಾಳಿ ಮಾಡುತ್ತವೆ. ಕರೆಂಟ್ ಬರುವುದರೊಳಗೆ ಕೈ ಕಾಲೆಲ್ಲಾ ಊತ ಬಂದು ಕೆಂಪಾಗಿರುತ್ತೇವೆ. ಆ ಶತ್ರು ಬೇರಾರು ಅಲ್ಲ ನೊಣದ ತಮ್ಮ ಸೊಳ್ಳೆ.

ಕಣ್ಣಿಗೆ ಕಾಣದಷ್ಟು ಸಣ್ಣಗೆ, ಹಿಡಿದು ಸಾಯಿಸಲು ಹೋದರೆ ಕೈ ಸಿಗದಷ್ಟು ಸೂಕ್ಷ್ಮವಾಗಿರುವ ಈ ಕೀಟ ಅಂತಿತಾ ಶತ್ರುವಲ್ಲ. ಹಿಂದಿಯಲ್ಲಿ ಒಂದು ಮಾತಿದೆಯಲ್ಲ ‘ದುಷ್ಮನ್ ಕಹಾ ಹೈ, ಅಂದ್ರೆ ಬಗಲ್ ಮೆ ಹೈ’ ಅಂತ ಅದಕ್ಕೆ ಸಮನಾಗಿದೆ ಈ ಸೊಳ್ಳೆ. ಸೂಜಿಯಂತೆ ಚೂಪಾಗಿರುವ ತನ್ನ ಮೂತಿಯಲ್ಲಿ ನಮಗೇ ಗೊತ್ತಾಗದಂತೆ ನಮ್ಮ ದೇಹವನ್ನು ತಿವಿದು ಒಳ ಹೊಕ್ಕು ಏನಿಲ್ಲ ಅಂದ್ರೂ ಎರಡು ಹನಿ ರಕ್ತ ಕುಡಿದುಬಿಡುತ್ತೆ. ಅದು ನಮ್ಮ ದೇಹ ತೊರೆದು ತುರಿಕೆ ಬಂದಾಗಲೇ ಸೊಳ್ಳೆ ಬಂದು ಕಚ್ಚಿ ಹೋಗಿದೆ ಎಂದು ಗೊತ್ತಾಗುವುದು. ಇದರ ಈ ಕಡಿತದಿಂದ ನಿಮಗೆ ಮಲೇರಿಯಾ, ಚಿಕೂನ್ ಗುನ್ಯಾ, ಡೆಂಘಿ, ಜಿಕಾ, ಹಳದೀ ಜ್ವರ ಮೊದಲಾದ ಕಾಯಿಲೆ ಬರಬಹುದು.

ಮಳೆಗಾಲದಲ್ಲಿ ಮಕ್ಕಳ ಮೇಲೆ ನಿಗಾ ಹೀಗಿರಲಿ!

ಈ ಸೊಳ್ಳೆಯ ತೀಕ್ಷ್ಣತೆ, ಗ್ರಹಿಕೆ, ಸ್ಮಾರ್ಟ್‌ನೆಸ್ ಎಲ್ಲದರ ಬಗ್ಗೆ ವಾಟರ್‌ಲೂ ವಿಶ್ವವಿದ್ಯಾಲಯ ಇತ್ತೀಚೆಗೆ ಅಧ್ಯಯನ ಕೈಗೊಂಡಿತ್ತು. ಇದರಿಂದ ಇಂಟರೆಸ್ಟಿಂಗ್ ಸಂಗತಿಗಳು ಹೊರಬಿದ್ದಿವೆ. ಸೊಳ್ಳೆಯಿಂದ ಕಚ್ಚಿಸಿಕೊಳ್ಳುವ ಮುನ್ನ ನಿಮಗೆ ತಿಳಿದಿರಬೇಕಾದ ಸಂಗತಿಗಳು ಇಲ್ಲಿವೆ ಓದಿ. ವಿಶ್ವ ಸೊಳ್ಳೆಯ ದಿನ ಮನುಷ್ಯನಿಗೆ ಬರುವ ಶೇ.17ರಷ್ಟು ಕಾಯಿಲೆಗಳು ಸೊಳ್ಳೆಗಳಿಂದಲೇ. ಈವರೆಗೂ 3,500 ಪ್ರಬೇಧಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 112 ಜಾತಿಗಳ ಸೊಳ್ಳೆಗಳು ನಮ್ಮ ಸುತ್ತಲು ‘ಜುಂಯ್’ ಎಂದು ಶಬ್ದ ಮಾಡುತ್ತವೆ. ಸೊಳ್ಳೆಗಳ ಸಂಖ್ಯಾಬಲ ಹೆಚ್ಚುತ್ತಲೆ, ರೋಗಗಳ ಸಂಖ್ಯೆಯೂ ಹೆಚ್ಚುತ್ತಿವೆ. 1879ರಂದು ಬ್ರಿಟಿಷ್ ವೈದ್ಯರಾದ ಸರ್ ರೊನಾಲ್ಡ್ ರಾಸ್ ಎಂಬುವವರು ಹೆಣ್ಣು ಸೊಳ್ಳೆ ಕುರಿತು ಸಂಶೋಧನೆ ನಡೆಸಿದರು. ಈ ಹೆಣ್ಣು ಸೊಳ್ಳೆಯಿಂದಲೇ ಮನುಷ್ಯನಿಗೆ ಮಲೇರಿಯಾ ಕಾಯಿಲೆ ಬರುತ್ತೆ ಎಂದು ತಿಳಿಯಿತು. ಅವರ ಈ ಸಂಶೋಧನೆಯ ನೆನಪಿಗಾಗಿಯೇ ಪ್ರತೀ ವರ್ಷ ಆಗಸ್ಟ್ 20ರಂದು ವಿಶ್ವ ಸೊಳ್ಳೆಗಳ ದಿನವನ್ನಾಗಿ ಆಚರಿಸಲಾಗುತ್ತೆ.

ಮೂಗು ಚುರುಕು

ಮನುಷ್ಯ ಉಸಿರಾಟದಲ್ಲಿ ಆಮ್ಲಜನಕ ಒಳಗೆಳೆದುಕೊಂಡು ಇಂಗಾಲದ ಡೈ ಆಕ್ಸೈಡ್ ಹೊರ ಬಿಡುತ್ತಾನೆ. ಹೀಗೆ ಹೊರಬಿಟ್ಟ ಕಾರ್ಬನ್ ಡೈ ಆಕ್ಸೈಡ್ ಅನ್ನು ಸೊಳ್ಳೆಗಳು ಮೂಸುತ್ತವೆ. ಭೂತ ಬಂಗಲೆಯಲ್ಲಿ ನೀವಿದ್ದರೂ ಅವು ನಿಮ್ಮನ್ನು ಗುರುತಿಸುತ್ತವೆ. ಉದಾಹರಣೆಗೆ ಮನೆಯಲ್ಲಿ ಓಡಾಡಿಕೊಂಡಿದ್ದರೆ ಅವು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ ಅದೇ ರಾತ್ರಿ ಮಲಗಿದಾಗ ಅಥವಾ ಕರೆಂಟ್ ಹೋದಾಗ ಸೊಳ್ಳೆಗಳ ದಂಡೇ ಬಂದು ಡಿಸ್ಟರ್ಬ್ ಮಾಡುತ್ತವೆ. ಅದಕ್ಕೆ ಕಾರಣ ಕಾರ್ಬನ್ ಡೈ ಆಕ್ಸೈಡ್. ಸುಮಾರು 100 ಮೀಟರ್ನಿಂದಲೇ ಕಾರ್ಬನ್ ಡೈ ಆಕ್ಸೈಡ್ ಅನ್ನು ಗುರುತಿಸುತ್ತಾ ತಮ್ಮ ಗುರಿಯ ಸಮೀಪಕ್ಕೆ ತಲುಪುತ್ತವೆ.

ಸೊಳ್ಳೆಗಳು ಕೆಲವರಿಗೆ ಮಾತ್ರ ಹೆಚ್ಚು ಕಚ್ಚುವುದೇಕೆ?

ದೃಷ್ಟಿ ಕಡಿಮೆ

ಗ್ರಹಿಕೆ ಚುರುಕಿದ್ದರೂ ಸೊಳ್ಳೆಗಳ ದೃಷ್ಟಿ ಪ್ರಬಲವಾಗಿಲ್ಲ. ನೊಣಗಳಿಗೆ ಇರುವಂತೆ ‘ಒಸೆಲೈ’ ಎಂಬ ಎರಡೂ ಕಣ್ಣುಗಳು ಸೊಳ್ಳೆಯ ತಲೆಯ ಮೇಲ್ಭಾಗದಲ್ಲಿ ಬದಿಯಲ್ಲಿ ಇರುತ್ತೆ. ಹಾಗಾಗಿ ಅವುಗಳಿಗೆ ಕಣ್ಣು ಸರಿಯಾಗಿ ಕಾಣುವುದಿಲ್ಲ. ಅವು ವಾಸನೆಯ ಮೂಲಕವೇ ಗ್ರಹಿಸಿ ಬೇಟೆಯಾಡುತ್ತವೆ. ಕಚ್ಚಲು ಪ್ರಚೋದಿಸುವ ದೃಶ್ಯಗಳು ಬಹಳ ಪ್ರಮುಖ ಎನಿಸುವುದು ಸೊಳ್ಳೆಗಳ ದೇಹ ರಚನೆ. ಅವು ಮೂರು ಜೊತೆ ಕಾಲುಗಳನ್ನು ಹೊಂದಿರುತ್ತವೆ. ಹಗುರವಾದ ಅದರ ದೇಹ ಕೇವಲ ೨.೫ ಮಿಲಿ ಗ್ರಾಂ ತೂಗುತ್ತದಷ್ಟೆ. ಇದರಿಂದಾಗಿ ಅವು ಬಹಳ ವೇಗವಾಗಿ ಹಾರುತ್ತವೆ. ಕಾಲು ಅಲ್ಲಾಡಿಸುತ್ತಾ ಕುಳಿತರೆ ಸೊಳ್ಳೆಗಳು ಬಹಳ ಬೇಗ ಆಕರ್ಷಿಸುತ್ತೆ. ನೆನಪಿಡಬೇಕಾದ ಅಂಶ ಎಂದರೆ ಅವುಗಳಿಗೆ ಗಾಳಿ ಎಂದರೆ ಅಲರ್ಜಿ. ಕರೆಂಟ್ ಹೋದಾಗ ಒಮ್ಮೆಲೆ ನಿಮ್ಮ ಕಡೆ ನುಗ್ಗಿ ಬರುವ ಸೊಳ್ಳೆಗಳದಂಡು, ಕರೆಂಟ್ ಇದ್ದಾಗ ಫ್ಯಾನ್ ಹಾಕಿದರೆ ಕಾಣಿಸಿಕೊಳ್ಳುವುದೇ ಇಲ್ಲ. 

ಎಲ್ಲಾ ರೋಗ ಬರುವುದು ಹೆಣ್ಣು ಸೊಳ್ಳೆಯಿಂದಲೇ

‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ಗಾದೆ ಮಾತಿಗೆ ಸೊಳ್ಳೆ ಉತ್ತಮ ಉದಾಹರಣೆ. ಅಡಲ್ಟ್ ಗಂಡು ಸೊಳ್ಳೆಯ ಜೀವಿತಾವಧಿ ಕೇವಲ ೧೦ ದಿನ ಮಾತ್ರ. ಇವು ಕಚ್ಚಿದರೂ ಯಾವ ರೋಗವೂ ತಗುಲುವುದಿಲ್ಲ. ಅದೇ ಅಡಲ್ಟ್ ಹೆಣ್ಣು ಸೊಳ್ಳೆಯ ಜೀವಿತಾವಧಿ 42-56 ದಿನ. ಡೆಂಘಿ, ಮಲೇರಿಯಾ, ಹಳದೀ ಜ್ವರ ಹೀಗೆ ಎಲ್ಲಾ ರೋಗಗಳು ಬರುವುದು ಇವುಗಳಿಂದಲೇ.

ಡೆಂಘೀ ಜ್ವರ; ಭಯ ಬೇಕಾಗಿಲ್ಲ, ನಿರ್ಲಕ್ಷ್ಯ ಬೇಡ!

‘ಓ’ ಗುಂಪಿನ ರಕ್ತ ಸೊಳ್ಳೆಗೆ ಅಚ್ಚುಮೆಚ್ಚು

ನಮ್ಮ ದೇಹದಲ್ಲಿನ ಪ್ರೊಟೀನ್ ಹೀರುವುದು ಸೊಳ್ಳೆಗಳು ಕಚ್ಚುವ ಮೂಲ ಉದ್ದೇಶ. ಸಿಕ್ಕಾಪಟ್ಟೆ ಹಸಿವಾದಾಗ ಬೇರೆ ಗುಂಪಿನ ರಕ್ತಕ್ಕಿಂತ ಅವು ‘ಓ’ ಗುಂಪಿನ ರಕ್ತವನ್ನು ಹುಡುಕುತ್ತವೆ. ಈ ರಕ್ತ ಸಿಕ್ಕರೆ ಅವುಗಳ ಪಾಲಿಗೆ ಹಬ್ಬದೂಟದಂತೆ. ಯಾರಾದರು ಬಿಯರ್ ಸೇವಿಸಿದ್ದರೆ ಅವರನ್ನು ಬಹುಬೇಗ ಗುರುತಿಸುತ್ತವಂತೆ ಈ ಸೊಳ್ಳೆಗಳು. ಅದೂ ಕಾರ್ಬನ್ ಡೈ ಆಕ್ಸೈಡ್‌ನ ಮೂಲಕವೇ. ಜೊತೆಗೆ ಹೆಚ್ಚೆಚ್ಚು ವಿಶ್ರಾಂತಿ ಪಡೆಯುವ ಅಂದರೆ ಗರ್ಭಿಣಿಯರು, ಬೊಜ್ಜು ಇರುವ ವ್ಯಕ್ತಿಗಳೂ ಸೊಳ್ಳೆಗಳ ಪ್ರಮುಖ ಟಾರ್ಗೆಟ್. ಯಾಕೆಂದರೆ ಇವರಲ್ಲಿ ಸೊಳ್ಳೆಗಳಿಗೆ ಬೇಕಾದ ಪೌಷ್ಠಿಕಾಂಶ ಹೆಚ್ಚಿರುತ್ತದೆ.