ಸೊಳ್ಳೆಗಳು ಕೆಲವರಿಗೆ ಮಾತ್ರ ಹೆಚ್ಚು ಕಚ್ಚುವುದೇಕೆ?

ಕೇವಲ ಕೆಲ ಶಿಕ್ಷಕರಲ್ಲ, ಸೊಳ್ಳೆಗಳೂ ಪಾರ್ಶಿಯಾಲಿಟಿ ಮಾಡುತ್ತವೆ. ಅವು ಕೆಲವರಿಗೆ ಮಾತ್ರ ಹೆಚ್ಚು ಕಚ್ಚುತ್ತವೆ, ಮತ್ತೆ ಕೆಲವರನ್ನು ಸುಮ್ಮನೆ ಬಿಡುತ್ತವೆ. 

Why do some people get bit by mosquitos more than others?

ತಂಗಿಯೋ, ಅಕ್ಕನೋ ಸೊಳ್ಳೆ ಕಚ್ಚಿತೆಂದು ದಿನಕ್ಕೆ ನಾಲ್ಕೈದು ಬಾರಿ ಹೇಳುತ್ತಾ ತುರಿಸಿಕೊಳ್ಳುವಾಗ, ತನಗೆ ಮಾತ್ರ ಕಾಣಿಸದ, ಕಚ್ಚದ ಸೊಳ್ಳೆ ಇದೆಯೆಂಬ ನಂಬಿಗೆಯೇ ಅಣ್ಣನಿಗಿರದು. ''ಅರೆ! ಅದು ಹೇಗೆ ಮರಾಯ್ತಿ, ನಿಂಗೊಬ್ಳಿಗೇ ಕಚ್ಚುತ್ತೆ? ನಿಂದೇನು ಬಾರಿ ಸಿಹಿ ರಕ್ತನಾ? ನಿಂಗೆಲ್ಲೋ ಭ್ರಮೆ'' ಅಂತ ಹಂಗಿಸುವ ಅಣ್ಣಂದಿರು ಬಹುತೇಕ ಮನೆಯಲ್ಲಿರಬಹುದು. ಆದರೆ, ಸೋದರಿ ಸುಳ್ಳು ಹೇಳುತ್ತಿಲ್ಲ. ಸೊಳ್ಳೆಗಳು ಕೆಲವರಿಗೆ ಮಾತ್ರ ಹೆಚ್ಚು ಕಚ್ಚುತ್ತವೆ ಎಂಬ ವಿಷಯ ಅಣ್ಣನಿಗೆ ತಿಳಿದಿಲ್ಲ ಎನಿಸುತ್ತದೆ. 

ಹೌದು, ಸೊಳ್ಳೆಗಳು ಕೆಲವರಿಗೆ ಮಾತ್ರ ಹೆಚ್ಚು ಕಚ್ಚುತ್ತವೆ, ಮತ್ತೆ ಕೆಲವರನ್ನು ಕಂಡರೆ ಅದೇನೋ ಕನಿಕರ- ಬದುಕಿಕೋ ಹೋಗು ಬಡಪಾಯಿ ಅಂತ ಬಿಟ್ಟು ಬಿಡುತ್ತವೆ. ಹಾಗಿದ್ದರೆ, ಕೆಲವರ ಮೇಲೇಕೆ ಈ ಸೊಳ್ಳೆಗಳಿಗೆ ದ್ವೇಷ? 

Why do some people get bit by mosquitos more than others?

ಏನೋ ಸಣ್ಣ ಕೀಟ. ಅದು ಕಚ್ಚುವುದಕ್ಕೆ ದ್ವೇಷ ಗೀಷ ಅಂತೆಲ್ಲ ದೊಡ್ಡ ದೊಡ್ಡ ಪದಗಳ ಬಳಕೆ ಏಕೆ ಅಂತ ನೀವು ಕೇಳಬಹುದು. ಆದರೆ, ಸಣ್ಣ ಕೀಟ ಎಂದುಕೊಂಡ ಈ ಕಿಲಾಡಿ ಕಿಲ್ಲರ್ ಪ್ರತಿ ವರ್ಷ ಭಯೋತ್ಪಾದಕರಿಗಿಂತ ಹೆಚ್ಚು ಜನರ ಪ್ರಾಣ ಕಸಿಯುತ್ತಿದೆ. ವರ್ಷಕ್ಕೆ ಜಾಗತಿಕವಾಗಿ 100 ಕೋಟಿಗೂ ಹೆಚ್ಚು ಜನರು ಸೊಳ್ಳೆಯ ಕಡಿತದಿಂದ ಸಮಸ್ಯೆಗಳನ್ನೆದುರಿಸಿದರೆ, 5 ಲಕ್ಷಕ್ಕೂ ಹೆಚ್ಚು ಮಂದಿ ಸೊಳ್ಳೆ ಕಡಿತದಿಂದುಂಟಾದ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಮಲೇರಿಯಾ, ಡೆಂಗ್ಯೂ, ಝೀಕಾ ಸೇರಿದಂತೆ ಹತ್ತು ಹಲವು ಕಾಯಿಲೆಗಳು ಸೊಳ್ಳೆ ಕಚ್ಚುವುದರಿಂದ ಬರುತ್ತವೆ. ಈಗೀಗ ಇನ್ನೊ ಹೊಸ ಹೊಸ ಕಾಯಿಲೆಗಳ ಹುಟ್ಟಿಗೆ ಈ ಸೊಳ್ಳೆಗಳು ಕಾರಣವಾಗುತ್ತಲೇ ಇವೆ. 

ಸೊಳ್ಳೆ ನಾಶಕ್ಕೆ ಕಾಫಿ ಬೀಜ ಮದ್ದು!

ರಕ್ತಪೀಪಾಸು ಹೆಣ್ಣು ಸೊಳ್ಳೆಗಳು

ಅಂದ ಹಾಗೆ ಗಂಡು ಸೊಳ್ಳೆಗಳು ಸೋಮಾರಿಗಳು. ಮಕ್ಕಳು ಮಾಡುವುದಷ್ಟೇ ಅವುಗಳ ಕೆಲಸ. ಅವು ಕಚ್ಚುವುದಿಲ್ಲ, ರಕ್ತ ಹೀರುವುದಿಲ್ಲ. ನಿಮಗೆ ಕಚ್ಚುವುದೇನಿದ್ದರೂ ಹೆಣ್ಣು ಸೊಳ್ಳೆಗಳು ಮಾತ್ರ! ಇಷ್ಟಕ್ಕೂ ನಿಮ್ಮ ರಕ್ತ ಅವಕ್ಕೆ ಆಹಾರವಲ್ಲ. ಅವು ಸಸ್ಯಜನ್ಯ ರಸವನ್ನು ಕುಡಿದು ಬದುಕುತ್ತವೆ. ಹಾಗಿದ್ದರೆ ಅವು ರಕ್ತ ಹೀರುವುದೇಕೆ? 
ಸಾಮಾನ್ಯವಾಗಿ ಗರ್ಭಿಣಿಯರಿಗೆ ವೈದ್ಯರು ಹೆಚ್ಚಿನ ಪೋಷಕಾಂಶಕ್ಕಾಗಿ ಕ್ಯಾಲ್ಶಿಯಂ, ವಿಟಮಿನ್, ಐರನ್ ಮಾತ್ರೆ ಬರೆದುಕೊಡುತ್ತಾರಲ್ಲವೇ? ಗರ್ಭಿಣಿ ಸೊಳ್ಳೆಗಳಿಗೆ ಯಾರು ಬರೆದುಕೊಡುತ್ತಾರೆ? ಅವುಗಳ ಎಕ್ಸ್ಟ್ರಾ ಹಸಿವನ್ನು, ಮೊಟ್ಟೆಗಳ ಬೆಳವಣಿಗೆಗೆ ಬೇಕಾದ ಹೆಚ್ಚಿನ ಪೋಷಕಾಂಶಗಳನ್ನು ಅವೇ ಹುಡುಕಿಕೊಂಡು ಪಡೆಯಬೇಕು. ಈ ಎಕ್ಸ್ಟ್ರಾ ವಿಟಮಿನ್‌ಗಳಿಗಾಗಿ ಅವು ನಿಮ್ಮ ರಕ್ತ ಹೀರುತ್ತವೆ. 

ಹೆಣ್ಣು ಸೊಳ್ಳೆಯ ಮೂಗಿಗೆ ಕಾರ್ಬನ್ ಡೈ ಆಕ್ಸೈಡ್‌ನ ವಾಸನೆ ಬಡಿಯುತ್ತಲೇ ಅವು ಬೇಟೆಯ ಮೋಡ್‌ಗೆ  ಹೋಗಿಬಿಡುತ್ತವೆ. ಅವುಗಳ ದೃಷ್ಟಿ ಹಾಗೂ ವಾಸನಾಗ್ರಂಥಿಗಳು ಶಾರ್ಪ್ ಆಗುತ್ತವೆ. ರೆಕ್ಕೆಗಳು ಪಟಪಟನೆ ಬಡಿದುಕೊಳ್ಳಲು ತೊಡಗುತ್ತವೆ. ಮತ್ತು ಆ ಸೊಳ್ಳೆಗಳು ಕಾರ್ಬನ್ ಡೈ ಆಕ್ಸೈಡ್ ವಾಸನೆ ಎಲ್ಲಿಂದ ಬರುತ್ತಿದೆ ಎಂಬುದನ್ನು ಹುಡುಕಿಕೊಂಡು ಹೊರಡುತ್ತವೆ. ಅವುಗಳ ಮೂಗು ಎಷ್ಟು ಸೂಕ್ಷ್ಮವೆಂದರೆ ಸಾಮಾನ್ಯವಾಗಿ ಸುಮಾರು 100 ಅಡಿಗಳ ದೂರದಲ್ಲಿ ಇರುವ ಇಂಗಾಲ ಜನಕವನ್ನು ಗುರುತಿಸಬಲ್ಲವು. 

ಡೆಂಘೀ ಜ್ವರ; ಭಯ ಬೇಕಾಗಿಲ್ಲ, ನಿರ್ಲಕ್ಷ್ಯ ಬೇಡ!

ಸೊಳ್ಳೆಗಳು ಗಾಢ ಬಣ್ಣಕ್ಕೆ ಬೇಗ ಆಕರ್ಷಿತವಾಗುತ್ತವೆ. ಈ ಕಾರ್ಬನ್ ಡೈ ಆಕ್ಸೈಡ್ ಹಾಗೂ ಗಾಢ ಬಣ್ಣ ಒಟ್ಟಿಗೇ ಸೇರಿದಾಗ ಅವುಗಳ ಬೇಟೆ ಮತ್ತೂ ಸುಲಭ. ಮನುಷ್ಯರು ಉಸಿರಾಟದಲ್ಲಿ ಇಂಗಾಲದ ಡೈ ಆಕ್ಸೈಡ್ ಹೊರ ಬಿಡುವುದು ನಿಮಗೆ ಗೊತ್ತೇ ಇದೆ. ಈ ಉಸಿರಾಟವೇ ಸೊಳ್ಳೆಗಳನ್ನು ಮನುಷ್ಯರತ್ತ ಎಳೆದು ತರುವುದು. ಇನ್ನವು ಹತ್ತಿರ ಬರುತ್ತಿದ್ದಂತೆ ನಮ್ಮ ದೇಹದ ಉಷ್ಣತೆ ಹಾಗೂ ತೇವಾಂಶವನ್ನು ಕೂಡಾ ಗುರುತಿಸಬಲ್ಲವು. ಅದೆಲ್ಲ ಸರಿ, ಅವು ಕೆಲವರಿಗೆ ಮಾತ್ರ ಹೆಚ್ಚು ಕಚ್ಚುವುದೇಕೆ ಎಂಬ ವಿಷಯಕ್ಕೆ ಬರೋಣ. ಈ ಕುರಿತು ಈಗಾಗಲೇ ಸಾಕಷ್ಟು ಸಂಶೋಧನೆಗಳಾಗಿವೆಯಾದರೂ ತೀರಾ ಇತ್ತೀಚೆಗೆ ವಾಷಿಂಗ್ಟನ್ ಯೂನಿವರ್ಸಿಟಿ ನಡೆಸಿದ ಸಂಶೋಧನೆಯು ಈ ಪ್ರಶ್ನೆಗೆ ಉತ್ತರ ಕಂಡುಕೊಂಡಿದೆ. 

ನೀವು ಗಬ್ಬಾಗಿ ಇದ್ದಷ್ಟೂ ಸೊಳ್ಳೆಗಳು ನಿಮಗೆ ಕಚ್ಚುವ ಅಪಾಯ ಹೆಚ್ಚು! ಕಾರ್ಬನ್ ಡೈ ಆಕ್ಸೈಡ್ ಹೊರತಾಗಿ ಸೊಳ್ಳೆಗಳು ಮನುಷ್ಯರ  ವಾಸನೆಯನ್ನೂ ಗ್ರಹಿಸಬಲ್ಲವು. ಇದು ಕೇವಲ ಬೆವರಿನ ವಾಸನೆಯಲ್ಲ, ನಮ್ಮ ಚರ್ಮದಲ್ಲಿ ಅವಿತ ಸ್ಕಿನ್ ಮೈಕ್ರೋಬೈಯೋಮ್ ಎಂಬ ಬ್ಯಾಕ್ಟೀರಿಯಾಗಳ ವಾಸನೆ ಕೂಡಾ ಬೆರೆತು ಒಬ್ಬೊಬ್ಬರಿಗೆ ಒಂದೊಂದು ವಾಸನೆ ಇರುತ್ತದೆ. ಈ ವಾಸನೆಯಲ್ಲಿ ನಮ್ಮ ಜೀನ್ಸ್ ಕೂಡಾ ಪಾತ್ರ ವಹಿಸುತ್ತದೆ. ಕೆಲವರು ಹೆಚ್ಚು ಗಾಢವಾದ ವಾಸನೆ ಹೊಂದಿರಬಹುದು. ಸೊಳ್ಳೆಗಳ ಸೂಕ್ಷ್ಮ ಗ್ರಹಿಕೆಗೆ ಈ ವಾಸನೆ ಸಿಗುತ್ತದೆ. ಹಾಗಾಗಿಯೇ ಅವು ಕೆಲವರನ್ನು ಹೆಚ್ಚು ಕಚ್ಚುತ್ತವೆ. 

Latest Videos
Follow Us:
Download App:
  • android
  • ios