ಮಗುವಿನ ಜೀರ್ಣಕ್ರಿಯೆ ಉತ್ತಮಗೊಳಿಸುವುದು ಹೇಗೆ?
ಅಪ್ಪ ಅಮ್ಮ ಎನಿಸಿಕೊಳ್ಳುವುದು ಸುಲಭದ ಮಾತಲ್ಲ. ಮಗು ಜನಿಸಿದ ಸಮಯದಿಂದಲೂ ಅದರ ಆರೋಗ್ಯದ ಕುರಿತ ನೂರೆಂಟು ಯೋಚನೆಗಳು ನಿಮ್ಮನ್ನು ನಿರಂತರ ಬಾಧಿಸುತ್ತಲೇ ಇರುತ್ತವೆ. ಅದರಲ್ಲೂ ಇದೇ ಮೊದಲ ಬಾರಿ ಪೋಷಕತ್ವದ ಜವಾಬ್ದಾರಿ ಹೆಗಲಿಗೆ ಬಿದ್ದಿದ್ದರೆ ಮಗುವಿನ ಜೀರ್ಣ ಸಂಬಂಧಿ ಸಮಸ್ಯೆಗಳು ಚಿಂತೆಗೀಡು ಮಾಡುತ್ತವೆ.
ಮಕ್ಕಳಲ್ಲಿ ಸಣ್ಣಪುಟ್ಟ ತೊಂದರೆಗಳು ಆಗಾಗ ಕಾಣಿಸುತ್ತಲೇ ಇರುತ್ತವೆ. ವಿಪರೀತ ಗ್ಯಾಸ್ ಆಗುವುದು, ಎರಡು ದಿನವಾದರೂ ಮೋಷನ್ ಆಗದೆ ಮಲಬದ್ಧತೆಯಿಂದ ಮಗು ಹಟ ಮಾಡುವುದು, ಆಗಾಗ ಹೊಟ್ಟೆನೋವು, ಅಜೀರ್ಣ, ಬೇಧಿ, ವಾಂತಿ -ಹೀಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಒಂದಿಲ್ಲೊಂದು ಸಮಸ್ಯೆ ಒಂದೊಂದು ದಿನ ಪೋಷಕರಿಗೆ ತಲೆನೋವು ತಂದಿಡುತ್ತದೆ. ಗೊತ್ತಿರುವ ಮನೆ ಔಷಧಿ ಮಾಡೋಣವೆಂದರೆ ಮಗು ಇನ್ನೂ ಸಣ್ಣದು, ಎಲ್ಲವನ್ನೂ ಕೊಡಲಾಗುವುದಿಲ್ಲ. ದಿನೇ ದಿನೇ ಕಾಡುವ ಸಮಸ್ಯೆಗಳಿಗೆಲ್ಲ ವೈದ್ಯರ ಬಳಿ ಓಡಲೂ ಸಾಧ್ಯವಾಗುವುದಿಲ್ಲ. ಹಾಗಂತ ನೆಗ್ಲೆಕ್ಟ್ ಮಾಡುವಂತೆಯೂ ಇಲ್ಲ.
ಮಗುವಿನ ಊಟದಲ್ಲಿ ಈ 5 ಅಂಶ ಮಿಸ್ ಆಗದಿರಲಿ!
ಮಗುವಿಗೇಕೆ ಅಜೀರ್ಣ ಸಮಸ್ಯೆ ಜಾಸ್ತಿ?
ನಮ್ಮ ದೇಹದಲ್ಲಿ ಈಸೋಫ್ಯಾಗಲ್ ಸ್ಫಿಂಕ್ಟರ್ ಎಂಬ ವಾಲ್ವ್ ಹೊಟ್ಟೆಯಿಂದ ಅನ್ನನಾಳಕ್ಕೆ ಆಹಾರ ತಿರುಗಿ ಹೋಗದಂತೆ ನೋಡಿಕೊಳ್ಳುತ್ತದೆ. ಮಗುವಿನಲ್ಲಿ ಈ ವಾಲ್ವ್ ಇನ್ನೂ ಬೆಳವಣಿಗೆಯ ಹಂತದಲ್ಲಿದ್ದು ಸಂಪೂರ್ಣ ಬೆಳೆಯಲು ಒಂದು ವರ್ಷದವರೆಗೂ ಸಮಯ ತೆಗೆದುಕೊಳ್ಳಬಹುದು. ಇದು ಮಕ್ಕಳಲ್ಲಿ ಜೀರ್ಣ ಪ್ರಕ್ರಿಯೆ ಸರಿಯಾಗಿ ಆಗದಿರಲು ಪ್ರಮುಖ ಕಾರಣ.
ಇದರಿಂದಲೇ ಆ್ಯಸಿಡ್ ರಿಫ್ಲಕ್ಸ್ ಆಗುವುದು. ಇದಲ್ಲದೆ ಅಪರೂಪಕ್ಕೆ ಇನ್ಫೆಕ್ಷನ್ ಕೂಡಾ ಕಾರಣವಾಗಬಹುದು. ಇನ್ನು ನವಜಾತ ಶಿಶುವು ಹಾಲು ಕುಡಿಯುವಾಗ ಜೊತೆಗೆ ಗಾಳಿಯನ್ನೂ ಎಳೆಯುತ್ತದೆ. ಇದರಿಂದ ಮಗುವು ಪದೇ ಪದೆ ಕಕ್ಕುತ್ತದೆ. ಇನ್ನು ಮಗುವಿಗೆ ದಪ್ಪ ಆಹಾರವನ್ನು ಕೊಡಲಾರಂಭಿಸಿದಾಗ ಮಲಬದ್ಧತೆ ಕಾಡುವುದು ಸಾಮಾನ್ಯ.
ಬೇವಿನಕಡ್ಡಿ, ಹರಳುಪ್ಪಿನ ಬದಲು ಪೇಸ್ಟ್ ಬಂತು, ಮಕ್ಕಳ ಹಲ್ಲು ಗಟ್ಟಿ ಅಯ್ತಾ?
ಮಕ್ಕಳ ಜೀರ್ಣ ಸಂಬಂದಿ ಸಮಸ್ಯೆಗಳಿಗೆ ಮನೆಯಲ್ಲೇ ಏನು ಮಾಡಬಹುದು?
1. ಮಸಾಜ್
ಮಗುವಿಗೆ ಪ್ರತಿದಿನ ಮಸಾಜ್ ಮಾಡುವುದರಿಂದ ಹಲವಾರು ಡೈಜೆಶನ್ ಸಮಸ್ಯೆಗಳಿಂದ ದೂರವಿಡಬಹುದು. ಎಣ್ಣೆ ತೆಗೆದುಕೊಂಡು ಹೊಕ್ಕುಳಿನಿಂದ ಆರಂಭಿಸಿ ಕೆಳಗಿನವರೆಗೆ ಕ್ಲಾಕ್‌ವೈಸ್ ಆಗಿ ಮಸಾಜ್ ಮಾಡುತ್ತಾ ಸಾಗಿ. ಬೆರಳಿನಿಂದ ಶುರು ಮಾಡಿ ಪೂರ್ತಿ ಅಂಗೈ ಬಳಸಿ ನಿಧಾನವಾಗಿ ಮೇಲಿನಿಂದ ಕೆಳಗೆ ಮಸಾಜ್ ಮಾಡಿ. ಈ ಸಂದರ್ಭದಲ್ಲಿ ಮಗುವಿಗೆ ವ್ಯಾಯಾಮ ಮಾಡಿಸಿ. ಮಗುವಿನ ಕಾಲುಗಳನ್ನು ಸೈಕಲ್ ಹೊಡೆಸುವುದು, ಹೊಟ್ಟೆಗೆ ಒತ್ತಿ ಮಡಚುವುದು, ಬಿಚ್ಚುವುದರಿಂದ ಕೂಡಾ ಜೀರ್ಣಕ್ರಿಯೆ ಸರಾಗವಾಗುತ್ತದೆ. ಮಗುವಿಗೆ ಗ್ಯಾಸ್ ಆದಾಗ ಕೂಡಾ ಮಗುವನ್ನು ಅಗಾಂತ ಮಲುಗಿಸಿ ಮಗುವಿನ ಹೊಟ್ಟೆಗೆ ಮೆದುವಾಗಿ ಮಸಾಜ್ ಮಾಡಬೇಕು.
2. ಬಿಸಿಯಾದ ಒದ್ದೆ ಬಟ್ಟೆ
ಬಟ್ಟಲಿನಲ್ಲಿ ಬಿಸಿನೀರನ್ನು ಇಟ್ಟುಕೊಂಡು ಸ್ವಚ್ಛವಾದ ಬಟ್ಟೆಯೊಂದನ್ನು ತೆಗೆದುಕೊಂಡು ಬಟ್ಟಲಿಗೆ ಅದ್ದಿ ತೆಗೆದು ಚೆನ್ನಾಗಿ ಹಿಂಡಿ. ತಕ್ಷಣ ಬಿಸಿ ಆರುವವರೆಗೆ ಮಗುವಿನ ಹೊಟ್ಟೆಯ ಮೇಲಿಡಿ. ಇದನ್ನು ನಾಲ್ಕೈದು ಬಾರಿ ಪುನರಾವರ್ತಿಸಿ. ಮಗುವಿನ ಜೀರ್ಣಪ್ರಕ್ರಿಯೆ ಉತ್ತಮಗೊಳ್ಳುವವರೆಗೆ ಪ್ರತಿದಿನ ಒಂದೆರಡು ಬಾರಿ ಹೀಗೆ ಮಾಡಬಹುದು. ಗ್ಯಾಸ್ ಹೋಗಿಸಿ, ಮಲಬದ್ಧತೆ ನಿವಾರಿಸುತ್ತದೆ.
3. ಬಿಸಿನೀರು ಕುಡಿಸುವುದು
ಮಗುವಿಗೆ ಗ್ಯಾಸ್‌ನಿಂದ ಹೊಟ್ಟೆ ನೋವು ಕಾಣಿಸಿಕೊಂಡರೆ ಹದವಾದ ಬಿಸಿನೀರು ಕುಡಿಸಬೇಕು. ಹದ ಬಿಸಿ ನೀರು ಹೊಟ್ಟೆ ಸೇರಿದಾಗ ಗ್ಯಾಸ್ ಹೊರಬಂದು ಮಗುವಿಗೆ ಸಮಧಾನ ದೊರೆಯುತ್ತದೆ. ಇದು ಜೀರ್ಣಕ್ರಿಯೆಯನ್ನೂ ಚುರುಕಾಗಿಸುತ್ತದೆ.
ಅಪ್ಪುಗೆಯಲ್ಲಿದೆ ಬೆಚ್ಚಗಿನ ಸುಖ, ಸಂಬಂಧ ಬೆಸೆದರೆ ಇಲ್ಲ ದುಃಖ!
4. ಹಾಲು ಕುಡಿಸುವ ಪೊಸಿಶನ್ ಸರಿ ಇರಲಿ
ಎದೆಹಾಲು ಕುಡಿಸುವಾಗ ಪೊಸಿಶನ್ ಸರಿ ಇದ್ದರೆ ಆ್ಯಸಿಡ್ ರಿಫ್ಲಕ್ಸ್ ಕಡಿಮೆ ಮಾಡಬಹುದು. ಮಲಗಿಕೊಂಡು ಕುಡಿಸುವುದು, ಮಗುವನ್ನು ತೊಡೆ ಮೇಲೆ ಮಲಗಿಸಿಕೊಂಡು ಕುಡಿಸುವ ಬದಲು, ಮಗುವಿನ ತಲೆ ಸ್ವಲ್ಪ ಮೇಲಿದ್ದು, ದೇಹ ಕೆಳಗಿರುವಂತೆ ಹಿಡಿದುಕೊಳ್ಳಿ. ಆಗ ಕುಡಿದ ಹಾಲು ತಿರುಗಿ ಬಾಯಿಗೆ ಬರುವುದಿಲ್ಲ. ಹಾಲು ಕುಡಿದಾದ ಬಳಿಕ 1-2 ನಿಮಿಷದವರೆಗೆ ಮೆಲ್ಲನೆ ಬೆನ್ನಿಗೆ ತಟ್ಟಬೇಕು. ಆಗ ಮಗು ತೇಗುತ್ತದೆ. ಈ ರೀತಿ ಮಾಡಿದರೆ ಮಗುವಿನಲ್ಲಿ ಗ್ಯಾಸ್ ಸಮಸ್ಯೆ ಕಾಣಿಸುವುದಿಲ್ಲ. ಕಕ್ಕುವುದೂ ಕಡಿಮೆಯಾಗುತ್ತದೆ. ಫೀಡ್ ಬಳಿಕ ಅರ್ಧ ಗಂಟೆ ಕಾಲ ಮಗುವನ್ನು ಮಲಗಿಸದೆ ಎತ್ತು ತಿರುಗುವುದು ಉತ್ತಮ. ಇಲ್ಲದಿದ್ದಲ್ಲಿ ಸ್ವಲ್ಪ ಸ್ವಲ್ಪವೇ ಹಾಲನ್ನು ಪದೇ ಪದೆ ಕುಡಿಸುವುದು ಕೂಡಾ ಉತ್ತಮ ವಿಧಾನ.
5. ಮೊಸರು
ಹೆಪ್ಪಾದ ಡೈರಿ ಪದಾರ್ಥಗಳು ಮಗುವಿನಲ್ಲಿ ಗ್ಯಾಸ್ ಸಂಬಂಧಿ ಸಮಸ್ಯೆ ಹೋಗಲಾಡಿಸುತ್ತದೆ. ಹಾಗಾಗಿ, ಮಗು 6 ತಿಂಗಳು ದಾಟಿದ್ದರೆ ಯಾವಾಗ ಜೀರ್ಣ ಸಮಸ್ಯೆ ಕಂಡುಬಂದರೂ ಆಗ, ಸ್ವಲ್ಪ ಮೊಸರಿಗೆ ಚೂರು ನೀರು ಸೇರಿಸಿಕೊಂಡು ಕುಡಿಸಿ.
ಮಕ್ಕಳಿಗೆ ಕ್ಲೀನ್ ಕ್ಲೀನ್ ಅಂತ ಕಾಟ ಕೊಡುವ ಪೋಷಕರೇ ಒಮ್ಮೆ ಇದನ್ನು ಓದಿ!
6. ಎದೆಹಾಲು
ಫಾರ್ಮುಲಾ ಹಾಲು ಕುಡಿಸುವುದರಿಂದ ಮಕ್ಕಳಿಗೆ ವಾಂತಿ, ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಏಕೆಂದರೆ ಈ ಹಾಲು ಸರಿಯಾಗಿ ಜೀರ್ಣವಾಗುವುದಿಲ್ಲ. ಬದಲಿಗೆ 6 ತಿಂಗಳವರೆಗೆ ಎದೆಹಾಲು ಬಿಟ್ಟು ಬೇರೇನೂ ನೀಡಬೇಡಿ. ಏಕೆಂದರೆ ಮಗುವಿನ ಜೀರ್ಣಾಂಗಗಳು ಬೇರಾವುದೇ ಆಹಾರವನ್ನು ಜೀರ್ಣಿಸುವಷ್ಟು ಬೆಳವಣಿಗೆ ಹೊಂದಿರುವುದಿಲ್ಲ. ತದನಂತರವೂ ಘನ ಆಹಾರ ಕೊಡಲಾರಂಭಿಸಿದ ಮೇಲೂ 2 ವರ್ಷದವರೆಗೆ ಮಗುವಿಗೆ ಎದೆಹಾಲು ಕುಡಿಸಬೇಕು. ಇದರಿಂದ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಜೊತೆಗೆ ಜೀರ್ಣಾರೋಗ್ಯವೂ ಚೆನ್ನಾಗಿರುತ್ತದೆ.
ಜೀರ್ಣಫ್ರಕ್ರಿಯೆ ಸಂಬಂಧಿ ಸಾಮಾನ್ಯ ಸಮಸ್ಯೆಗಳು ಈ ವಿಧಾನಗಳಿಂದ ಗುಣವಾಗುತ್ತವೆ. ಇಷ್ಟಾದರೂ ಮಗು ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದರೆ ವೈದ್ಯರಿಗೆ ತೋರಿಸಿ.