ತುಮಕೂರಿನ ಪ್ರಸಿದ್ಧ ‘ಸಿದ್ದು’ ಹಲಸಿಗೆ ಕರಾವಳಿಯಲ್ಲಿ ಕಸಿ..!
* ಗುಬ್ಬಿ ರೈತನ ಜೊತೆ ಐಐಎಚ್‌ಆರ್ ಒಪ್ಪಂದ
* ತಲಾ 250 ರು.ನಂತೆ ವರ್ಷಕ್ಕೆ 20,000 ಗಿಡಗಳ ಮಾರಾಟ
* ಕರಾವಳಿಯ ಕಸಿ ತಜ್ಞ ಗುರುರಾಜ್‌ರಿಂದ ಕಸಿ ಗಿಡಗಳ ಸಿದ್ಧತೆ
ರಾಘವೇಂದ್ರ ಅಗ್ನಿಹೋತ್ರಿ
ಮಂಗಳೂರು(ಅ. 23): ರೈತರೊಬ್ಬರ(Farmers) ಹೆಸರಿನಲ್ಲಿ ಮನ್ನಣೆ ಪಡೆದು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ತುಮಕೂರು(Tumakuru) ಜಿಲ್ಲೆಯ ‘ಸಿದ್ದು’ ಹಲಸಿನ ಹಣ್ಣಿನ(Jackfruit) ಗಿಡಗಳು ಉತ್ಪಾದನೆ ಆಗುತ್ತಿರುವುದು ಕರಾವಳಿಯಲ್ಲಿ.
ಸ್ವಾದಿಷ್ಟ ಮತ್ತು ಕೆಂಬಣ್ಣದ ಆಕರ್ಷಕ ಸೊಳೆಗಳಿಂದಲೇ ತುಮಕೂರು ಜಿಲ್ಲೆ ಗುಬ್ಬಿ(Gubbi) ತಾಲೂಕಿನ ಸೀಗೆನಹಳ್ಳಿಯಲ್ಲಿರುವ ‘ಸಿದ್ದು’ ಹಲಸಿನ ಮರ ದೇಶಾದ್ಯಂತ(India) ಜನಮಾನಸದಲ್ಲಿ ಸ್ಥಾನ ಪಡೆದಿದೆ. ಈ ಹಲಸಿನ ಮರದ ಟೊಂಗೆಗಳಿಂದ ಕರಾವಳಿಯ ಖ್ಯಾತ ಕಸಿತಜ್ಞ(Transplant Specialist) ಗುರುರಾಜ್ ಬಾಳ್ತಿಲ್ಲಾಯ ಅವರು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR)ಗಾಗಿ ಕಸಿಗಿಡಗಳನ್ನು ಸಿದ್ಧ ಮಾಡಿಕೊಡುತ್ತಿದ್ದಾರೆ. ಅಪರೂಪದಲ್ಲಿ ಅಪರೂಪವಾಗಿರುವ ಈ ತಳಿಯ ಗಿಡಗಳನ್ನು ಐಐಎಚ್‌ಆರ್‌ಗಾಗಿ ಸಿದ್ಧಪಡಿಸಿ ನೀಡುತ್ತಿದ್ದು, ಐಐಎಚ್‌ಆರ್‌ನಿಂದ ರೈತರಿಗೆ ಮಾರಾಟವಾಗುತ್ತಿದೆ.
ಮಂಗಳೂರು: ದೇಶದ ಮೊದಲ ಹಲಸಿನ ಹಣ್ಣಿನ ಚಾಕ್ಲೇಟ್ ಮಾರ್ಕೆಟ್‌ಗೆ..!
ಐಐಎಚ್‌ಆರ್ ಜೊತೆ ಒಪ್ಪಂದ:
ಸಿದ್ದು ತಳಿಗೆ ಸರ್ಕಾರದ(Government) ಮಾನ್ಯತೆ ಲಭಿಸಿದ ಬಳಿಕ ಮರದ ಮಾಲೀಕರ ಜೊತೆ ಐಐಎಚ್‌ಆರ್ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ, ನಿಗದಿಪಡಿಸಿದ ಗೌರವಧನ ನೀಡಿ ಮರದ ಟೊಂಗೆಗಳನ್ನು ಖರೀದಿಸಿ, ಅದರ ಕಸಿ ಗಿಡಗಳನ್ನು ಐಐಎಚ್‌ಆರ್‌ನವರು ಮಾರಾಟ ಮಾಡುತ್ತಾರೆ. ಮರದ ಮಾಲೀಕರು ಸ್ವತಃ ತಾವೇ ಗಿಡ ತಯಾರಿಸಬಹುದು. ಆದರೆ, ಬೇರೆ ಯಾವುದೇ ಖಾಸಗಿ ನರ್ಸರಿಯರಿಗೆ ಮರದ(Tree) ರೆಂಬೆ-ಕೊಂಬೆಗಳನ್ನು ಮಾರುವಂತಿಲ್ಲ.
ಆರಂಭದಲ್ಲಿ ಮೂರು ವರ್ಷದ ಒಪ್ಪಂದವಿತ್ತು. ಈಗ ಮತ್ತೆ ಒಪ್ಪಂದವನ್ನು 2024 ರವರೆಗೆ ವಿಸ್ತರಿಸಲಾಗಿದೆ. ಈ ಒಪ್ಪಂದದಂತೆ ಐಐಎಚ್‌ಆರ್ ಖರೀದಿಸಿದ ಮರದ ಟೊಂಗೆಗಳನ್ನು ಕರಾವಳಿಯ ಕಸಿ ತಜ್ಞ ಗುರುರಾಜ ಗಿಡ ಮಾಡಿ ಕೊಡುತ್ತಿದ್ದಾರೆ. ವಾರ್ಷಿಕವಾಗಿ ಸುಮಾರು 20,000 ಗಿಡಗಳನ್ನು ತಲಾ 250 ರು.ಗೆ ಐಐಎಚ್‌ಆರ್ ಮಾರಾಟ ಮಾಡುತ್ತಿದೆ.
ಮರಕ್ಕೆ ಸಿಸಿಟಿವಿ ಕಣ್ಗಾವಲು
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸೀಗೆಹಳ್ಳಿಯಲ್ಲಿರುವ ಈ ಹಲಸಿನ ಮರಕ್ಕೆ(Jackfruit Tree) ಈಗ 40 ವರ್ಷ. ರೈತ ಸಿದ್ದಪ್ಪ ಎಂಬುವರು ಇದನ್ನು ಸಂರಕ್ಷಿಸಿದ್ದು, ಅದಕ್ಕೆ ‘ಸಿದ್ದು’ ಹಲಸು ಎಂದೇ ನಾಮಕರಣ ಮಾಡಲಾಗಿದೆ. ಈ ಮರದ ಹಣ್ಣು ಕೆಂಬಣ್ಣ ಹಾಗೂ ಹೊಳಪಿನಿಂದ ಕೂಡಿದ ದೊಡ್ಡ ಸೊಳೆಗಳನ್ನು ಹೊಂದಿದೆ. ಹಣ್ಣಿನಲ್ಲಿ ಲೈಕೊಪಿನ್ ಅಂಶ ಅಧಿಕವಾಗಿದ್ದು, ಆರೋಗ್ಯಕ್ಕೆ ಪೂರಕವಾಗಿದೆ. ಒಂದು ಹಲಸಿನ ಹಣ್ಣು 6ರಿಂದ 8 ಕೇಜಿ ತೂಕವಿದ್ದು, 25ರಿಂದ 30 ಸೊಳೆಗಳಿರುತ್ತವೆ. ಈ ತಳಿಗೆ 2017ರಲ್ಲಿ ರೈತನ ಹೆಸರಿನಲ್ಲೇ ಮಾನ್ಯತೆ ದೊರೆತಿದೆ. ಮಾನ್ಯತೆ ಪಡೆದ ಮೊದಲ ಹಲಸು ತಳಿ ಎನಿಸಿಕೊಂಡಿದೆ. ಈ ಮರದ ಕಸಿ ಗಿಡಗಳ ಮಾರಾಟ ಮಾಡುವ ಮೂಲಕ 25 ಲಕ್ಷ ರು. ಗಳಿಸಲಾಗುತ್ತಿದೆ ಎಂದು ಸಿದ್ದಪ್ಪ ಅವರ ಪುತ್ರ ಪರಮೇಶ್ ಹೇಳುತ್ತಾರೆ. ಹೊರರಾಜ್ಯಗಳಲ್ಲೂ ಗಿಡಕ್ಕೆ ಬೇಡಿಕೆ ಇದ್ದು, ಮರಕ್ಕೆ ಸಿಸಿ ಕ್ಯಾಮೆರಾ(CCTV) ಅಳವಡಿಸಲಾಗಿದೆ!
ಮಲೆನಾಡು, ಕರಾವಳಿಗೆ ಸೂಕ್ತವಲ್ಲ
ತುಮಕೂರಿನ ಈ ಅಪರೂಪದ ತಳಿಯನ್ನು ಗುರುತಿಸಿ ಐಐಎಚ್‌ಆರ್ 2017ರಲ್ಲಿ ಮಾನ್ಯತೆ ನೀಡಿದೆ. ರೈತರ ಹೆಸರಲ್ಲೇ ಮಾನ್ಯತೆ ಪಡೆದ ದೇಶದ ಮೊದಲ ಹಲಸಿನ ಮರ ಎಂಬ ಹೆಗ್ಗಳಿಕೆಗೆ ಈ ತಳಿ ಪಾತ್ರವಾಗಿದೆ. ಬಯಲುಸೀಮೆಯ ಒಣ ಹವೆಯ ಪ್ರದೇಶಗಳಲ್ಲಿ ಈ ಹಲಸು ಹೇಳಿ ಮಾಡಿಸಿದ ತಳಿಯಾಗಿದೆ. ಆದರೆ ಮಳೆ ಹೆಚ್ಚಾಗಿ ಬೀಳುವ ಕರಾವಳಿ ಮತ್ತು ಮಲೆನಾಡಿಗೆ ಈ ತಳಿ ಸೂಕ್ತವಲ್ಲ ಎಂಬುದು ಕಸಿ ತಜ್ಞ ಗುರುರಾಜ ಬಾಳ್ತಿಲ್ಲಾಯ ಅವರ ಅಭಿಪ್ರಾಯ.
ಹಳ್ಳಿಯ ಹಲಸು ಕೇಳಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ..!
ಪೇಟೆಂಟ್ ಪಡೆಯಲು ಯತ್ನಿಸಿದ್ದ ಆಸೀಸ್ ಕಂಪನಿ
ತುಮಕೂರಿನ ಸಿದ್ದು ಹಲಸಿನ ರುಚಿ, ಜನಪ್ರಿಯತೆಯನ್ನು ಕಂಡು ಆಸ್ಟ್ರೇಲಿಯಾದ(Australia) ಕಂಪನಿಯೊಂದು ನಾಲ್ಕು ವರ್ಷಗಳ ಹಿಂದೆ ಈ ಮರದ ಪೇಟೆಂಟ್(Patent) ಕೇಳಿತ್ತು. ಆದರೆ ಅದನ್ನು ಐಐಎಚ್‌ಆರ್ ನಿರಾಕರಿಸಿತ್ತು.
ವಾರ್ಷಿಕ 25 ಲಕ್ಷ ಆದಾಯ
ತುಮಕೂರಿನ ಸೀಗೆಹಳ್ಳಿಯ ರೈತರಾದ ಸಿದ್ದಪ್ಪ ಎಂಬುವರು ಸಂರಕ್ಷಿಸಿದ ಈ ಮರ ಆಕರ್ಷಣೆಯ ಕೇಂದ್ರವಾಗಿದೆ. ‘ಸಿದ್ದು’ ಹಲಸು ಎಂದು ಮಾನ್ಯತೆ ಪಡೆದ ಬಳಿಕ ಹಣ್ಣಿಗೂ, ಕಸಿ ಗಿಡಗಳಿಗೂ ಎಲ್ಲಿಲ್ಲದ ಬೇಡಿಕೆ ಪಡೆದಿದೆ. 40 ವರ್ಷದ ಈ ಮರಕ್ಕೆ ಸಿಸಿ ಕ್ಯಾಮರಾ ಸಂರಕ್ಷಣೆಯನ್ನೂ ನೀಡಲಾಗಿದೆ. ಕೇವಲ ಇದೊಂದೇ ಮರದ ಟೊಂಗೆಗಳಿಂದ ತಯಾರಾದ ಕಸಿ ಗಿಡಗಳಿಂದ ಅಂದಾಜು ವಾರ್ಷಿಕ 25 ಲಕ್ಷ ರು. ಆದಾಯ ಬರುತ್ತಿದೆ. ಮಹಾರಾಷ್ಟ್ರ(Maharashtra), ಕೇರಳ(Kerala), ತಮಿಳುನಾಡು(TamliNadu), ತೆಲಂಗಾಣ(Telangana), ಆಂಧ್ರಪ್ರದೇಶದ(Andhra Pradesh) ರೈತರಿಗೆ ಈ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ಸಿದ್ದಪ್ಪ ಅವರ ಪುತ್ರ ಪರಮೇಶ್.
2017ರಲ್ಲಿ ಸಿದ್ದು ಹಲಸಿಗೆ ಮಾನ್ಯತೆ ನೀಡಲಾಗಿದ್ದು, ಮರದ ಮಾಲೀಕರು ಮತ್ತು ಐಐಎಚ್‌ಆರ್ ನಡುವೆ ಒಪ್ಪಂದ ಏರ್ಪಟ್ಟಿದೆ. ಮೂಲ ಮರದಿಂದ ನಾವು ವಾರ್ಷಿಕ 20,000ಗಳಷ್ಟು ಗೆಲ್ಲು ಖರೀದಿಸಿ ಗಿಡಗಳ ಉತ್ಪಾದಿಸಿ ರೈತರಿಗೆ 250 ರು.ಗೆ ಮಾರುತ್ತಿದ್ದೇವೆ. ಒಣಹವೆಯ ಬಯಲುಸೀಮೆಗೆ ಸಿದ್ದು ಹಲಸಿನ ತಳಿಯನ್ನ ಶಿಫಾರಸ್ಸು ಮಾಡುತ್ತಿದ್ದೇವೆ ಎಂದು ಐಐಎಚ್‌ಆರ್ ವಿಜ್ಞಾನಿ ಡಾ. ಕರುಣಾಕರನ್ ತಿಳಿಸಿದ್ದಾರೆ.