Asianet Suvarna News Asianet Suvarna News

Chitradurga: ಅಕಾಲಿಕ ಮಳೆಗೆ ಸುಮಾರು 71153 ಹೆಕ್ಟೇರ್ ಬೆಳೆ ನಾಶ: ಕಂಗಾಲಾದ ಅನ್ನದಾತ

ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಗೆ ಅನ್ನದಾತ ನಲುಗಿ ಹೋಗಿದ್ದಾನೆ. ವಾಡಿಕೆಗಿಂತ ಈ ಬಾರಿ ಮೂರು ಪಟ್ಟು ಮಳೆ ಹೆಚ್ಚಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗಿದೆ ರೈತರ ಪರಿಸ್ಥಿತಿ. 

rain in chitradurga district crops destroyed in 71153 acres gvd
Author
First Published Sep 26, 2022, 8:19 PM IST

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಸೆ.26): ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಗೆ ಅನ್ನದಾತ ನಲುಗಿ ಹೋಗಿದ್ದಾನೆ. ವಾಡಿಕೆಗಿಂತ ಈ ಬಾರಿ ಮೂರು ಪಟ್ಟು ಮಳೆ ಹೆಚ್ಚಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗಿದೆ ರೈತರ ಪರಿಸ್ಥಿತಿ. ಸಾಲ‌ ಮಾಡಿ ಬಿತ್ತನೆ ಮಾಡಿದ್ದ ಬೆಳೆಗಳು ನಾಶವಾಗಿದ್ದು, ಸೂಕ್ತ ಪರಿಹಾರ ನೀಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ಓದಿ. ಅತಿಯಾದ ಮಳೆ ನೀರು ಜಮೀನಿನಲ್ಲಿ ನಿಂತ ಪರಿಣಾಮ ಮೆಕ್ಕೆಜೋಳ ಬೆಳೆ ನೆಲಕ್ಕುರಿಳೋ ದೃಶ್ಯ. ಇದು ಒಂದು ಜಮೀನಿನ ಸಮಸ್ಯೆ ಅಲ್ಲ ಇಡೀ ಚಿತ್ರದುರ್ಗ ಜಿಲ್ಲೆಯ ಪ್ರತಿಯೊಬ್ಬ ಅನ್ನದಾತರ ಸಮಸ್ಯೆ ಆಗಿದೆ. 

ಜಿಲ್ಲೆಯಲ್ಲಿ ಈಗಾಗಲೇ 300ಕ್ಕೂ ಅಧಿಕ ಕೋಟಿಯಷ್ಟು ಈರುಳ್ಳಿ ಬೆಳೆ, ಸಾವಿರಾರು ಕೋಟಿ ಮೌಲ್ಯದಷ್ಟು ಮೆಕ್ಕೆಜೋಳ ಬೆಳೆ ಅತಿವೃಷ್ಠಿಯಿಂದ ನಾಶವಾಗಿದೆ. ಇಷ್ಟೆಲ್ಲಾ ಆದ್ರು ತಮ್ಮದೇ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಕೃಷಿ ಮಂತ್ರಿ ಬಿ.ಸಿ ಪಾಟೀಲ್ ಮಾತ್ರ ಒಬ್ಬ ರೈತನ ಜಮೀನಿಗು ಭೇಟಿ ನೀಡಿಲ್ಲ ಎಂಬುದೇ ದುರದೃಷ್ಟಕರ ಸಂಗತಿ. ರೈತರು ಇಷ್ಟೊಂದು ಸಂಕಷ್ಟಕ್ಕೆ ಸಿಲುಕಿದ್ರು ಸಣ್ಣ ಪರಿಹಾರ ಕೂಡ ಇದುವರೆಗೂ ಯಾವುದೇ ರೈತನಿಗೆ ಬಿಡುಗಡೆ ಮಾಡಿಲ್ಲ. ಕೇವಲ ಅಧಿಕಾರಿಗಳ ಜೊತೆ ಸಭೆ ನಡೆಸಿ ಸುಮ್ಮನಾಗ್ತಿದ್ದಾರೆ. 

Chitradurga: ಮಳೆ ಬಂದ್ರೆ ದುರ್ಗದ ಮಂದಿ ದೋಣಿ ನೆನಪು ಮಾಡ್ಕಂತಾರೆ!

ಇದು ನಿಜಕ್ಕೂ ಸರಿಯಲ್ಲ,‌ಕೂಡಲೇ ಸಚಿವರು, ಸರ್ಕಾರ ರೈತರ ಮೇಲೆ ಕಾಳಜಿ ಇಟ್ಟುಕೊಂಡು ಅವರಿಗೆ ಆಗಿರೋ ಅನ್ಯಾಯಕ್ಕೆ ಪರಿಹಾರ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ರೈತರು ಒತ್ತಾಯಿಸಿದರು.  ಇನ್ನೂ ಅತಿವೃಷ್ಠಿಯಿಂದಾಗಿ ಜಿಲ್ಲೆಯಲ್ಲಿ ಎಷ್ಟೆಲ್ಲಾ ಬೆಳೆಹಾನಿ ಆಗಿದೆ. ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂಬುದರ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನೇ ವಿಚಾರಿಸಿದ್ರೆ, ವಾಡಿಕೆಯಂತೆ ನಮ್ಮ ಜಿಲ್ಲೆಗೆ 356 ಮಿ.ಮೀ ಮಳೆ ಆಗಬೇಕಿತ್ತು, ಆದ್ರೆ ಈ ಬಾರಿ 641 ಮಿ.ಮೀ ನಷ್ಟು ಮಳೆಯಾಗಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಮಳೆ ಹೊಸದುರ್ಗ ತಾಲ್ಲೂಕಿನಲ್ಲಿ ಆಗಿದೆ. 

ಸದ್ಯಕ್ಕೆ ಬಿದ್ದಿರುವ ಮಳೆಗೆ ಜಿಲ್ಲೆಯಲ್ಲಿ 71153 ಹೆಕ್ಟೇರ್ ಕೃಷಿ ಬೆಳೆ ನಾಶವಾಗಿದೆ ಎಂದು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. NDRF ನಿಯಮದ ಪ್ರಕಾರದ ೪೮ ಕೋಟಿ ನಷ್ಟವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದ NDRF ಪರಿಹಾರಕ್ಕೆ ರಾಜ್ಯ ಸರ್ಕಾರವು ಸೇರಿಸಿ ಒಟ್ಟು 96 ಕೋಟಿ ಪರಿಹಾರ ಮೊತ್ತ ನೀಡುವ ಭರವಸೆಯಿದೆ. ನಮ್ಮ ಜಿಲ್ಲೆಯ ಪ್ರಮುಖ ಬೆಳೆ ಮಕ್ಕೆಜೋಳ, ಈ ಬಾರಿ 95 ಸಾವಿರ ಹೆಕ್ಟೇರ್ ನಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅದ್ರಲ್ಲಿ ಸುಮಾರು 49800 ಹೆಕ್ಟೇರ್ ಬೆಳೆ ಸಂಪೂರ್ಣ ನಾಶವಾಗಿರೋದು ರೈತರಿಗೆ ತುಂಬಾ ನಷ್ಟವುಂಟು ಮಾಡಿದೆ. 

Chitradurga: ಟ್ಯಾಕ್ಸ್‌ ಕಟ್ಟಲು ನನ್ನ ಬಳಿ ಹಣವಿಲ್ಲ: ಸಚಿವ ಮಾಧುಸ್ವಾಮಿ

ಸುಮಾರು 50% ನಷ್ಟು ಜಿಲ್ಲೆಯಲ್ಲಿ ಬೆಳೆ ಹಾನಿಯಾಗಿದೆ ಎಂದು ನಾವೇ ವರದಿ ನೀಡಿದ್ದೇವೆ. ಒಟ್ಟು ಜಿಲ್ಲೆಯಲ್ಲಿ ಸುಮಾರು 400 ಕೋಟಿಗೂ ಅಧಿಕ ಬೆಳೆ ಹಾನಿ ಆಗಿದೆ ಪರಿಹಾರ ಶೀಘ್ರವೇ ರೈತರಿಗೆ ದೊರಕಲಿದೆ ಎಂದು ಭರವಸೆ ನೀಡಿದರು. ಇನ್ನೇನು ಕಟಾವು ಹಂತಕ್ಕೆ ಬಂದಿದ್ದ ಮೆಕ್ಕೆಜೋಳ, ರಾಗಿ,‌ ಶೇಂಗಾ ಬೆಳೆಗಳು ಅಕಾಲಿಕ ಮಳೆಗೆ ನೆಲಕಚ್ಚಿರೋದು ರೈತನಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಆದ್ದರಿಂದ ಕೂಡಲೇ ಸರ್ಕಾರ ಅನ್ನದಾತನಿಗೆ ಆಗಿರೋ ಅನ್ಯಾಯಕ್ಕೆ ತುರ್ತಾಗಿ ಸೂಕ್ತ ಪರಿಹಾರ ಒದಗಿಸಬೇಕಿದೆ.

Follow Us:
Download App:
  • android
  • ios