ಮೈಸೂರು: ಕವಿಗೂ ಬಂದಿತೆ ಅತೃಪ್ತ, ಅನರ್ಹ ಪಟ್ಟ!

ಗಂಭೀರ ಸಾಹಿತ್ಯ ಬರೆದುಕೊಂಡಿದ್ದವರು ಅತೃಪ್ತಿಯಿಂದ ವಿನೋದ ಕವಿಗೋಷ್ಠಿಗೆ ಒಪ್ಪಿ ಅಧ್ಯಕ್ಷತೆ ವಹಿಸಿ ಅನರ್ಹರಾದರೆ...? ಎಂಬಂತಹ ಪ್ರಶ್ನೆ ದಸರಾ ಕವಿಗೋಷ್ಠಿಯಲ್ಲಿ ಉದ್ಭವಿಸಿತು. ಇನ್ನಷ್ಟುವಿಶೇಷ ಸಂಗತಿಗಳಿಗೆ ಕಾರಣವಾದ ವಿನೋದ ಗೋಷ್ಠಿಯು ಸತತ ಮೂರುವರೆ ತಾಸುಗಳ ಕಾಲ ಸುಲಲಿತವಾಗಿಯೇ ನಡೆಯಿತು.

mysuru dasara chutuku kavigosti

ಮೈಸೂರು(ಅ.05): ಅತೃಪ್ತನಾದ ಶಾಸಕ ಅನರ್ಹನಾದ... ಕವಿಯೂ ಹಾಗೆಯೇ..? ಗಂಭೀರ ಸಾಹಿತ್ಯ ಬರೆದುಕೊಂಡಿದ್ದವರು ಅತೃಪ್ತಿಯಿಂದ ವಿನೋದ ಕವಿಗೋಷ್ಠಿಗೆ ಒಪ್ಪಿ ಅಧ್ಯಕ್ಷತೆ ವಹಿಸಿ ಅನರ್ಹರಾದರೆ...?

ಹೀಗೊಂದು ಚರ್ಚೆ ದಸರಾ ಕವಿಗೋಷ್ಠಿಯಲ್ಲಿ ಉದ್ಭವಿಸಿತು. ಹನಿಗವಿತೆಯ ರಚನೆಕಾರ ಎಚ್‌. ಡುಂಡಿರಾಜ್‌ ಅವರಿಂದ ಬಂದ ಈ ಮಾತುಗಳಿಗೆ ಅಧ್ಯಕ್ಷತೆ ವಹಿಸಿದ್ದ ಗಂಭೀರ ಸಾಹಿತಿ ಸುಬ್ರಾಯ ಚೊಕ್ಕಾಡಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೌದು, ನಾನು ಗಂಭೀರ ಸಾಹಿತ್ಯ ಬರೆದುಕೊಂಡಿದ್ದೆ. ನಮ್ಮನ್ನು ಒಪ್ಪದ ಡುಂಡಿರಾಜ್‌ ಅಂತವರು ಈ ಕಾರ್ಯಕ್ರಮಕ್ಕೆ ಒಪ್ಪಿಸಿ ತಮ್ಮಂತೆಯೇ ಮಾಡಿಕೊಂಡಿದ್ದಾರೆ ಎಂದು ತಿಳಿ ಹಾಸ್ಯದ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.

ಚುಟುಕು ವಾಚನ:

ಹೀಗೆ ಇನ್ನಷ್ಟುವಿಶೇಷ ಸಂಗತಿಗಳಿಗೆ ಕಾರಣವಾದ ವಿನೋದ ಗೋಷ್ಠಿಯು ಸತತ ಮೂರುವರೆ ತಾಸುಗಳ ಕಾಲ ಸುಲಲಿತವಾಗಿಯೇ ನಡೆಯಿತು. ಮಾತಿನೊಂದಿಗೆ ತಿಳಿ ಹಾಸ್ಯವೂ ಬೆರೆತು ಹನಿಗವಿತೆಗಳು ಸೃಜಿಸಿ ಬಂದವು. ಭಾಗವಹಿಸಿದ್ದ ಕೆಲವೇ ಕೆಲವು ಹಾಸ್ಯ ಕವಿಗಳು ತಮ್ಮ ಚುಟುಕು ಕವನಗಳನ್ನು ಓದಿ ದಸರಾಗೆ ಮತ್ತಷ್ಟು ಕಳೆ ತುಂಬಿದರು.

ಮೈಸೂರು: ಆರನೇ ತರಗತಿ ಅನಿರುದ್ಧನಿಗೆ 1 ಮಿಲಿಯನ್ ಗಿಡ ನೆಡುವ ಕನಸು..!

ಕಾರ್ಯಕ್ರಮ ಉದ್ಘಾಟಿಸಿದ ಪ್ರಖ್ಯಾತ ಹಾಸ್ಯ ಸಾಹಿತಿ ಪ್ರೊ.ಅ.ರಾ. ಮಿತ್ರ ಅವರ ಭರ್ಜರಿಯಾಗಿಯೇ ತಿಳಿ ಹಾಸ್ಯದ ಮಾತುಗಳ ಮೂಲಕ ಚಾಲನೆ ನೀಡಿದರು. ‘ಹಿರಿಯರನ್ನು ನೋಡಿದರೆ ಹೇಗಿದ್ದೀರಿ ಎನ್ನುತ್ತೇವೆ, ನಾನು ಕೇಳುತ್ತೇನೆ ಯಾಕಿದ್ದೀರಿ ಅಂತ’ ಎಂಬ ಮಾತಿಗೆ ಜೋರು ಚಪ್ಪಾಳೆಯೇ ಬಂದಿತು. ‘ಅಮೆರಿಕಾದ ಓರ್ವ ಕಾರು ಉದ್ಯಮಿ ಮದುವೆ ಮಾಡಿಕೊಂಡು ಒಬ್ಬಳೇ ಹೆಂಡತಿ ಜತೆ 50 ವರ್ಷ ಬಾಳುತ್ತಾನೆ. ಅಲ್ಲಿನ ಸಂಸ್ಕೃತಿಗೆ ಅದು ಹೇಗೆ ಸಾಧ್ಯ? ಎಂಬುದಕ್ಕೆ ಆ ಉದ್ಯಮಿ ಹೇಳುತ್ತಾನೆ, ಜೀವನದಲ್ಲಿ ಒಂದೇ ಮಾಡಲ್‌ಗೆ ಜೋತು ಬಿದ್ದರೆ ಉಳಿಯುತ್ತೇವೆ’ ಎಂಬ ಮಾತು ನನಗೆ ಈಗಲೂ ನೆನಪಿಗೆ ಬರುತ್ತದೆ ಎಂದರು.

ಮೈಸೂರು: ಬೆಂಕಿ ಇಲ್ಲದೆ ರುಚಿಕರ ಅಡುಗೆ ಮಾಡಿದ ಅತ್ತೆ, ಸೊಸೆ..!

ತಕ್ಷಣ ಪಕ್ಕದಲ್ಲಿಯೇ ಇದ್ದ ನಟ ಮಂಡ್ಯ ರಮೇಶ್‌ ‘ನೀವು ಅದಕ್ಕೆ ಆಸೆ ಪಡುತ್ತಿದ್ದೀರಾ’ ಎಂದಾಗ, ಇಲ್ಲಯ್ಯ ‘ಇಲ್ಲಯ್ಯ ನಾನು 50 ವರ್ಷ ಒಬ್ಬಳೇ ಹೆಂಡತಿ ಜತೆ ಇದ್ದೇನೆ. ಅವಳು ನನ್ನನ್ನು ಬಿಡಬೇಕಲ್ಲ’ ಎಂದು ನಸುನಕ್ಕರು. ‘ಒಂದೂರಲ್ಲಿ ಒಬ್ಬ ಎತ್ತರದ ವ್ಯಕ್ತಿ ಸತ್ತಿದ್ದ, ಆತನಿಗೆ ಸಿದ್ಧಪಡಿಸಿದ್ದ ಚಟ್ಟಚಿಕ್ಕದಾಗಿತ್ತು. ಮತ್ತೊಬ್ಬ ಕೇಳಿದ, ಆ ಶವ ಈ ಚಟ್ಟಕ್ಕಾಗುತ್ತದೆಯೇ? ಎಂದಾಗ, ಮತ್ತೊಬ್ಬ ಹೇಳಿದ, ನೀನೂ ಆಗುತ್ತಿಯಾ, ಬೇಕಿದ್ದರೆ ಪರೀಕ್ಷಿಸು’ ಎಂದು ಮತ್ತಷ್ಟುನಗಿಸಿದರು.

ಕವಿಗಳು ಹೇಳುತ್ತಿದ್ದ ಚುಟುಕು ಹನಿಗವಿತೆಗಳ ನಡುವೆ ಮಧ್ಯ ಮಧ್ಯದಲ್ಲಿ ನಿರೂಪಣೆ ಹೊಣೆ ಹೊತ್ತಿದ್ದ ಕವಿ ಎಚ್‌. ಡುಂಡಿರಾಜ್‌ ತಮ್ಮ ಕವನಗಳ ಸಾಲುಗಳನ್ನೂ ಮಂಡಿಸುತ್ತಿದ್ದರು. ‘ಕೊರೆಯುವ ಚಳಯಲ್ಲಿ ನಾನು ತಬ್ಬಲಿ, ಈ ಚಳಿಯಲ್ಲಿ ನಾನು ಯಾರನ್ನು ತಬ್ಬಲಿ’, ‘ಭಾಷಣಕಾರನಿಗೆ ಚಪ್ಪಾಳೆ ಹೊಡದರೆ ಮುಗಿಸಲಿ ಎಂದು, ಹಾಸ್ಯ ಸಾಹಿತಿಗೆ ಚಪ್ಪಾಳೆ ಹೊಡೆದರೆ ನಗಿಸಲಿ ಎಂದು’ ಹೀಗೆ ಅನೇಕ ಕವನಗಳನ್ನು ಹೇಳಿದರು.

ಮೈಸೂರು: ಜಂಬೂ ಸವಾರಿಯಲ್ಲಿ 39 ಆಕರ್ಷಕ ಸ್ತಬ್ಧಚಿತ್ರಗಳು

ನಟ ಮಂಡ್ಯ ರಮೇಶ್‌ ಅತಿಥಿಯಾಗಿ ಭಾಗವಹಿಸಿ ತಮ್ಮ ವೃತ್ತಿಯಲ್ಲಿ ಕಂಡ ಹಾಸ್ಯ ಸಂಗತಿಗಳನ್ನು ಹೇಳಿಕೊಂಡರು. ವಿನೋದ ಕವಿಗೋಷ್ಠಿಯಲ್ಲಿ ಡಾ. ಚಿಂತಾಮಣಿ ಕೊಡ್ಲೇಕೆರೆ, ಎನ್‌. ರಾಮನಾಥ, ಆರತಿ ಘಟಿಕರ್‌, ಶಾಂತಾರಾಮ್‌ ಶೆಟ್ಟಿ, ಧರ್ಮಶ್ರೀ ಅಯ್ಯಂಗಾರ್‌ ಕವನ ಓದಿದರು. ಬಿ.ವಿ. ಪ್ರದೀಪ್‌, ಬಿ.ವಿ. ಪ್ರವೀಣ್‌, ಶಶಿಕಲಾ ಸುನೀಲ್‌ ಕಾವ್ಯಗಾಯನ ಪ್ರಸ್ತುತಪಡಿಸಿದರು. ಕಿರಗಸೂರು ಪುರುಷೋತ್ತಮ್‌ ಕೀಬೋರ್ಡ್‌ ನುಡಿಸಿದರು.

ಹನಿಗವಿತೆಯ ಝಳಕ್‌

ಇವಗೆ ಭಾಮಿನಿ ಹುಚ್ಚು ಒಂದೇ ಸಮನೆ ಮಾತ್ರೆಗಳು ಏಳ ಸಲ ನೀಡಿ ಇವಗೆ ಮೂರು ನಾಲ್ಕರ ರೀತಿ ಗುರು ಕೃಪೆ ಇರಲು ಬದುಕುವನು

- ಅ.ರಾ. ಮಿತ್ರ (ಭಾಮಿನಿ ಷಟ್ಪದಿ ಪರಿಚಯ ಕುರಿತ ಕವಿತೆ)

ಕಾಲು ನೋವು ಹೇಗಿದೆ, ಇನ್ನಾ ಸ್ವಲ್ಪ ಬೀಗಿದೆ, ಬೆನ್ನು ನೋವು ಹೇಗಿದೆ, ಪೂರ್ತಿ ವಾಸಿಯಾಗಿದೆ, ತಲೆ ನೋವು ಹೇಗಿದೆ, ತವರು ಮನೆಗೆ ಹೋಗಿದೆ

- ಎಚ್‌. ಡುಂಡಿರಾಜ್‌ (ಹೆಂಡತಿ ಕುರಿತ ಕವಿತೆ)

ಟ್ರಾವೆಲ್‌ ಹೊರಟ ಗಣಪನಿಗೆ ಗೊತ್ತು ಎಲ್ಲಾ ರೂಟು, ಭಯ ಒಂದೇ, ಪೊಲೀಸರು ಹಿಡಿದರೆ ತೋರಿಸುವುದು ಹೇಗೆ ಹೆಲ್ಮೆಟ್‌?

- ಆರತಿ, (ಸಂಚಾರ ಕಾಯಿದೆ ಕುರಿತ ಕವಿತೆ)

ಕಾಸರಗೋಡಿನಲ್ಲಿ ಮಲಯಾಳಿ ಒಳ್ಳೆಯ ಪಿಳ್ಳೆ, ಭಾಷಣ ಕೇಳಲು ಅಲ್ಲಿ ಯಾರೂ ಇರಲಿಲ್ಲ ನರಪಿಳ್ಳೆ, ಕೇಳಿದ್ದು ಮಾತ್ರ ಅಲ್ಲಿನ ಸೊಳ್ಳೆ

- ಶಾಂತಾರಾಮ್‌ ಶೆಟ್ಟಿ, (ಗಡಿನಾಡ ಕನ್ನಡ ಕುರಿತ ಕವಿತೆ)

ಬಾಳಾ ಖಾರ, ಆಂಧ್ರದ ಊಟಕ್ಕೆ ಮೆಣಿಸಿನ ಕಾಯಿ ಆಧಾರ, ಅಲ್ಸರ್‌ ಭರಿಸಲು ಶ್ರೀಕಾರ, ಹಂಡೆ ನೀರು ಕುಡಿದರೂ ನೀಗದಂತ ಖಾರ, ರುಚಿಕರ ಆದರೂ ಸಖತ್‌ ಖಾರ

- ಎನ್‌. ರಾಮನಾಥ್‌ (ಆಂಧ್ರ ಶೈಲಿಯ ಊಟ ಕುರಿತ ಕವಿತೆ)

ವಿಡಂಬನೆ ಮನೋಧರ್ಮ ಬೆಳೆಸಿಕೊಳ್ಳಿ:

ಅಧ್ಯಕ್ಷತೆ ವಹಿಸಿದ್ದ ಕವಿ ಸುಬ್ರಾಯ ಚೊಕ್ಕಾಡಿ ಮಾತನಾಡಿ, ನಮ್ಮ ಹಿಂದಿನ ಸಾಹಿತಿಗಳು ತಮ್ಮ ಸಾಹಿತ್ಯದಲ್ಲಿ ತಿಳಿ ಹಾಸ್ಯ ಬೆರೆಸಿ ಮಾತನಾಡುತ್ತಿದ್ದರು. ಈಗಿನ ಸಾಹಿತಿಗಳು ಹಾಸ್ಯ ಮಾಡಿದರೆ ಅವರ ಮೇಲೆ ದೂರು ದಾಖಲಾಗಿ, ಎಫ್‌ಐಆರ್‌ ಆಗುತ್ತದೆ. ನಾವು ಹಾಸ್ಯಪ್ರಜ್ಞೆಯನ್ನು ಕಳೆದುಕೊಳ್ಳಬಾರದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಸ್ಯಪತ್ರಿಕೆಗಳು ಪ್ರಕಟವಾಗುತ್ತಿದ್ದವು. ಈಗ ಅಪರಂಜಿ ಪತ್ರಿಕೆ ಹೊರತುಪಡಿಸಿದರೆ ಮಿಕ್ಕವೆಲ್ಲವೂ ಮುಚ್ಚಿ ಹೋಗಿವೆ. ಸ್ವಾರಸ್ಯ, ವಿಡಂಬನೆ ಮನೋಧರ್ಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

-ಉತ್ತನಹಳ್ಳಿ ಮಹದೇವ

Latest Videos
Follow Us:
Download App:
  • android
  • ios