Asianet Suvarna News Asianet Suvarna News

ಚಾಮರಾಜನಗರ: ಅಧಿಕಾರಿಗಳು, ಪೊಲೀಸರು ಯಾರಿಗೂ ಹೇಳದೇ ವಾರ್ಡ್‌ ವೀಕ್ಷಿಸಿದ ಸಚಿವ ಸೋಮಣ್ಣ

ಅಧಿಕಾರಿಗಳು, ಪೊಲೀಸರು ಯಾರಿಗೂ ಹೇಳದೇ ಬಿ.ರಾಚಯ್ಯ ಜೋಡಿರಸ್ತೆ, ಆದಿಜಾಂಬವರ ಬೀದಿ, ಹೌಸಿಂಗ್‌ ಬೋರ್ಡ್‌ ಗಳಲ್ಲಿ ಸುತ್ತು ಹಾಕಿದ ಸಚಿವರು

Minister V Somanna Visited Flood Victims Areas in Chamarajanagara grg
Author
First Published Sep 3, 2022, 12:03 PM IST | Last Updated Sep 3, 2022, 12:03 PM IST

ಚಾಮರಾಜನಗರ(ಸೆ.03):  ಎರಡು ದಿನಗಳ ಮಳೆಹಾನಿ ಕುರಿತು ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಚಿವ ಸೋಮಣ್ಣ ಶುಕ್ರವಾರ ಬೆಳ್ಳಂ ಬೆಳಗ್ಗೆ ನಗರದಲ್ಲಿ ತೀವ್ರ ಸಮಸ್ಯೆಯಿರುವ 15ನೇ ವಾರ್ಡ್‌ಗೆ ಅಧಿಕಾರಿಗಳನ್ನು ಕರೆದೊಯ್ಯದೇ ವಾರ್ಡ್‌ ವೀಕ್ಷಿಸಿ ನಿಜ ಪರಿಸ್ಥಿತಿ ಅರಿತಿದ್ದಾರೆ. ಅಧಿಕಾರಿಗಳು, ಪೊಲೀಸರು ಯಾರಿಗೂ ಹೇಳದೇ ಬೆಳ್ಳಂಬೆಳಗ್ಗೆ ಬಿ.ರಾಚಯ್ಯ ಜೋಡಿರಸ್ತೆ, ಆದಿಜಾಂಬವರ ಬೀದಿ, ಹೌಸಿಂಗ್‌ ಬೋರ್ಡ್‌ ಗಳಲ್ಲಿ ಸುತ್ತು ಹಾಕಿದ ಸಚಿವರು ಜನರ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಹಳಷ್ಟುಮಂದಿಗೆ ಸಮಸ್ಯೆ ಕೇಳಲು ಬಂದಿರುವವರು ಜಿಲ್ಲಾ ಉಸ್ತುವಾರಿ ಗೊತ್ತಾಗಿಯೇ ಅಲ್ಲ. ನಂತರ ಕೆಲವರು ವಾರ್ಡ್‌ ವೀಕ್ಷಣೆಗೆ ಬಂದಿರುವವರು ಸಚಿವರು ಎಂದು ತಿಳಿದು ಸಾರ್‌, ನಮ್ಮ ವಾರ್ಡ್‌ಗೆ ನಗರಸಭಾ ಸದಸ್ಯರು, ಶಾಸಕರು, ಅಧಿಕಾರಿಗಳು ಬಂದು ಸಮಸ್ಯೆ ಕೇಳುವುದೇ ಕಷ್ಟಅಂತಹದರಲ್ಲಿ ನೀವು ಬಂದೀದ್ದೀರಲ್ಲ ಕಷ್ಟಹೇಳುವುದನ್ನು ಮರೆತು ಅಭಿನಂದಿಸಿದ್ದಾರೆ.

ನಿತ್ಯ ಕುಡಿವ ನೀರು ಬರದಿರುವ ಬಗ್ಗೆ, ಚರಂಡಿ ಮೇಲೆ ಹರಿಯುವ ನೀರು, ಕಸ ಸಂಗ್ರಹಣೆ ವಿಳಂಬ ಆಗುವುದನ್ನೆಲ್ಲಾ ವಾರ್ಡ್‌ ವೀಕ್ಷಣೆ ವೇಳೆ ಗಮನಿಸಿದ ಸಚಿವರು ಸಭೆಯಲ್ಲಿ ನಗರಸಭೆ ಪ್ರಭಾರ ಆಯುಕ್ತರಿಗೆ ಕ್ಲಾಸ್‌ ತೆಗೆದುಕೊಂಡರು.
ಜನರ ಕಷ್ಟಕ್ಕೆ ಕೂಡಲೇ ಸ್ಪಂದಿಸಿ, ಸಬೂಬು ಹೇಳದೇ ಕೆಲಸ ಮಾಡಿ, ಕರ್ತವ್ಯ ನಿರ್ವಹಿಸಲು ಕ್ಷಮತೆ ಇಲ್ಲದಿದ್ದರೇ ಬೇರೆಯವರಿಗೆ ಜವಾಬ್ದಾರಿ ಕೊಡಿ ಎಂದು ಡಿಸಿಗೆ ಸೂಚಿಸಿದರು.

ವಾಸ್ತವಾಂಶ ಅರಿತು ಮಾಹಿತಿ ನೀಡುವೆ: ಸಚಿವ ಸೋಮಣ್ಣ

45 ವರ್ಷದ ರಾಜಕಾರಣದಲ್ಲಿ ಸಕ್ರಿಯನಾಗಿ ಇರಲು ತಾನು ಬೆಳ್ಳಂಬೆಳಗ್ಗೆ ಜನರ ಮನೆಬಾಗಿಲಿಗೆ ತೆರಳಿ ಸಮಸ್ಯೆ ಆಲಿಸುವ ಕಾರಣಕ್ಕಾಗಿ, ಜನರ ಸಮಸ್ಯೆ ಕೇಳಿ-ಪರಿಹರಿಸಿ ಎಂದು ಶಾಸಕರು, ನಗರಸಭೆ, ಪುರಸಭೆ ಸದಸ್ಯರಿಗೂ ಸಲಹೆ ನೀಡಿದರು.

ಜಿಲ್ಲಾಸ್ಪತ್ರೆ ಅವ್ಯವಸ್ಥೆಯ ಬಗ್ಗೆ ಕೆಂಡಾ ಮಂಡಲವಾದ ಸಚಿವರು, ಕೆಲಸ ಮಾಡಲು ಆಗದಿದ್ದರೆ ಜಿಲ್ಲೆ ಬಿಟ್ಟು ಹೋಗಿ, ಜನರಿಗೆ ನಿಮ್ಮ ಕಾಟ ತಪುತ್ರ್ಪತ್ತದೆ ಎಂದು ಡೀನ್‌ಗೆ ಗದರಿದರು.

ಮಳೆ ಪರಿಹಾರ ಸಮರೋಪಾದಿಯಲ್ಲಿ ನಿರ್ವಹಿಸಿ: ಸಚಿವ ಸೋಮಣ್ಣ

ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿಗೆ ಪರಿಹಾರ ಕ್ರಮ ಹಾಗೂ ಪುನರ್ವಸತಿ ಕಾರ್ಯ ಸಮರೋಪಾದಿಯಲ್ಲಿ ಅಧಿಕಾರಿಗಳು ನಿರ್ವಹಿಸಬೇಕೆಂದು ವಸತಿ ಸಚಿವ ವಿ. ಸೋಮಣ್ಣ ಸೂಚಿಸಿದರು. ನಗರದ ಜಿ.ಪಂ.ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ಮಳೆಹಾನಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕೈಗೊಂಡ ಹಾಗೂ ಕೈಗೊಳ್ಳಬೇಕಿರುವ ಪರಿಹಾರ ಕ್ರಮಗಳ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಪ್ರವಾಹ, ಪ್ರಕೃತಿ ವಿಕೋಪಗಳಿಂದ ಜನರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಬೆಳೆ, ಮನೆಗಳಿಗೆ ಹಾನಿಯಾಗಿದೆ. ಶಾಲೆ, ರಸ್ತೆ ಮೂಲ ಸೌಕರ್ಯಗಳಿಗೂ ಧಕ್ಕೆಯಾಗಿದೆ. ನಷ್ಟದ ಕುರಿತು ವ್ಯಾಪಕವಾಗಿ ಸಮೀಕ್ಷೆ ಕೈಗೊಂಡು ನಿಖರ ಅಂಕಿ ಅಂಶಗಳನ್ನು ಒದಗಿಸಬೇಕು ಎಂದು ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ನಷ್ಟ ಸಂಭವಿಸಿರುವ ಬೆಳೆ, ಮನೆಗಳಿಗೆ ಸೂಕ್ತ ಪರಿಹಾರ ಒದಗಿಸುವಾಗ ಮಾನವೀಯ ನೆಲೆಯಲ್ಲಿ ನೋಡಬೇಕು. ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಆಯಾ ಭಾಗದಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಹೆಚ್ಚು ಮಾಹಿತಿ ಇರುತ್ತದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರ ಸಮನ್ವಯದಿಂದ ಸಮಗ್ರ ಮಾಹಿತಿ ಸಂಗ್ರಹಿಸಿ ಖುದ್ದು ಪರಿಶೀಲಿಸಿ ಅರ್ಹರೆಲ್ಲರಿಗೂ ಪರಿಹಾರ ತಲುಪಿಸಬೇಕು ಎಂದರು.

ಕೆರೆಗಳಿಗೆ ನೀರು ತುಂಬಿಸಲು ಸೂಚನೆ: ಎಲ್ಲಾ ಕಾಲುವೆ ಸ್ವಚ್ಚಗೊಳಿಸಬೇಕು. ಕಾಮಗಾರಿ ಬಾಕಿ ಉಳಿಯದಂತೆ ಪೂರ್ಣಗೊಳಿಸಬೇಕು. ಕೆರೆಗಳಲ್ಲಿ ಬೆಳೆದ ಕಳೆ ಗಿಡ ತೆಗೆಯಬೇಕು. ಕೆರೆಗಳು ಒತ್ತುವರಿಯಾಗಿದ್ದಲ್ಲಿ ಪೊಲೀಸರ ನೆರವು ಪಡೆದು ನಿರ್ದಾಕ್ಷಿಣ್ಯ ತೆರವುಗೊಳಿಸಬೇಕು ಎಂದರು.

ಹಾನಿಯಾದ ಅಂಗನವಾಡಿ, ಶಾಲಾ ಕೊಠಡಿ, ಪ್ರಾ. ಆರೋಗ್ಯ ಕೇಂದ್ರ, ಹಾಸ್ಟೆಲ್‌ಗಳ ಕಟ್ಟಡ ಸರಿಪಡಿಸಬೇಕು. ಜಿಲ್ಲಾ ಆಸ್ಪತ್ರೆಯಲ್ಲಿಯೂ ಆರೋಗ್ಯ ಸೇವೆ ನೀಡಲು ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು. ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯಲ್ಲಿ ರೋಗಿಗಳ ಸೇವೆಗೆ 24*7 ಅವಧಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಬಡವರಿಗೆ, ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡಬೇಕು. ತಾ.ಪಂ.ಸಿಇಒ ಯಾರಿಗೆ ಸೌಲಭ್ಯ ತಲುಪಿಸಬೇಕಿದೆಯೋ ಅವರನ್ನು ಗುರುತಿಸುವ ಕೆಲಸ ನಿರ್ವಹಿಸಿ. ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಅಲ್ಲಿನ ಜನಪ್ರತಿನಿಧಿಗಳೊಂದಿಗೆ ವಾರ್ಡ್‌ಗಳಿಗೆ ತೆರಳಿ ಪರಿಶೀಲಿಸಬೇಕು ಎಂದರು.

ದಿಂಬಂನಲ್ಲಿ ರಾತ್ರಿ ವಾಹನ ಸಂಚಾರ ನಿಷೇಧದಿಂದ ಮಲೆಮಹದೇಶ್ವರ ಬೆಟ್ಟ, ಹನೂರು ತಾಲೂಕು ಗ್ರಾಮಗಳ ಮೂಲಕ ರಾತ್ರಿ ವೇಳೆ ಹೆಚ್ಚಾಗಿರುವ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಲು ಕೂಡಲೇ ಚೆಕ್‌ಪೋಸ್ಟ್‌ ತೆರೆಯಬೇಕು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಈ ನಿಟ್ಟಿನಲ್ಲಿ ತಕ್ಷಣವೇ ಕ್ರಮವಹಿಸಬೇಕೆಂದು ಸಚಿವರು ಸೂಚಿಸಿದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ನಿರಂತರ ಸುರಿದ ಮಳೆ ಹಾಗೂ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯ ಭರ್ತಿ, ಕೆರೆಗಳು ತುಂಬಿದ್ದರಿಂದ ನೀರು ಹರಿದು ಅರಿಶಿನ, ಬಾಳೆ, ಜೋಳ, ಕೋಸು ಬೆಳೆಗಳು ನಾಶವಾಗಿವೆ. ಮನೆಗಳು ನೀರಿನಿಂದ ನೆನೆದು ಕುಸಿಯುವ ಭೀತಿ ಉಂಟಾಗಿದೆ. ಸಂಬಂಧಪಟ್ಟಇಲಾಖೆಗಳಿಂದ ಸಂಪೂರ್ಣ ಸಮೀಕ್ಷೆಯಾಗಿ, ಕೂಡಲೇ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದರು.

ಚಾಮರಾಜನಗರ: ಸನ್ಮಾನ ಕಲ್ಪಿಸದ ಜಿಲ್ಲಾಡಳಿತ, ಗ್ರಾಪಂ ಆವರಣದಲ್ಲಿಯೇ ಶವಸಂಸ್ಕಾರ..!

ಶಾಸಕ ಆರ್‌. ನರೇಂದ್ರ ಅವರು ಮಾತನಾಡಿ, ಮಳೆಯಿಂದಾಗಿ ನಮ್ಮ ಭಾಗದಲ್ಲಿ ಆಲೂಗಡ್ಡೆ, ಕಬ್ಬು ಇತರೆ ಬೆಳೆ ಹಾನಿಯಾಗಿವೆ. ಹೆಚ್ಚು ಭಾರ ಹೊತ್ತ ಲಾರಿಗಳ ಸಂಚಾರದಿಂದ ರಸ್ತೆಗೆ ಹಾನಿಯಾಗುತ್ತಿದೆ ಎಂದು ಗಮನ ಸೆಳೆದರು.
ಶಾಸಕ ಎನ್‌. ಮಹೇಶ್‌ ಮಾತನಾಡಿ, ಮಳೆ ಹಾಗೂ ಪ್ರವಾಹದಿಂದ ಅತಿ ಹೆಚ್ಚು ತೊಂದರೆಗೆ ಒಳಗಾಗಿರುವುದು ಕೊಳ್ಳೇಗಾಲ ಕ್ಷೇತ್ರವಾಗಿದೆ. ಇಲ್ಲಿ ಕೆರೆಗಳಿಗೆ ಸಾಕಷ್ಟುಹಾನಿಯಾಗಿದೆ. ಬೆಳೆನಷ್ಟಸೇರಿದಂತೆ ಸಂಭವಿಸಿರುವ ಎಲ್ಲಾ ಹಾನಿಗೆ ತುರ್ತಾಗಿ ಸಮಗ್ರ ಸಮೀಕ್ಷೆ ಕೈಗೊಂಡು ನಿಖರ ಅಂಶಗಳನ್ನು ಸಂಗ್ರಹಿಸಿ ನಷ್ಟವನ್ನು ನಿರ್ಧರಿಸಬೇಕು. ಪುನರ್ವಸತಿ ಕಾರ್ಯ ಆಗಬೇಕು. ರಸ್ತೆ, ಸೇತುವೆ, ಕಾಲುವೆ ಸೇರಿದಂತೆ ಎಲ್ಲಾ ದುರಸ್ತಿಗೆ ವಿಶೇಷ ಪರಿಹಾರ ಪ್ಯಾಕೇಜ್‌ ಅಗತ್ಯವಿದೆ ಎಂದರು.

ಶಾಸಕ ಸಿ.ಎಸ್‌. ನಿರಂಜನ್‌ಕುಮಾರ್‌ ಮಾತನಾಡಿ, ಗುಂಡ್ಲುಪೇಟೆ ತಾಲೂಕಿನಲ್ಲಿ ಹತ್ತಿ, ಸಣ್ಣ ಈರುಳ್ಳಿ ಬೆಳೆಗೆ ತೊಂದರೆಯಾಗಿದೆ. ತುಂಬದಿರುವ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ನಿಗದಿಯಂತೆ ನಡೆಯಬೇಕು. ಕೆರೆ ಸಂಬಂಧ ಕಾರ್ಯಗಳು ಶೀಘ್ರವೇ ಆರಂಭಿಸಬೇಕು ಎಂದರು.

ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು, ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿಪಂ ಸಿಇಒ ಕೆ.ಎಂ. ಗಾಯಿತ್ರಿ, ಎಸ್ಪಿ ಟಿ.ಪಿ. ಶಿವಕುಮಾರ್‌, ಎಡಿಸಿ ಎಸ್‌. ಕಾತ್ಯಾಯಿನಿದೇವಿ, ಎಎಸ್ಪಿ ಕೆ.ಎಸ್‌. ಸುಂದರ್‌ರಾಜ್‌, ಎಸಿ ಗೀತಾ ಹುಡೇದ ಸಭೆಯಲ್ಲಿ ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios