ಮಡಿಕೇರಿ(ಏ.23): ಕೊರೋನಾ ಸೋಂಕು ಪರಿಣಾಮ ಫಸಲು ಮಾರಲಾಗದೆ ಹಲವು ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಕೊಡಗು ಜಿಲ್ಲೆಯಲ್ಲಿ ಮೀನು ಕೃಷಿಕರು ಕೆರೆ ಮೀನಿನಿಂದ ಬಂಪರ್‌ ಆದಾಯ ಗಳಿಸುತ್ತಿದ್ದಾರೆ.

ಮಡಿಕೇರಿ ತಾಲೂಕಿನ ಕಗ್ಗೋಡ್ಲುವಿನ ಮೀನು ಕೃಷಿಕ ಮಂದ್ರಿರ ತೇಜಸ್‌ ನಾಣಯ್ಯ ತಮ್ಮ ಎರಡು ಕೆರೆಯಲ್ಲಿ ಮೀನು ಹಿಡಿದು ವ್ಯಾಪಾರ ಮಾಡಿ ಎರಡೇ ದಿನದಲ್ಲಿ ಆರು ಲಕ್ಷ ರು. ಆದಾಯ ಗಳಿಸಿದ್ದಾರೆ.

ಮರುವಾಯಿ ಮೀನು ಹಿಡಿದ ಯುವಕರ 11 ಬೈಕ್ ಜಪ್ತಿ

ಈ ಹಿಂದೆ ಒಂದು ಬಾರಿ ಮೀನು ಹಿಡಿದರೆ 500-800 ಕೆ.ಜಿ. ಮಾತ್ರ ಮಾರಾಟವಾಗುತ್ತಿತ್ತು. ಆದರೆ ಈಗ ಸಮುದ್ರ ಮೀನು ಹಾಗೂ ಮಾಂಸ ದೊರಕದೆ ಇರುವುದರಿಂದ ಹೆಚ್ಚಾಗಿ ಮೀನು ಮಾರಾಟವಾಗಿದೆ. ಇತ್ತೀಚೆಗೆ ಬೆಳಗ್ಗೆ 6.30ರಿಂದ ಮಧ್ಯಾಹ್ನ 12 ಗಂಟೆ ವರೆಗೆ 2,130 ಕೆ.ಜಿ. ಮೀನು ಮಾರಾಟವಾಗಿದೆ. ಮತ್ತೊಂದು ದಿನ 1,220 ಕೆ.ಜಿ. ಮೀನು ಮಾರಾಟವಾಗಿದೆ. ಒಂದು ಕೆ.ಜಿ. ಮೀನಿಗೆ 200 ರು. ರಂತೆ ಮಾರಾಟ ಮಾಡಿದ್ದು, ಎರಡು ದಿನದಲ್ಲಿ ಆರು ಲಕ್ಷ ರು. ಆದಾಯ ಗಳಿಸಿದ್ದೇನೆ. ಈ ಬಾರಿ ಮೀನು ಕೃಷಿ ಲಾಭದಾಯಕವಾಗಿದೆ. ಇನ್ನೂ ಕೆರೆಯಲ್ಲಿ 3 ಸಾವಿರ ಕೆ.ಜಿ.ಯಷ್ಟುಮೀನುಗಳಿವೆ ಎನ್ನುತ್ತಾರೆ ಮೀನು ಕೃಷಿಕ ತೇಜಸ್‌ ನಾಣಯ್ಯ.

ಮಂಗಳೂರು ಬಂದರಿಗೆ ಬಂದಿದೆ ಕೊರೋನಾ ಮೀನು..! ಕೆಜಿಗೆ 2 ಸಾವಿರ

ಜಿಲ್ಲಾಡಳಿತದಿಂದ ಸ್ಥಳೀಯ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ಮೀನು ಕೃಷಿಕರು ತಮ್ಮ ಕೆರೆಗಳಲ್ಲಿ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದಾರೆ. ಮಡಿಕೇರಿ ತಾಲೂಕಿನ ಕಗ್ಗೋಡ್ಲುವಿನ ಮೀನು ಕೃಷಿಕರೊಬ್ಬರು ಎರಡೇ ದಿನದಲ್ಲಿ ಸುಮಾರು 3 ಸಾವಿರ ಕೆ.ಜಿ.ಗೂ ಅಧಿಕ ಮೀನು ಮಾರಾಟ ಮಾಡಿ 6 ಲಕ್ಷ ರು. ಸಂಪಾದನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಇನ್ನೂ ಹಲವು ಮೀನು ಕೃಷಿಕರು ಆದಾಯ ಪಡೆಯುತ್ತಿದ್ದಾರೆ.

"

ಕೆರೆಯಿಂದ ಮೀನು ಖರೀದಿ ಸಂದರ್ಭ ಜನತೆ ಸಾಮಾಜಿಕ ಅಂತರ ಮರೆತು ಮುಗಿಬಿದ್ದಿದ್ದರೂ, ಖರೀದಿ ವೇಳೆ ಮೀನುಪ್ರಿಯರಲ್ಲಿ ಬಹುತೇಕರು ಮಾಸ್ಕ್‌ ಧರಿಸಿದ್ದು ಕಂಡು ಬಂತು.

ಕೆರೆಗಳೇ ಆದಾಯದ ಮೂಲ:

ಕೊಡಗು ಜಿಲ್ಲೆಯ ಬಹುತೇಕ ಕಾಫಿ ತೋಟಗಳಲ್ಲಿ ಕೆರೆಗಳಿವೆ. ಕೆರೆಗಳಲ್ಲಿ ಕಾಟ್ಲಾ ಮತ್ತಿತರ ಮೀನುಗಳನ್ನು ಬೆಳೆಸುತ್ತಾರೆ. ಮೀನು ಕೃಷಿಗೆ ನಿರ್ವಹಣೆ ವೆಚ್ಚವೂ ತೀರಾ ಕಡಿಮೆ. ಲಾಕ್‌ಡೌನ್‌ ಆದ ಪರಿಣಾಮ ಜಿಲ್ಲೆಯಲ್ಲಿ ಮೀನು, ಮಾಂಸ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಈಗ ವಾರದಲ್ಲಿ ಮೂರು ದಿನ ಮೀನು ಮಾರಾಟಕ್ಕೆ ಅವಕಾಶ ನೀಡಿದೆ. ಜಿಲ್ಲೆಯಲ್ಲಿ ಸಮುದ್ರ ಮೀನು ಮಾರಾಟವಾಗದ ಹಿನ್ನೆಲೆಯಲ್ಲಿ ಮೀನು ಕೃಷಿಕರು ಒಂದಷ್ಟುಆದಾಯ ಪಡೆಯುತ್ತಿದ್ದಾರೆ.

ಮಧ್ಯವರ್ತಿಗಳು ಈ ಹಿಂದೆ ಒಂದು ಕೆ.ಜಿ. ಮೀನಿಗೆ 80 ರು.ಗೆ ಕೃಷಿಕರಿಂದ ಕೊಂಡುಕೊಳ್ಳುತ್ತಿದ್ದರು. ಆದರೆ ಈಗ ಸಮುದ್ರ ಮೀನು ಇಲ್ಲದ ಕಾರಣ ಕೆರೆ ಮೀನಿಗೆ ಬೇಡಿಕೆ ಹೆಚ್ಚಾಗಿದ್ದು, ಮಧ್ಯವರ್ತಿಗಳು 1 ಕೆ.ಜಿ. ಮೀನಿಗೆ 130 ರು. ತೆಗೆದುಕೊಂಡು ಹೋಗುತ್ತಿದ್ದಾರೆ. ಅದಲ್ಲದೆ ಮೀನು ಕೃಷಿಕರು ತಮ್ಮ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಉಡುಪಿ: ಮೀನುಗಾರರ ಬಲೆಗೆ ಬಿತ್ತು ದೆವ್ವ ಮೀನು

ನಾನಾ ಕಾರಣದಿಂದ ಮೀನು ಹಿಡಿಯದೆ ಹಲವಾರು ವರ್ಷಗಳಿಂದ ತಮ್ಮ ಕೆರೆಗಳಲ್ಲಿ ಹಾಗೇ ಬಿಟ್ಟಿದ್ದ ಕೃಷಿಕರು ಕೂಡ ಈ ಸಮಯ ಬಳಸಿ ಮೀನುಗಳನ್ನು ಹಿಡಿದು ವ್ಯಾಪಾರ ಮಾಡಿ ಆದಾಯ ಗಿಟ್ಟಿಸಿಕೊಳ್ಳುತ್ತಿದಾರೆ. ಮೀನುಗಾರಿಕಾ ಇಲಾಖೆ ಜಿಲ್ಲೆಯ 500ಕ್ಕೂ ಅಧಿಕ ಮೀನು ಕೃಷಿಕರಿಗೆ ಪ್ರತಿ ವರ್ಷ ಮೀನು ಮರಿಗಳನ್ನು ವಿತರಣೆ ಮಾಡುತ್ತಿದೆ.

ಬಲೆಗೆ ಬಿತ್ತು 200 ಕೆಜಿ ತೂಗುವ ಅಪರೂಪದ ಮೀನು, ಇದರ ಚಂದ ನೋಡಿ

ಕೊಡಗು ಜಿಲ್ಲಾಧಿಕಾರಿ ಸ್ಥಳೀಯ ಮೀನುಗಳನ್ನು ಮಾರಾಟ ಮಾಡುವಂತೆ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಕೊಡಗಿನ ಮೀನು ಕೃಷಿಕರಿಗೆ ಲಾಭದಾಯಕವಾಗಿದೆ. ಈಗ ಕೆರೆ ಮೀನಿಗೆ ಉತ್ತಮ ಬೇಡಿಕೆಯೂ ಇದೆ. ಜಿಲ್ಲೆಯಲ್ಲಿ 500 ಕೃಷಿಕರಿಗೆ ಮೀನು ಮರಿಗಳನ್ನು ವಿತರಿಸಲಾಗಿತ್ತು. ಮಧ್ಯವರ್ತಿಗಳು ಕೂಡ ಕೃಷಿಕರಿಂದ ಹೆಚ್ಚು ಬೆಲೆ ನೀಡಿ ಮೀನು ಕೊಂಡುಕೊಳ್ಳುತ್ತಿದ್ದಾರೆ ಎಂದು ಮಡಿಕೇರಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ದರ್ಶನ್‌ ತಿಳಿಸಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು