Asianet Suvarna News Asianet Suvarna News

ವಿಜಯಪುರ: ಕೃಷ್ಣೆಯಲ್ಲೀಗ ಮರಳಿದೆ ಜಲ ಜೀವಕಳೆ..!

ಆಲಮಟ್ಟಿ ಜಲಾಶಯಕ್ಕೆ ಅಂತೂ ಬಂತು ಹೊಸ ನೀರು, ಮಹಾರಾಷ್ಟ್ರ ಭಾಗದಲ್ಲಿ ವರ್ಷಧಾರೆ, ಕೃಷ್ಣಾ ನದಿಯಲ್ಲಿ ಒಳಹರಿವು ಆರಂಭ

Inflow into the Krishna River Begins in Vijayapura grg
Author
First Published Jul 14, 2023, 8:58 PM IST

ಆಲಮಟ್ಟಿ(ಜು.14): ಪ್ರಸಕ್ತ ಮುಂಗಾರು ವಿಳಂಬದಿಂದ ಜಲ ವೈಭವ ಕಾಣದಂತಿದ್ದ ಕೃಷ್ಣಾ ನದಿ ಒಡಲಲ್ಲಿ ಈಗ ಮತ್ತೆ ಜಲ-ಜೀವ-ಕಳೆ ಮೂಡಿದೆ. ಪರಿಣಾಮ ಕೃಷ್ಣೆಯ ಸೆರಗಲ್ಲಿ ಇನ್ನು ಹಸಿರು ಕಳೆಗಟ್ಟುವ ಆಶಾಭಾವ ಒಡಮೂಡಿದೆ. ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿಯಲ್ಲಿ ಈಗ ಮೆಲ್ಲಗೆ ನೀರಿನ ಜುಳುಜುಳು ಸದ್ದು ಕೇಳಿಬರುತ್ತಿದೆ. ಪರಿಣಾಮ ಜನತೆಯ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಋುತುವಿನಲ್ಲಿ ಮೊದಲ ಬಾರಿಗೆ ಒಳಹರಿವಿನ ಮೂಲಕ ಜೀವ ಜಲದ ದರ್ಶನವಾಗತೊಡಗಿದೆ. ನೆರೆಯ ಮಹಾರಾಷ್ಟ್ರದ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಚುರುಕಾಗಿದ್ದರಿಂದ ಹಾಗೂ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿದೆ.

ಇದರಿಂದಾಗಿ ಕೃಷ್ಣಾ ನದಿ ತೀರದ ಅನ್ನದಾತರು ಹಾಗೂ ಜನಸಾಮಾನ್ಯರು ಅಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮುಂಗಾರು ಪ್ರವೇಶಿಸಿ ತಿಂಗಳಾದರೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿರಲಿಲ್ಲ. ಹೀಗಾಗಿ ಕೃಷ್ಣಾ ನದಿ ಬತ್ತಿ ಬರಿದಾಗಿತ್ತು. ರೈತರು, ಜನಸಾಮಾನ್ಯರು ಕುಡಿಯುವ ನೀರಿಗೂ ಪರಿತಪಿಸುವಂತಾಗಿತ್ತು. ಮುಂದೇನು ಗತಿ? ಎಂಬ ಆತಂಕದ ಕಾರ್ಮೋಡ ಆವರಿಸಿತ್ತು.

ವಿಜಯಪುರ: ಕೈಗೂಡುತ್ತಾ ಜನರ ದೋಣಿ ವಿಹಾರದ ನಿರೀಕ್ಷೆ?

ಆದರೀಗ ಮಹಾರಾಷ್ಟ್ರ ಭಾಗದಲ್ಲಿ ವರ್ಷಧಾರೆ ಜಿನುಗುತ್ತಿರುವುದರಿಂದ ಕೃಷ್ಣೆ ಮತ್ತೆ ಮೊದಲಿನಂತೆ ಜಲ ಜೀವಕಳೆ ತುಂಬಿಕೊಳ್ಳುತ್ತಿದ್ದಾಳೆ. ಇಲ್ಲಿನ ಲಾಲ್‌ ಬಹಾದ್ದೂರ್‌ ಶಾಸ್ತಿ್ರ ಜಲಾಶಯದಲ್ಲಿ ಜೀವಜಲ ಹರಿದು ಬರುತ್ತಿದೆ. ಸಣ್ಣ ಸಣ್ಣದಾಗಿ ನೀರಿನ ಅಲೆಗಳು ಪುಟಿದೆಳುತ್ತಿರುವುದು ಗೋಚರಿಸುತ್ತಿದೆ. ಅಪ್ಪಳಿಸುತ್ತಿರುವ ಅಲೆಗಳ ನಿನಾದಕ್ಕೆ ಜನ ಖುಷಿಯಾಗಿದ್ದಾರೆ. ಈ ದೃಶ್ಯವನ್ನು ಕಣ್ತುಂಬಿಕೊಂಡು ಹೃನ್ಮನ ತಣಿಸಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಿಂದ ಸ್ಥಗಿತವಾಗಿದ್ದ ಆಲಮಟ್ಟಿಜಲಾಶಯದ ಒಳಹರಿವು ಈಗ ಅತಿ ತಡವಾಗಿ ಬುಧವಾರದಿಂದ ಆಮೆ ವೇಗ ಪಡೆದುಕೊಂಡಿದೆ. ಬುಧವಾರ ಜಲಾಶಯಕ್ಕೆ 19,172 ಕ್ಯುಸೆಕ್‌ ನೀರು ಹರಿದು ಬಂದಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಈ ಒಳಹರಿವು ಕ್ರಮೇಣ ಹೆಚ್ಚತೊಡಗಿದೆ. ಆದರೆ ಅಲ್ಲಿನ ಜಲಾಶಯದಿಂದ ಇನ್ನೂ ನೀರು ಹರಿದು ಬಿಟ್ಟಿಲ್ಲ.

ಜುಲೈ 12ರಿಂದ ಒಳಹರಿವು ಶುರುವಾಗಿದ್ದರಿಂದ ಜಲಾಶಯದ ಭರ್ತಿ ವಿಳಂಬವಾಗಲಿದೆ. ಮಹಾರಾಷ್ಟ್ರದಲ್ಲಿಯೂ ಮಳೆ ಅಬ್ಬರ ಹೇಳಿಕೊಳ್ಳುವಷ್ಟಿಲ್ಲ, ಅಲ್ಲಿನ ಜಲಾಶಯಗಳು ಕೂಡಾ ಶೇ.25ರಷ್ಟುಭರ್ತಿಯಾಗಿಲ್ಲ. ಹೀಗಾಗಿ ಇನ್ನೂ 15 ದಿನ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿ ನೀರಿನ ಹಾಹಾಕಾರ ಸಾಕಷ್ಟುಇತ್ತು. ಈಗ ಅದರ ನಿವಾರಣೆಯಾದಂತಾಗಿದೆ. ಜುಲೈ 2024ರವರೆಗೆ ಬೇಕಾಗುವಷ್ಟುಕುಡಿಯುವ ನೀರನ್ನು ಹಿಡಿದಿಟ್ಟುಕೊಂಡು ಹೆಚ್ಚುವರಿ ನೀರನ್ನು ಕೃಷಿಗೆ ಬಳಸಲಾಗುತ್ತದೆ.

ಆಲಮಟ್ಟಿಯಲ್ಲೀಗ 508.22 ಮೀ. ನೀರು

ತಡವಾಗಿ ಒಳಹರಿವು ಆರಂಭಗೊಂಡರೂ ಜಲಾಶಯ ಶೀಘ್ರ ಭರ್ತಿಯತ್ತ ಸಾಗಲಿ, ಈ ಭಾಗದಲ್ಲಿ ಮುಂಗಾರು ಮಳೆಯ ಕೊರತೆಯಿದೆ. ಹೀಗಾಗಿ ಕಾಲುವೆಗೆ ಬೇಗ ನೀರು ಹರಿಯುವಂತಾಗಲಿ ಎಂಬುದು ರೈತರ ಪ್ರಾರ್ಥನೆ ಮತ್ತು ನಿರೀಕ್ಷೆಯಾಗಿದೆ.

ವಿಜಯಪುರ: ಬರಿದಾದ ಡೋಣಿ ಒಡಲಿಗೆ ಚರಂಡಿ ನೀರು..!

ನೀರಿನ ಸಂಗ್ರಹದ ಮಾಹಿತಿ:

519.60 ಮೀ. ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಗುರುವಾರ 508.22 ಮೀ.ವರೆಗೆ ನೀರಿತ್ತು. 123.081 ಟಿಎಂಸಿ ಗರಿಷ್ಠ ಸಂಗ್ರಹದ ಜಲಾಶಯದಲ್ಲಿ 20.54 ಟಿಎಂಸಿ ನೀರಿದೆ. 20,028 ಕ್ಯುಸೆಕ್‌ ಒಳಹರಿವಿದ್ದು, ಜಲಾಶಯದ ಹಿನ್ನೀರಿನ ಬಳಕೆ 561 ಕ್ಯುಸೆಕ್‌ ಹೊರಹರಿವು 98 ಇದೆ.

ಕಳೆದ ವರ್ಷ ಇದೇ ದಿನದಂದು ಆಲಮಟ್ಟಿ ಜಲಾಶಯದಲ್ಲಿ 517.28 ಮೀ.ವರೆಗೆ ನೀರು ಇತ್ತು. ಆಗ ಜಲಾಶಯಕ್ಕೆ 1,04,852 ಕ್ಯುಸೆಕ್‌ ನೀರು ಹರಿದು ಬರುತ್ತಿತ್ತು. ಆಲಮಟ್ಟಿಜಲಾಶಯಕ್ಕೆ ಸಾವಿರಾರು ಕ್ಯುಸೆಕ್‌ ನೀರು ಹರಿದು ಬರುತ್ತಿದ್ದಂತೆ ಅವಳಿ ಜಿಲ್ಲೆಯ ಜನ ನದಿ ತೀರಕ್ಕೆ ಹೋಗಿ ನೋಡಲಾರಂಭಿಸಿದರು. ಅನೇಕರು ನದಿ ತೀರಕ್ಕೆ ಅಪ್ಪಳಿಸುತ್ತಿದ್ದ ಅಲೆಗಳನ್ನು ಕಂಡು ಹರ್ಷರಾದರು. ಸಂತಸದ ಅಲೆಯಲ್ಲಿ ತೇಲಿ ಧನ್ಯತೆಯ ಭಾವ ತೋರಿದರು.

Follow Us:
Download App:
  • android
  • ios