ವಿಜಯಪುರ: ಬರಿದಾದ ಡೋಣಿ ಒಡಲಿಗೆ ಚರಂಡಿ ನೀರು..!
ಮಳೆ ಇಲ್ಲದೇ ಡೋಣಿ ನದಿಯು ಬರಿದಾಗಿದೆ. ನದಿಯಲ್ಲಿ ವರ್ಷದಿಂದ ವರ್ಷಕ್ಕೆ ಹೂಳಿನ ಪ್ರಮಾಣ ಹೆಚ್ಚುತ್ತಾ ಸಾಗಿದೆ. ಶತಮಾನಗಳ ಹಿಂದಿನಿಂದ ಜನರಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ಆಸರೆ ನೀಡಿದ್ದ ಡೋಣಿ ನದಿಯಲ್ಲಿ ಪ್ರಸ್ತುತ ತುಂಬಿರುವ ಹೂಳಿನಿಂದ ಗಲೀಜು ವಾತಾವರಣ ನಿರ್ಮಾಣವಾಗಿದೆ.
ಪ್ರವೀಣ್ ಘೋರ್ಪಡೆ
ತಾಳಿಕೋಟೆ(ಜು.06): ಪಂಚ ನದಿಗಳ ನಾಡೆಂದು ಹೆಸರಾಗಿರುವ ವಿಜಯಪುರ ಜಿಲ್ಲೆಯಲ್ಲಿ ಹರಿಯುವ ಡೋಣಿನದಿ ತುಂಬಿದರೆ ಓಣೆಲ್ಲಾ ಜೋಳ ಎಂಬ ಹಿರಿಯರ ಮಾತು ನೆನಪಿಸಿಕೊಂಡು ಇಂದಿನ ಡೋಣಿ ನದಿಯನ್ನು ನೋಡಿದರೆ ಪರಿಸ್ಥಿತಿ ಮಮ್ಮಲ ಮರುಗುವಂತಿದೆ.
ಮಳೆ ನಿಂತರೂ ವರ್ಷಪೂರ್ತಿ ಹರಿಯುತ್ತಿದ್ದ ಡೋಣಿ ನದಿ ಈ ಬಾರಿ ಬತ್ತಿಹೋಗಿದ್ದು, ನದಿ ಒಡಲಲ್ಲಿ ಹೂಳು ಹಾಗೂ ಕಲ್ಲುಗಳೇ ತುಂಬಿಕೊಂಡು ದುರ್ವಾಸನೆ ಬೀರುತ್ತಿದೆ. ನದಿ ಒಡಲಲ್ಲಿ ಎಲ್ಲಿ ನೋಡಿದರೂ ರಾಶಿ ರಾಶಿ ಕಲ್ಲು ಚಪ್ಪಡಿಗಳು, ಬಿಸಾಡಿದ ಹರಕುಬಟ್ಟೆ, ಗಂಟುಗಳು, ಮುಳ್ಳುಕಂಟಿಗಳು, ಝೇಕು, ಹೂಳು ತುಂಬಿಕೊಂಡಿದೆ.
ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ ಪುರುಷ
ನಾಲ್ಕು ತಾಲೂಕಿನ ಜನತೆಗೆ ಆಸರೆಯಾಗಿರುವ ಡೋಣಿ ನದಿಯ ಹೂಳೆತ್ತದೇ ಶತಮಾನಗಳೇ ಕಳೆದುಹೋಗಿವೆ. ವಿಜಯನಗರ ಸಾಮ್ರಾಜ್ಯ ಹಾಗೂ ಆದಿಲ್‌ಶಾಹಿಗಳ ಕಾಲದಿಂದಲೂ ಡೋಣಿ ನದಿಯ ನೀರನ್ನು ಕುಡಿಯಲು ಉಪಯೋಗಿಸುವ ಕುರಿತು, ಈ ನದಿ ತೀರದ ಹುಲುಸಾದ ಹುಲ್ಲನ್ನು ಕುದುರೆ, ಆನೆಗಳಿಗೆ ಮೇವನ್ನಾಗಿ ಬಳಸುವ ಕುರಿತು ಇತಿಹಾಸದಲ್ಲಿ ಉಲ್ಲೇಖವಿದೆ. ಇಂದು ಈ ನದಿಯ ನೀರು ದನಕರುಗಳಿಗೂ ಕುಡಿಯಲು ಉಪಯೋಗ ಇಲ್ಲದಂತಾಗಿದೆ.
ಡೋಣಿ ನದಿಯಲ್ಲಿ ತುಂಬಿಕೊಂಡಿರುವ ಹೂಳಿನ ಪರಿಣಾಮ ಮಳೆ ಬಂದು ನದಿ ಉಕ್ಕಿ ಹರಿದಾಗಲ್ಲೊಮ್ಮೆ ಅಕ್ಕಪಕ್ಕದ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಕೊಚ್ಚಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಆದರೆ, ಸದ್ಯ ಮಳೆಯ ಅಭಾವದಿಂದ ಡೋಣಿನದಿಯಲ್ಲಿ ನೀರಿಲ್ಲದೇ ಬರದ ಛಾಯೆ ಆವರಿಸಿದೆ. ನದಿ ಅಕ್ಕಪಕ್ಕದ ಪಟ್ಟಣ, ಗ್ರಾಮಗಳಿಂದ ಹರಿದುಬಂದ ಚರಂಡಿ ನೀರು ಈಗ ನದಿಪಾತ್ರದಲ್ಲಿ ಹರಿಯುತ್ತಿದ್ದು, ನದಿ ಒಡಲಲ್ಲಿನ ವೈವಿಧ್ಯಮಯವಾದ ಜೀವಸಂಕುಲದ ಅಸ್ತಿತ್ವಕ್ಕೂ ಆಪತ್ತು ತಂದೊಡ್ಡಿದೆ.
ವಿಜಯಪುರ ಜಿಲ್ಲೆಯಲ್ಲಿ 3.4ರ ತೀವ್ರತೆಯ ಭೂಕಂಪ: ಬೆಚ್ಚಿಬಿದ್ದ ಜನತೆ
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿನ ಜಲ ಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲರು ಡೋಣಿ ನದಿಯ ಹೂಳೆತ್ತುವ ಕುರಿತು ಆಸಕ್ತಿ ತೋರಿದ್ದರು. ಮಾತ್ರವಲ್ಲ, ಈ ಕುರಿತು ಸದನದಲ್ಲಿ ಚರ್ಚೆ ಕೂಡ ಮಾಡಿದ್ದರು. ಆದರೆ, ಆ ಯೋಜನೆ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಸದ್ಯ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಎಂ.ಬಿ.ಪಾಟೀಲರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಈ ಬಾರಿಯೂ ಅವರು ಡೋಣಿ ನದಿಯ ಹೂಳೆತ್ತುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ವಹಿಸಬೇಕಾಕೆಂದು ಪ್ರಜ್ಞಾವಂತ ನಾಗರಿಕರ ಒತ್ತಾಸೆಯಾಗಿದೆ.
ಮಳೆ ಇಲ್ಲದೇ ಡೋಣಿ ನದಿಯು ಬರಿದಾಗಿದೆ. ನದಿಯಲ್ಲಿ ವರ್ಷದಿಂದ ವರ್ಷಕ್ಕೆ ಹೂಳಿನ ಪ್ರಮಾಣ ಹೆಚ್ಚುತ್ತಾ ಸಾಗಿದೆ. ಶತಮಾನಗಳ ಹಿಂದಿನಿಂದ ಜನರಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ಆಸರೆ ನೀಡಿದ್ದ ಡೋಣಿ ನದಿಯಲ್ಲಿ ಪ್ರಸ್ತುತ ತುಂಬಿರುವ ಹೂಳಿನಿಂದ ಗಲೀಜು ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಡೋಣಿ ನದಿ ಹೂಳೆತ್ತುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು. ಈ ಮೂಲಕ ರೈತರು, ಕೂಲಿಕಾರ್ಮಿಕರಿಗೆ ಕೂಡಲೇ ಉದ್ಯೋಗ ನೀಡಲೂ ಕ್ರಮವಹಿಸಬೇಕು ಅಂತ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ತಿಳಿಸಿದ್ದಾರೆ.