ಮಂಗ್ಳೂರಲ್ಲಿ ದೇಶದ ಅತೀ ದೊಡ್ಡ ಭೂಗತ ಗ್ಯಾಸ್ ಸಂಗ್ರಹಾಗಾರ..!
ಕೇಂದ್ರ ಸರ್ಕಾರ ಸ್ವಾಮ್ಯದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಎಚ್‌ಪಿಸಿಎಲ್) ಆಂಧ್ರಪ್ರದೇಶದ ವಿಶಾಖಪಟ್ಣ ಬಳಿಕ ಈಗ ಮಂಗಳೂರಿನಲ್ಲಿ ಭೂಗತ ಗ್ಯಾಸ್ ಸಂಗ್ರಹಾಗಾರ ನಿರ್ಮಿಸುತ್ತಿದೆ. ಮಂಗಳೂರಿನಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯದಿಂದ ನಿರ್ಮಾಣವಾಗುತ್ತಿರುವ ಮೂರನೇ ಭೂಗತ ಸಂಗ್ರಹಾಗಾರ ಇದು.
ಆತ್ಮಭೂಷಣ್
ಮಂಗಳೂರು(ಸೆ.16): ಭಾರತದ ಅತೀ ದೊಡ್ಡ ಎಲ್‌ಪಿಜಿ ಅನಿಲ ಸಂಗ್ರಹ ಸುರಂಗ ಮಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿದೆ. ದೇಶದ ರಕ್ಷಣಾತ್ಮಕ ದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ಗ್ಯಾಸ್ ಪೂರೈಕೆಗೆ ನೆರವಾಗಲು ಕೇಂದ್ರ ಸರ್ಕಾರ ಈ ಅನಿಲ ಸಂಗ್ರಹಾಗಾರ ಸ್ಥಾಪಿಸುತ್ತಿದೆ. ಈ ಭೂಗತ ಸಂಗ್ರಹಾಗಾರ ಡಿಸೆಂಬರ್ ಅಂತ್ಯಕ್ಕೆ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರ ಸ್ವಾಮ್ಯದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಎಚ್‌ಪಿಸಿಎಲ್) ಆಂಧ್ರಪ್ರದೇಶದ ವಿಶಾಖಪಟ್ಣ ಬಳಿಕ ಈಗ ಮಂಗಳೂರಿನಲ್ಲಿ ಭೂಗತ ಗ್ಯಾಸ್ ಸಂಗ್ರಹಾಗಾರ ನಿರ್ಮಿಸುತ್ತಿದೆ. ಮಂಗಳೂರಿನಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯದಿಂದ ನಿರ್ಮಾಣವಾಗುತ್ತಿರುವ ಮೂರನೇ ಭೂಗತ ಸಂಗ್ರಹಾಗಾರ ಇದು. ಈಗಾಗಲೇ ಮಂಗಳೂರಿನ ಪೆರ್ಮುದೆ ಹಾಗೂ ಉಡುಪಿಯ ಪಾದೂರಿನಲ್ಲಿ ಕಚ್ಚಾ ತೈಲದ ಭೂಗತ ಸಂಗ್ರಹಾಗಾರ ನಿರ್ಮಾಣಗೊಂಡು ಕಾರ್ಯಾಚರಿಸುತ್ತಿದೆ. ಇದು ಎಲ್‌ಪಿಜಿ(ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್) ಭೂಗತ ಸಂಗ್ರಹಾಗಾರ.
ಮಂಗ್ಳೂರು ಕುಕ್ಕರ್ ಬಾಂಬ್ ಸ್ಫೋಟ: 'ಕದ್ರಿ ಮಂಜುನಾಥ ದೇವಸ್ಥಾನವೇ' ಉಗ್ರನ ಟಾರ್ಗೆಟ್ ಆಗಿತ್ತಂತೆ..!
80 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯ:
ವಿಶಾಖಪಟ್ಣದಲ್ಲಿ ದೇಶದ ಮೊದಲ ಎಲ್‌ಪಿಜಿ ಭೂಗತ ಸಂಗ್ರಹಾಗಾರ ನಿರ್ಮಾಣವಾಗಿದೆ. 2007ರಲ್ಲಿ 333 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇದರ ಭೂಗತ ಸಂಗ್ರಹಾಗಾರದ ಸಾಮರ್ಥ್ಯ 60,000 ಮೆಟ್ರಿಕ್ ಟನ್. ಮಂಗಳೂರಿನ ವಿಶೇಷ ಆರ್ಥಿಕ ವಲಯ (ಎಂಎಸ್‌ಇಝಡ್) ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಭೂಗತ ಗ್ಯಾಸ್ ಸಂಗ್ರಹಾಗಾರದ ಸಾಮರ್ಥ್ಯ 80,000 ಮೆಟ್ರಿಕ್ ಟನ್. ಇದರ ಅಂದಾಜು ವೆಚ್ಚ 350 ಕೋಟಿ ರು. ಎಂದು ಮೂಲಗಳು ತಿಳಿಸಿವೆ. ಈ ಬೃಹತ್ ಯೋಜನೆಗೆ ಅರಬ್ಬಿ ಸಮುದ್ರದಿಂದಲೇ ದೊಡ್ಡ ಹಡಗುಗಳಿಂದ ಎಲ್‌ಪಿಜಿ ಗ್ಯಾಸ್‌ನ್ನು ಈಗಾಗಲೇ ಅಳವಡಿಸಿರುವ ಪೈಪ್ ಮೂಲಕ ಭೂಗತ ಸಂಗ್ರಹಾಗಾರಕ್ಕೆ ಸರಬರಾಜುಗೊಳಿಸಲಾಗುತ್ತದೆ.
ಮಂಗಳೂರಲ್ಲಿ ಎಲ್‌ಪಿಜಿ ಭೂಗತ ಸಂಗ್ರಾಹಾರ ನಿರ್ಮಾಣಕ್ಕೆ 2018ರಲ್ಲಿ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಬಳಿಕ ಒಂದು ವರ್ಷದಲ್ಲಿ ಕಾಮಗಾರಿ ಆರಂಭವಾಗಿದೆ. ಸಮುದ್ರ ಮಧ್ಯದಿಂದ ಭೂಗತ ಸಂಗ್ರಹಾಗಾರಕ್ಕೆ ಗ್ಯಾಸ್ ಪೂರೈಕೆಗೆ ಪೈಪ್‌ಲೈನ್ ಅಳವಡಿಕೆ ಪೂರ್ಣಗೊಂಡಿದೆ. ಭೂಗತ ಸಂಗ್ರಹಾಗಾರದಲ್ಲಿ ಅಗತ್ಯ ಕಟ್ಟಡ ನಿರ್ಮಾಣವೂ ಆಗಿದೆ. ಬೃಹತ್ ಬಂಡೆಕಲ್ಲನ್ನು ಕೊರೆದು ಸುರಂಗ ನಿರ್ಮಿಸಿ 500 ಮೀಟರ್ ಆಳದಲ್ಲಿ ಎಲ್‌ಪಿಜಿ ಸಂಗ್ರಹಾಗಾರ ನಿರ್ಮಿಸಲಾಗಿದ್ದು, ಈಗಾಗಲೇ ಶೇ.83ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಇದು ಮೂರನೇ ಬೃಹತ್ ಭೂಗತ ಸಂಗ್ರಹಾಗಾರ
ಅವಿಭಜಿತ ದ.ಕ. ಜಿಲ್ಲೆಯ ಮಂಗಳೂರಿನ ಪೆರ್ಮುದೆ ಮತ್ತು ಉಡುಪಿಯ ಪಾದೂರಿನಲ್ಲಿ ಈಗಾಗಲೇ ಭೂಗತ ತೈಲ ಸಂಗ್ರಹಾಗಾರ ಕಾರ್ಯಾಚರಿಸುತ್ತಿದೆ. ಇದನ್ನು ದೇಶದಲ್ಲಿ ತುರ್ತು ಸನ್ನಿವೇಶಕ್ಕೆ ಬಳಕೆಗಾಗಿ ಕಚ್ಚಾ ತೈಲ ಸಂಗ್ರಹಕ್ಕೆ ಬಳಕೆಯಾಗುತ್ತಿದೆ.
ಪೆರ್ಮುದೆಯ ಭೂಗತ ತೈಲ ಸಂಗ್ರಹಾಗಾರದ ಸಾಮರ್ಥ್ಯ 1.5 ಮಿಲಿಯನ್ ಮೆಟ್ರಿಕ್ ಟನ್ ಆಗಿದ್ದು, 1,227 ಕೋಟಿ ರು. ವೆಚ್ಚದಲ್ಲಿ 2009 ಏಪ್ರಿಲ್‌ನಲ್ಲಿ ನಿರ್ಮಿಸಲಾಗಿದೆ. ಎರಡು ಕಂಪಾರ್ಟ್‌ಮೆಂಟ್‌ನ ಇದು 2016 ಅಕ್ಟೋಬರ್‌ನಿಂದ ಕಾರ್ಯಾರಂಭಿಸಿದೆ.
ಪಾದೂರಿನ ತೈಲ ಸಂಗ್ರಹಾಗಾರ 2.50 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದ್ದು, 1,693 ಕೋಟಿ ರು.ಗಳಲ್ಲಿ 2010ರಲ್ಲಿ ನಿರ್ಮಾಣವಾಗಿದೆ. ನಾಲ್ಕು ಕಂಪಾರ್ಟ್‌ಮೆಂಟ್ ಹೊಂದಿರುವ ಇದು 2018 ಡಿಸೆಂಬರ್‌ನಲ್ಲಿ ಕಾರ್ಯಾರಂಭಿಸಿದೆ.
ವಿಶಾಖಪಟ್ಣದಲ್ಲಿ ಎರಡು ಕಂಪಾರ್ಟ್‌ಮೆಂಟ್‌ನ ಭೂಗತ ತೈಲಾಗಾರ 2008ರಲ್ಲಿ ನಿರ್ಮಾಣವಾಗಿ 2015 ಜೂನ್‌ನಲ್ಲಿ ಕಾರ್ಯಾರಂಭಿಸಿತ್ತು. ಇದರ ಸಾಮರ್ಥ್ಯ 1.33 ಮಿಲಿಯನ್ ಮೆಟ್ರಿಕ್ ಟನ್ ಆಗಿದ್ದು, 1,178.35 ಕೋಟಿ ರು. ವೆಚ್ಚವಾಗಿದೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯದಡಿ ಇಂಡಿಯನ್ ಸ್ಟ್ರೆಟಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್(ಐಎಸ್‌ಪಿಆರ್‌ಎಲ್) ನಿರ್ಮಿಸಿದೆ.
ರಾಜಕೀಯ ದ್ವೇಷಕ್ಕಾಗಿ ಎನ್‌ಇಪಿ ರದ್ಧತಿ: ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ
ಕೇಂದ್ರ ಸ್ವಾಮ್ಯದ ಎಚ್‌ಪಿಸಿಎಲ್ ವತಿಯಿಂದ ಮಂಗಳೂರಲ್ಲಿ ದೇಶದಲ್ಲೇ ಅತೀ ದೊಡ್ಡದಾದ ಭೂಗತ ಗ್ಯಾಸ್ ಸಂಗ್ರಹಾಗಾರ ಯೋಜನೆಯನ್ನು ಕೈಗೊಳ್ಳಲಾಗಿದೆ. ದೇಶಕ್ಕೆ ಆಪತ್ಕಾಲದಲ್ಲಿ ನೆರವಾಗುವ ದೃಷ್ಟಿಯಿಂದ ಕೇಂದ್ರ ಸರ್ಕಾರ ವಿಶಾಖಪಟ್ಣ ಬಳಿಕ ಮಂಗಳೂರಿನಲ್ಲಿ ಇದನ್ನು ನಿರ್ಮಿಸುತ್ತಿದೆ. ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕರಾವಳಿಯ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಯೋಜನೆಗಳನ್ನು ಒಪ್ಪಬೇಕಾಗುತ್ತದೆ. ಆದರೆ ಇಲ್ಲಿನ ಧಾರಣಾ ಸಾಮರ್ಥ್ಯಕ್ಕಿಂತಲೂ ಜಾಸ್ತಿ ಯೋಜನೆಗಳ ಬಲಪ್ರಯೋಗ ಈಗಾಗಲೇ ಆಗಿದೆ. ಪರಿಸರಕ್ಕೆ ಹಾನಿಯಾಗಬಾರದು, ಆದರೆ ಯೋಜನೆಗಳಿಂದ ಅಂತರ್ಜಲ ಶೇಖರಣೆಗೆ ಕಾರಣವಾಗುವ ಮಣ್ಣಿನಡಿಯ ಮೂರು ಒಳಪದರಗಳು ಘಾಸಿಯಾಗುತ್ತವೆ. ಹಾಗಾಗಿ ಭೂಮಿಯನ್ನು ಸಂರಕ್ಷಿಸುವ ಅನಿವಾರ್ಯತೆ ಇದೆ ಎಂದು ಮಂಗಳೂರು ಸಹ್ರಾದ್ರಿ ಸಂಚಯ ಸಂಚಾಲಕ ದಿನೇಶ್ ಹೊಳ್ಳ ತಿಳಿಸಿದ್ದಾರೆ.