ಮಂಗಳೂರು(ಮೇ 31): ಕೊರೋನಾ ಮಹಾ ಆತಂಕದ ನಡುವೆ ಮಳೆಗಾಲ ಶುರುವಾಗಲು ದಿನಗಣನೆ ಆರಂಭವಾಗಿದೆ. ಮಳೆಯೊಂದಿಗೆ ಮಲೇರಿಯಾ, ಡೆಂಘೀಯಂಥ ಸೋಂಕುಗಳ ಕಾಟವೂ ದಿಢೀರನೆ ಆರಂಭವಾಗಲಿದೆ. ಕೊರೋನಾ ಯುದ್ಧೋಪಾದಿ ಕೆಲಸಗಳ ನಡುವೆ ಡೆಂಘೀ ಸೋಂಕು ಪತ್ತೆ ವಿಳಂಬ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆಯ ಆತಂಕ ಸೃಷ್ಟಿಯಾಗಿದೆ. ಸ್ವತಃ ಆರೋಗ್ಯ ಇಲಾಖೆ ಈ ಬಗ್ಗೆ ಚಿಂತೆಗೀಡಾಗಿದೆ.

ಕಳೆದ ವರ್ಷವಂತೂ ದ.ಕ. ಜಿಲ್ಲೆಯ ಜನರನ್ನು ಡಂಘೀ ಅಕ್ಷರಶಃ ನಡುಗಿಸಿಬಿಟ್ಟಿತ್ತು. ಜಿಲ್ಲೆಯೊಂದರಲ್ಲೇ ಬರೋಬ್ಬರಿ 1539 ಡೆಂಘೀ ಪ್ರಕರಣಗಳು (ಮಂಗಳೂರು ನಗರದಲ್ಲೇ 969 ಪ್ರಕರಣ), 2 ಸಾವಿರಕ್ಕೂ ಹೆಚ್ಚು ಮಲೇರಿಯಾ ಪ್ರಕರಣಗಳು ದಾಖಲಾಗಿದ್ದವು. ಐವರು ಡೆಂಘೀಯಿಂದಾಗಿಯೇ ಸತ್ತಿದ್ದರೆ, ಶಂಕಿತ ಡೆಂಘೀಯಿಂದ 20ಕ್ಕೂ ಅಧಿಕ ಸಾವುಗಳು ಸಂಭವಿಸಿದ್ದವು.

ಮಂಗಳೂರಿನಲ್ಲಿ ಮಿಡತೆ ಹಿಂಡು ಪ್ರತ್ಯಕ್ಷ: ಹಸಿರೆಲೆಗಳು ಖಾಲಿ

ಈ ಬಾರಿಯೂ ಮತ್ತೆ ಡೆಂಘೀ, ಮಲೇರಿಯಾ ತಾಂಡವವಾಡುವ ಸಾಧ್ಯತೆ ಇದ್ದೇ ಇದೆ. ಇಡೀ ಆರೋಗ್ಯ ಇಲಾಖೆ ಈಗ ಕೊರೋನಾ ವಿರುದ್ಧ ಹೋರಾಟದಲ್ಲಿ ತೊಡಗಿದೆ. ನೂರಾರು ಸಂಖ್ಯೆಯಲ್ಲಿ ಡೆಂಘೀ, ಮಲೇರಿಯಾ ಪ್ರಕರಣಗಳು ಬಂದರೆ ಜಿಲ್ಲೆಯ ಆರೋಗ್ಯ ಪರಿಸ್ಥಿತಿ ಮತ್ತಷ್ಟುಬಿಗಡಾಯಿಸುವ ಆತಂಕ ಹುಟ್ಟಿದೆ.

ವೈದ್ಯರ ಕೊರತೆ ಭೀತಿ: ‘‘ಕೊರೋನಾದ ನಡುವೆ ಇತರ ಸೋಂಕುಗಳ ನಿರ್ವಹಣೆ ಕುರಿತು ಸರ್ಕಾರದ ಮಾರ್ಗಸೂಚಿ ಇದೆ. ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಜ್ವರ ಕ್ಲಿನಿಕ್‌ಗಳನ್ನು ಮಾಡಿದ್ದೇವೆ. ಅಲ್ಲದೆ, ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲಿ ಜ್ವರ ಪೀಡಿತರು ಬಂದಾಗ ಕೋವಿಡ್‌ ಶಂಕಿತವಾ ಬೇರೆ ಜ್ವರವಾ ಅಂತ ರೋಗಿಯನ್ನು ಮಾತನಾಡಿಸಿ ಜ್ವರ ವಿಂಗಡಣೆ ಮಾಡಲಾಗುತ್ತದೆ. ಕೊರೋನಾ ಸೋಂಕಿನ ಲಕ್ಷಣಗಳಿದ್ದರೆ ಅದರ ಪರೀಕ್ಷೆ ನಡೆಸಲಾಗುತ್ತದೆ. ಡೆಂಘೀ, ಮಲೇರಿಯಾದಂತಹ ಇತರ ಜ್ವರ ಲಕ್ಷಣಗಳಿದ್ದರೆ ಅದಕ್ಕೆ ಪೂರಕ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಒಂದೇ ಸಮನೆ ಡೆಂಘೀ, ಮಲೇರಿಯಾ ಪ್ರಕರಣಗಳ ಸಂಖ್ಯೆ ಏರಿಕೆಯಾದರೆ ವೈದ್ಯರು, ದಾದಿಯರ ಸಂಖ್ಯೆ ಸಾಲದು. ಪರಿಸ್ಥಿತಿ ನಿಭಾಯಿಸುವುದು ಸ್ವಲ್ಪ ಮಟ್ಟಿಗೆ ಕಷ್ಟಸಾಧ್ಯ ಆಗಬಹುದು’’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

ಕರ್ತವ್ಯದ ಸಂದರ್ಭ ಸೋಂಕಿತರಾಗಿದ್ದ 4 ಮಂದಿ ಪೊಲೀಸ್ ಡಿಸ್ಚಾರ್ಜ್

ಚಿಕಿತ್ಸೆ ನಿರಾಕರಣೆ ಆತಂಕ: ಸರ್ಕಾರದ ಮಾರ್ಗಸೂಚಿ ಇದ್ದರೂ ಪ್ರಸ್ತುತ ಜಿಲ್ಲೆಯಲ್ಲಿ (ಕೊರೋನಾ ಹಾವಳಿಯಿಂದ) ಇತರ ರೋಗಿಗಳಿಗೆ ಕೂಡ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆ ಮಾಡಲಾಗುತ್ತಿದೆ ಎನ್ನುವ ಆರೋಪ ವ್ಯಾಪಕವಾಗಿದೆ. ಡೆಂಘೀ, ಮಲೇರಿಯಾ ಪೀಡಿತರ ಸಂಖ್ಯೆ ಹೆಚ್ಚಿದರೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದರೆ ಪರಿಸ್ಥಿತಿ ಸಂಪೂರ್ಣ ಹದಗೆಡುವ ಸಾಧ್ಯತೆಗಳಿವೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಬೇರೆ ರೋಗ ಇರುವ 2-3 ಮಂದಿ ಚಿಕಿತ್ಸೆ ದೊರೆಯದೆ ಸಾವಿಗೀಡಾಗಿದ್ದಾರೆ. ಅವರಲ್ಲಿ ಜ್ವರ ಲಕ್ಷಣ ಬಂದ ಕೂಡಲೆ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಯಿತು. ನಿಜವಾದ ರೋಗಕ್ಕೆ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಅವರು ಮೃತಪಟ್ಟಿದ್ದರು. ಸಾವಿನ ನಂತರ ಅವರ ಕೊರೋನಾ ಸ್ಯಾಂಪಲ್‌ ನೆಗೆಟಿವ್‌ ಬಂದಿತ್ತು. ಮುಂದೆ ತುಂಬ ಸಂಖ್ಯೆಯಲ್ಲಿ ಡೆಂಘೀ ಪ್ರಕರಣಗಳು ಬಂದರೆ ರೋಗವನ್ನು ನಿಖರವಾಗಿ ಗುರುತಿಸುವಲ್ಲಿ ತೊಡಕಾಗಿ ರೋಗಿಗಳಿಗೆ ತೊಂದರೆಯಾಗಬಹುದು ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಸೊಳ್ಳೆ ನಿಯಂತ್ರಣವೇ ಮದ್ದು

ಡೆಂಘೀ, ಮಲೇರಿಯಾ ಸೊಳ್ಳೆಗಳಿಂದ ಹರಡುವುದರಿಂದ ನೀರು ನಿಲ್ಲದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ನೀರು ನಿಲ್ಲುವ ಜಾಗಗಳನ್ನು ಗುರುತಿಸಿ ನೀರು ನಿಲ್ಲಿಸದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರತಿಯೊಬ್ಬರೂ ದಿನಂಪ್ರತಿ 25-30 ಮನೆಗಳನ್ನು ಸಂಪರ್ಕಿಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಪ್ರದೇಶಗಳ ಪರಿಶೀಲನೆಗೆ ಪ್ರತ್ಯೇಕ ತಂಡ ರಚಿಸಿದ್ದೇವೆ. ಪ್ರತಿ 15 ದಿನಗಳಿಗೊಮ್ಮೆ ಸ್ಥಳ ಭೇಟಿ ಮಾಡಿ ಲಾರ್ವ ಉತ್ಪತ್ತಿಯಾಗದಂತೆ ರಾಸಾಯನಿಕ ಸ್ಪ್ರೇ ಮಾಡಲಾಗುತ್ತದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಹೇಳಿದ್ದಾರೆ.

ಸಂದೀಪ್‌ ವಾಗ್ಲೆ