ಬೆಳಗಾವಿ: ಜನರ ನೆಮ್ಮದಿ ಕಳೆಯುತ್ತಿರುವ ಕಲ್ಲು ಗಣಿಗಾರಿಕೆ
ಬೈಲಹೊಂಗಲ ತಾಲೂಕಿನ ಮರೀಕಟ್ಟಿಹಾಗೂ ಗಣಿಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಅವ್ಯಾಹತ ಕಲ್ಲು ಗಣಿಗಾರಿಕೆಯಿಂದ ಸುತ್ತಮುತ್ತಲಿನ ಜನರ ನೆಮ್ಮದಿಯೇ ಹಾಳಾಗಿದೆ.
ಬೆಳಗಾವಿ(ಜ.20): ಬೈಲಹೊಂಗಲ ತಾಲೂಕಿನ ಮರೀಕಟ್ಟಿಹಾಗೂ ಗಣಿಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಅವ್ಯಾಹತ ಕಲ್ಲು ಗಣಿಗಾರಿಕೆಯಿಂದ ಸುತ್ತಮುತ್ತಲಿನ ಜನರ ನೆಮ್ಮದಿಯೇ ಹಾಳಾಗಿದೆ. ಹಗಲು ರಾತ್ರಿ ಎನ್ನದೇ ಕಲ್ಲು ಕ್ರಷಿಂಗ್ ಮಾಡುವ ಕರ್ಕಶ ಶಬ್ದ ಹಾಗೂ ಧೂಳಿನಿಂದ ಜನ, ಜಾನುವಾರಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಸ್ಥಳೀಯ ನಿವಾಸಿಗಳು ಜಿಲ್ಲಾಡಳಿತದ ವಿರುದ್ಧ ಕೆಂಡ ಕಾರುತ್ತಿದ್ದಾರೆ.
ಮರೀಕಟ್ಟಿ ಹಾಗೂ ಗಣಿಕೊಪ್ಪ ಗ್ರಾಮಗಳ ವ್ಯಾಪ್ತಿಯೊಂದರಲ್ಲೇ ಸುಮಾರು 10ಕ್ಕೂ ಹೆಚ್ಚು ಕಲ್ಲು ಕ್ವಾರಿಗಳು ಕ್ರಷಿಂಗ್ ಮಾಡುತ್ತಿವೆ. ಈ ಕ್ವಾರಿ ಮಾಲೀಕರ ನಡುವೆ ನಾಹೆಚ್ಚು, ತಾ ಹೆಚ್ಚು ಎಂದು ಸ್ಪರ್ಧೆಯಿಂದಾಗಿ ಭೂಮಿ ಆಳದಲ್ಲಿ ಭಾರೀ ಪ್ರಮಾಣದಲ್ಲಿ ಜಲಟಿನ್ ಬ್ಲಾಸ್ಟ್ ಮಾಡುತ್ತಿರುವುದರಿಂದ ಮರೀಕಟ್ಟಿ, ಗಣಿಕೊಪ್ಪ, ಶಿಗೀಹಳ್ಳಿ, ಪುಲಾರಕೊಪ್ಪ ಹಾಗೂ ನಾವಲಗಟ್ಟಿಸೇರಿದಂತೆ ಸುತ್ತಮುತ್ತಲಿನ 5 ರಿಂದ 6 ಕಿ.ಮೀ ದೂರದವರೆಗೂ ಭೂ ಕಂಪಿಸುವುದರ ಜತೆಗೆ ಮನೆಗಳು ಬಿರುಕು ಬಿಟ್ಟಿವೆ. ಅಲ್ಲದೇ ಸ್ವಲ್ಪ ದೂರದಲ್ಲಿಯೇ ತಿಗಡಿ ಹರಿನಾಲಾ ಡ್ಯಾಮ ಇರುವುದರಿಂದ ಅವ್ಯಾಹತ ಕಲ್ಲು ಗಣಿಕಾರಿಕೆಯಿಂದಾಗಿ ಡ್ಯಾಮನ ಕೆಳ ಭಾಗದ ಗ್ರಾಮಸ್ಥರು ಆತಂಕದಿಂದ ಜೀವನ ಸಾಗಿಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡಪ್ರಭ ವಿಸ್ತೃತ ಸರಣಿ ವರದಿಗಳನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾಟಚಾರಕ್ಕೆ ಎಂಬಂತೆ ಕ್ರಮಕೈಗೊಂಡಿದ್ದರು.
BELAGAVI NEWS: ಅಕ್ರಮ ಅಕ್ಕಿ ಸಂಗ್ರಹಕ್ಕೆ ಹಳ್ಳಿಗಳೇ ಹಾಟ್‌ಸ್ಪಾಟ್!
ಜಿಲ್ಲಾಡಳಿತ ಹಾಗೂ ಬೈಲಹೊಂಗಲ ತಾಲೂಕಾಡಳಿತ, ಮರೀಕಟ್ಟಿಗ್ರಾಮ ಪಂಚಾಯತಿಯವರು ಸಾರ್ವಜನಿಕರ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತರೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಆದರೆ ಲೋಕಾಯುಕ್ತದಲ್ಲಿನ ಪ್ರಕರಣ ಇತ್ಯರ್ಥವಾಗಿಲ್ಲ, ಆದರೂ ಜಿಲ್ಲಾಡಳಿತ ಮತ್ತೆ ಕಲ್ಲು ಗಣಿಕಾರಿಕೆ ನಡೆಸಲು ಅನುಮತಿ ನೀಡಲಾಗಿದೆ ಎಂದು ಕ್ರಷರ್ ಮಾಲೀಕರು ಹೇಳಿಕೊಂಡು ಬೇಕಾಬಿಟ್ಟಿ ತಮ್ಮ ದಂಧೆಯನ್ನು ನಡೆಸುತ್ತಿದ್ದಾರೆ.
ಭೂ ತಾಯಿ ಒಡಲು ಬರಿದಾಗಿಸುವ ಸ್ಪರ್ಧೆಯಲ್ಲರುವ ಕ್ರಷರ್ ಉದ್ಯಮಿಗಳು ಸುತ್ತಮುತ್ತಲಿನ ಗ್ರಾಮಗಳ ಮರೀಕಟ್ಟಿ, ಗಣಿಕೊಪ್ಪ, ಶಿಗಿಹಳ್ಳಿ ಸೇರಿದಂತೆ ಇನ್ನೀತರ ಗ್ರಾಮಗಳ ಜನ, ಜಾನುವಾರುಗಳ ಆರೋಗ್ಯವನ್ನು ಲೆಕ್ಕಿಸದೇ ಹಗಲು ರಾತ್ರಿ ಎನ್ನದೇ ಬೇಕಾಬಿಟ್ಟಿಯಾಗಿ ಕಲ್ಲು ಕ್ರಷಿಂಗ್ ಮಾಡುವುದು ಹಾಗೂ ಜಲಟಿನ್ ಬ್ಲಾಸ್ಟ್ ಮಾಡುತ್ತಿರುವುದರಿಂದ ಆತಂಕದಿಂದಲೇ ಜೀವನ ಸಾಗಿಸುವಂತಾಗಿದೆ. ಉದ್ಯಮಿಗಳ ಉದ್ದಟತನದ ದಂಧೆಯಿಂದಾಗಿ ಈ ಭಾಗದ ಸಾರ್ವಜನಿಕರಿಗೆ ನೆಮ್ಮದಿ ಇಲ್ಲದಂತಾಗಿದೆ. ಜತೆಗೆ ರಾತ್ರಿ ಸಮಯದಲ್ಲಿ ಆತಂಕದಿಂದ ನಿದ್ರೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ವಯೋವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದರೂ, ಜಿಲ್ಲಾಡಳಿತ, ತಾಲೂಕಾಡಳಿತ ಅಥವಾ ಸ್ಥಳಿಯ ಸಂಸ್ಥೆಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದಾಗಿ ಈ ಭಾಗದ ಜನರು ಜಿಲ್ಲಾಡಳಿತದ ಮೇಲೆ ಅನುಮಾನ ವ್ಯಕ್ತಪಡಿಸುವದರ ಜತೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಸಾರ್ವಜನಿಕರ ನೆಮ್ಮದಿ ಹಾಳು ಮಾಡುತ್ತಿರುವ ಅವ್ಯಾಹತ ಕಲ್ಲು ಗಣಿಗಾರಿಕೆಗೆ ಪರೋಕ್ಷವಾಗಿ ಸಹಕಾರ ನೀಡಿರುವ ಆಡಳಿತ ವ್ಯವಸ್ಥೆ ವಿರುದ್ಧ ರಾಜ್ಯಪಾಲರಿಗೆ, ರಾಷ್ಟ್ರಪತಿಗೆ, ಪ್ರಧಾನ ಮಂತ್ರಿ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲು ಮುಂದಾಗಿದ್ದಾರೆ.