ಕೊರೋನಾ 3ನೇ ಅಲೆ: ಹಾವೇರಿಯಲ್ಲಿ 58,000 ಮಕ್ಕಳ ಆರೋಗ್ಯ ತಪಾಸಣೆ ಕಾರ್ಯ ಪೂರ್ಣ
* ಮಕ್ಕಳ ಆರೋಗ್ಯ ತಪಾಸಣೆಗೆ ವಾತ್ಸಲ್ಯ ನಾಮಕರಣ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
* ಪ್ರತಿ ಮಗುವಿಗೂ ಆರೋಗ್ಯ ಕಾರ್ಡ್
* ಮಕ್ಕಳ ಆರೋಗ್ಯ ತಪಾಸಣೆಗೆ ಕೈಜೋಡಿಸಿದ ಜಿಲ್ಲೆಯ ಎಲ್ಲ ವೈದ್ಯರು
ಹಾವೇರಿ(ಜೂ.30): ಕೋವಿಡ್ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಮುನ್ನೆರಿಕೆ ಕ್ರಮವಾಗಿ ರಾಜ್ಯದಲ್ಲೇ ಜಿಲ್ಲೆಯಲ್ಲಿ ಮೊದಲು ಆರಂಭಿಸಲಾದ ಮಕ್ಕಳ ಆರೋಗ್ಯ ತಪಾಸಣಾ ಶಿಬಿರಕ್ಕೆ ವಾತ್ಸಲ್ಯ ಎಂದು ಹೆಸರಿಡಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾಹಿತಿ ನೀಡಿದ ಅವರು, ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ರಾಜ್ಯದ ಗಮನ ಸೆಳೆದಿದೆ. ಇಡೀ ದೇಶ ಹಾಗೂ ರಾಜ್ಯದಲ್ಲಿ ಜಿಲ್ಲೆಯಲ್ಲಿ ಮೊದಲು ಮಕ್ಕಳ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ತಪಾಸಣೆಗೊಳಗಾದ ಪ್ರತಿ ಮಗುವಿಗೂ ವಾತ್ಸಲ್ಯ ಎಂಬ ಪ್ರತ್ಯೇಕ ಆರೋಗ್ಯ ಕಾರ್ಡ್ ನೀಡಲಾಗುವುದು. ಈಗಾಗಲೇ 3 ಲಕ್ಷ ಆರೋಗ್ಯ ಕಾರ್ಡ್ ಮುದ್ರಣಗೊಳ್ಳುತ್ತಿವೆ. ಕಾರ್ಡ್‌ನಲ್ಲಿ ಮಕ್ಕಳ ವಿವರದೊಂದಿಗೆ ಅವರ ಆರೋಗ್ಯ ಮಾಹಿತಿ, ವೈದ್ಯಕೀಯ ಸಲಹೆ, ಶಿಫಾರಸ್ಸುಗಳ ನಮೂದು ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 1320 ಶಾಲೆಗಳು, 1918 ಅಂಗನವಾಡಿಗಳ ಪೈಕಿ ಈಗಾಗಲೇ 314 ಶಾಲೆಗಳು ಹಾಗೂ 510 ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಲಾಗಿದೆ. 18 ವರ್ಷದೊಳಗಿನ ಜಿಲ್ಲೆಯ 2,98,875 ಮಕ್ಕಳ ಆರೋಗ್ಯ ತಪಾಸಣೆ ಗುರಿ ಹೊಂದಲಾಗಿದೆ. ಈ ವರೆಗೆ 58,560 ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈ ಪೈಕಿ 3,515 ಮಕ್ಕಳಿಗೆ ತಪಾಸಣೆ ವೇಳೆ ವಿವಿಧ ಆರೋಗ್ಯ ಸಮಸ್ಯೆಗಳು ಕಂಡುಬಂದಿವೆ. ತೀವ್ರ ಅಪೌಷ್ಟಿಕತೆಯಿಂದ ಬಳಲುವ 313 ಮಕ್ಕಳು ಪತ್ತೆಯಾಗಿದ್ದಾರೆ. ಬೆಳವಣಿಗೆ ಕುಂಠಿತ 180 ಮಕ್ಕಳನ್ನು ಗುರುತಿಸಲಾಗಿದೆ. 590 ಮಕ್ಕಳಿಗೆ ಸೌಮ್ಯ ಸ್ವಭಾವದ ಕೋವಿಡ್ ಲಕ್ಷಣಗಳು ಕಂಡುಬಂದಿದೆ. ಸೌಮ್ಯ ಲಕ್ಷಣ ಕಂಡುಬಂದ ಎಲ್ಲ ಮಕ್ಕಳಿಗೂ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಎಲ್ಲ ಮಕ್ಕಳ ವರದಿಯು ನೆಗಟಿವ್ ಬಂದಿದೆ. ತೀವ್ರ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ, ಸೂಕ್ತ ಚಿಕಿತ್ಸೆಗೆ ಕ್ರಮ ವಹಿಸಲಾಗಿದೆ. ವಿವಿಧ ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಸುವರ್ಣ ಆರೋಗ್ಯ ಟ್ರಸ್ಟ್ ಯೋಜನೆಯಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಕೊರೋನಾ ಕಮ್ಮಿಯಾದ್ರೂ ಇಳಿಯುತ್ತಿಲ್ಲ ಸಾವಿನ ಸಂಖ್ಯೆ..!
ಮಕ್ಕಳ ಆರೋಗ್ಯ ತಪಾಸಣೆಗೆ ಜಿಲ್ಲೆಯ ಎಲ್ಲ ವೈದ್ಯರೂ, ಅರೆ ವೈದ್ಯಕೀಯ ಸಿಬ್ಬಂದಿ, ಖಾಸಗಿ ವೈದ್ಯರು ಕೈಜೋಡಿಸಿದ್ದಾರೆ. 27 ಖಾಸಗಿ ವೈದ್ಯರು ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಕೈಜೋಡಿಸಿದ್ದಾರೆ. ಜು. 30ರೊಳಗಾಗಿ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ. ಮೊದಲ ಸುತ್ತಿನಲ್ಲಿ ಆರೋಗ್ಯ ತಪಾಸಣೆಯಿಂದ ಹೊರಗುಳಿದ ಮಕ್ಕಳಿಗಾಗಿ ಎರಡನೇ ಸುತ್ತಿನಲ್ಲಿ ಕಾರ್ಯಕ್ರಮ ಹಾಕಿಕೊಂಡು ನಿಗದಿತ ಗುರಿಯಂತೆ ಎಲ್ಲ ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದು ವಿವರಿಸಿದರು.
ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗಾಗಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ 30 ಹಾಸಿಗೆ ಹಾಗೂ ಪ್ರತಿ ತಾಲೂಕಿನಲ್ಲಿ ತಲಾ 10 ಹಾಸಿಗೆಗಳ ಐಸಿಯುಸಹಿತ ಮಕ್ಕಳ ವಿಶೇಷ ಕೋವಿಡ್ ವಾರ್ಡ್ ಸಿದ್ಧ ಮಾಡಲಾಗಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ಬೆಡ್ ವ್ಯವಸ್ಥೆ ಮಾಡಿ ಮಕ್ಕಳ ಡೇ ಕೇರ್ ಮಾಡಲಾಗುವುದು. ಮಕ್ಕಳ ನ್ಯೂಟ್ರೀಷಿಯನ್ ಪುನರ್ವಸತಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಕೋವಿಡ್ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದ್ದು, ಪರಿಸ್ಥಿತಿ ನೋಡಿಕೊಂಡು ಪುನಃ ಎನ್‌ಆರ್‌ಸಿ ಸೆಂಟರ್ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಮಾದರಿ ಯೋಜನೆ:
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ರೋಷನ್ ಅವರು ಮಕ್ಕಳ ಆರೋಗ್ಯ ತಪಾಸಣೆ ಮಾಹಿತಿ ನೀಡಿ, ಈ ಯೋಜನೆ ರಾಜ್ಯಕ್ಕೆ ಮಾದರಿಯಾಗಿದೆ. ಈ ಕಾರ್ಯಕ್ರಮ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಕನಸಿನ ಯೋಜನೆ. ಮೂರನೇ ಅಲೆ ಆರಂಭವಾಗುವ ಮುನ್ನ ಮಕ್ಕಳ ರಕ್ಷಣೆಗಾಗಿ ಪ್ರತಿ ಮಕ್ಕಳ ಆರೋಗ್ಯ ತಪಾಸಣೆ ನಡೆಸುವ ಈ ಕಾರ್ಯಕ್ರಮಕ್ಕೆ ವಾತ್ಸಲ್ಯ ಎಂದು ನಾಮಕರಣ ಮಾಡಲಾಗಿದೆ. ರಾಜ್ಯ ಸರ್ಕಾರ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸುವ ಆಶಯ ಹೊಂದಿದೆ. ಈ ಕಾರ್ಯಕ್ರಮ ಕುರಿತಂತೆ ಸರ್ಕಾರದ ಅಭಿವೃದ್ಧಿ ಅಪರ ಕಾರ್ಯದರ್ಶಿಗಳಾದ ವಂದನಾ ಶರ್ಮಾ ಹಾಗೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವಿದ್ ಅಕ್ತರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ ನೀಡಿದರು.
ತೀವ್ರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಎರಡು ಮಾದರಿಯ ಪುಷ್ಟಿಪೌಡರ್, ಪೋಟಿನ್ ಪೌಡರ್, ಹಸಿವನ್ನು ಹೆಚ್ಚಿಸುವ ಮಾತ್ರೆಗಳು, ಪೌಷ್ಟಿಕ ಆಹಾರ ಸಾಮಗ್ರಿ ಜೊತೆಗೆ ಬಾಲವಿಕಾಸ ಯೋಜನೆಯಡಿ ತಿಂಗಳಿಗೆ 25 ಮೊಟ್ಟೆಗಳ ವಿತರಣೆ ಜೊತೆಗೆ ಎಂಟು ಮೊಟ್ಟೆಗಳನ್ನು ಹೆಚ್ಚುವರಿಯಾಗಿ ನೀಡಲು ಕ್ರಮವಹಿಸಲಾಗಿದೆ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಡ್ರೈರೇಷನ್ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು. ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಉಪಸ್ಥಿತರಿದ್ದರು.