ಮಡಿಕೇರಿ(ಜು.05): ಕೋವಿಡ್‌-19 ಸೋಂಕಿನಿಂದ ಮೃತಪಟ್ಟಲ್ಲಿ ಅಂತಹವರ ಶವವನ್ನು ‘ಕಾರ್ಯಾಚರಣ ವಿಧಾನ’ದಂತೆ ನಿಯಮಬದ್ಧವಾಗಿ ಅಂತ್ಯಸಂಸ್ಕಾರ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ವಿವಿಧ ಸಮಾಜಗಳ ಮತ್ತು ಧಾರ್ಮಿಕ ಮುಖಂಡರು ಸಹಕರಿಸುವಂತೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಕೋರಿದರು.

ನಗರದ ವೈದ್ಯಕೀಯ ಕಾಲೇಜಿನಲ್ಲಿ ವಿವಿಧ ಸಮಾಜದ ಹಾಗೂ ಧಾರ್ಮಿಕ ಮುಖಂಡರೊಂದಿಗೆ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಇಡೀ ದೇಶದಲ್ಲಿ ಕೋವಿಡ್‌-19 ಸೋಂಕು ಹರಡುತ್ತಿದೆ. ಆದ್ದರಿಂದ ಆಕಸ್ಮಿಕವಾಗಿ ಕೋವಿಡ್‌-19 ಸೋಂಕಿನಿಂದ ಮರಣ ಹೊಂದಿದ್ದಲ್ಲಿ ಎಸ್‌ಒಪಿಯಂತೆ ಅಂತ್ಯಸಂಸ್ಕಾರ ಮಾಡಬೇಕಿದ್ದು, ಮೃತಪಟ್ಟಕುಟುಂಬದವರು ಹಾಗೂ ಇತರ ಬಂಧುಗಳು ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.

ಸಂಸ್ಕಾರಕ್ಕೆ 1 ಎಕರೆ ಜಾಗ ಮೀಸಲು:

ಕೋವಿಡ್‌ ಸೋಂಕಿನಿಂದ ಮೃತಪಟ್ಟಲ್ಲಿ ಶವ ಸಂಸ್ಕಾರ ಮಾಡಲು ಜಿಲ್ಲಾಡಳಿತ 3 ತಾಲೂಕಿನಲ್ಲಿ ತಲಾ 1 ಎಕರೆ ಜಾಗವನ್ನು ಗುರುತಿಸಿದೆ. ಶವ ಸಂಸ್ಕಾರ ಸಂದರ್ಭದಲ್ಲಿ ಕಾರ್ಯಾಚರಣ ವಿಧಾನ ಮಾಡಬೇಕಿರುವುದರಿಂದ ಜಿಲ್ಲೆಯಲ್ಲಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ತರಬೇತಿ ನೀಡಲಾಗುವುದು. ಜತೆಗೆ ವಿವಿಧ ಧಾರ್ಮಿಕ ಹಾಗೂ ಸಮಾಜದ ಕಡೆಯಿಂದ ಸ್ವಯಂ ಸೇವಕರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಲ್ಲಿ ಅಂತಹವರಿಗೂ ಸಹ ತರಬೇತಿ ನೀಡಲಾಗುವುದು. ಈ ಸಂಬಂಧ ಆಯಾ ತಾಲೂಕಿನ ಡಿವೈಎಸ್‌ಪಿಗೆ ಜುಲೈ 6ರ ಸಂಜೆಯೊಳಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

ಕೊರೋನಾ ಭಯ: ಪ್ರವಾ​ಸಿ​ಗರ ವಾಹನ ತಡೆದು ವಾಪಸ್‌ ಕಳು​ಹಿ​ಸಿದ ಗ್ರಾಮ​ಸ್ಥ​ರು

ಮೃತದೇಹವನ್ನು ಮರಣೋತ್ತರ ಪರೀಕ್ಷೆ (ಪೋಸ್ಟ್‌ ಮಾರ್ಟಮ್‌) ಮಾಡುವುದಿಲ್ಲ. 4 ಮೀಟರ್‌ ಅಂತರದಲ್ಲಿ ಮೃತದೇಹದ ಮುಖವನ್ನು ನೋಡಬಹುದು. 4 ಮೀಟರ್‌ ದೂರದಲ್ಲಿಯೇ ವಿವಿಧ ಧಾರ್ಮಿಕ ಸಂಪ್ರದಾಯವನ್ನು ನೆರವೇರಿಸಬಹುದು ಎಂದು ವಿವರಿಸಿದರು.

ಅಂತ್ಯ​ಸಂಸ್ಕಾರ ಹೀಗೆ ನಡೆ​ಯು​ತ್ತ​ದೆ:

ನ್ಯಾಯವೈದ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಉಮೇಶ್‌ ಬಾಬು ಮಾತನಾಡಿ, ಕೋವಿಡ್‌ ಸೋಂಕಿನಿಂದ ಮೃತಪಟ್ಟಲ್ಲಿ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಮಾರ್ಗಸೂಚಿಯಂತೆ ಆಂಬುಲೆನ್ಸ್‌ ಮೂಲಕ ದೇಹವನ್ನು ಜಿಲ್ಲಾಡಳಿತ ಗುರುತಿಸಿರುವ ನಿಗದಿತ ಜಾಗಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಮೃತದೇಹದ ಸುತ್ತ 3 ಸುತ್ತು ಪ್ಯಾಕ್‌ ಮಾಡಲಾಗುತ್ತದೆ. ಅಂತ್ಯಕ್ರಿಯೆಯನ್ನು 4 ಮಂದಿ ಸಿಬ್ಬಂದಿ ನೆರವೇರಿಸುತ್ತಾರೆ. ಮೃತದೇಹವನ್ನು ಕುಟುಂಬದ 5 ಮಂದಿ ಮಾತ್ರ ನೋಡಲು ಅವಕಾಶವಿದೆ. ಮುಟ್ಟಲು ಅವಕಾಶವಿರುವುದಿಲ್ಲ. ವಿವಿಧ ಧಾರ್ಮಿಕ ಪದ್ಧತಿಯಡಿ ಶವ ಸಂಸ್ಕಾರಕ್ಕೆ ಅವಕಾಶವಿದೆ ಎಂದು ತಿಳಿಸಿದರು.

ಗರ್ಭಿ​ಣಿಗೆ ಕೊರೋನಾ ಪಾಸಿಟಿವ್‌: 10 ಮನೆ ಸೀಲ್‌ಡೌನ್

ಜಿಲ್ಲಾ ​ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮಾತನಾಡಿ, ಕೋವಿಡ್‌ ಸೋಂಕಿನಿಂದ ಮೃತಪಟ್ಟಲ್ಲಿ ಮೃತದೇಹವನ್ನು ಸರ್ಕಾರದ ನಿರ್ದೇಶನದಂತೆ ನಿಯಮಬದ್ಧವಾಗಿ ಅಂತ್ಯ ಸಂಸ್ಕಾರ ಮಾಡಲಾಗುವುದು. ಇದಕ್ಕೆ ಕುಟುಂಬದವರು, ಧಾರ್ಮಿಕ ಮುಖಂಡರು ಸಹಕರಿಸಬೇಕಿದೆ ಎಂದರು.

ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಕೆ.ಎಸ್‌.ದೇವಯ್ಯ ಮಾತನಾಡಿ, ಜಿಲ್ಲಾಡಳಿತ ಕೋವಿಡ್‌ ನಿಯಂತ್ರಿಸುವಲ್ಲಿ ಶ್ರಮಿಸಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ವಿವಿಧ ಧಾರ್ಮಿಕ ಪದ್ಧತಿಯಂತೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಬೇಕು ಎಂದು ಕೋರಿದರು.

ಮಡಿಕೇರಿ ಮುಸ್ಲಿಂ ಜಮಾತ್‌ ಒಕ್ಕೂಟ ಅಧ್ಯಕ್ಷ ಮೊಹಮ್ಮದ್‌ ಅಲಿ ಮಾತನಾಡಿ, ಮಡಿಕೇರಿ ನಗರದಲ್ಲಿ ಜಮಾತ್‌ಗೆ ಸೇರಿದ 22 ಎಕರೆ ಜಾಗವಿದ್ದು, ಕೋವಿಡ್‌ ಸೋಂಕಿನಿಂದ ಮುಸ್ಲಿಂ ಸಮಾಜದವರು ಮೃತಪಟ್ಟಲ್ಲಿ ಶವ ಸಂಸ್ಕಾರಕ್ಕೆ 1 ಎಕರೆ ಜಾಗ ನೀಡಲಾಗುವುದು. ಆದ್ದರಿಂದ ಕೋವಿಡ್‌ ಸೋಂಕಿನಿಂದ ಮುಸ್ಲಿಂ ಸಮಾಜದವರು ಮೃತಪಟ್ಟಲ್ಲಿ ಈ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಬೇಕೆಂದು ಕೋರಿದರು. ಇದಕ್ಕೆ ಜಿಲ್ಲಾಧಿಕಾರಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಅವರು ಇವರ ಜಗತ್ತನ್ನು ಬಗ್ಗಿ ನೋಡಿದರೆ ಇವರು ಅವರ ಜಗತ್ತನ್ನು ತಲೆಯೆತ್ತಿ ನೋಡುತ್ತಾರೆ!

ಸೇವಾ ಭಾರತಿಯ ಮಹೇಶ್‌ ಕುಮಾರ್‌, ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಜಿಲ್ಲಾಧ್ಯಕ್ಷ ಅಮೀನ್‌ ಮೊಹಿಸಿನ್‌ ಮಾತನಾಡಿ, ಸಹಕಾರ ನೀಡಲಾಗುವುದು ಎಂದರು. ಗೌಡ ಸಮಾಜದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ವಕ್ಫ್​ ಬೋರ್ಡ್‌ ಅಧ್ಯಕ್ಷ ಕೆ.ಎ.ಯಾಕೂಬ್‌, ಸಿಎಸ್‌ಐ ಚಚ್‌ರ್‍ನ ಅಮೃತ್‌ ರಾಜ್‌, ಕೊಡಗು ಜಿಲ್ಲಾ ಕ್ರೈಸ್ತರ ಸೇವಾ ಸಂಘ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು, ಬಜರಂಗದಳದ ವಿನಯ್‌ಕುಮಾರ್‌ ಮಾತನಾಡಿದರು.

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಅಂತ್ಯ ಸಂಸ್ಕಾರ ಸಂಬಂಧಿಸಿದಂತೆ ವೀಡಿಯೋವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತದೆ. ಬೇರೆಯವರು ವೀಡಿಯೋ ಮಾಡುವಂತಿಲ್ಲ ಎಂದು ತಿಳಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್‌, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಕಾರ್ಯಪ್ಪ, ಅಧೀಕ್ಷಕ ಡಾ.ಎ.ಜೆ. ಲೋಕೇಶ್‌, ವಿವಿಧ ಸಮಾಜ ಹಾಗೂ ಧಾರ್ಮಿಕ ಮುಖಂಡರು ಇದ್ದರು.