ಗಾಯಕ ಸಿದು ಹತ್ಯೆ ಮತ್ತು ಮುನ್ನಲೆಗೆ ಬಂದ ಪಂಜಾಬ್ ಗ್ಯಾಂಗ್‌ಸ್ಟರ್‌ಗಳ ರಕ್ತಸಿಕ್ತ ಇತಿಹಾಸ
Sidhu Moosewala Murder: ಪಂಜಾಬಿ ಖ್ಯಾತ ಗಾಯಕ ಸಿದು ಮೂಸೆವಾಲಾ ಹತ್ಯೆಯಿಂದ ಪಂಜಾಬ್‌ನ ರಕ್ತಸಿಕ್ತ ಗ್ಯಾಂಗ್‌ಸ್ಟರ್‌ಗಳ ಇತಿಹಾಸ ಮತ್ತೆ ಮುನ್ನಲೆಗೆ ಬಂದಿದೆ. ಅಷ್ಟಕ್ಕೂ ಗೋಲ್ಡಿ ಬ್ರಾರ್ ಯಾರು? ಲಾರೆನ್ಸ್ ಬಿಷ್ನೋಯ್ ಯಾರು? ಇಲ್ಲಿದೆ ಪಂಜಾಬಿನ ರಕ್ತಪಿಪಾಸುಗಳ ಚರಿತ್ರೆ
ಪಂಜಾಬ್: ಪಂಜಾಬಿನ ಖ್ಯಾತ ಗಾಯಕ ಮತ್ತು ಕಾಂಗ್ರೆಸ್ ಮುಖಂಡ ಸಿದು ಮೂಸೆವಾಲಾ (Sidhu Moosewala Assasination) ನಿನ್ನೆ ಸಂಜೆ ಗುಂಡಿಕ್ಕಿ ಹತ್ಯೆಮಾಡಲಾಗಿದೆ. ಸಿದು ಮೂಸೆವಾಲಾ ಹತ್ಯೆಯಿಂದ ಪಂಜಾಬಿನ ಗ್ಯಾಂಗ್‌ಸ್ಟರ್‌ಗಳ ರಕ್ತಸಿಕ್ತ ಇತಿಹಾಸ ಮತ್ತೆ ಮುನ್ನಲೆಗೆ ಬಂದಿದೆ. ಮೂಸೆವಾಲಾ ಹತ್ಯೆಯ ಹೊಣೆಯನ್ನು ಕೆನಡಾದಲ್ಲಿ ನೆಲೆಸಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ (Canada-based gangster goldy brar) ಹೊತ್ತಿದ್ದಾನೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಗೋಲ್ಡಿ ಬ್ರಾರ್, 2021ರಲ್ಲಿ ನಡೆದ ಸ್ನೇಹಿತ ವಿಕ್ಕಿ ಹತ್ಯೆಗೆ ಪ್ರತ್ಯುತ್ತರವಾಗಿ ಸಿದು ಮೂಸೆವಾಲಾರನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿದ್ದಾನೆ. ಅಷ್ಟಕ್ಕೂ ಹತ್ಯೆಗೆ ರಷ್ಯನ್ ಅಸಾಲ್ಟ್ ರೈಫಲ್ ಬಳಕೆ ಮಾಡಲಾಗಿದೆ. ಇವೆಲ್ಲವನ್ನೂ ಗಮನಿಸಿದರೆ ಪಂಜಾಬಿನ ಗ್ಯಾಂಗ್‌ಗಳ ಆಳ ಅಗಲದ ಪರಿಚಯವಾಗುತ್ತದೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಗೋಲ್ಡಿ ಬ್ರಾರ್, ಸಿದು ಹತ್ಯೆಯನ್ನು ನಾನು, ಸಚಿನ್ ಬಿಷ್ನೋಯ್ ಮತ್ತು ಲಾರೆನ್ಸ್ ಬಿಷ್ನೋಯ್ ಮಾಡಿರುವುದಾಗಿ ಹೇಳಿದ್ದಾನೆ. ಹತ್ಯೆಯ ನಂತರ ಪೊಲೀಸರು ನೀರಜ್ ಬಾವನಿಯಾ, ತಿಲ್ಲು ತಜ್ಪುರಿಯಾ ಮತ್ತು ಲಾರೆನ್ಸ್ ಬಿಷ್ನೋಯ್ - ಕಾಲಾ ಜತೇಡಿ ಗೋಲ್ಡಿ ಬ್ರಾರ್ ಗ್ಯಾಂಗ್ ಮೇಲೆ ಕಣ್ಣಿಟ್ಟಿದೆ. ಇವರಲ್ಲಿ ಹಲವರು ದೆಹಲಿಯ ವಿವಿಧ ಜೈಲುಗಳಲ್ಲಿ ಇದ್ದಾರೆ. ತಿಹಾರ ಜೈಲಿನಲ್ಲಿ ಈಗಾಗಲೇ ಪಂಜಾಬಿನ ಗ್ಯಾಂಗ್‌ಸ್ಟರ್‌ಗಳ ಮೇಲೆ ಕಣ್ಣಿಟ್ಟಿದ್ದು, ಹತ್ಯೆಯ ಸಂಬಂಧ ಜೈಲಿನಲ್ಲಿ ಗ್ಯಾಂಗ್ ವಾರ್ ಆಗದಂತೆ ವಿಶೇಷ ಗಮನಹರಿಸಲಾಗಿದೆ.
ಲಾರೆನ್ಸ್ ಬಿಷ್ನೋಯ್ ಯಾರು (Who is Lawrence Bishnoi)?:
ಲಾರೆನ್ಸ್ ಬಿಷ್ನೋಯ್ ಪಂಜಾಬಿನ ಕುಖ್ಯಾತ ಗ್ಯಾಂಗ್‌ಸ್ಟರ್. ಈತ ಸದ್ಯ ತಿಹಾರ್ ಜೈಲಿನಲ್ಲಿ ಹೈ ಸೆಕ್ಯುರಿಟಿಯೊಡನೆ ಇದ್ದಾನೆ. ಪಂಜಾಬ್, ದೆಹಲಿ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಾರೆನ್ಸ್ ಮೇಲೆ ಹಲವಾರು ಪ್ರಕರಣಗಳಿವೆ. ಒಂದಲ್ಲಾ ಒಂದು ಪ್ರಕರಣದಲ್ಲಿ ಆತನನ್ನು ಜೈಲಿನಲ್ಲೇ ಇರುವಂತೆ ಪೊಲೀಸರು ಯತ್ನಿಸುತ್ತಿದ್ದಾರೆ. ಯಾಕೆಂದರೆ ಆತ ಆಚೆ ಬಂದರೆ ಇನ್ನಷ್ಟು ಅಪರಾಧ ಕೃತ್ಯಗಳಲ್ಲಿ ಆತ ಮತ್ತು ಆತನ ಗ್ಯಾಂಗ್ ಭಾಗಿಯಾಗುತ್ತದೆ ಎಂಬ ಭಯ.
ಇದನ್ನೂ ಓದಿ: Sidhu Moose Wala ಭದ್ರತೆ ವಾಪಸ್ ಪಡೆದ ಬೆನ್ನಲ್ಲೇ ಪಂಜಾಬ್ ಸಿಂಗರ್, ಕಾಂಗ್ರೆಸ್ ನಾಯಕ ಸಿಧುನನ್ನು ಗುಂಡಿಕ್ಕಿ ಹತ್ಯೆ!
1993ರ ಫೆಬ್ರವರಿ 12ರಂದು ಲಾರೆನ್ಸ್ ಪಂಜಾಬಿನ ಫಿರೋಜ್‌ಪುರದಲ್ಲಿ ಜನಿಸಿದ. ಈತ ಜನಿಸುವ ಒಂದು ವರ್ಷ ಮುಂಚೆ ಲಾರೆನ್ಸ್ ತಂದೆ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕೆಲಸ ಆರಂಭಿಸಿದರು. ಐದು ವರ್ಷಗಳ ನಂತರ ಲಾರೆನ್ಸ್ ತಂದೆ ಪೊಲೀಸ್ ವೃತ್ತಿಗೆ ವಿದಾಯ ಹೇಳಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡರು. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಲಾರೆನ್ಸ್ ಬಿಷ್ನೋಯ್ ಕಾನೂನು ವಿದ್ಯಾಭ್ಯಾಸ ಮುಗಿಸಿದ. ಅದಾದ ನಂತರ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ. ಚಂಡೀಘಡದಲ್ಲಿ ಆತನ ಮೇಲೆ ಹಲವು ಪ್ರಕರಣಗಳು ದಾಖಲಾದವು. ಅದು ಬರಿ ಆರಂಭವಷ್ಟೆ, ಅದಾದ ನಂತರ ಹಲವು ರಾಜ್ಯಗಳಲ್ಲಿ ಈತ ಮತ್ತು ಈತನ ಗ್ಯಾಂಗ್ ಮೇಲೆ ನೂರಾರು ಪ್ರಕರಣಗಳು ದಾಖಲಾಗಿವೆ.
ಬಿಷ್ನೋಯ್ ಗ್ಯಾಂಗ್‌ನಲ್ಲಿ ನಟೋರಿಯಸ್ ಪ್ರೊಫೆಷನಲ್ ಹಂತಕರು, ಶಾರ್ಪ್ ಶೂಟರ್‌ಗಳು ಇದ್ದಾರೆ. ಪಂಜಾಬ್, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ, ರಾಜಸ್ಥಾನ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈತನ ಗ್ಯಾಂಗ್ ಆಕ್ಟಿವ್ ಆಗಿದೆ. ಜತೆಗೆ ಇಡೀ ಪ್ರಪಂಚಾದ್ಯಂತ ಈತನ ನೆಟ್‌ವರ್ಕ್ ಇದೆ ಎನ್ನಲಾಗಿದೆ.
ಇದನ್ನೂ ಓದಿ: Sidhu Moose Wala ಭದ್ರತೆ ವಾಪಸ್ ಪಡೆದು ಆಮ್ ಆದ್ಮಿ ದುಸ್ಸಾಹಸ, ಸಿಧು ಹತ್ಯೆಗೆ ಸಿಎಂ ಹೊಣೆ ಎಂದ ಬಿಜೆಪಿ!
ಈತನ ಸಹಚರ ಸಂದೀಪ್ ಅಲಿಯಾಸ್ ಕಾಲಾ ಜತೇಡಿಯನ್ನು ದೆಹಲಿ ಪೊಲೀಸರು ಸಂಘಟಿತ ಅಪರಾಧ ಪ್ರಕರಣದಲ್ಲಿ ಬಂಧಿಸಿದ್ದಾರೆ. ಕೊಲೆ, ಅಪಹರಣ, ಹಫ್ತಾ ವಸೂಲಿ, ಕೊಲೆ ಬೆದರಿಕೆ ಸೇರಿದಂತೆ ಹತ್ತಾರು ಪ್ರಕರಣಗಳು ಬಿಷ್ನೋಯಿ ಮತ್ತು ಗ್ಯಾಂಗ್ ಮೇಲಿವೆ. ಗೋಲ್ಡಿ ಬ್ರಾರ್ ಮತ್ತು ಈತನ ಸ್ನೇಹ ಆರಂಭವಾಗಿದ್ದು ಪಂಜಾಬ್ ವಿಶ್ವವಿದ್ಯಾಲಯದಲ್ಲಿ. ಗೋಲ್ಡಿ ಬ್ರಾರ್ ಪಂಜಾಬ್ ವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನಾಗಿದ್ದಾಗ, ಬಿಷ್ನೋಯ್ ಕೂಡ ವಿದ್ಯಾರ್ಥಿ ಸಂಘಟನೆ ಸೇರಿದ್ದ. ಅದಾದ ನಂತರ ಇಬ್ಬರೂ ಆಪ್ತರಾಗಿದ್ದರು. ಸದ್ಯ ಗೋಲ್ಡಿ ಬ್ರಾರ್ ಕೆನಡಾದಲ್ಲಿದ್ದು, ಬಿಷ್ನೋಯ್ ತಿಹಾರ ಜೈಲಿನಲ್ಲಿದ್ದಾನೆ.