Sidhu Moose Wala ಭದ್ರತೆ ವಾಪಸ್ ಪಡೆದು ಆಮ್ ಆದ್ಮಿ ದುಸ್ಸಾಹಸ, ಸಿಧು ಹತ್ಯೆಗೆ ಸಿಎಂ ಹೊಣೆ ಎಂದ ಬಿಜೆಪಿ!
- 28 ವರ್ಷದ ಸಿಂಗರ್, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲ ಹತ್ಯೆ
- ಭದ್ರತೆ ವಾಪಸ್ ಪಡೆದ ಮರುದಿನವೇ ಹತ್ಯೆ, ಆಪ್ ವಿರುದ್ಧ ಆಕ್ರೋಶ
- ವಿಐಪಿ ಸಂಸ್ಕೃತಿ ಹೆಸರಿನಲ್ಲಿ ಆಪ್ ದುಸ್ಸಾಹಸ, ಸಿಎಂ ರಾಜೀನಾಮೆಗೆ ಆಗ್ರಹ
ಪಂಜಾಬ್(ಮೇ.29): ಹಾಡಹಗಲೇ ಪಂಜಾಬ್ ಕಾಂಗ್ರೆಸ್ ನಾಯಕ, ಖ್ಯಾತ ಗಾಯಕ ಸಿಧು ಮೂಸೆ ವಾಲಾ ಹತ್ಯೆಗೆ ಪಂಜಾಬ್ ಬೆಚ್ಚಿಬಿದ್ದಿದೆ. ದುಷ್ಕರ್ಮಿಗಳು ಸಿಧುಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಪಂಜಾಬ್ ಸರ್ಕಾರ ನಾವು ಜನಸಾಮಾನ್ಯರ ಸರ್ಕಾರ ಎಂದು 400ಕ್ಕೂ ಹೆಚ್ಚು ಮಂದಿಯ ಭದ್ರತೆ ವಾಪಸ್ ಪಡೆದಿತ್ತು. ಭದ್ರತೆ ವಾಪಸ್ ಪಡೆದ ಮರುದಿನವೇ ಸಿಧು ಮೂಸೆವಾಲ ಹತ್ಯೆಯಾಗಿದ್ದಾರೆ. ಈ ಕೊಲೆಗೆ ಸಿಎಂ ಭಗವಂತ್ ಮಾನ್ ನೇರ ಹೊಣೆ, ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಆಮ್ ಆದ್ಮಿ ಸರ್ಕಾರ 400ಕ್ಕೂ ಹೆಚ್ಚು ರಾಜಕಾರಣಿಗಳು, ಸೆಲೆಬ್ರೆಟಿಗಳು, ಬೆದರಿಕೆ ಇದ್ದ ವ್ಯಕ್ತಿಗಳ ಭದ್ರತೆಯನ್ನು ವಾಪಸ್ ಪಡೆದಿತ್ತು. ಬಳಿಕ ಆಮ್ ಆದ್ಮಿ ಪಾರ್ಟಿ ವಿಐಪಿ ಸಂಸ್ಕೃತಿಯನ್ನು ಬೆಳೆಸಲ್ಲ ಎಂದು ಬಿಂಬಿಸುವ ಪ್ರಯತ್ನ ಮಾಡಿತ್ತು. ಆದರೆ ಆಮ್ ಆದ್ಮಿ ದುಸ್ಸಾಹಸಕ್ಕೆ ಸಿಧು ಮೂಸೆ ವಾಲಾ ಬಲಿಯಾಗಿದ್ದಾರೆ. ಇದು ಆಮ್ ಆದ್ಮಿ ಸರ್ಕಾರ, ಸಿಎಂ ಭಗವಂತ್ ಮಾನ್ ಹಾಗೂ ಅರವಿಂದ್ ಕೇಜ್ರಿವಾಲ್ ಹೊಣೆ ಎಂದು ಬಿಜೆಪಿ ಆರೋಪಿಸಿದೆ.
ಭದ್ರತೆ ವಾಪಸ್ ಪಡೆದ ಬೆನ್ನಲ್ಲೇ ಪಂಜಾಬ್ ಸಿಂಗರ್, ಕಾಂಗ್ರೆಸ್ ನಾಯಕ ಸಿಧುನನ್ನು ಗಂಡಿಕ್ಕಿ ಹತ್ಯೆ!
ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಛೆ ಸಂಪೂರ್ಣವಾಗಿ ಹದಗೆಟ್ಟಿದೆ. ನಿನ್ನೆ ಆಪ್ ಸರ್ಕಾರ ಖ್ಯಾತ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಭದ್ರತೆ ವಾಪಸ್ ಪಡೆದಿತ್ತು. ಇಂದು ಅಪರಿಚಿತರಿಂದ ಸಿಧು ಮೂಸೆವಾಲ ಹತ್ಯೆಯಾಗಿದ್ದಾರೆ ಎಂದು ಪಂಜಾಬ್ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಟ್ವೀಟ್ ಮಾಡಿದ್ದಾರೆ.
ಕಳೆದ ಹಲವು ದಿನಗಳಿಂದ ಪಂಜಾಬ್ ಪರಿಸ್ಥಿತಿ ಕುರಿತು ಎಚ್ಚರಿಕೆ ನೀಡುತ್ತಲೇ ಬಂದಿದ್ದೇವೆ. ಆದರೆ ಆಮ್ ಆದ್ಮಿ ಪಾರ್ಟಿ ಜನಸಾಮಾನ್ಯರ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಈ ಸಾವಿಗೆ ಭಗವಂತಾ ಮಾನ್ ಕಾರಣ, ಹೀಗಾಗಿ ಭಗವಂತ್ ಸಿಂಗ್ ಮಾನ್ ಹಾಗೂ ಅರವಿಂದ್ ಕೇಜ್ರಿವಾಲ್ ವಿರುದ್ಧ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಮಂಜಿಂದರ್ ಸಿಂಗ್ ಸಿರ್ಸಾ ಒತ್ತಾಯಿಸಿದ್ದಾರೆ.
ಆಪ್ ಸರ್ಕಾರ ನಾಯಕರ ಭದ್ರತೆ ವಾಪಸ್ ಪಡೆದು ಅದನ್ನು ತಮ್ಮ ಸರ್ಕಾರದ ಅತೀ ದೊಡ್ಡ ಕೆಲಸ ಎಂದು ಹೇಳಿತು. ಇದಕ್ಕೆ ಯಾರೆಲ್ಲಾ ನಾಯಕರ, ಸೆಲೆಬ್ರೆಟಿಗಳ ಭದ್ರತೆ ವಾಪಸ್ ಪಡೆದಿದ್ದೇವೆ ಅನ್ನೋ ಮಾಹಿತಿಯನ್ನು ಬಹಿರಂಗ ಪಡಿಸಿತ್ತು. ಇದು ದುಷ್ಕರ್ಮಿಗಳಿಗೆ ನೇರವಾದ ಆಹ್ವಾನ ನೀಡಿದಂತಾಗಿದೆ. ಭದ್ರತೆ ಅತೀ ಸೂಕ್ಷ್ಮ ವಿಚಾರ, ಈ ಮಾಹಿತಿಯನ್ನು ಬಹಿರಂಗಪಡಿಸಿದ್ದೇ ತಪ್ಪು ಎಂದು ಬಿಜೆಪಿ ಹೇಳಿದೆ.
AAP MLA ಹಲ್ಲೆ ಪ್ರಕರಣ, ಆಮ್ ಆದ್ಮಿ ಶಾಸಕ ಬಲ್ಬೀರ್ ಸಿಂಗ್ ದೋಷಿ, 3 ವರ್ಷ ಜೈಲು ಶಿಕ್ಷೆ!
ಸಿಧು ಮೂಸೆವಾಲ ಹತ್ಯೆ ಬಳಿಕ ಆಮ್ ಆದ್ಮಿ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಆರಂಭಗೊಂಡಿದೆ. ಭಗವಂತ್ ಮಾನ್ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಭಗವಂತ್ ಸಿಂಗ್ ಮಾನ್ ರಿಸೈನ್ ಅನ್ನೋ ಆಂದೋಲನವೇ ನಡೆಯುತ್ತಿದೆ.
ಇತ್ತ ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಹಾಗೂ ಅರವಿಂದ್ ಕೇಜ್ರಿವಾಲ್ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಇಷ್ಟೇ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಇತ್ತ ರಾಹುಲ್ ಗಾಂಧಿ ಕೂಡ ಘಟನಗೆ ಆಘಾತ ವ್ಯಕ್ತಪಡಿಸಿದ್ದಾರೆ.