Uttarkashi Tunnel Rescue: ಕಾರ್ಮಿಕರ ರಕ್ಷಣೆಗೆ ನೆರವಾಯ್ತು ನಿಷೇಧಿತ Rat Hole ಮೈನಿಂಗ್‌, ಇದಕ್ಕೆ ನಿಷೇಧ ಯಾಕೆ?

ರ‍್ಯಾಟ್ ಹೋಲ್  ಗಣಿಗಾರಿಕೆಯ ಅಭ್ಯಾಸವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈಗಾಗಲೇ ದೇಶದಲ್ಲಿ ನಿಷೇಧಿಸಿದೆ. ಆದರೆ, ಗಣಿಗಾರಿಕೆಯ ಈ ಪ್ರಾಚೀನ ತಂತ್ರವೇ ಈಗ 41 ಕಾರ್ಮಿಕರನ್ನು ರಕ್ಷಿಸಲು ನೆರವಾಗಿದೆ.

Uttarkashi Silkyara Tunnel Rescue banned rat hole mining is saving workers san

ನವದೆಹಲಿ (ನ.28): ಒಂದಲ್ಲ, ಎರಡಲ್ಲ ಬರೋಬ್ಬರಿ 398 ಗಂಟೆಗಳ ಕಾಲ ಸಿಲ್‌ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಎಲ್ಲಾ 41 ಕಾರ್ಮಿಕರನನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ನಿರಂತರ ಪರಿಶ್ರಮ, ತಂತ್ರಜ್ಞಾನ, ಆಧುನಿಕ ವಿಧಿವಿಧಾನಗಳನ್ನು ಬಳಸಿಕೊಂಡು ಉತ್ತರಕಾಶಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಕ್ಕೆ ಇಡೀ ದೇಶ ಭಾವುಕವಾಗಿದೆ. ವಿದೇಶದಿಂದ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿದರೂ, ಹೆಚ್ಚಿನವು ಕೈಕೊಟ್ಟಿದ್ದರು. ಈ ವೇಳೆ ಸುರಂಗ ಕೊರೆಯುತ್ತಿದ್ದ ರಕ್ಷಣಾ ಕಾರ್ಯಚರಣೆಯ ತಂಡಕ್ಕೆ ಹೊಳೆದಿದ್ದು ರ‍್ಯಾಟ್ ಹೋಲ್‌ ಮೈನಿಂಗ್‌. ಆದರೆ, ಭಾರತದಲ್ಲಿ ರ‍್ಯಾಟ್  ಹೋಲ್‌ ಮೈನಿಂಗ್‌ಗೆ 2014ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿಷೇಧ ವಿಧಿಸಿತ್ತು. ಆದರೆ, ಈ ಬಾರಿ ಕಾರ್ಮಿಕರ ರಕ್ಷಣೆಗೆ ನೆರವಾಗಿದ್ದು ಇದೇ ರ‍್ಯಾಟ್ ಹೋಲ್‌ ಮೈನಿಂಗ್‌ ತಂತ್ರ. ಇದು ಪ್ರಾಚೀನ ಗಣಿಗಾರಿಕೆ ತಂತ್ರವಾಗಿದ್ದು, ಈಶಾನ್ಯ ರಾಜ್ಯಗಳಲ್ಲಿ ಅದರಲ್ಲೂ ಮೇಘಾಲಯದಲ್ಲಿ ಬಹಳ ಹೆಸರುವಾಸಿಯಾದ ತಂತ್ರವಾಗಿತ್ತು. ಆದರೆ, ಇದರಲ್ಲಿ ಕಾರ್ಮಿಕರ ಸಾವಿನ ಸಂಖ್ಯೆಯ ಪ್ರಮಾಣ ಹೆಚ್ಚಿದ್ದ ಕಾರಣಕ್ಕೆ ಎನ್‌ಜಿಟಿ ಇದಕ್ಕೆ ನಿಷೇಧ ಹೇರಿತ್ತು.

ಕಾರ್ಮಿಕರನ್ನು ಹೊರತರಲು ಅಮೆರಿಕದಿಂದ ಆಗರ್‌ ಯಂತ್ರವನ್ನು ತರಲಾಗಿತ್ತು. ಆದರೆ, ಅವಶೇಷಗಳನ್ನು ತೆಗೆದು ರಂಧ್ರ ಕೊರೆಯುವಲ್ಲಿ ಇದು ವಿಫಲವಾಗಿತ್ತು. ಈ ಹಂತದಲ್ಲಿ ಹೊಳೆದಿದ್ದೇ ರ‍್ಯಾಟ್ ಹೋಲ್ ಮೈನಿಂಗ್. ಇದು ಕೈಯಿಂದ ಸುರಂಗ ಕೊರೆಯುವ ತಂತ್ರವಾಗಿದೆ. ತೀರಾ ಗೊತ್ತಿದ್ದವರಿಗಷ್ಟೇ ಈ ಮೈನಿಂಗ್‌ ಮಾಡಲು ಸಾಧ್ಯ. ಮೇಘಾಲಯದಲ್ಲಿ ಈಗಲೂ ಕೂಡ ಹೆಚ್ಚಿನ ಕಾರ್ಮಿಕರು ಈ ರೀತಿಯ ಮೈನಿಂಗ್‌ ಮಾಡುತ್ತಾರೆ. ಭೂಮಿಯಲ್ಲಿ ಸಣ್ಣ ಹೊಂಡಗಳನ್ನು ಅಗೆಯುತ್ತಾರೆ. ಇದರಲ್ಲಿ ಒಬ್ಬ ವ್ಯಕ್ತಿ ಮಾತ್ರವೇ ತೂರಿಕೊಂಡು ಹೋಗುವಷ್ಟು ಅಗಲವಾಗಿ ಕೊರೆಯಲಾಗುತ್ತದೆ. ವ್ಯಕ್ತ ಹೊಂಡವನ್ನು ಕೊರೆಯುತ್ತಾ ಕೊರೆಯುತ್ತಾ ಮುಂದೆ ಹೋಗಿ ಕಲ್ಲಿದ್ದಲನ್ನು ಸಂಗ್ರಹ ಮಾಡುತ್ತಾರೆ. ಇನ್ನೂ ಸುಲಭವಾಗಿ ಹೇಳುವುದಾದರೆ, ಇದರ ಹೆಸರನ್ನೇ ವಿಸ್ತರಣೆ ಮಾಡಿದರೂ ಸಾಕಾಗುತ್ತದೆ. ಮನೆಯಲ್ಲಿ ಇಲಿಗಳು ರಂಧ್ರ ಕರೆಯುತ್ತವೆಯಲ್ಲ. ಅದೇ ರೀತಿಯ ರಂಧ್ರಗಳು ಇವಾಗಿರುತ್ತದೆ. 

ವೃತ್ತಾಕಾರ ಮಾತ್ರವಲ್ಲದೆ, ಬಾಕ್ಸ್ ರೀತಿಯ ಮೈನಿಂಗ್‌ ಕೂಡ ನಡೆಯುತ್ತದೆ. 10 ರಿಂದ 100 ಚದರ ಮೀಟರ್ ವರೆಗಿನ ಆಯತಾಕಾರದ ತೆರೆಯುವಿಕೆಯನ್ನು ರಚಿಸಿ ಗಣಿಗಾರಿಕೆ ಮಾಡಲಾಗುತ್ತದೆ. ತರುವಾಯ, ಒಂದು ಲಂಬವಾದ ಹೊಂಡವನ್ನು ಅಗೆದು, 100 ರಿಂದ 400 ಅಡಿಗಳಷ್ಟು ಆಳವನ್ನು ತಲುಪುತ್ತದೆ. ಕಲ್ಲಿದ್ದಲಿನ ಅಂಶವನ್ನು ಗುರುತಿಸಿದ ನಂತರ, ಸಣ್ಣ ಇಲಿ-ರಂಧ್ರ-ಗಾತ್ರದ ಸುರಂಗಗಳನ್ನು ಅಡ್ಡಲಾಗಿ ಅಗೆದು, ಕಲ್ಲಿದ್ದಲನ್ನು ಹೊರತೆಗೆಯಲು ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ.

ನಿಷೇಧ ಮಾಡಿದ್ದು ಯಾಕೆ: ಈ ಪ್ರಕ್ರಿಯೆಯು ಗಣಿಗಾರರಿಗೆ ಅಪಾಯಕಾರಿ ಮಾತ್ರವಲ್ಲದೆ ಪರಿಸರಕ್ಕೆ ಹಾನಿಕಾರಕವಾಗಿದೆ. ರಾಟ್‌ ಹೋಲ್‌ ಗಣಿಗಾರಿಕೆಯು ನದಿಗಳ ಆಮ್ಲೀಕರಣ, ಅರಣ್ಯನಾಶ, ಮಣ್ಣಿನ ಸವೆತ ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಗಳ ಅಡ್ಡಿ ಮುಂತಾದ ಪರಿಸರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆಸಿಡ್ ಮೈನ್ ಡ್ರೈನೇಜ್ (AMD) ಎಂದು ಕರೆಯಲ್ಪಡುವ ಈ ಗಣಿಗಳಿಂದ ಆಮ್ಲೀಯ ಹರಿವು ವಿಶೇಷವಾಗಿ ಪ್ರಕೃತಿಗೆ ಹಾನಿಕಾರಕವಾಗಿದೆ. ನೀರಿನ ಗುಣಮಟ್ಟವನ್ನು ಕುಗ್ಗಿಸುತ್ತದೆ ಮತ್ತು ಪೀಡಿತ ಜಲಮೂಲಗಳಲ್ಲಿ ಜೀವವೈವಿಧ್ಯತೆಯನ್ನು ಕಡಿಮೆ ಮಾಡುತ್ತದೆ. ಈ ಮಾಲಿನ್ಯವು ಭಾರತದ ಗಡಿಯನ್ನು ಮೀರಿ ವಿಸ್ತರಿಸಿದೆ, ಬಾಂಗ್ಲಾದೇಶಕ್ಕೆ ಹರಿಯುವ ನದಿಗಳ ಮೇಲೂ ಪರಿಣಾಮ ಬೀರಿತ್ತು.

‘ಗಣಿ ಕಾರ್ಮಿಕರು ಪರದಾಡುತ್ತಿದ್ದಾರೆ, ಮೋದಿ ಫೋಟೋಗೆ ಪೋಸ್ ಕೊಡ್ತಿದ್ದಾರೆ’!

ರಾಟ್‌ ಹೋಲ್‌ ಗಣಿಗಾರಿಕೆಗೆ ಸ್ಥಳೀಯವಾಗಿರುವ ತೀವ್ರವಾದ ಪರಿಸರದ ಪರಿಣಾಮಗಳು ಮತ್ತು ಅಸುರಕ್ಷಿತ ಕಾರ್ಮಿಕ ಪರಿಸ್ಥಿತಿಗಳನ್ನು ಗುರುತಿಸಿ, ಭಾರತದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) 2014 ರಲ್ಲಿ ಈ ರೀತಿಯ ಗಣಿಗಾರಿಕೆಗೆ ನಿಷೇಧ ಹೇರಿತ್ತು. ಅತ್ಯಂತ ಅಪಾಯಕಾರಿ ಎನಿಸಿರುವ ರ‍್ಯಾಟ್ ಹೋಲ್ ಮೈನಿಂಗ್  ನಿಷೇಧವಾಗಿದ್ದರೂ, ಕಾರ್ಮಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಈಗ ಅನಿವಾರ್ಯವಾಗಿ ಬಳಕೆ ಮಾಡಬೇಕಾದ ಪರಿಸ್ಥಿತಿ ಬಂದಿದೆ.

Breaking: 17 ದಿನಗಳ ಬಳಿಕ ಸುರಂಗದಿಂದ ಹೊರಬಂದ ಕಾರ್ಮಿಕರು!

Latest Videos
Follow Us:
Download App:
  • android
  • ios