ಹಳೆಯದಾಗುತ್ತಿರುವ ಮಿಗ್-29ಕೆ: ಹೊಸ ಯುದ್ಧ ವಿಮಾನಗಳಿಗೆ ನೌಕಾಪಡೆಯ ಹುಡುಕಾಟ

ಈ ಯುದ್ಧ ವಿಮಾನಗಳ ನಿರ್ಮಾಣದ ಗುಣಮಟ್ಟಕ್ಕೆ ಸಂಬಂಧಿಸಿದ ಹಲವು ಅನುಮಾನಗಳ ಕಾರಣದಿಂದ, ಬಹುತೇಕ 41 ವಿಮಾನಗಳ ಸಂಪೂರ್ಣ ಬಳಗದ ಕಾರ್ಯಾಚರಣೆಯನ್ನು 2025ರ ಆರಂಭದಿಂದ ಸ್ಥಗಿತಗೊಳಿಸಲಾಗುತ್ತದೆ.

Indian Navys search for new fighter jets space expert girish linganna article gvd

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತೀಯ ನೌಕಾಪಡೆಯ ಬಳಿ ಪ್ರಸ್ತುತ ಭಾರತೀಯ ನಿರ್ಮಾಣದ ಐಎನ್ಎಸ್ ವಿಕ್ರಾಂತ್ ಮತ್ತು ರಷ್ಯನ್ ನಿರ್ಮಿತ ಐಎಸ್ಎಸ್ ವಿಕ್ರಮಾದಿತ್ಯ ಎಂಬ ಎರಡು ವಿಮಾನವಾಹಕ ನೌಕೆಗಳಿವೆ. ನೌಕಾಪಡೆಯ ಬಳಿ 41 ರಷ್ಯಾ ನಿರ್ಮಿತ ಮಿಗ್-29ಕೆ ಸೂಪರ್‌ಸಾನಿಕ್ ಯುದ್ಧ ವಿಮಾನಗಳ ಬಳಗವಿದ್ದು, ಇವುಗಳನ್ನು 2010ರಲ್ಲಿ ಸೇವೆಗೆ ಸೇರ್ಪಡೆಗೊಳಿಸಲಾಯಿತು. ಮಿಗ್-29 ಯುದ್ಧ ವಿಮಾನಗಳನ್ನು ವಿವಿಧ ರಾಷ್ಟ್ರಗಳಿಗೆ ಒದಗಿಸಲಾಗಿದೆಯಾದರೂ, ಮಿಗ್-29ಕೆ ಫಲ್ಕ್ರಮ್ ಡಿ ಆವೃತ್ತಿಯನ್ನು ಕೇವಲ ಭಾರತೀಯ ನೌಕಾಪಡೆ ಮಾತ್ರವೇ ಕಾರ್ಯಾಚರಿಸುತ್ತಿದೆ.

ಆದರೆ, ಈ ಯುದ್ಧ ವಿಮಾನಗಳ ನಿರ್ಮಾಣದ ಗುಣಮಟ್ಟಕ್ಕೆ ಸಂಬಂಧಿಸಿದ ಹಲವು ಅನುಮಾನಗಳ ಕಾರಣದಿಂದ, ಬಹುತೇಕ 41 ವಿಮಾನಗಳ ಸಂಪೂರ್ಣ ಬಳಗದ ಕಾರ್ಯಾಚರಣೆಯನ್ನು 2025ರ ಆರಂಭದಿಂದ ಸ್ಥಗಿತಗೊಳಿಸಲಾಗುತ್ತದೆ. ಈ ವಿಮಾನಗಳು 25 ವರ್ಷಗಳಿಗೂ ಕಡಿಮೆ ಅವಧಿಗೆ ಕಾರ್ಯಾಚರಿಸಿದ್ದರೂ, ಅವುಗಳನ್ನು ನಿವೃತ್ತಿಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ಈ ಯುದ್ಧ ವಿಮಾನಗಳು ಅವುಗಳ ನಿರ್ಮಾಣ ಗುಣಮಟ್ಟಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಹೊಂದಿದ್ದವು. ಆದ್ದರಿಂದ ಅವುಗಳನ್ನು ನಿಯಮಿತವಾಗಿ ತಪಾಸಣೆಗೊಳಿಸಬೇಕಾಗಿತ್ತು.

ಹಳೆಯದಾಗುತ್ತಿವೆ ಭಾರತದ ಮಿಗ್-21: ಹಾರಾಡುವ ಶವಪೆಟ್ಟಿಗೆಗಳಿಗೆ 2025ರಲ್ಲಿ ನಿವೃತ್ತಿ?

ಮಿಗ್-29ಕೆ ಯುದ್ಧ ವಿಮಾನಗಳನ್ನು ಮೂಲತಃ 25 ವರ್ಷಗಳ ಕಾರ್ಯಾಚರಣಾ ಅವಧಿಗೆ ಅಥವಾ 6,000 ಗಂಟೆಗಳ ಕಾರ್ಯಾಚರಣಾ ಸಮಯಕ್ಕೆ ಬಳಕೆಯಾಗುವಂತೆ ವಿನ್ಯಾಸಗೊಳಿಸಲಾಗಿತ್ತು. ಅವುಗಳ ಅವಧಿಯನ್ನು ಇನ್ನಷ್ಟು ವೃದ್ಧಿಸುವ ಕ್ರಮಗಳನ್ನು ಕೈಗೊಂಡು, ಅವುಗಳು ಇನ್ನೂ 10-15 ವರ್ಷಗಳ ಕಾಲ ಭಾರತೀಯ ನೌಕಾಪಡೆಗೆ ಸೇವೆ ಸಲ್ಲಿಸುವಂತೆ ಮಾಡಬಹುದಾಗಿತ್ತು. ದುರದೃಷ್ಟವಶಾತ್, ಭಾರತೀಯ ನೌಕಾಪಡೆ ಈ ಯುದ್ಧ ವಿಮಾನಗಳ ಸೇವಾವಧಿಯನ್ನು ವಿಸ್ತರಿಸದಿರುವ ನಿರ್ಧಾರ ಕೈಗೊಂಡಿದೆ. ಅದರ ಬದಲು, ಸಂಪೂರ್ಣ ಬಳಗವನ್ನು ನಿವೃತ್ತಿಗೊಳಿಸಿ, ಅವುಗಳನ್ನು ಪರಿತ್ಯಜಿಸಲಾಗುತ್ತದೆ.

ಮಹಾಲೇಖಪಾಲರ (ಸಿಎಜಿ) ವರದಿಯೊಂದರ ಪ್ರಕಾರ, ಭಾರತೀಯ ನೌಕಾಪಡೆಯ ಮಿಗ್-29ಕೆ ವಿಮಾನದ ಬಳಗ 21.3% ದಿಂದ 47.14% ಕಾರ್ಯಾಚರಣಾ ಯೋಗ್ಯವಾಗಿದೆ. ಈ ಅಂಶ, ಮಿಗ್-29ಕೆ ಬಳಗದ ವಿಮಾನಗಳು ವಿವಿಧ ಸಮಸ್ಯೆಗಳು ಮತ್ತು ಕುಂದುಕೊರತೆಗಳ ಕಾರಣದಿಂದ ಕಾರ್ಯಾಚರಣೆಗೆ ಯೋಗ್ಯವಾಗಿಲ್ಲ ಎಂದು ಸೂಚಿಸುತ್ತದೆ. ರಷ್ಯನ್ ಮಿಲಿಟರಿ ಕಾಂಪ್ಲೆಕ್ಸ್‌ನ ಗುಣಮಟ್ಟದ ಕೊರತೆಯ ಕಾರಣದಿಂದ, ವಿನ್ಯಾಸದಲ್ಲಿ ಸಮಸ್ಯೆ ಹೊಂದಿದ್ದ 40 ಇಂಜಿನ್‌ಗಳನ್ನು ಹಿಂಪಡೆಯಬೇಕಾಗಿ ಬಂತು.

ಬದಲಿ ವಿಮಾನಗಳ ವ್ಯವಸ್ಥೆ: ಭಾರತೀಯ ನೌಕಾಪಡೆ 2035ರ ಬಳಿಕ, ಮಿಗ್-29ಕೆ ಯುದ್ಧ ವಿಮಾನಗಳ ಬದಲಿಗೆ 45 ಟ್ವಿನ್ ಇಂಜಿನ್ ಡೆಕ್ ಬೇಸ್ಡ್ ಫೈಟರ್ಸ್ (TEDBF) ಬಳಸಿಕೊಳ್ಳಲು ಉದ್ದೇಶಿಸಿದೆ. ಆದರೆ, ಪ್ರಸ್ತುತ ಇರುವ ವಿಮಾನಗಳು ಹಳೆಯದಾಗುವುದರ ಜೊತೆಗೆ ಕಾಣಿಸಿಕೊಳ್ಳುವ ಏರ್ ಫ್ರೇಮ್ ದೋಷಗಳು, ವ್ಯತ್ಯಾಸಗಳು ಮತ್ತು ಇತರ ಸಮಸ್ಯೆಗಳ ಕಾರಣದಿಂದ ಅವುಗಳನ್ನು 2030ರ ಬಳಿಕ ಬಳಸಿಕೊಳ್ಳಲು ಸಾಧ್ಯವಾಗುವ ಕುರಿತು ಅನುಮಾನಗಳಿವೆ.

ಮಿಗ್-29ಕೆ ಯುದ್ಧ ವಿಮಾನಗಳ ಬಳಗದ ಮೇಲಿನ ಕಾರ್ಯಾಚರಣಾ ಒತ್ತಡಗಳನ್ನು ನಿವಾರಿಸುವ ಸಲುವಾಗಿ, ಭಾರತೀಯ ನೌಕಾಪಡೆ 2030ರ ಒಳಗಾಗಿ 26 ರಫೇಲ್ ಎಂ ಯುದ್ಧ ವಿಮಾನಗಳನ್ನು ಖರೀದಿಸುವ ಉದ್ದೇಶ ಹೊಂದಿದೆ. ಈ ವಿಮಾನಗಳ ಖರೀದಿಯ ಕುರಿತಾದ ಅಧಿಕೃತ ಘೋಷಣೆ ಸದ್ಯದಲ್ಲೇ ಹೊರಬೀಳುವ ಕುರಿತು ವರದಿಗಳಿದ್ದು, 2024ರ ಲೋಕಸಭಾ ಚುನಾವಣೆಯ ಬಳಿಕ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಗಳಿವೆ.

ಮಿಗ್-29ಕೆ ಫಲ್ಕ್ರಮ್ ಡಿ: ಮಿಗ್-29ಕೆ ಫಲ್ಕ್ರಮ್ ಡಿ ಒಂದು ಅವಳಿ ಇಂಜಿನ್‌ಗಳ, ಬಹುಪಾತ್ರಗಳ ನೌಕಾಪಡೆಯ ಯುದ್ಧ ವಿಮಾನವಾಗಿದ್ದು, ರಷ್ಯನ್ ನೌಕಾಪಡೆ ಇದನ್ನು 2010ರಲ್ಲಿ ಬಳಕೆಗೆ ತಂದಿತು. ಇದು ಡೆಕ್ ಆಧಾರಿತ ಕಾರ್ಯಾಚರಣೆಗಳಿಗೆ ಸೂಕ್ತವಾದ ಯುದ್ಧ ವಿಮಾನ ಎನ್ನಲಾಗಿದೆ. ಮಿಗ್-29ಕೆ ಎಂಬಲ್ಲಿ 'ಕೆ' ಎನ್ನುವುದು 'ಕೊರಾಬೆಲ್ನೊಗೊ ಬಜಿ಼ರೊವಾನ್ಯ' ಎಂಬುದರ ಹೃಸ್ವರೂಪವಾಗಿದ್ದು, ಡೆಕ್ ಆಧಾರಿತ ಎಂಬ ಅರ್ಥ ಹೊಂದಿದೆ. ಈ ಹೆಸರೇ ವಿಮಾನ ನೌಕಾಪಡೆಯ ಬಳಕೆಯದು ಎಂದು ಸಾಬೀತುಪಡಿಸಿದ್ದು, ವಿವಿಧ ಮಾದರಿಗಳ 1,500ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿರುವ ಮಿಗ್-29 ಗುಂಪಿನಿಂದ ವಿಭಿನ್ನವಾಗಿಸುತ್ತದೆ. ಮಿಗ್-29 ಯುದ್ಧ ವಿಮಾನವನ್ನು ಅಮೆರಿಕಾದ ಎಫ್-14 ಟಾಮ್ ಕ್ಯಾಟ್ ಯುದ್ಧ ವಿಮಾನಕ್ಕೆ ಪ್ರತಿಸ್ಪರ್ಧಿಯಾಗಿ, ವಾಯುಪಾರಮ್ಯ ಹೊಂದಿರುವ ವಿಮಾನವಾಗಿ ಅಭಿವೃದ್ಧಿ ಪಡಿಸಲಾಗಿದೆ.

ಮಿಗ್-29ಕೆ ತನ್ನ ನ್ಯಾಟೋ ಹೆಸರಾದ ಫಲ್ಕ್ರಮ್ ಡಿ ಎಂಬುದಾಗಿಯೂ ಗುರುತಿಸಲ್ಪಟ್ಟಿದ್ದು, ಅವಳಿ ಇಂಜಿನ್ ಹೊಂದಿರುವ, ಒಬ್ಬ ಪೈಲಟ್ ಬಳಸಬಲ್ಲ, ಬಹುಪಾತ್ರಗಳನ್ನು ನಿರ್ವಹಿಸಬಲ್ಲ ನೌಕಾಪಡೆಯ ಯುದ್ಧ ವಿಮಾನವಾಗಿದೆ. ಇದರ ಆಧುನಿಕ ವೈಶಿಷ್ಟ್ಯಗಳ ಹೊರತಾಗಿಯೂ, ಇದನ್ನು ಭಾರತೀಯ ನೌಕಾಪಡೆ ವ್ಯಾಪಕವಾಗಿ ಬಳಸುತ್ತಾ ಬಂದಿದೆ. ಭಾರತೀಯ ನೌಕಾಪಡೆಯ ಬಳಿ ಅಂದಾಜು 20 ಮಿಗ್-29ಕೆ ವಿಮಾನಗಳು ಕಾರ್ಯಾಚರಿಸುತ್ತಿವೆ. ಇವುಗಳನ್ನು ಬಳಸಲು ಯೋಗ್ಯವಾದ ವಿಮಾನವಾಹಕ ನೌಕೆಯ ಕೊರತೆ ಮಿಗ್-29ಕೆ ಫಲ್ಕ್ರಮ್ ಡಿ ವಿಮಾನಗಳು ರಷ್ಯನ್ ನೌಕಾಪಡೆಗೆ ಅನವಶ್ಯಕವಾಗುವಂತೆ ಮಾಡಿದೆ.

ಮಿಗ್-29ಕೆ ವಿಮಾನದ ರಚನೆ: ಮಿಗ್-29ಕೆ ಫಲ್ಕ್ರಮ್ ಡಿ ಯುದ್ಧ ವಿಮಾನ ಅವಳಿ ಆರ್‌ಡಿ-33 ಎಂಕೆ ಇಂಜಿನ್‌ಗಳನ್ನು ಹೊಂದಿದ್ದು, ಅತ್ಯಂತ ಎತ್ತರದಲ್ಲಿ ಸಾಗುವಾಗ ಗರಿಷ್ಠ ಮ್ಯಾಕ್ 2 (ಅಂದಾಜು ಪ್ರತಿ ಗಂಟೆಗೆ 1,500 ಮೈಲಿ) ವೇಗದಲ್ಲಿ ಮತ್ತು ಕಡಿಮೆ ಎತ್ತರದಲ್ಲಿ ಗಂಟೆಗೆ 900 ಮೈಲಿಗಳ ವೇಗದಲ್ಲಿ ಚಲಿಸುತ್ತದೆ. ರಕ್ಷಣಾ ಉದ್ದೇಶಗಳಿಗೆ, ಮಿಗ್-29ಕೆ ಯುದ್ಧ ವಿಮಾನ ರೇಡಾರ್ ಅಬ್ಸಾರ್ಬಿಂಗ್ ಕೋಟಿಂಗ್ ಮತ್ತು ಇಲೆಕ್ಟ್ರಾನಿಕ್ ವಾರ್‌ಫೇರ್ ವ್ಯವಸ್ಥೆಗಳನ್ನು ಹೊಂದಿದ್ದು, ಸಮಕಾಲೀನ ವಾಯು ಯುದ್ಧದಲ್ಲಿ ಹೆಚ್ಚಿನ ಬಾಳಿಕೆಯನ್ನು ಹೊಂದಿದೆ.

ಮಿಗ್-29ಕೆ ಫಲ್ಕ್ರಮ್ ಡಿ ಎಂಟು ಹಾರ್ಡ್ ಪಾಯಿಂಟ್‌ಗಳನ್ನು ಹೊಂದಿದ್ದು, ಬಹುತೇಕ 10,000 ಎಲ್‌ಬಿಎಸ್ (ಅಂದಾಜು 4,536 ಕೆಜಿ) ಆಯುಧಗಳನ್ನು ಒಯ್ಯಬಲ್ಲದಾಗಿದೆ. ಇದು ಆಕಾಶದಿಂದ ಆಕಾಶಕ್ಕೆ, ಆಗಸದಿಂದ ಭೂಮಿಗೆ ಮತ್ತು ಆ್ಯಂಟಿ ಶಿಪ್ ಕಾರ್ಯಾಚರಣೆಗಳನ್ನು ನಡೆಸುವ ವಿವಿಧ ಶ್ರೇಣಿಗಳ ಆಯುಧಗಳನ್ನು ಹೊಂದಿದೆ. ಮಿಗ್-29ರ ನೌಕಾಪಡೆಯ ಆವೃತ್ತಿ ಸಕ್ರಿಯ ರೇಡಾರ್ ನಿರ್ದೇಶನ ಹೊಂದಿರುವ ವಿಂಪೆಲ್ ಎನ್‌ಪಿಒ ಆರ್-77 ದೀರ್ಘ ವ್ಯಾಪ್ತಿಯ ಕ್ಷಿಪಣಿಗಳು, ಗಾಳಿಯಿಂದ ಗಾಳಿಗೆ ದಾಳಿ ನಡೆಸುವ ಸಲುವಾಗಿ ರೇಡಾರ್ ನಿರ್ದೇಶಿತ ಆರ್-27 ಕ್ಷಿಪಣಿಗಳು, ನೌಕೆಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಕೆಎಚ್-31 ಮತ್ತು ಕೆಎಚ್-35 ಸಬ್‌ಸಾನಿಕ್ ಕ್ಷಿಪಣಿಗಳು ಮತ್ತು ಗ್ಲೈಡ್ ಬಾಂಬ್‌ಗಳು ಮತ್ತು ಸಾಮಾನ್ಯ ಬಾಂಬ್‌ಗಳನ್ನು ಹೊಂದಿದೆ.

ಸಂಬಂಧ ವೃದ್ಧಿಯ ಹಾದಿ: ಭಾರತದಿಂದ ಮಾರಿಷಸ್‌ನಲ್ಲಿ ಅಭಿವೃದ್ಧಿ!

ಭಾರತೀಯ ವಾಯುಪಡೆ ಮಿಗ್-29 ಸರಣಿಯ ಯುದ್ಧ ವಿಮಾನಗಳೊಡನೆ ಸಾಕಷ್ಟು ಅನುಭವ ಹೊಂದಿದ್ದ ಕಾರಣದಿಂದ ಮಿಗ್-29ಕೆ ಯುದ್ಧ ವಿಮಾನವನ್ನು ಆಯ್ಕೆ ಮಾಡಿಕೊಳ್ಳಲಾಯಿತು. 1980ರ ದಶಕದ ಕೊನೆಯ ಭಾಗದಿಂದ, ಭಾರತೀಯ ವಾಯುಪಡೆ ಅಂದಾಜು 60 ಮಿಗ್-29ಎ ವಿಮಾನಗಳನ್ನು ಬಳಸಿದೆ. ಈ ವಿಮಾನಗಳನ್ನು ಬಳಿಕ ಯುಪಿಜಿ ಆವೃತ್ತಿಗೆ ಅಭಿವೃದ್ಧಿ ಪಡಿಸಲಾಯಿತು. ಸೋವಿಯತ್ ವಾಯುಪಡೆಯ ಬಳಿಕ, ಮಿಗ್-29 ವಿಮಾನವನ್ನು ಬಳಸಿದ ಎರಡನೇ ಗ್ರಾಹಕ ಭಾರತೀಯ ವಾಯುಪಡೆ ಆಗಿದ್ದುದೂ ನೌಕಾಪಡೆ ಮಿಗ್-29ಕೆ ವಿಮಾನವನ್ನು ಖರೀದಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು.

Latest Videos
Follow Us:
Download App:
  • android
  • ios