Asianet Suvarna News Asianet Suvarna News

Make in Indiaದಿಂದ ಭಾರತದಲ್ಲಿ ಶಸ್ತ್ರಾಸ್ತ್ರಗಳ ಕೊರತೆ..! ಚೀನಾ, ಪಾಕ್‌ ವಿರುದ್ಧ ಪ್ರಾಬಲ್ಯ ಸಾಧಿಸಲು ಹಿನ್ನಡೆ..?

 ಸ್ವದೇಶಿ ಶಸ್ತ್ರಾಸ್ತ್ರಗಳ ಉತ್ಪಾದನಾ ಕಾರ್ಯ ವಿಳಂಬವಾಗಿದೆ. ಜತೆಗೆ, ಹಳೆಯ ಶಸ್ತ್ರಾಸ್ತ್ರಗಳ ಜೀವಿತಾವಧಿ ಮೀರುತ್ತಿರುವುದರಿಂದ, ಇವುಗಳನ್ನು ಬದಲಿಸುವ ಅಗತ್ಯವಿದೆ. ಜತೆಗೆ, ಚೀನಾ, ಪಾಕಿಸ್ತಾನದ ವಿರುದ್ಧ ಹೋರಾಡಲು ಹೆಚ್ಚು ಶಸ್ತ್ರಾಸ್ತ್ರಗಳ ಅಗತ್ಯವೂ ಇದೆ ಎಂದು ಅಧಿಕಾರಿಗಳು ಹೇಳಿರುವ ಬಗ್ಗೆ ಬ್ಲೂಮ್‌ಬರ್ಗ್‌ ವರದಿ ಮಾಡಿದೆ. 

india running out of weapons due to make in india policy bloomberg report ash
Author
First Published Sep 8, 2022, 4:23 PM IST

ರಕ್ಷಣಾ ವ್ಯವಸ್ಥೆಗಳ (Defense Systems) ದೇಶೀಯ ಉತ್ಪಾದನೆ (Domestic Manufacturing) ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದಿಂದ ಭಾರತವನ್ನು ಚೀನಾ ಮತ್ತು ಪಾಕಿಸ್ತಾನದ ನಿರಂತರ ಬೆದರಿಕೆಗಳಿಗೆ ಗುರಿಯಾಗುವಂತೆ ಮಾಡುತ್ತಿದೆ ಎಂದು ಈ ವಿಷಯದ ಬಗ್ಗೆ ಜ್ಞಾನ ಹೊಂದಿರುವ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ. ಈ ನೀತಿಯಿಂದ ಹಲವು ವರ್ಷಗಳಿಂದ ಬಳಕೆಯಲ್ಲಿರುವ ಭಾರತದ ವಾಯುಪಡೆ (Airforce), ಸೇನೆ (Army) ಮತ್ತು ನೌಕಾಪಡೆಯ (Navy) ಶಸ್ತ್ರಾಸ್ತ್ರಗಳನ್ನು ಬದಲಿಸಲು ಕೆಲವು ನಿರ್ಣಾಯಕ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ 2026 ರ ವೇಳೆಗೆ ಭಾರತಕ್ಕೆ ಹೆಲಿಕಾಪ್ಟರ್‌ಗಳ ಕೊರತೆಯನ್ನು ಉಂಟುಮಾಡುವ ಅಪಾಯವಿದೆ ಮತ್ತು 2030 ರ ವೇಳೆಗೆ ನೂರಾರು ಫೈಟರ್ ಜೆಟ್‌ಗಳ ಕೊರತೆಯಾಗಬಹುದು ಎಂದೂ ಅಧಿಕಾರಿಗಳು ಹೇಳಿರುವ ಬಗ್ಗೆ ಬ್ಲೂಮ್‌ಬರ್ಗ್‌ (Bloomberg) ವರದಿ ಮಾಡಿದೆ.

2014 ರಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ವಿದೇಶಿ ವಿನಿಮಯದ ಹೊರಹರಿವುಗಳನ್ನು ಕಡಿಮೆ ಮಾಡಲು ಮೊಬೈಲ್ ಫೋನ್‌ಗಳಿಂದ ಯುದ್ಧ ವಿಮಾನಗಳವರೆಗೆ ಎಲ್ಲವನ್ನೂ ಭಾರತದಲ್ಲಿ ನಿರ್ಮಿಸಲು ಪ್ರಧಾನಿ ಮೋದಿ "ಮೇಕ್ ಇನ್ ಇಂಡಿಯಾ" (Make in India) ನೀತಿಯನ್ನು ಅನಾವರಣಗೊಳಿಸಿದರು. ಆದರೆ ಈ ಬೆಳವಣಿಗೆ ನಡೆದು 8 ವರ್ಷಗಳ ನಂತರವೂ ಮಿಲಿಟರಿ ಹಾರ್ಡ್‌ವೇರ್‌ನ ವಿಶ್ವದ ಅತಿದೊಡ್ಡ ಆಮದುದಾರ ದೇಶ, ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸ್ಥಳೀಯವಾಗಿ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿಲ್ಲ ಮತ್ತು ಸರ್ಕಾರಿ ನಿಯಮಗಳು ಆಮದುಗಳನ್ನು ನಿರ್ಬಂಧಿಸುತ್ತಿವೆ ಎಂದೂ ಬ್ಲೂಮ್‌ಬರ್ಗ್‌ ವರದಿ ಹೇಳುತ್ತದೆ.

Indian Economy: ಸ್ವಾತಂತ್ರ್ಯ ನಂತರದ 75 ವರ್ಷಗಳಲ್ಲಿ ಭಾರತ ಸಾಧಿಸಿದ್ದೇನು? ಸಾಧಿಸಬೇಕಾದ್ದೇನು?

ಪ್ರಧಾನಿ ಮೋದಿಯವರ ಕಾರ್ಯಕ್ರಮವು ಮಿಲಿಟರಿ ಖರೀದಿಯ ಸ್ವರೂಪ ಅಥವಾ ಅದನ್ನು ಎಲ್ಲಿಂದ ಖರೀದಿಸಲಾಗಿದೆ ಎಂಬುದರ ಆಧಾರದ ಮೇಲೆ 30% - 60% ರಷ್ಟು ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿ ತಯಾರಿಸಿದ ಘಟಕಗಳನ್ನು ಕಡ್ಡಾಯಗೊಳಿಸುತ್ತದೆ. ಈ ಹಿನ್ನೆಲೆ, 2020 ರಿಂದ ಹಿಮಾಚಲ ಗಡಿಯಲ್ಲಿ ಹೆಚ್ಚಿನ ಸೇನೆ ನಿಯೋಜಿಸಿರುವ ಪಾಕಿಸ್ತಾನ ಮತ್ತು ಚೀನಾದಿಂದ ಹೆಚ್ಚಿನ ಅಪಾಯಗಳನ್ನು ಎದುರಿಸುತ್ತಿರುವಂತೆಯೇ ಭಾರತದ ಮಿಲಿಟರಿ ಸನ್ನದ್ಧತೆಯು ಇನ್ನಷ್ಟು ಹದಗೆಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚೀನಾದ ಗಡಿಯಲ್ಲಿ ಆಕ್ರಮಣವನ್ನು ತಡೆಯಲು ಭಾರತಕ್ಕೆ 2 ಪಟ್ಟು ಸೈನಿಕರ ಅಗತ್ಯವಿದೆ ಎಂದು ಒಬ್ಬ ಅಧಿಕಾರಿ ಹೇಳಿದರು. ಭಾರತದ ಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಅಧಿಕಾರಿಗಳೊಂದಿಗೆ ಈ ವಿಚಾರವಾಗಿ ಬ್ಲೂಮ್‌ಬರ್ಗ್‌ ಮಾತನಾಡಿದೆ ಎಂದು ತಿಳಿದುಬಂದಿದೆ. 

ಸದ್ಯ, ಭಾರತದ ಸೇನೆಯು ಕೆಲವು ರಕ್ಷಣಾ ವಸ್ತುಗಳ ಸ್ಥಳೀಯ ಖರೀದಿಗಳನ್ನು ಹೆಚ್ಚಿಸಿದ್ದರೂ, ದೇಶವು ಇನ್ನೂ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳು ಮತ್ತು ಅವಳಿ-ಎಂಜಿನ್ ಫೈಟರ್‌ ಅನ್ನು ಉತ್ಪಾದಿಸುವುದಿಲ್ಲ. ಮೋದಿ ಸರ್ಕಾರವು ವಾಯುಪಡೆಯು ಸ್ವದೇಶಿ ನಿರ್ಮಿತ ಸಿಂಗಲ್‌-ಎಂಜಿನ್ ಯುದ್ಧವಿಮಾನಗಳನ್ನು ಆಯ್ಕೆ ಮಾಡಬೇಕೆಂದು ಬಯಸುತ್ತದೆ. ಈ ಹಿನ್ನೆಲೆ, ವಿದೇಶಿ ತಯಾರಕರಿಂದ ಯುದ್ಧವಿಮಾನಗಳನ್ನು ಖರೀದಿಸುವ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಇದರಿಂದ ಅವುಗಳ ಪೂರೈಕೆ ಕಡಿಮೆಯಾಗಿದೆ. 

ಇನ್ನು, ವಾಯುಪಡೆಯ ಪರಿಸ್ಥಿತಿಯೂ ಭೀಕರವಾಗಿದೆ. 2030ರ ವೇಳೆಗೆ, ಭಾರತೀಯ ವಾಯುಪಡೆಯು 30 ಕ್ಕಿಂತ ಕಡಿಮೆ ಫೈಟರ್ ಸ್ಕ್ವಾಡ್ರನ್‌ಗಳನ್ನು ಹೊಂದಬಹುದು ಎಂದು ವರದಿ ಹೇಳುತ್ತಿದೆ. ಆದರೆ, ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳ ಗಡಿಗಳನ್ನು ಸಮರ್ಪಕವಾಗಿ ರಕ್ಷಿಸಲು 42 ಫೈಟರ್ ಸ್ಕ್ವಾಡ್ರನ್‌ಗಳ ಅಗತ್ಯವಿದೆ ಎಂದೂ ಮಿಲಿಟರಿ ಹೇಳಿರುವ ಬಗ್ಗೆಯೂ ಅಧಿಕಾರಿಗಳು ತಿಳಿಸಿದ್ದಾರೆ. 

ಬೆಂಗಳೂರು ಮೂಲದ ಸರ್ಕಾರಿ ಸ್ವಾಮ್ಯದ ರಕ್ಷಣಾ ತಯಾರಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಪ್ರತಿ ವರ್ಷ 8 ಸ್ಥಳೀಯ ತೇಜಸ್ ಯುದ್ಧವಿಮಾನಗಳನ್ನು ಮಾತ್ರ ಉತ್ಪಾದಿಸುತ್ತದೆ. ಕಂಪನಿಯು 2026 ರ ವೇಳೆಗೆ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಯೋಜಿಸಿದೆ. ಆದರೆ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದಿಂದ ಉಂಟಾದ ಪೂರೈಕೆ-ಸರಪಳಿ ಅಡೆತಡೆಗಳಿಂದಾಗಿ ವಿಳಂಬ ಉಂಟಾಗಬಹುದು ಎನ್ನಲಾಗಿದೆ.

SBI Report: 2029 ರ ವೇಳೆಗೆ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ..!

ಜತೆಗೆ, ಪ್ರಸ್ತುತ ಬಳಕೆಯಲ್ಲಿರುವ ಹೆಲಿಕಾಪ್ಟರ್‌ಗಳು ಈಗಾಗಲೇ 30 ವರ್ಷಗಳ ಜೀವಿತಾವಧಿಯನ್ನು ಮೀರಿವೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿನ್ನೆಲೆ ಹೆಲಿಕಾಪ್ಟರ್‌ಗಳ ಸಮಸ್ಯೆಯೂ ಇದೆ. ಇದರೊಂದಿಗೆ, ಭಾರತದ ಜಲಾಂತರ್ಗಾಮಿ ನೌಕಾಪಡೆಯು 4 ದಶಕಗಳ ಹಿಂದೆ ಖರೀದಿಸಿದ ಸೀಮಿತ ಸಂಖ್ಯೆಯ ಹೆವಿವೇಟ್ ಟಾರ್ಪಿಡೊಗಳ ಮೇಲೆ ಅವಲಂಬಿತವಾಗಿದೆ. ಹಾಗೂ, ಸ್ವದೇಶಿ ತಯಾರಿಕೆ ಕೆಲಸ ವಿಳಂಬವಾಗಿದೆ. 

Follow Us:
Download App:
  • android
  • ios