Asianet Suvarna News Asianet Suvarna News

Indian Economy: ಸ್ವಾತಂತ್ರ್ಯ ನಂತರದ 75 ವರ್ಷಗಳಲ್ಲಿ ಭಾರತ ಸಾಧಿಸಿದ್ದೇನು? ಸಾಧಿಸಬೇಕಾದ್ದೇನು?

ಭಾರತದ ಸ್ವಾತಂತ್ರ್ಯದ ಎರಡು ವರ್ಷಗಳ ನಂತರ ಅಕ್ಟೋಬರ್‌ 1, 1949ರಂದು ಚೀನಾಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಅದೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಒಂದು ವರ್ಷದ ನಂತರ ಆಗಸ್ಟ್ 15, 1948ರಂದು ದಕ್ಷಿಣ ಕೊರಿಯಾಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆದರೂ ಅವುಗಳು ಭಾರತಕ್ಕೆ ಹೋಲಿಸಿದರೆ ಹೆಚ್ಚಿನ ಪ್ರಗತಿ ಸಾಧಿಸಿವೆ. ಆದರೆ ಭಾರತಕ್ಕೆ ಇನ್ನೂ ಸಾಕಷ್ಟು ಅವಕಾಶಗಳಿವೆ. 

india growing into a powerful economy achievements after independence in economy ash
Author
First Published Sep 4, 2022, 11:46 AM IST

ಭಾರತೀಯರು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ರಾಷ್ಟ್ರೀಯ ಹಬ್ಬವಾಗಿ ಬಹಳ ವಿಜೃಂಭಣೆಯಿಂದ ಆಚರಿಸಿದ್ದಾರೆ. ‘ಹರ್‌ ಘರ್‌ ತಿರಂಗಾ’ ಉಪಕ್ರಮಕ್ಕೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಮನೆಗಳು ರಾಷ್ಟ್ರ ಧ್ವಜಾರೋಹಣ ಮಾಡಿವೆ. ಈ ಎಲ್ಲ ಸಂಭ್ರಮಾಚರಣೆ ಜೊತೆಗೆ ನಾವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಗೌರವ ಹಾಗೂ ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕು. ಅಲ್ಲದೇ ಸ್ವತಂತ್ರ ಭಾರತದ ಪ್ರಯಾಣವನ್ನು ಸಿಂಹಾವಲೋಕನ ಮಾಡಿ ಆರ್ಥಿಕವಾಗಿ ಹೆಚ್ಚು ಬಲಶಾಲಿಯಾಗಲು ಭವಿಷ್ಯದ ಮಾರ್ಗವನ್ನು ರೂಪಿಸಲು ಮುಂದಾಗಬೇಕು.

ಸ್ವಾತಂತ್ರ್ಯದ ಬಳಿಕ ಸ್ಥಿತಿ

ಭಾರತವು ದುರ್ಬಲ ಆರ್ಥಿಕತೆಯನ್ನು ಬ್ರಿಟಿಷರಿಂದ ಪಡೆದುಕೊಂಡಿತು. ಕೃಷಿಯು ಬಹುಸಂಖ್ಯಾತರ ಜೀವನೋಪಾಯದ ಮುಖ್ಯ ಮೂಲವಾಗಿತ್ತು. ದೇಶದ ಜನಸಂಖ್ಯೆಯ ಸುಮಾರು ಶೇ.85ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದರು. ಯಾವುದೇ ಕೃಷಿ ಮೂಲಸೌಕರ್ಯವಿಲ್ಲದೆ, ಕಡಿಮೆ ಮಟ್ಟದ ಉತ್ಪಾದಕತೆಯಿಂದಾಗಿ ಕೃಷಿ ಕ್ಷೇತ್ರವು ನಿಶ್ಚಲತೆ ಮತ್ತು ನಿರಂತರ ಕ್ಷೀಣತೆಯನ್ನು ಎದುರಿಸುತ್ತಿತ್ತು. ಬ್ರಿಟಿಷರಿಂದಾಗಿ ಭಾರತೀಯ ಕರಕುಶಲ ಮತ್ತು ಸಣ್ಣ ಕೈಗಾರಿಕಾ ಉದ್ಯಮ ವ್ಯವಸ್ಥಿತವಾಗಿ ಅವನತಿಯ ಅಂಚಿನತ್ತ ಸಾಗಿತ್ತು. ಒಂದು ಕಾಲದಲ್ಲಿ ಸಿದ್ಧಪಡಿಸಿದ ಉತ್ಪನ್ನಗಳ ರಫ್ತುದಾರನಾಗಿದ್ದ ಭಾರತವು ಬ್ರಿಟನ್‌ ಕಾರ್ಖಾನೆಗಳಿಂದ ಕಚ್ಚಾವಸ್ತುಗಳ ಸರಬರಾಜುದಾರ ಮತ್ತು ಸಿದ್ಧಪಡಿಸಿದ ಸರಕುಗಳ ಗ್ರಾಹಕನಾಗಿತ್ತು. ಇದರಿಂದಾಗಿ ಕೆಲವು ಹತ್ತಿ ಮತ್ತು ಸೆಣಬಿನ ಜವಳಿ ಗಿರಣಿಗಳನ್ನು ಹೊರತುಪಡಿಸಿ, ಆಧುನಿಕ ಕೈಗಾರಿಕೆಗಳ ಯಾವುದೇ ಅಭಿವೃದ್ಧಿ ಆಗಿರಲಿಲ್ಲ.

ಜನಸಾಮಾನ್ಯರ ಜೀವನ ಮಟ್ಟವು ಕೆಳಮಟ್ಟದ್ದಾಗಿತ್ತು. ಸಾಕ್ಷರತೆಯ ಮಟ್ಟವು ಶೇ.16ಕ್ಕಿಂತ ಕಡಿಮೆಯಿತ್ತು. ಅದರಲ್ಲೂ ಸ್ತ್ರೀ ಸಾಕ್ಷರತೆ ಕೇವಲ ಶೇ.7 ರಷ್ಟು ಇತ್ತು. ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಅಸಮರ್ಪಕವಾಗಿದ್ದವು ಹಾಗೂ ಅವು ಜನಸಾಮಾನ್ಯರಿಗೆ ಲಭ್ಯವಿರಲಿಲ್ಲ. ಶಿಶು ಮರಣ ಪ್ರಮಾಣವು ಸಾವಿರಕ್ಕೆ 218 ಆಗಿತ್ತು. ಜೀವಿತಾವಧಿ ಕೇವಲ 44 ವರ್ಷಗಳಷ್ಟು ಮಾತ್ರವಿತ್ತು. ಜನನ ಪ್ರಮಾಣವು ಪ್ರತಿ ಸಾವಿರಕ್ಕೆ 48 ಮತ್ತು ಸಾವಿನ ಪ್ರಮಾಣ ಸಾವಿರಕ್ಕೆ 40 ಆಗಿತ್ತು. ಬಹುಪಾಲು ಜನರು ಬಡವರಾಗಿದ್ದರು. ಭಾರತಕ್ಕೆ ಬಂಡವಾಳ ಮತ್ತು ತಂತ್ರಜ್ಞಾನದ ಕೊರತೆ ಇತ್ತು. ದೇಶದ ಆರ್ಥಿಕತೆ ದುರ್ಬಲವಾಗಿತ್ತು. ಆದರೆ ಭಾರತೀಯರ ಆಕಾಂಕ್ಷೆ ಹೆಚ್ಚಿತ್ತು. ಹಾಗೆಯೇ ನಮ್ಮ ಉತ್ಸಾಹಭರಿತ ನಾಯಕರ ಆಶಯವೂ ಇತ್ತು!

SBI Report: 2029 ರ ವೇಳೆಗೆ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ..!

ದೇಶೀಯ ಉತ್ಪನ್ನ ಏರಿಕೆ

1951-52ರಲ್ಲಿ 4,96,848 ಕೋಟಿ ತೂಪಾಯಿ ಗಳಷ್ಟಿದ್ದ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 2021-22ರಲ್ಲಿ 1,47,53,535 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಜಿಡಿಪಿ ಈ ಅವಧಿಯಲ್ಲಿ ಶೇ. 29.69ರಷ್ಟು ಏರಿಕೆಯಾಗಿದೆ. ಆರ್ಥಿಕ ವರ್ಷ 2022ರ ಪ್ರಸ್ತುತ ಬೆಲೆಗಳಲ್ಲಿ, ಭಾರತದ ಜಿಡಿಪಿ 3.05 ಟ್ರಿಲಿಯನ್‌ ತಲುಪುವುದು ಎಂದು ಅಂದಾಜಿಸಲಾಗಿದೆ. ಅದೇ ರೀತಿ ಭಾರತೀಯರ ತಲಾ ಆದಾಯವು 1950-51ರಲ್ಲಿ 274 ರೂ. ಗಳಷ್ಟಿತ್ತು. 2021-22ರಲ್ಲಿ 1,50,326 ರೂಪಾಯಿಗಳಿಗೆ ಏರಿಕೆಯಾಗಿದೆ. 2011-12ರ ನಿರಂತರ ಬೆಲೆಯಲ್ಲಿ 1950-51ಕ್ಕೆ ಹೋಲಿಸಿದರೆ ಭಾರತೀಯರ ತಲಾ ಆದಾಯವು ಇಂದು 7 ಪಟ್ಟು ಹೆಚ್ಚಾಗಿದೆ ಎನ್ನಬಹುದಾಗಿದೆ.

ಬಂಡವಾಳದಲ್ಲಿ ಹೆಚ್ಚಳ

ಸ್ವಾತಂತ್ರ್ಯದ ಸಮಯದಲ್ಲಿ ಭಾರತವನ್ನು ಬಂಡವಾಳ ಕೊರತೆಯ ದೇಶವೆಂದು ಪರಿಗಣಿಸಲಾಗುತ್ತಿತ್ತು. ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳವಿಲ್ಲದೇ ಹೆಚ್ಚಿನ ಕೈಗಾರಿಕೀಕರಣ ಮತ್ತು ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸಲು ಸಾಧ್ಯವಿರಲಿಲ್ಲ. 1950-51ರಲ್ಲಿ ಒಟ್ಟು ದೇಶೀಯ ಬಂಡವಾಳದ ರಚನೆಯು ಭಾರತದ ಜಿಡಿಪಿಯ ಶೇಕಡಾವಾರು ಪ್ರಮಾಣದ ಶೇ.9.3ರಷ್ಟಿತ್ತು. ಅದೇ 2020-21ರಲ್ಲಿ ಜಿಡಿಪಿಯ ಶೇ. 31.2ಕ್ಕೆ ಏರಿಕೆಯಾಗಿದೆ.

ಮೂಲಸೌಕರ್ಯ ಅಭಿವೃದ್ಧಿ

ಅಮೆರಿಕದ ನಂತರ ಭಾರತವು ಈಗ ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನು ಹೊಂದಿದೆ. ಭಾರತವು ಗಾತ್ರದಲ್ಲಿ ವಿಶ್ವದ ನಾಲ್ಕನೇ ಅತಿದೊಡ್ಡ ರಾಷ್ಟ್ರೀಯ ರೈಲ್ವೆ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ಮಾ.31, 2022ರಂತೆ ಒಟ್ಟು ರೈಲು ಮಾರ್ಗದ ಉದ್ದ 67,956 ಕಿ.ಮೀ (42,226 ಮೈಲಿ). 2022ರ ಆರ್ಥಿಕ ವರ್ಷದಿಂದ ಉತ್ಪಾದನೆಯಲ್ಲಿ ಶೇ. 126 ಜಿಗಿತದೊಂದಿಗೆ ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್‌ ಉತ್ಪನ್ನ ತಯಾರಕನಾಗಿ ಹೊರಹೊಮ್ಮಿದೆ. ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಚ್‌ಫೋನ್‌ ಬಳಕೆದಾರ ಎನಿಸಿಕೊಂಡಿದೆ. ಶೇ. 97.6 ಭಾರತೀಯ ಕುಟುಂಬಗಳು ಈಗ ವಿದ್ಯುತ್‌ ಸಂಪರ್ಕವನ್ನು ಹೊಂದಿವೆ. ಆದರೆ ಕೇವಲ ಶೇ. 2.4 ಭಾರತೀಯ ಕುಟುಂಬಗಳು ಇನ್ನೂ ವಿದ್ಯುಚ್ಛಕ್ತಿಯನ್ನು ಹೊಂದಿಲ್ಲ.

 World Economy: ಬ್ರಿಟನ್‌ ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ ಭಾರತ

ಸ್ವಾವಲಂಬಿ ಆರ್ಥಿಕತೆಯ ಕಡೆ

ಭಾರತವು ಆಹಾರದ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಿದೆ. ದೇಶದಲ್ಲಿ ಪ್ರತಿವರ್ಷ 300 ಮಿಲಿಯನ್‌ ಟನ್‌ ಆಹಾರ ಧಾನ್ಯಗಳು ಮತ್ತು 300 ಮಿಲಿಯನ್‌ ಟನ್‌ ಹಣ್ಣುಗಳು ಮತ್ತು ತರಕಾರಿಗಳನ್ನು ಉತ್ಪಾದಿಸಲಾಗುತ್ತಿದೆ. ಭಾರತವು ಹಾಲು ಉತ್ಪಾದನೆಯಲ್ಲಿ ಅತಿದೊಡ್ಡ ಉತ್ಪಾದಕ ಮತ್ತು ವಿಶ್ವದಲ್ಲೇ ಎರಡನೇ ಅತಿದೊಡ್ಡ ಅಕ್ಕಿ ಮತ್ತು ಗೋಧಿ ಉತ್ಪಾದಕ ದೇಶವೆನಿಸಿದೆ. ಹಸಿರು, ಬಿಳಿ, ನೀಲಿ ಮತ್ತು ಸುವರ್ಣಕ್ರಾಂತಿಯೊಂದಿಗೆ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಆತ್ಮ ನಿರ್ಭರ ಭಾರತ ಉಪಕ್ರಮವು ಭಾರತದಲ್ಲಿ ಬೆಳವಣಿಗೆಯ ವೇಗಕ್ಕೆ ಮತ್ತಷ್ಟು ಪ್ರಚೋದನೆಯನ್ನು ನೀಡಿದೆ.

ವಿದೇಶಿ ವ್ಯಾಪಾರದಲ್ಲಿ ಹೆಚ್ಚಳ

1950ರಲ್ಲಿ ಜಾಗತಿಕ ವ್ಯಾಪಾರದಲ್ಲಿ ಭಾರತದ ಪಾಲು ಶೇ.1.78 ಇತ್ತು. ಆದರೆ ನಂತರ ಇದು ಗಣನೀಯವಾಗಿ ಕಡಿಮೆಯಾಯಿತು. 2000ರವರೆಗೆ ವಿಶ್ವ ವ್ಯಾಪಾರದಲ್ಲಿ ಭಾರತದ ಪಾಲು ಕೇವಲ ಶೇ.0.75 ಆಗಿತ್ತು. 2020-21ರಲ್ಲಿ ಒಟ್ಟು ವಿಶ್ವ ವ್ಯಾಪಾರದಲ್ಲಿ ಭಾರತದ ಪಾಲು ಶೇ.2.6ಕ್ಕೆ ಏರಿದೆ.

ಬಡತನದಲ್ಲಿ ತೀವ್ರ ಇಳಿಕೆ

ಭಾರತದಲ್ಲಿ ಬಡತನ ಗಣನೀಯವಾಗಿ ಕಡಿಮೆಯಾಗಿದೆ ಆದರೆ ಇನ್ನೂ ಶೇ. 10 ಭಾರತೀಯರು ಬಡತನ ರೇಖೆಗಿಂತ ಕೆಳಗಿದ್ದಾರೆ. ಭಾರತವು ವಿಶ್ವದಲ್ಲಿ ಆರ್ಥಿಕ ಅಸಮಾನತೆಗಳಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಶ್ರೀಮಂತರು ಮತ್ತು ಜನಸಾಮಾನ್ಯರ ನಡುವಿನ ಅಂತರವು ವರ್ಷ ಕಳೆದಂತೆ ಹೆಚ್ಚುತ್ತಿದೆ. ಆದ್ದರಿಂದ ಬಡತನ ಮತ್ತು ಅಸಮಾನತೆಯನ್ನು ಕಡಿಮೆ ಮಾಡಬೇಕು ಮತ್ತು ಅಂತರ್ಗತ ಬೆಳವಣಿಗೆಯನ್ನು ಪೋ›ತ್ಸಾಹಿಸಬೇಕು.

ಚೀನಾ, ಕೊರಿಯಾಕ್ಕಿಂತ ಹಿಂದೆ

ಭಾರತದ ಆರ್ಥಿಕತೆಯ 75 ವರ್ಷಗಳ ಪ್ರಯಾಣದ ಹಾದಿಯು ತೃಪ್ತಿಕರವಾಗಿದೆ. ಆದರೆ ಭಾರತದ ಬೆಳವಣಿಗೆ ಗತಿಯನ್ನು ಚೀನಾ ಮತ್ತು ದಕ್ಷಿಣ ಕೊರಿಯಾದೊಂದಿಗೆ ಹೋಲಿಸಿದರೆ ನಿರಾಶಾದಾಯಕವಾಗಿದೆ. ಈ ಎರಡು ಆರ್ಥಿಕತೆಗಳನ್ನು ಹೋಲಿಸಲು ಪ್ರಮುಖ ಕಾರಣವೆಂದರೆ ಚೀನಾ ಭಾರತಕ್ಕೆ ಹೋಲಿಸಬಹುದಾದ ಜನಸಂಖ್ಯೆಯನ್ನು ಹೊಂದಿದೆ ಮತ್ತು ದಕ್ಷಿಣ ಕೊರಿಯಾವು ಭಾರತದಂತೆಯೇ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಹೊಂದಿದ ರಾಷ್ಟ್ರವಾಗಿದೆ. ಇನ್ನೊಂದು ಗಮನಾರ್ಹ ಅಂಶವೆಂದರೆ, ಭಾರತದ ಸ್ವಾತಂತ್ರ್ಯದ ಎರಡು ವರ್ಷಗಳ ನಂತರ ಅಕ್ಟೋಬರ್‌ 1, 1949ರಂದು ಚೀನಾಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಅದೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಒಂದು ವರ್ಷದ ನಂತರ ಆಗಸ್ಟ್ 15, 1948ರಂದು ದಕ್ಷಿಣ ಕೊರಿಯಾಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆದರೂ ಅವುಗಳು ಭಾರತಕ್ಕೆ ಹೋಲಿಸಿದರೆ ಹೆಚ್ಚಿನ ಪ್ರಗತಿ ಸಾಧಿಸಿವೆ.

ಸೂಪರ್‌ ಪವರ್‌ ರಾಷ್ಟ್ರ

ಭಾರತ ತನ್ನ ಅಭಿವೃದ್ಧಿ ದರವನ್ನು ಏರಿಕೆ ಮಾಡಿಕೊಂಡಲ್ಲಿ ಖಂಡಿತವಾಗಿ ತನ್ನ ಸ್ವಾತಂತ್ರ್ಯದ 100ನೇ ವರ್ಷವನ್ನು ಆರ್ಥಿಕ ಮಹಾಶಕ್ತಿಯಾಗಿ ಆಚರಿಸಬಹುದು. ಭಾರತವು ತನ್ನ ಜಿಡಿಪಿಯ ಶೇ. 6ರಷ್ಟು ಗುಣಮಟ್ಟದ ಕೌಶಲ್ಯ ಶಿಕ್ಷಣವನ್ನು ನೀಡಲು, ಅದರ ಜಿಡಿಪಿಯ ಶೇ. 4ರಷ್ಟನ್ನು ಗುಣಮಟ್ಟದ ಆರೋಗ್ಯವನ್ನು ಒದಗಿಸುವುದಕ್ಕಾಗಿ ಹೂಡಿಕೆ ಮಾಡಬೇಕು. ದೇಶೀಯ ಬಂಡವಾಳ ರಚನೆಯನ್ನು ಶೇ. 40ಕ್ಕೆ ಹೆಚ್ಚಿಸಿ, ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಸೃಷ್ಟಿಸಬೇಕು. ಅಲ್ಲದೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಬಡತನವನ್ನುನಿರ್ಮೂಲನೆ ಮಾಡಬೇಕು. ಇದರೊಂದಿಗೆ ಆರ್ಥಿಕ ಅಸಮಾನತೆ ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡಿದರೆ, ಭಾರತವು ವಿಶ್ವದ ಆರ್ಥಿಕ ಮಹಾಶಕ್ತಿಯಾಗುವುದು ಖಚಿತ.

ಲೇಖನ: ಡಾ.ಎಸ್‌.ಆರ್‌.ಕೇಶವ

Follow Us:
Download App:
  • android
  • ios