ಒಂದೇ ಸಿರಿಂಜ್‌ನಲ್ಲಿ 30 ಮಕ್ಕಳಿಗೆ ಲಸಿಕೆ: ಪ್ರಶ್ನಿಸಿದ್ದಕ್ಕೆ ನರ್ಸಿಂಗ್ ವಿದ್ಯಾರ್ಥಿಯ ನಿರ್ಲಕ್ಷ್ಯದ ಉತ್ತರ
ಮಧ್ಯಪ್ರದೇಶ ಶಾಲೆಯೊಂದರಲ್ಲಿ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಂದೇ ಸಿರಿಂಜ್‌ನಲ್ಲಿ ಕೋವಿಡ್ ಲಸಿಕೆ ನೀಡಿದ ಆಘಾತಕಾರಿ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣ ನಡೆದಿದೆ.
ಸಾಗರ್: ಮಧ್ಯಪ್ರದೇಶ ಶಾಲೆಯೊಂದರಲ್ಲಿ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಂದೇ ಸಿರಿಂಜ್‌ನಲ್ಲಿ ಕೋವಿಡ್ ಲಸಿಕೆ ನೀಡಿದ ಆಘಾತಕಾರಿ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣ ನಡೆದಿದೆ. ಬುಧವಾರ ಮಧ್ಯಪ್ರದೇಶದ ಜೈನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕಾ ಶಿಬಿರವನ್ನು ಆಯೋಜಿಸಲಾಗಿದ್ದು, ನರ್ಸಿಂಗ್ ವಿದ್ಯಾರ್ಥಿಯೋರ್ವನನ್ನು ಲಸಿಕೆ ಹಾಕಲು ನಿಯೋಜಿಸಲಾಗಿದೆ. ವ್ಯಾಕ್ಸಿನೇಷನ್ ನಡೆಯುತ್ತಿರುವಾಗ, ನರ್ಸಿಂಗ್ ವಿದ್ಯಾರ್ಥಿ ಸಿರಿಂಜ್ ಬದಲಾಯಿಸದಿರುವುದನ್ನು ಗಮನಿಸಿದ ವಿದ್ಯಾರ್ಥಿಯ ತಂದೆ ಈ ಬಗ್ಗೆ ಆತನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಆತ ನಿರ್ಲಕ್ಷ್ಯದ ಉತ್ತರ ನೀಡಿದ್ದಾನೆ ಎನ್ನಲಾಗಿದೆ. ಈತನ ಉಡಾಫೆ ಉತ್ತರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿತೇಂದ್ರ ಎಂದು ಗುರುತಿಸಲಾದ ನರ್ಸಿಂಗ್ ವಿದ್ಯಾರ್ಥಿ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ತಾನು ಒಂದು ಸಿರಿಂಜ್ ಅನ್ನು ಹೊಂದಿದ್ದೇನೆ ಎಂದು ಸ್ವತಃ ಸಮರ್ಥಿಸಿಕೊಂಡಿರುವುದು, ಇದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿದೆ. ಎಲ್ಲಾ ಮಕ್ಕಳಿಗೆ ಲಸಿಕೆ ಹಾಕುವಂತೆ ಇಲಾಖೆಯ ಮುಖ್ಯಸ್ಥರು ಆದೇಶಿಸಿದರು ಎಂದು ಆತ ಹೇಳಿದ್ದಾನೆ. ನಾನು ಏನು ಮಾಡಬೇಕೆಂದು ಹೇಳಿದ್ದಾರೋ ಅದನ್ನು ಮಾಡಿದ್ದೇನೆ. ಲಸಿಕೆಗಳು ಮತ್ತು ಇತರ ಕಿಟ್‌ಗಳನ್ನು ತಲುಪಿಸಿದ ವ್ಯಕ್ತಿ ನನಗೆ ಕೇವಲ ಸಿಂಗಲ್ ಸಿರಿಂಜ್ ನೀಡಿದರು ಎಂದು ನರ್ಸಿಂಗ್ ವಿದ್ಯಾರ್ಥಿ ಆರೋಪಿಸಿದ್ದಾನೆ.
200 ಕೋಟಿ ಕೋವಿಡ್ ಲಸಿಕೆ ಮೈಲಿಗಲ್ಲು ಸಾಧಿಸಿದ ಭಾರತ!
ಒಂದು ಸಿರಿಂಜ್ ಅನ್ನು ಒಬ್ಬ ವ್ಯಕ್ತಿಗೆ ಮಾತ್ರ ಬಳಸಬೇಕು ಎಂದು ನಿಮಗೆ ತಿಳಿದಿದೆಯೇ ಎಂದು ವರದಿಗಾರರು ಆತನಲ್ಲಿ ಕೇಳಿದಾಗ, ಆತ ನನಗೆ ತಿಳಿದಿದೆ ಎಂದು ಉತ್ತರಿಸಿದ್ದಾನೆ. ಎಲ್ಲರಿಗೂ ಲಸಿಕೆ ನೀಡಲು ಕೇವಲ ಒಂದು ಸಿರಿಂಜ್ ಅನ್ನು ಬಳಸಬೇಕೇ ಎಂದು ನಾನು ಅವರನ್ನು ಕೇಳಿದೆ. ಅದಕ್ಕೆ ಅವರು 'ಹೌದು' ಎಂದು ಹೇಳಿದರು. ಇದು ನನ್ನ ತಪ್ಪು ಹೇಗೆ? ನಾನು ಅವರು ಹೇಳಿದ್ದನ್ನು ಮಾಡಿದ್ದೆ ಅಷ್ಟೇ ಎಂದು ನರ್ಸಿಂಗ್ ವಿದ್ಯಾರ್ಥಿ ಆರೋಪಿಸಿದ್ದಾನೆ.
ಇತ್ತ ಈ ಶಿಬಿರದಲ್ಲಿ ಭಾಗವಹಿಸಿ ಲಸಿಕೆ ಹಾಕಿಸಿಕೊಂಡ ಎಲ್ಲ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ನರ್ಸಿಂಗ್ ವಿದ್ಯಾರ್ಥಿಯ ಈ ಹೇಳಿಕೆಯಿಂದ ಪೀಕಲಾಟ ಉಂಟಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಅವರು ಆಗ್ರಹಿಸಿದರು. ಘಟನೆಯ ಬಗ್ಗೆ ವರದಿಯಾಗುತ್ತಿದ್ದಂತೆ ಕೇಂದ್ರ ಸರ್ಕಾರದ 'ಒಂದು ಸೂಜಿ, ಒಂದು ಸಿರಿಂಜ್' ಎಂಬ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಶಾಲೆಗಳಿಗೆ ಲಸಿಕೆ ತಂಡವನ್ನು ಕಳುಹಿಸುವ ಉಸ್ತುವಾರಿ ವಹಿಸಿದ್ದ ಜಿಲ್ಲಾ ಲಸಿಕೆ ಅಧಿಕಾರಿ ಡಾ.ರಾಕೇಶ್ ರೋಷನ್ ವಿರುದ್ಧ ತನಿಖೆ ಆರಂಭಿಸಲಾಗಿದೆ.
ನಾವು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಗೂ ತಿಳಿಸಿದ್ದೇವೆ. ಏತನ್ಮಧ್ಯೆ, ನಾವು ಶಿಬಿರದಲ್ಲಿ ಲಸಿಕೆ ಹಾಕಿಸಿಕೊಂಡ ಎಲ್ಲಾ ವಿದ್ಯಾರ್ಥಿಗಳ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ. ನಿಯಮ ಉಲ್ಲಂಘಿಸಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ. ಭಾರತದ ಆರೋಗ್ಯ ಸಚಿವಾಲಯದ ನಿಯಮಗಳ ಪ್ರಕಾರ ಒಂದು ಸೂಜಿ, ಒಂದು ಸಿರಿಂಜ್, ಒಂದೇ ಬಾರಿ ಬಳಸಬೇಕು. ಒಂದಕ್ಕಿಂತ ಹೆಚ್ಚು ಬಾರಿ ಹಾಗೂ ಒಬ್ಬರಿಗೆ ಬಳಸಿದ ಸಿರಿಂಜ್ ಅನ್ನು ಮತ್ತೊಬ್ಬರಿಗೆ ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಇದು ವೈದ್ಯಕೀಯ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ.