ಇಂದು ನಿರ್ಮಲಾ ಬಜೆಟ್ ಮಂಡನೆ, ಭಾರತದ ಬಜೆಟ್ ವಿಶ್ವಕ್ಕೇ ಆಶಾಕಿರಣ : ಮೋದಿ
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆ ಭಾರತದ ಬಜೆಟ್ ಸಾಮಾನ್ಯ ನಾಗರಿಕರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ ಮತ್ತು ಜಗತ್ತಿಗೆ ಭರವಸೆಯ ಆಶಾಕಿರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿ: ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆ ಭಾರತದ ಬಜೆಟ್ ಸಾಮಾನ್ಯ ನಾಗರಿಕರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ ಮತ್ತು ಜಗತ್ತಿಗೆ ಭರವಸೆಯ ಆಶಾಕಿರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಲಿರುವ ಬಜೆಟ್ ಜನರ ಭರವಸೆ, ಆಕಾಂಕ್ಷೆಗಳನ್ನು ಈಡೇರಿಸಲು ಶ್ರಮಿಸುತ್ತದೆ ಮತ್ತು ಜಗತ್ತು ಭಾರತದತ್ತ ನೋಡುತ್ತಿರುವ ಭರವಸೆಯನ್ನು ಹೆಚ್ಚಿಸುತ್ತದೆ ಎಂದರು.
ಜಗತ್ತು ನೋಡುತ್ತಿರುವ ಭರವಸೆಯ ಕಿರಣವು ಪ್ರಕಾಶಮಾನವಾಗಿ ಹೊಳೆಯುತ್ತದೆ. ಇದಕ್ಕಾಗಿ, ಹಣಕಾಸು ಸಚಿವರು (Finance Minister)ಈ ಆಕಾಂಕ್ಷೆಗಳನ್ನು ಪೂರೈಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ ಎಂದು ನಾನು ದೃಢವಾಗಿ ನಂಬುತ್ತೇನೆ . ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ, ಭಾರತ ಮಾತ್ರವಲ್ಲದೆ ಇಡೀ ವಿಶ್ವವು ಭಾರತದ ಬಜೆಟ್‌ನತ್ತ ನೋಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಬಜೆಟ್ ಅಧಿವೇಶನವು ಏ.6 ರವರೆಗೆ 27 ದಿನಗಳ ಕಲಾಪ ನಡೆಯಲಿದೆ. ಅಧಿವೇಶನದ ಮೊದಲ ಭಾಗವು ಫೆಬ್ರವರಿ 13 ರಂದು ಮುಕ್ತಾಯಗೊಳ್ಳಲಿದೆ. ಅಧಿವೇಶನದ ಎರಡನೇ ಭಾಗಕ್ಕಾಗಿ ಸಂಸತ್ತು(Parliament) ಮಾ.12 ರಂದು ಮತ್ತೆ ಸೇರಲಿದ್ದು, ಏ.6 ರಂದು ಮುಕ್ತಾಯಗೊಳ್ಳಲಿದೆ.
2024ರ ಚುನಾವಣೆಗೂ ಮುನ್ನ ಕಡೆಯ ಪೂರ್ಣ ಪ್ರಮಾಣದ ಬಜೆಟ್
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಹುನಿರೀಕ್ಷಿತ ಬಜೆಟ್ ಮಂಡಿಸುತ್ತಿದ್ದಾರೆ. ಬೆಲೆ ಏರಿಕೆ, ಉದ್ಯೋಗ ಕಡಿತ ಹಾಗೂ ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ಜನರಿಗೆ ನಿರ್ಮಲಾ, ತಮ್ಮ ಮುಂಗಡಪತ್ರದಲ್ಲಿ ಉತ್ತಮ ಕೊಡುಗೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. 2024ರ ಲೋಕಸಭಾ ಚುನಾವಣೆಗಿನ (Lok Sabha election) ಮುನ್ನ ಕಡೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಜೊತೆಗೆ ಈ ವರ್ಷ ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಜನರಿಗೆ ಹತ್ತಿರವಾಗುವ ಮಹತ್ವದ ಘೋಷಣೆ ಮಾಡುವುದು ಈ ಬಜೆಟ್‌ನಲ್ಲಿ ಮಾತ್ರ ಸಾಧ್ಯ. ಆದ್ದರಿಂದ ಈ ಅಂಶಗಳನ್ನು ಗಮಮದಲ್ಲಿಟ್ಟುಕೊಂಡು ಅವರು ಬಜೆಟ್ ಮಂಡಿಸಬಹುದು. ಚುನವಣಾ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
Economic Survey 2023:ಮುಂದಿನ ದಿನಗಳಲ್ಲಿ ಧಾನ್ಯಗಳು, ಮಸಾಲ ಪದಾರ್ಥ, ಹಾಲಿನ ಬೆಲೆ ಏರಿಕೆ ನಿರೀಕ್ಷೆ
ಈ ಬಜೆಟ್, ಆದಾಯ ತೆರಿಗೆ ಸ್ತರ ಏರಿಕೆ (income tax rate), ಸಾಮಾಜಿಕ ಭದ್ರತಾ ವ್ಯಾಪ್ತಿಗೆ ಇನ್ನಷ್ಟು ಜನರ ಸೇರ್ಪಡೆ, ಉತ್ಪಾದನಾ ವಲಯಕ್ಕೆ ಇನ್ನಷ್ಟುಚೇತರಿಕೆ, ಬಡ್ಡಿದರ, ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮಧ್ಯಮ ವರ್ಗದ ಜನರ ಓಲೈಕೆ, ಬಡವರ ಪರ ಇನ್ನಷ್ಟುಯೋಜನೆ, ಸ್ಥಳೀಯವಾಗಿ ಉತ್ಪಾದಿಸುವ ವಸ್ತುಗಳಿಗೆ ಪ್ರೋತ್ಸಾಹಕಗಳನ್ನು ಒಳಗೊಂಡಿರಲಿದೆ. ಇದರ ವೆಚ್ಚ ಸರಿದೂಗಿಸಲು ಐಷಾರಾಮಿ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಉಳ್ಳವರು ಮತ್ತು ಬಡವರ ನಡುವಿನ ಅಂತರ ಕೂಡಾ ಹೆಚ್ಚುಗುತ್ತಿದ್ದು ಈ ಬಗ್ಗೆಯೂ ಸರ್ಕಾರ ಗಮನ ಹರಿಸುವ ಸಾಧ್ಯತೆ ಇದೆ. ಆದರೆ ಇದರ ಜೊತೆಗೆ ವಿತ್ತೀಯ ಶಿಸ್ತು ಪಾಲಿಸುವ ಅನಿವಾರ್ಯತೆಯೂ ಇರುವ ಕಾರಣ ಅದನ್ನೂ ಸರ್ಕಾರ ತನ್ನ ಗಮನದಲ್ಲಿಟ್ಟುಕೊಂಡಿರಲಿದೆ ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಅಂದಹಾಗೆ ಇದು ನಿರ್ಮಲಾ ಮಂಡಿಸುತ್ತಿರುವ 6ನೇ ಬಜೆಟ್ ಆಗಿದೆ.
ಕಾಗದ ರಹಿತ ಬಜೆಟ್
ಬುಧವಾರ ಸಂಸತ್ತಿನಲ್ಲಿ ಮಂಡನೆಯಾಗಲಿರುವ ಬಜೆಟ್ ಕಾಗದ ರಹಿತ (Paperless budget) ಆಗಲಿದೆ. ಬಜೆಟ್‌ನ ಸಂಪೂರ್ಣ ಮಾಹಿತಿಯು ‘ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್’ ಎಂಬ ಆ್ಯಪ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಲ್ಲಿ ಕಾಗದರಹಿತವಾಗಿಯೇ ಬಜೆಟ್ ಮಂಡಿಸಲಿದ್ದಾರೆ. ಈ ನಿಮಿತ್ತ ಬಿಡುಗಡೆ ಮಾಡಲಾಗಿರುವ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್‌ಗಳಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಬಜೆಟ್‌ನ ಮುಖ್ಯಾಂಶಗಳು, ಬಜೆಟ್ ಭಾಷಣ, ಹಾಗೂ ವಾರ್ಷಿಕ ಹಣಕಾಸು ವರದಿ ಸೇರಿದಂತೆ ಸವಿವರವಾದ ಮಾಹಿತಿ ಪಡೆಯಬಹುದಾಗಿದೆ. ಈ ಹಿಂದಿನ ಎರಡು ಬಜೆಟ್‌ಗಳನ್ನು ಕೂಡ ಕಾಗದ ರಹಿತ ಅಥವಾ ಆನ್‌ಲೈನ್ ಮೂಲಕವೇ ಪ್ರಸ್ತುತ ಪಡಿಸಲಾಗಿತ್ತು.
ಬಜೆಟ್ ಮಂಡನೆ ಮುಗಿದ ಬಳಿಕ ಈ ಆ್ಯಪ್‌ನಲ್ಲಿ ಮಾಹಿತಿಗಳನ್ನು ನವೀಕರಿಸಲಾಗುತ್ತದೆ. ಈ ಆ್ಯಪ್ ಅನ್ನು 2021ರ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಶಾಸಕಾಂಗದಲ್ಲಿ ದೈಹಿಕ ಸಂಪರ್ಕವನ್ನು ಕಡಿಮೆಗೊಳಿಸುವುದಕ್ಕಾಗಿ ಲಭ್ಯಗೊಳಿಸಲಾಗಿತ್ತಾದರೂ ಕೇಂದ್ರ ಸರ್ಕಾರದ ಕಾಗದ ರಹಿತ ವ್ಯವಹಾರ ಅಥವಾ ಡಿಜಟಲೀಕರಣಕ್ಕೆ ಇದು ಸಹಕಾರಿಯಾಗಿದೆ. ಈಗಾಗಲೇ ಹಿಂದಿನ 14 ಬಜೆಟ್‌ಗಳ ಸಂಪೂರ್ಣ ವಿವರಗಳು ಆ್ಯಪ್‌ನಲ್ಲಿ ಲಭ್ಯವಿವೆ. ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡುತ್ತಿರುವ 6ನೇ ಬಜೆಟ್ ಇದಾಗಿದೆ.
ಜಾಗತಿಕ ಬೆಳವಣಿಗೆ ದರ ಇಳಿಸಿದ IMF;2023ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇ.6.1
ಕೋವಿಡ್ ಹೊಡೆತದಿಂದ ಆರ್ಥಿಕತೆ ಭಾರಿ ಚೇತರಿಕೆ
ಕೋವಿಡ್ ಸಾಂಕ್ರಾಮಿಕ (Covid epidemic) ಮತ್ತು ಯುರೋಪ್ ಬಿಕ್ಕಟ್ಟಿನ ಬಳಿಕ ಭಾರತದ ಆರ್ಥಿಕತೆ ಏನನ್ನು ಕಳೆದುಕೊಂಡಿತ್ತೋ ಇದೀಗ ಬಹುತೇಕ ಆ ಸ್ಥಾನಕ್ಕೆ ಮರಳಿದೆ ಎಂದು ಸಂಸತ್ತಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಆರ್ಥಿಕ ಸಮೀಕ್ಷೆ ತೃಪ್ತಿ ವ್ಯಕ್ತಪಡಿಸಿದೆ. ಆರ್ಥಿಕತೆ ಎಲ್ಲಿ ಸ್ಥಗಿತಗೊಂಡಿತ್ತೋ ಅಲ್ಲಿ ಪುನಾರಂಭಗೊಂಡಿದೆ. ಎಲ್ಲಿ ಕುಂಠಿತಗೊಂಡಿತ್ತೋ ಅಲ್ಲಿ ಮತ್ತೆ ಚೇತರಿಕೆ ಪಡೆದುಕೊಂಡಿದೆ. ಸಾಂಕ್ರಾಮಿಕದಿಂದ ಭಾರತ ಅತ್ಯಂತ ವೇಗವಾಗಿ ಚೇತರಿಸಿಕೊಂಡಿದೆ. ಇದಕ್ಕೆ ದೇಶೀಯ ಬೇಡಿಕೆ, ಬಂಡವಾಳ ಹೂಡಿಕೆಯಲ್ಲಿನ ಹೆಚ್ಚಳ ಪ್ರಮುಖ ಕಾರಣ’ ಎಂದು ವರದಿ ಹೇಳಿದೆ.
‘ತಕ್ಷಣಕ್ಕೆ ಹಣದುಬ್ಬರ ತುಂಬಾ ಆತಂಕಕಾರಿಯಾಗೇನೂ ಇಲ್ಲ, ಆದರೆ ಹಣದುಬ್ಬರ (inflation) ಸಾಕಷ್ಟುಆಳವಾಗಿ ಬೇರೂರಿರುವ ಕಾರಣ ಬಡ್ಡಿದರ ಇನ್ನಷ್ಟುದಿನ ಮೇಲ್ಪಟ್ಟದಲ್ಲೇ ಇರುವ ಸಾಧ್ಯತೆ ದಟ್ಟವಾಗಿದೆ. ವಲಸೆ ಕಾರ್ಮಿಕರು ಮತ್ತೆ ನಗರಗ ಪ್ರದೇಶಗಳಿಗೆ ಮರಳಿರುವ ಕಾರಣ ನಗರ ಪ್ರದೇಶಗಳಲ್ಲಿನ ವಸತಿ ಬೇಡಿಕೆ ಹೆಚ್ಚಾಗಿದೆ. ಕಾರ್ಪೊರೆಟ್ ವಲಯದ ಆರ್ಥಿಕ ಸ್ಥಿತಿ ಇದೀಗ ಹೆಚ್ಚು ಸ್ಥಿರವಾಗಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸಾಕಷ್ಟುಬಂಡವಾಳ ಹೊಂದಿರುವ ಕಾರಣ ಕಿರು, ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳಿಗೆ ಸಾಲದ ನೆರವು ಸರಾಗವಾಗಿರಲಿದೆ’ ಎಂದು ವರದಿ ಹೇಳಿದೆ.
Economic Survey: 2022-23ರಲ್ಲಿ ದೇಶದ ಜಿಡಿಪಿ ಶೇ. 7ರಷ್ಟು ಬೆಳವಣಿಗೆ ಎಂದ ಆರ್ಥಿಕ ಸಮೀಕ್ಷೆ!