ಮಹಾರಾಷ್ಟ್ರದಲ್ಲಿ ಒಂದು ವರ್ಷದ ಹಿಂದಷ್ಟೇ ಶಿವಸೇನೆ ಒಡೆದು ಬಂದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದ ಏಕನಾಥ್‌ ಶಿಂಧೆ ಹಾಗೂ ಅವರ ಬಣದ ಶಾಸಕರು ಈಗ ಕಂಗಾಲಾಗಿ ಕುಳಿತಿದ್ದಾರೆ. ಚುನಾವಣೆಗೆ ಆರು ತಿಂಗಳಿರುವಾಗ ಅಜಿತ್‌ ಪವಾರ್‌ರನ್ನು ಬಿಜೆಪಿ ಮುಖ್ಯಮಂತ್ರಿ ಮಾಡಿ, ತಮಗೆ ಟಿಕೆಟ್‌ ಕೊಡದೆ ಹೋದರೆ ಏನು ಗತಿ ಎಂದು ಅವರಿಗೆ ಚಿಂತೆ ಶುರುವಾಗಿದೆ. ಹೀಗಾಗಿ ಫಡ್ನವೀಸ್‌, ಅಮಿತ್‌ ಶಾರನ್ನು ಬಿಟ್ಟು ಶಿಂಧೆ ನೇರವಾಗಿ ಮೋದಿ ಬಳಿಯೇ ಹೋಗಿ ಕಣ್ಣೀರು ಹಾಕಿ ಬಂದಿದ್ದಾರೆ.

- ಪ್ರಶಾಂತ್‌ ನಾತು

ರಾಜಕಾರಣದಲ್ಲಿ ಟೈಮಿಂಗ್‌ ಬಹಳ ಮುಖ್ಯ. ಪರಿಸ್ಥಿತಿ ಅನುಕೂಲವಿದ್ದಾಗ, ಅವಕಾಶ ಸೃಷ್ಟಿಯಾದಾಗ ಯಾರು ಸರಿಯಾದ ಹೆಜ್ಜೆ ಇಡುತ್ತಾರೋ, ಯಾರು ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತಾರೋ ಅವರೇ ದೊಡ್ಡ ನಾಯಕರಾಗಿ ಹೊರಹೊಮ್ಮತ್ತಾರೆ. ಇಂದಿರಾ ಗಾಂಧಿ, ವಿ.ಪಿ.ಸಿಂಗ್‌, ಅಡ್ವಾಣಿ, ಮೋದಿ, ಕೇಜರಿವಾಲ… ಎಲ್ಲರೂ ಸಿಕ್ಕ ಅವಕಾಶವನ್ನು ಬಳಸಿಯೇ ತಾನೇ ರಾಜಕಾರಣದ ನಿಚ್ಚಣಿಕೆ ಏರಿ ಮೇಲೆ ಬಂದಿರುವುದು. ಅವಿಶ್ವಾಸ ಗೊತ್ತುವಳಿ ಅಂಥ ಹೊಸದೊಂದು ಅವಕಾಶವನ್ನು ರಾಹುಲ… ಗಾಂಧಿಗೆ ನೀಡಿತ್ತು. ಕರ್ನಾಟಕ ಗೆದ್ದ ಮೇಲೆ, ಇಂಡಿಯಾ ಒಕ್ಕೂಟ ರಚಿಸಿದ ಮೇಲೆ, ಸಂಸತ್‌ ಅನರ್ಹತೆಯನ್ನು ಸ್ವಯಂ ಸುಪ್ರೀಂಕೋರ್ಚ್‌ ರದ್ದುಗೊಳಿಸಿದ ಮೇಲೆ ಮತ್ತು ಮಣಿಪುರದ ಘಟನೆ ಗಳಿಂದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಗಲಭೆ ನಿಯಂತ್ರಿಸುವ ವೈಫಲ್ಯ ಎದ್ದು ಕಾಣುತ್ತಿದ್ದಾಗ ರಾಹುಲ… ಗಾಂಧಿ ತಮ್ಮ ಮಾತಿನ ಮೂಲಕ ಸರ್ಕಾರವನ್ನು, ಮೋದಿ, ಅಮಿತ್‌ ಶಾರನ್ನು, ಆರ್ಥಿಕ ಮತ್ತು ವಿದೇಶಾಂಗ ನೀತಿಗಳನ್ನು ತರಾಟೆಗೆ ತೆಗೆದುಕೊಂಡು ಇಕ್ಕಟ್ಟಿಗೆ ಸಿಲುಕಿಸಿ, ಮೋದಿಗೆ ಹಾಗೂ ಬಿಜೆಪಿಗೆ ನಾವು ಪರ್ಯಾಯ ಅನ್ನುವುದನ್ನು ದೇಶದ ಜನರಿಗೆ ಮನವರಿಕೆ ಮಾಡಿಕೊಡುತ್ತಾರೆ ಎಂಬ ವಿಶ್ವಾಸ, ಕುತೂಹಲ, ನಿರೀಕ್ಷೆ ಇತ್ತು. ಆದರೆ ರಾಹುಲ್‌ರ ಮಾತಿನಲ್ಲಿ ಞಜಿd aಜಛಿ ಆಕ್ರೋಶವೇನೋ ಇತ್ತು. ಆದರೆ ಒಂದು ರಾಷ್ಟ್ರೀಯ ಪಾರ್ಟಿಯ ಪರ್ಯಾಯ ನಾಯಕನಿಗೆ ಇರಬೇಕಾದ ವಿಷಯದ ಆಳ, ಅಗಲ, ಮೊನಚು, ವ್ಯಂಗ್ಯ, ಭಾಷೆ ಮೇಲಿನ ಹಿಡಿತ, ಮನವರಿಕೆ ಮಾಡಿಕೊಡುವ ವ್ಯವಧಾನ, ಇಕ್ಕಟ್ಟಿಗೆ ಸಿಲುಕಿಸುವ ಮಾತುಗಳು ಇರಲಿಲ್ಲ. ಮುತ್ತಜ್ಜ, ಅಜ್ಜಿ, ತಂದೆಯನ್ನು ಪ್ರಧಾನಿ ಸ್ಥಾನದಲ್ಲಿ ನೋಡಿರುವ ಕಾಂಗ್ರೆಸ್ಸಿಗರು ಸಹಜವಾಗಿ ರಾಹುಲ…ರನ್ನು ಕೂಡ ಮುಂದೊಮ್ಮೆ ಪ್ರಧಾನಿ ಸ್ಥಾನದಲ್ಲಿ ನೋಡಲು ಬಯಸುತ್ತಾರೆ. 37 ನಿಮಿಷ ಮಾತನಾಡಿದ ರಾಹುಲ… ಗಾಂಧಿ 19 ನಿಮಿಷ ಮಾತನಾಡಿದ್ದು ಭಾರತ್‌ ಜೋಡೋ ಯಾತ್ರೆ ಬಗ್ಗೆ. ನಂತರ ಮಣಿಪುರದ ವಿಷಯವನ್ನು ಆಕ್ರೋಶದಿಂದ ವಿವರಿಸಿದರಾದರೂ ಕೂಡ ಕೊನೆಗೆ ಬಳಸಿದ ಭಾರತ ಮಾತೆಯ ಹತ್ಯೆ ಎಂಬ ಶಬ್ದಗಳು ಚರ್ಚೆಯ ದಿಕ್ಕನ್ನೇ ಬದಲಿಸಿದವು. ವಿಪಕ್ಷಗಳ ಬಳಿ ಸಂಖ್ಯೆ ಇರಲಿಲ್ಲ ಎಂದು ಎಲ್ಲರಿಗೂ ಗೊತ್ತಿತ್ತು. ಆದರೆ ಮೋದಿ ಮತ್ತು ಅಮಿತ್‌ ಶಾರನ್ನು ಮಾತಿನಲ್ಲಿ ಎದುರಿಸುವ, ಇಕ್ಕಟ್ಟಿನಲ್ಲಿ ಸಿಲುಕಿಸುವ ಯಾವುದೇ ಪ್ರಯತ್ನ, ತಯಾರಿ, ಅಧ್ಯಯನ, ಗಂಭೀರತೆ ವಿಪಕ್ಷಗಳ ಬೆಂಚ್‌ಗಳಿಂದ ಕಾಣಲಿಲ್ಲ.

ಮ್ಯಾನ್‌ ಆಫ್‌ ದಿ ಮ್ಯಾಚ್‌ ಅಮಿತ್‌ ಶಾ

ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಪ್ರಧಾನಿ ಮೋದಿ(PM Narendra Modi) ಮತ್ತು ರಾಹುಲ… ಗಾಂಧಿ(Rahul gandhi) ಮಾಡಿದ ಭಾಷಣಗಳು ಹೆಚ್ಚು ಚರ್ಚೆಗೆ ಗ್ರಾಸವಾದರೂ ಕೂಡ ಲೋಕಸಭೆಯಲ್ಲಿ ತುಂಬಾ ತಯಾರಿಯೊಡನೆ ಪಾಯಿಂಟ್‌ ಬೈ ಪಾಯಿಂಟ್‌ ಮಾತನಾಡಿದ್ದು ಕೇಂದ್ರ ಗ್ರಹ ಸಚಿವ ಅಮಿತ್‌ ಶಾ(Home minister amit shah). ರಾಹುಲ… ಗಾಂಧಿ ಮಾತು ಆಕ್ರೋಶದ ಆಚೆಗೆ ಬರಲೇ ಇಲ್ಲ. ಆದರೆ ಕೊನೆಗೆ ಬಳಸಿದ ಅಪಶಬ್ದಗಳು ಹೆಚ್ಚು ಚರ್ಚೆ ಆದವು. ಪ್ರಧಾನಿ ಮೋದಿ ವರ್ತಮಾನಕ್ಕಿಂತ ಹೆಚ್ಚು ಇತಿಹಾಸದಲ್ಲೇ ವಿಹರಿಸಿ ಕಾಂಗ್ರೆಸ್ಸನ್ನು ಟೀಕಿಸುವುದರಲ್ಲಿಯೇ ಆಸಕ್ತಿ ಹೊಂದಿದಂತೆ ಕಂಡು ಬಂತು. ಆದರೆ ಸುಮಾರು ಎರಡು ಗಂಟೆಗಳ ಕಾಲ ಓತಪ್ರೋತವಾಗಿ ಆರ್ಥಿಕತೆ, ಆಂತರಿಕ ಭದ್ರತೆ, ವಿದೇಶ ನೀತಿಯಿಂದ ಹಿಡಿದು ಮಣಿಪುರದ ಸದ್ಯದ ಸ್ಥಿತಿಗತಿ, ಇತಿಹಾಸದ ತಪ್ಪುಗಳು, ಕೇಂದ್ರದ ಪಾತ್ರ ಎಲ್ಲದರ ಬಗ್ಗೆಯೂ ಮುಚ್ಚು ಮರೆಯಿಲ್ಲದೇ ಅಮಿತ್‌ ಶಾ ಮಾಡಿದ ಭಾಷಣ ಮೂರು ದಿನಗಳಲ್ಲಿ ಕೇಳಿದ ಅತ್ಯುತ್ತಮ ಭಾಷಣ.

ಪ್ರಧಾನಿ ಚುನಾವಣಾ ಭಾಷಣ

ಮೋದಿ ಅವರಿಗೆ ಅವರದೇ ಪಿಚ್‌ನಲ್ಲಿ ಬ್ಯಾಟಿಂಗ್‌ ಮಾಡಲು ಅವಕಾಶ ಕೊಟ್ಟರೆ ಏನೇ ಫಿಲ್ಡಿಂಗ್‌ ಹಚ್ಚಿದರೂ ಸಿಕ್ಸರ್‌ ಬೌಂಡರಿ ಹೊಡೆಯುತ್ತಾರೆ ಎನ್ನುವುದು ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ ಇನ್ನೊಮ್ಮೆ ತೋರಿಸಿಕೊಟ್ಟಿದೆ. ಕರ್ನಾಟಕದಲ್ಲಿ ಸಿದ್ದು, ಖರ್ಗೆ, ಡಿ.ಕೆ.ಶಿವಕುಮಾರ್‌ ಸೇರಿ ಮಾಡಿದಂತೆ ಮೋದಿ ಸಾಹೇಬರಿಗೆ ಅನುಕೂಲ ಇರದ ಪಿಚ್‌ಗೆ ಕರೆದು ಬ್ಯಾಟಿಂಗ್‌ ಮಾಡುವಂತೆ ಹೇಳಿದ್ದರೆ ಮೋದಿ ಮತ್ತು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಬಹುದಿತ್ತೇನೋ. ಆದರೆ ಮಣಿಪುರವೆಂಬ ನಿರ್ದಿಷ್ಟವಿಷಯ ಬಿಟ್ಟು ಬೇರೆಲ್ಲ ವಿಷಯಗಳನ್ನು ಮೋದಿಗೆ ಮಾತನಾಡಲು ಬಿಟ್ಟು ವಿಪಕ್ಷಗಳ ಕಡೆಯಿಂದ ಸರಿಯಾಗಿ ಬೌಲಿಂಗ್‌ ಕೂಡ ಮಾಡದೇ ಮೋದಿಯನ್ನು ಕಟ್ಟಿಹಾಕುವುದು ಕಷ್ಟಕರ ಎಂದು ಮತ್ತೊಮ್ಮೆ ಮೂರು ದಿನಗಳ ಕಲಾಪಗಳು ಸ್ಪಷ್ಟಪಡಿಸಿವೆ. ಮೋದಿಯವರ ಲೋಕಸಭೆ ಭಾಷಣ ಚುನಾವಣಾ ಭಾಷಣದ ರೀತಿ ಇತ್ತು. ಬೆಂಬಲಿಗ ಸಂಸದರಿಂದ ಘೋಷಣೆ ಹಾಕಿಸುವ ಮೋದಿ ವಿರುದ್ಧ ಪಾಯಿಂಟ್‌ ಆಪ್‌ ಆರ್ಡರ್‌ಗಳ ಮೂಲಕ ಕ್ರಿಯಾಲೋಪ ಎತ್ತುವುದನ್ನು ಬಿಟ್ಟು ವಿಪಕ್ಷಗಳು ಸಭಾತ್ಯಾಗ ಮಾಡಿದಾಗ ಎಲ್ಲೋ ಪ್ರತಿಭೆಗಳ ಕೊರತೆ ಎದ್ದು ಕಾಣುತ್ತಿತ್ತು. ಮೋದಿ ಮಣಿಪುರದ ಬಗ್ಗೆ ಭಾಷಣ ಮಾಡಲಿ ಎಂದು ಅವಿಶ್ವಾಸ ಗೊತ್ತುವಳಿ ಮಂಡಿಸಿದ ವಿಪಕ್ಷಗಳು ಭಾಷಣದ ಮಧ್ಯದಲ್ಲಿ ಸಭಾತ್ಯಾಗ ಮಾಡಿದ್ದು ಯಾಕೆ ಎನ್ನುವುದು ಯಾರಿಗೂ ಇಲ್ಲಿಯವರೆಗೆ ಅರ್ಥ ಆಗಿಲ್ಲ.

India Gate: ಕೇವಲ 100 ಸಂಸತ್ ಸ್ಥಾನಕ್ಕೆ ಕಾಂಗ್ರೆಸ್ ಟಾರ್ಗೆಟ್!

ಗತಿಸಿ ಹೋದವು ಆ ದಿನಗಳು

1963ರಲ್ಲಿ ಮೊದಲ ಬಾರಿ ಅವಿಶ್ವಾಸ ಗೊತ್ತುವಳಿ ಮಂಡನೆಯಾದಾಗ ಸಮಾಜವಾದಿ ಆಗಿದ್ದ ಒಬ್ಬ ವಿಪಕ್ಷದ ಸಂಸದ ಭಾರೀ ಟೀಕೆಭರಿತ ಭಾಷಣ ಮಾಡಿದ್ದರಂತೆ. ಸಂಜೆ ಮನೆಗೆ ತೆರಳುವಾಗ ಪಂಡಿತ್‌ ನೆಹರು ಚಾಲಕನಿಗೆ ಇಲ್ಲೇ ಸೌತ್‌ ಅವೆನ್ಯುಗೆ ಹೋಗೋಣ ಎಂದು ಹೇಳಿ ಆ ಸಂಸದನ ಮನೆಗೆ ತೆರಳಿ ಕಾಫಿ ಕುಡಿದು, ನಿಮ್ಮ ಮಾತಿನ ಹಿಂದೆ ತುಂಬಾ ತಯಾರಿ ಇತ್ತು ಎಂದು ಹೇಳಿ ಬೆನ್ನುತಟ್ಟಿಹೋದರಂತೆ. ಈಗ 2023ರಲ್ಲಿ ಅಂಥ ದೃಶ್ಯಗಳನ್ನು ನೋಡುವುದು ಬಿಡಿ, ಅಂಥ ಚರ್ಚೆಯನ್ನು ಮತ್ತೆ ಕೇಳಲು ಸಿಗುತ್ತೋ ಇಲ್ಲವೋ ಎಂಬಂತಹ ವಾತಾವರಣವಿದೆ. ಪಾರ್ಲಿಮೆಂಟ್‌ ಅಂದರೆ ಬರೀ ಸಿಟ್ಟು ಸೆಡವು ಅಪಶಬ್ದ ಗದ್ದಲ ಗಲಾಟೆ ಮುಂದೂಡಿಕೆ ಇಷ್ಟೇನಾ ಅನಿಸುತ್ತದೆ. ಮಾತಿಗಿಂತ ತಮ್ಮ ವ್ಯಕ್ತಿತ್ವದಿಂದಲೇ ಮೋಡಿ ಮಾಡುತ್ತಿದ್ದ ರಾಜೀವ್‌ ಗಾಂಧಿ, ಮಾತಿನ ಮೋಡಿಗಾರ ಅಟಲ… ಬಿಹಾರಿ, ಬದ್ಧತೆ ಮೆರೆಯುತ್ತಿದ್ದ ಚಂದ್ರಶೇಖರ್‌, ಸಂಸದೀಯ ನಿಯಮಗಳನ್ನು ತುದಿ ಬೆರಳಿನಲ್ಲಿ ಇಟ್ಟುಕೊಂಡಿದ್ದ ಪ್ರಣಬ್‌ ಮುಖರ್ಜಿ, ಅಹುದು ಅಹುದು ಎಂದು ತಲೆಯಾಡಿಸುವಂತೆ ಮಾಡುತ್ತಿದ್ದ ಅರುಣ್‌ ಜೈಟ್ಲಿ ತರಹದವರ ಭಾಷಣಗಳು ಇನ್ನುಮುಂದೆ ಕೇಳಲು ಸಿಗುತ್ತವೆಯೇ ಎಂಬ ಸಂಶಯ ಮೂರು ದಿನದ ಕಲಾಪ ವೀಕ್ಷಿಸಿದಾಗ ಬಹಳಷ್ಟುಜನರಿಗೆ ಬಂದಿದ್ದು ನಿಜ. ವಿಪಕ್ಷಗಳ ಸಣ್ಣ ಟೀಕೆಗೂ ಸಿಟ್ಟಿನಿಂದ ಉತ್ತೇಜಿತರಾಗಿ ಕುರುಕ್ಷೇತ್ರದ ಶತ್ರುವೇನೋ ಎಂಬಂತೆ ಉತ್ತರ ಕೊಡುವ ಸ್ಮೃತಿ ಇರಾನಿ ಮಾತು ಕೇಳಿದಾಗ ಸುಷ್ಮಾ ಸ್ವರಾಜ್‌ ಇದ್ದರೆ ಏನು ಮಾತನಾಡುತ್ತಿದ್ದರು ಎಂದು ಅನ್ನಿಸದೇ ಇರದು. 24/7 ಟೀವಿ ಚಾನಲ…ಗಳು, ಸದಾ ಬೆಂಕಿಯನ್ನೇ ಉಗುಳುವ ಸೋಷಿಯಲ… ಮೀಡಿಯಾಗಳ ಕಾಲದಲ್ಲಿ ಅತಿರೇಕ, ಅತಿಶಯೋಕ್ತಿಗಳಿಗೆ ಹೆಚ್ಚು ಪ್ರಾಮುಖ್ಯತೆ ಸಿಗುವುದು ಕೂಡ ಮಾತು ಕಡಿಮೆ, ಗಲಾಟೆ ಜಾಸ್ತಿ ಎಂಬ ವಾತಾವರಣಕ್ಕೆ ಕಾರಣ ಇರಬಹುದು. ಆದರೆ ಮೂರು ದಿನದ ಕಲಾಪ ನೋಡಿ ಅನ್ನಿಸಿದ್ದು ಗತಿಸಿದ ಆ ದಿನಗಳು ಇನ್ನು ಬರುವುದು ಕಷ್ಟ. ಈಗ ಆ ಮಾತುಗಾರಿಕೆ, ನಡುವಳಿಕೆ, ಮುತ್ಸದ್ದಿತನ ಕಲಿಸುವವರೂ ಇಲ್ಲ ಕಲಿಯುವವರೂ ಇಲ್ಲ.

ಆರ್‌ಎಸ್‌ಎಸ್‌ ಈಗ ಮೌನರಾಗ!

ಕರ್ನಾಟಕದ ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ಮೋದಿ ಮತ್ತು ಅಮಿತ್‌ ಶಾ ರಾಜ್ಯದ ಆರ್‌ಎಸ್‌ಎಸ್‌ ಅಭಿಪ್ರಾಯವನ್ನು ಪಡೆದೇ ಮುಂದೆ ಹೆಜ್ಜೆ ಇಡುತ್ತಿದ್ದರು. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ನಿರ್ಣಯವನ್ನು ಮೊದಲು ಬಿಎಸ್‌ವೈಗೆ ತಿಳಿಸಿದ್ದೇ ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ಮುಕುಂದ್‌. ನಂತರ ಈರಣ್ಣ ಕಡಾಡಿ, ನಾರಾಯಣ ಅವರನ್ನು ರಾಜ್ಯಸಭೆಗೆ ಕಳುಹಿಸಿದ್ದು, ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಅವರಿಗೆ ಟಿಕೆಟ್‌ ನಿರಾಕರಿಸಿದ್ದು, ನಳಿನ್‌ ಕಟೀಲ್‌ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಿಸಿದ್ದರ ರಾಜಕೀಯ ನಿರ್ಣಯಗಳ ಜೊತೆಗೆ ಅತಿಹೆಚ್ಚು ಹೊಡೆತ ಕೊಟ್ಟಿತು ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿಕೊಳ್ಳುವ ಒಳ ಮೀಸಲಾತಿಯನ್ನು ತರಾತುರಿಯಲ್ಲಿ ತರುವ ಘೋಷಣೆ ಮಾಡಿದ್ದು ಕೂಡ ಆರ್‌ಎಸ್‌ಎಸ್‌ನ ಸಲಹೆ ಮತ್ತು ಸೂಚನೆಯಿಂದಾಗಿ. ಆದರೆ ಕಾಕತಾಳೀಯವೋ ಏನೋ ರಾಜ್ಯ ಬಿಜೆಪಿಗೆ ಸಂಬಂಧಪಟ್ಟಂತೆ ಸ್ಥಳೀಯ ಆರ್‌ಎಸ್‌ಎಸ್‌ ನೀಡಿದ್ದ ಬಹುತೇಕ ಸೂಚನೆಗಳು ವಿಫಲವಾಗಿವೆ. ಹೀಗಾಗಿ ಈಗ ವಿರೋಧಪಕ್ಷದ ನಾಯಕನ ಆಯ್ಕೆ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಯಲ್ಲಿ ಆರ್‌ಎಸ್‌ಎಸ್‌ ‘ಇವರನ್ನೇ ಮಾಡಿ’ ‘ಇವರನ್ನು ಮಾಡಬೇಡಿ’ ಎಂದು ಹೇಳಲು ಮುಂದಾಗುತ್ತಿಲ್ಲ. ಬಹುತೇಕ ಆಯ್ಕೆ ವಿಳಂಬ ಆಗಲು ಇದು ಕೂಡ ಒಂದು ಕಾರಣ. ರಾಜಕೀಯ ಇರಲಿ, ಕಾರ್ಪೋರೆಟ್‌ ಕಂಪನಿಗಳಿರಲಿ, ಯಾರಾದರೂ ವಿಟೋ ಉಪಯೋಗಿಸಿ ಮಾಡಿಸಿದ ನಿರ್ಣಯಗಳು ಬಹುಪಾಲು ಯಶಸ್ವಿ ಆಗಬೇಕು. ವಿಫಲವಾದರೆ ವಿಟೋ ಒತ್ತಟ್ಟಿಗೆ ಇರಲಿ, ಸಣ್ಣ ಸಣ್ಣ ನಿರ್ಣಯ ತೆಗೆದುಕೊಳ್ಳುವ ಅಧಿಕಾರವೂ ಹೋಗಿಬಿಡುತ್ತದೆ.

ಕೇರಳ ಮಾಜಿ ಸಿಎಂ ಸಮಾಧಿ ನೋಡೋಕೆ 2 ದಿನ ಪ್ಯಾಕೇಜ್: ಲೋಕಲ್‌ ಪ್ರಶಾಂತ್‌ ಕಿಶೋರರಿಂದ ಸೋತ ರಾಜ್ಯ ಬಿಜೆಪಿ ನಾಯಕರು!

ಮೋದಿ ಬಳಿಗೆ ಶಿಂಧೆ ದೌಡು

ಒಂದು ವರ್ಷದ ಹಿಂದೆಯಷ್ಟೇ ಬಾಜಾ ಭಜಂತ್ರಿಯೊಡನೆ ಉದ್ಧವ್‌ ಠಾಕ್ರೆಯನ್ನು ನಡುನೀರಿನಲ್ಲಿ ಬಿಟ್ಟು ಬಿಜೆಪಿ ಸೇರಿಕೊಂಡಿದ್ದ ಏಕನಾಥ ಶಿಂಧೆ ಬಣದ ಶಾಸಕರಿಗೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಫಡ್ನವೀಸ್‌ ಮತ್ತು ಅಮಿತ್‌ ಶಾ ಅವರನ್ನು ಪಕ್ಕಕ್ಕಿಟ್ಟು ಮುಖ್ಯಮಂತ್ರಿ ಏಕನಾಥ ಶಿಂಧೆ ದಿಲ್ಲಿಗೆ ಹೋಗಿ ಮೋದಿ ಅವರನ್ನೇ ಭೇಟಿ ಆಗಿ ಮನದ ಬೇಗುದಿ ಹೇಳಿ ಬಂದಿದ್ದಾರೆ. ಬಿಜೆಪಿ ರಾತ್ರೋರಾತ್ರಿ ಅಜಿತ್‌ ದಾದಾ ಪವಾರ್‌ ಅವರನ್ನು ಸರ್ಕಾರಕ್ಕೆ ಸೇರಿಸಿಕೊಂಡ ನಂತರ ಶಿಂಧೆ ಮತ್ತು ಅವರ ಶಾಸಕರಿಗೆ ಬಿಜೆಪಿ ಕೈಕೊಟ್ಟು, ಆ ಕಡೆ ಟಿಕೆಟ್ಟೂಕೊಡದೆ ಕೊನೆಯ 6 ತಿಂಗಳು ಇರುವಾಗ ಅಜಿತ್‌ ಪವಾರ್‌ರನ್ನು ಮುಖ್ಯಮಂತ್ರಿ ಮಾಡಿದರೆ ಮುಂದೇನು ಗತಿ ಅನ್ನಿಸತೊಡಗಿದೆ. ಶಿವಸೇನೆ ಶಾಸಕರು ಉದ್ಧವ್‌ ವಿರುದ್ಧ ತಿರುಗಿ ಬಿದ್ದಿದ್ದೇ ಅಘಾಡಿ ಸರ್ಕಾರದಲ್ಲಿ ಅಜಿತ್‌ ಪವಾರ್‌ ಕ್ಯಾರೇ ಅನ್ನುವುದಿಲ್ಲ ಎಂಬ ಕಾರಣಕ್ಕಾಗಿ. ಆದರೆ ಈಗ ನೋಡಿದರೆ ಅದೇ ಅಜಿತ್‌ ಪವಾರ್‌ ಇಲ್ಲಿ ಮರಳಿ ಉಪಮುಖ್ಯಮಂತ್ರಿ ಆಗಿದ್ದಾರೆ. 2024ರಲ್ಲಿ ಒಂದು ವೇಳೆ ಬಿಜೆಪಿ ಮತ್ತು ಅಜಿತ್‌ ಪವಾರ್‌ ಸರ್ವೇ ಮಾಡಿಸುತ್ತೇವೆ, ಗೆಲ್ಲುವವರಿಗೆ ಮಾತ್ರ ಟಿಕೆಟ್‌ ಕೊಡುತ್ತೇವೆ ಅಂದರೆ ಏನು ಮಾಡುವುದು? ಉದ್ಧವ್‌ ನಮ್ಮನ್ನು ಹತ್ತಿರ ಕೂಡ ಸೇರಿಸಿಕೊಳ್ಳುವುದಿಲ್ಲ ಎಂಬ ಚಿಂತೆಯಲ್ಲಿಯೇ ಶಿಂಧೆ ಮೋದಿಯೆದುರು ಹೋಗಿ ಕಣ್ಣೀರು ಹಾಕಿ ಬಂದಿದ್ದಾರೆ. ಅದಕ್ಕೇ ಅಲ್ಲವೇ ಹಿರಿಯರು ಹೇಳಿದ್ದು ಕಷ್ಟವೋ ಸುಖವೋ ಸ್ವಂತ ಮನೆಯನ್ನು ಬಿಡುವಾಗ ಹತ್ತು ಸಲ ಯೋಚಿಸಿ ಎಂದು.