ಅತ್ಯಾಚಾರ, ಲೂಟಿ, ಡಕಾಯಿತಿಯಲ್ಲಿ ಮುಸ್ಲಿಮರೇ ನಂ.1: ವಿವಾದಿತ ಹೇಳಿಕೆ ನೀಡಿದ ಮುಸ್ಲಿಂ ಮುಖಂಡ
ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೊಸ ವಿವಾದ ಹುಟ್ಟುಹಾಕಿದ್ದಾರೆ. "ದರೋಡೆ, ಡಕಾಯಿತಿ, ಅತ್ಯಾಚಾರ ಮತ್ತು ಲೂಟಿಯಂತಹ ಅಪರಾಧಗಳನ್ನು ಮಾಡುವಲ್ಲಿ ಮತ್ತು ಜೈಲಿಗೆ ಹೋಗುವುದರಲ್ಲಿ ಮುಸ್ಲಿಮರು ನಂಬರ್ 1 ಆಗಿದ್ದಾರೆ" ಎಂದು ಅವರು ಹೇಳಿದ್ದಾರೆ.
ನವದೆಹಲಿ (ಅ.28): ದೇಶದ ಮುಸ್ಲಿಮರಲ್ಲಿ ಅಪರಾಧ ಪ್ರಮಾಣಗಳು ಹೆಚ್ಚಾಗುತ್ತಿದೆ ಎಂದು ಹೇಳುವ ಮೂಲಕ ಅಸ್ಸಾಂನ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೊಸ ವಿವಾದ ಹುಟ್ಟುಹಾಕಿದ್ದಾರೆ. ದೇಶದಲ್ಲಿ ನಾವು (ಮುಸ್ಲಿಮರು) ದರೋಡೆ, ಡಕಾಯಿತಿ, ಅತ್ಯಾಚಾರ, ಲೂಟಿಯಂಥ ಎಲ್ಲಾ ಅಪರಾಧಗಳಲ್ಲಿ ನಂಬರ್ 1 ಆಗಿದ್ದೇವೆ. ಜೈಲಿಗೆ ಹೋಗುವುದರಲ್ಲಿಯೂ ನಾವೇ ನಂಬರ್ 1 ಆಗಿದ್ದೇವೆ ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಯ ಕುರಿತಾಗಿ ಕೆಲವರಿಂದ ಭಾರೀ ಪ್ರಮಾಣದ ಟೀಕೆಗಳನ್ನು ಎದುರಿಸಿರುವ ಹೊರತಾಗಿಯೂ ಬದ್ರುದ್ದೀನ್ ಅಜ್ಮಲ್, ಮುಸ್ಲಿಮರಲ್ಲಿ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿದೆ ಎನ್ನುವ ತಮ್ಮ ಹೇಳಿಕೆಯ ಬಗ್ಗೆ ಅಅಚಲವಾಗಿ ನಿಂತಿದ್ದಾರೆ. ಶುಕ್ರವಾರ ಈ ಬಗ್ಗೆ ಮಾತನಾಡಿದ ಅವರು ನಾನು ಯಾವುದೇ ತಪ್ಪಾದ ಹೇಳಿಕೆಯನ್ನು ನೀಡಿಲ್ಲ. ಮುಸ್ಲಿಮರಲ್ಲಿ ಶಿಕ್ಷಣದ ಕೊರತಯೇ ನೇರವಾಗಿ ಇಂಥ ಅಪರಾಧ ಪ್ರಕರಣಗಳಲ್ಲಿ ನಮ್ಮವರ ಸಂಖ್ಯೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಸುಗಂಧ ದ್ರವ್ಯದ ಉದ್ದಿಮೆ ಹೊಂದಿರುವ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್, ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರ ನಡುವೆ ತನ್ನ ಅಧಿಕಾರವನ್ನು ಹೊಂದಿದೆ. 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಎಐಯುಡಿಎಫ್ 15 ಶಾಸಕರನ್ನು ಹೊಂದಿದೆ.
“ವಿಶ್ವಾದ್ಯಂತ ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣದ ಕೊರತೆಯನ್ನು ನಾನು ನೋಡಿದ್ದೇನೆ. ನಮ್ಮ ಮಕ್ಕಳು ಓದುತ್ತಿಲ್ಲ, ಉನ್ನತ ಶಿಕ್ಷಣಕ್ಕೆ ಹೋಗುತ್ತಿಲ್ಲ, ಮೆಟ್ರಿಕ್ಯುಲೇಷನ್ ಕೂಡ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರದಿಂದಲೇ ಹೇಳಿದ್ದೇನೆ. ಯುವಕರಿಗೆ ಶಿಕ್ಷಣದ ಅಗತ್ಯವನ್ನು ವಿವರಿಸುವ ಕುರಿತಾಗಿ ನಾನು ಈ ಮಾತು ಹೇಳಿದ್ದೇನೆ" ಎಂದು ಬದ್ರುದ್ದೀನ್ ಅಜ್ಮಲ್ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಅದಲ್ಲದೆ, ನಮ್ಮ ಹುಡುಗರು ಮತ್ತು ಪುರುಷರು ಹುಡುಗಿಯರನ್ನು ನೋಡುವಾಗ ಅಥವಾ ಅವರೊಂದಿಗೆ ಸಂವಹನ ನಡೆಸುವಾಗ ದುರುದ್ದೇಶಪೂರಿತ ಉದ್ದೇಶಗಳನ್ನು ಹೊಂದಿರಬಾರದು ಎಂದು ತಿಳಿಸಿದ್ದಾರೆ.
ಮಹಿಳೆಯರನ್ನು, ಯುವತಿಯರನ್ನು ನೋಡಿದ ಬಳಿಕ ನಾವು ಲಂಗಿಕವಾಗಿ ಉತ್ಸುಕರಾಗುತ್ತೇವೆ ಎಂದು ಹೇಳುವ ಹುಡುಗರಿಗೆ ನಾನು ಒಂದೇ ಮಾತನ್ನು ಹೇಳಲು ಬಯಸುತ್ತೇನೆ. ಇಸ್ಲಾಂ ಧರ್ಮದಲ್ಲಿ ಸಾರ್ವಜನಿಕ ಸ್ಥಳಕ್ಕೆ ನಾವು ಹೋದಾಗ ಮಹಿಳೆಯರನ್ನು ಹಾಗೂ ಯುವತಿಯರನ್ನು ನೋಡಿದಾಗ ಸರಿಯಾದ ನಡವಳಿಕೆಯನ್ನು ಹೊಂದಿರಬೇಕು. ನಮ್ಮ ವರ್ತನೆ ಉತ್ತಮವಾಗಿರಬೇಕು. ನಿಮ್ಮ ಕುಟುಂಬದಲ್ಲಿಯೂ ಹೆಣ್ಣು ಮಕ್ಕಳಿದ್ದಾರೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಮನೆಯಲ್ಲಿ ನಿಮ್ಮ ತಾಯಿ ಹಾಗೂ ತಂಗಿಯರು ಇದ್ದಾರೆ ಎಂದು ನೆನಪಾದಾಗ ನಿಮಗೆ ಯಾವುದೇ ಕೆಟ್ಟ ಯೋಚನೆಗಳು ಬರಲು ಸಾಧ್ಯವಿಲ್ಲ ಎಂದು ಅಜ್ಮಲ್ ಹೇಳಿದ್ದಾರೆ.
ಕಡಿಮೆ ಸಾಕ್ಷರತೆ ಪ್ರಮಾಣವು ಮುಸ್ಲಿಂ ಸಮುದಾಯದ ಅಭಿವೃದ್ಧಿಯ ಕೊರತೆಗೆ ದೊಡ್ಡ ಅಂಶವಾಗಿದೆ ಎಂದು ಮುಸ್ಲಿಂ ಮುಖಂಡ ತಿಳಿಸಿದ್ದಾರೆ. ಆಗಾಗಿ ಇದಕ್ಕೆ ಸರ್ಕಾರಗಳೇ ಕಾರಣ ಎನ್ನುವ ರೀತಿಯಲ್ಲಿ ಹೇಳಲಾಗುತ್ತದೆ. ಆದರೆ ಇದರ ಜವಾಬ್ದಾರಿ ನಮ್ಮದೇ ಸಮುದಾಯದ ಜನರ ಮೇಲಿದೆ ಎಂದು ತಿಳಿಸಿದ್ದಾರೆ. “ಸಾಕ್ಷರತೆಯ ನಮಗೆ ದೊಡ್ಡ ಸಮಸ್ಯೆ ಆಗಿದೆ. ನಾವು ವಿದ್ಯಾವಂತರಲ್ಲ, ಶಿಕ್ಷಣದ ವಿಷಯದಲ್ಲಿ ನಾವು ಸರ್ಕಾರವನ್ನು ದೂಷಿಸುತ್ತೇವೆ, ಆದರೆ ಅವರು ನಮ್ಮ ಅಲ್ಪಸಂಖ್ಯಾತ ಪ್ರದೇಶದ ವೈದ್ಯರು ಮತ್ತು ಎಂಜಿನಿಯರ್‌ಗಳನ್ನು ಕೇಳಿದರೆ ನಾವು ಅವರಿಗೆ ನೀಡದಿರುವುದು ಅತ್ಯಂತ ವಿಷಾದನೀಯ, ನಮ್ಮಲ್ಲಿ ಶಿಕ್ಷಣ ಹೊಂದುವವರ ಸಂಖ್ಯೆ ಹೆಚ್ಚಾಗಬಬೇಕು. ನಮ್ಮ ಯುವಕರು ಶಿಕ್ಷಣ ಪಡೆಯಲು ಪ್ರೋತ್ಸಾಹಿಸದೆ ಬೇರೆ ದಾರಿಯಿಲ್ಲ. ಶಿಕ್ಷಣದ ಕೊರತೆಯಿಂದ ಮಾತ್ರ ಎಲ್ಲಾ ಅನಿಷ್ಟಗಳು ಮೇಲುಗೈ ಸಾಧಿಸುತ್ತವೆ" ಎಂದು ಬದ್ರುದ್ದೀನ್ ಅಜ್ಮಲ್ ಹೇಳಿದರು.
ಹಿಂದೂ ಭಾವನೆ ಗೌರವಿಸಿ ಬಕ್ರೀದ್ ದಿನ ಗೋ ಮಾತೆ ಬಲಿ ಬೇಡ, ಬದ್ರುದ್ದೀನ್ ಅಜ್ಮಲ್ ಮನವಿ!
ಬದ್ರುದ್ದೀನ್ ಹೇಳಿದ್ದೇನು: ಅಕ್ಟೋಬರ್ 20 ರಂದು ಅಸ್ಸಾಂನ ಗೋಲ್ಪಾರಾ ಜಿಲ್ಲೆಯಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದ ಅಜ್ಮಲ್, ಸಮುದಾಯದ ಶೈಕ್ಷಣಿಕ ನ್ಯೂನತೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಮುಸ್ಲಿಮರಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ದರೋಡೆ, ಡಕಾಯಿತಿ, ಅತ್ಯಾಚಾರ, ಲೂಟಿಯಂತಹ ಅಪರಾಧಗಳು..ಎಲ್ಲದರಲ್ಲೂ ನಾವು ನಂ.1 ಆಗಿದ್ದೇವೆ. ಜೈಲಿಗೆ ಹೋಗುವುದರಲ್ಲಿಯೂ ನಾವೇ ನಂಬರ್ 1 ಆಗಿದ್ದೇವೆ. ನಮ್ಮ ಮಕ್ಕಳಿಗೆ ಶಾಲೆ ಕಾಲೇಜುಗಳಿಗೆ ಹೋಗಲು ಸಮಯವಿಲ್ಲ. ಆದರೆ ಜೂಜಾಡಲು ಇತರನ್ನು ವಂಚಿಸಲು ಅವರಿಗೆ ಬೇಕಾದಷ್ಟು ಸಮಯ ಸಿಗುತ್ತದೆ. ಸಾಮಾನ್ಯವಾಗಿ ಇಂಥ ಕೃತ್ಯಗಳಲ್ಲಿ ಯಾರು ಭಾಗಿಯಾಗಿದ್ದಾರೆ ಅನ್ನೋದನ್ನು ನೋಡಿ. ಹೆಚ್ಚಿನವರು ಮುಸ್ಲಿಮರೇ ಆಗಿರುತ್ತಾರೆ. ಇದು ಬೇಸರದ ವಿಚಾರ ಎಂದು ಹೇಳಿದ್ದರು.
ನಿಮಗೆಷ್ಟು ಬೇಕೋ ಅಷ್ಟು ಮಕ್ಕಳು ಮಾಡಿಕೊಳ್ಳಿ : ಸರ್ಕಾರಕ್ಕೆ ಬದ್ರುದ್ದಿನ್ ಅಜ್ಮಲ್ ಸವಾಲ್
ದೇಶದ ಜನರು ಸೂರ್ಯ ಮತ್ತು ಚಂದ್ರನತ್ತ ಹೋಗುತ್ತಿದ್ದಾರೆ. ಆದರೆ ನಮ್ಮ ಜನ ಜೈಲಿಗೆ ಹೇಗೆ ಹೋಗಬೇಕು ಅನ್ನೋದರ ಬಗ್ಗೆ ಪಿಎಚ್‌ಡಿ ಪಡೆದುಕೊಂಡಿದ್ದಾರೆ. ಸುಮ್ಮನೆ ಒಮ್ಮೆ ಪೊಲೀಸ್ ಸ್ಟೇಷನ್‌ಗೆ ಹೋಗಿ ನೋಡಿ, ಅಲ್ಲಿ ಹೆಚ್ಚಿನವರು ಅಬ್ದುರ್ ರೆಹಮಾನ್, ಅಬ್ದುರ್ ರಹೀಮ್, ಅಬ್ದುಲ್ ಮಜೀದ್, ಬದ್ರುದ್ದೀನ್, ಸಿರಾಜುದ್ದೀನ್, ಫಕ್ರುದ್ದೀನ್ ಎನ್ನುವ ಹೆಸರುಗಳೇ ಕಾಣುತ್ತವೆ. ಇದು ಬೇಸರದ ಸಂಗತಿಯಲ್ಲವೆ? ಎಂದಿದ್ದರು. ಅದರೊಂದಿಗೆ ಮುಸ್ಲಿಂ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗದ ಮಹತ್ವವನ್ನು ಅವರು ತಿಳಿಸಿದ್ದರು.