ವಿರೋಧದ ನಡುವೆಯೇ ಪೌರತ್ವ ತಿದ್ದುಪಡಿ ಮಸೂದೆಯು ರಾಷ್ಟ್ರಪತಿ ಅಂಕಿತದೊಂದಿಗೆ ಕಾಯ್ದೆಯ ಸ್ವರೂಪ ಪಡೆದುಕೊಂಡಿದೆ. ಆದಾಗ್ಯೂ ಈಶಾನ್ಯ ರಾಜ್ಯಗಳಲ್ಲಿ ಅದರಲ್ಲೂ ಅಸ್ಸಾಂನಲ್ಲಿ ಪ್ರತಿಭಟನೆಗಳು, ಹಿಂಸಾಚಾರಗಳು ನಡೆಯುತ್ತಲೇ ಇವೆ. ಪೌರತ್ವ ಕಾಯ್ದೆ ಅನುಷ್ಠಾನವನ್ನು ಪ್ರಶ್ನಿಸಿ ಅಸ್ಸಾಂ ವಿದ್ಯಾರ್ಥಿ ಸಂಘ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ.

ವಲಸಿಗರು ಮತ್ತು ಅಸ್ಸಾಮಿಗರ ಹೋರಾಟ ಇದೇ ಮೊದಲೇನಲ್ಲ. 35 ವರ್ಷಗಳ ಹಿಂದೆಯೂ ಸತತ 6 ವರ್ಷಗಳ ಕಾಲ ಇದಕ್ಕೂ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಅಸ್ಸಾಂನಲ್ಲಿ 35 ವರ್ಷಗಳ ಹಿಂದೆ ಏನಾಗಿತ್ತು, ಅಲ್ಲಿನ ಜನರ ಆತಂಕಕ್ಕೆ ಕಾರಣ ಏನು ಎಂಬ ಮಾಹಿತಿ ಇಲ್ಲಿದೆ.

ರಾಜ್ಯಸಭೆಯಲ್ಲೂ ಪೌರತ್ವ ಮಸೂದೆ ಪಾಸ್, ಯಾವ ಬದಲಾವಣೆ ಆಗಲಿದೆ?

885 ಜನರು ಪ್ರಾಣ ಕಳೆದುಕೊಂಡಿದ್ದರು!

ಅಸ್ಸಾಂ ಸ್ಥಳೀಯರು ಮತ್ತು ವಲಸಿಗರ ನಡುವೆ ದಶಕಗಳಿಂದಲೂ ತಿಕ್ಕಾಟ ನಡೆಯುತ್ತಲೇ ಇದೆ. 80ರ ದಶಕದಲ್ಲಿ ಅಂದರೆ 1979ರಲ್ಲಿ ಅಸ್ಸಾಂನಲ್ಲಿ ಅಕ್ರಮ ನುಸುಳುಕೋರರ ಸಂಖ್ಯೆ ಹೆಚ್ಚಾದಂತೆ ಅಲ್ಲಿನ ಸ್ಥಳೀಯರು ಅಕ್ರಮ ವಲಸಿಗರನ್ನು ಹೊರಗಟ್ಟುವಂತೆ ಆಂದೋಲನವನ್ನೇ ಪ್ರಾರಂಭಿಸಿದರು. ವಿದ್ಯಾರ್ಥಿ ಚಳವಳಿಗಳು ಪ್ರಾರಂಭವಾದವು. ಅಸ್ಸಾಂ ವಿದ್ಯಾರ್ಥಿ ಸಂಘಟನೆ ಮತ್ತು ಅಸ್ಸಾಂ ಗಣ ಸಂಗ್ರಾಮ ಪರಿಷತ್‌ ಜೊತೆಗೆ ಹಲವು ಸಂಘಟನೆಗಳೂ ಒಗ್ಗೂಡಿದವು. ಪರಿಣಾಮ ಭೀಕರ ಸ್ವರೂಪದ ಪ್ರತಿಭಟನೆಗಳು ನಡೆದವು.

ಈ 6 ವರ್ಷಗಳ ಹೋರಾಟದಲ್ಲಿ ಸುಮಾರು 885 ಜನರು ತಮ್ಮ ಪ್ರಾಣ ಕಳೆದುಕೊಂಡರು. ಈ ಚಳವಳಿಯ ಭಾಗವಾಗಿ 1985 ಆಗಸ್ಟ್‌ 15ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ‘ಅಸ್ಸಾಂ ಒಪ್ಪಂದ’ವಾಯಿತು. ಆಗ ಕೇಂದ್ರದಲ್ಲಿ ರಾಜೀವ್‌ ಗಾಂಧಿ ನೇತೃತ್ವದ ಸರ್ಕಾರ ಇತ್ತು. ಅದರನ್ವಯ ಅಸ್ಸಾಮಿಗಳೆಂದು ತೀರ್ಮಾನಿಸಲು ಕೆಲ ಪ್ರಸ್ತಾಪಗಳನ್ನು ಮುಂದಿಡಲಾಗಿತ್ತು.

ಈ ಒಪ್ಪಂದವು ವಲಸಿಗರ ಪತ್ತೆಗಾಗಿ ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ನಡೆಸುವ ಭರವಸೆ ನೀಡಿತ್ತು. 3 ದಶಕಗಳ ಕಾಲದ ಈ ಬೇಡಿಕೆಯು 2016ರಲ್ಲಿ ಅನುಷ್ಠಾನಕ್ಕೆ ಬಂದು 2019ರಲ್ಲಿ ಅದು ಪೂರ್ಣಗೊಂಡಿದೆ. ಅದರ ಪ್ರಕಾರ 19 ಲಕ್ಷ ಜನರು ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ ಸೃಷ್ಟಿಸಿರುವುದು ಏಕೆ?

ಅಸ್ಸಾಂ ಒಪ್ಪಂದ ಎಂದರೆ ಏನು?

1979ರ ಲೋಕಸಭಾ ಉಪಚುನಾವಣೆ ವೇಳೆ ಮತದಾರರ ಸಂಖ್ಯೆ ಹೆಚ್ಚಾಗಿದ್ದನ್ನು ಜನರು ಗುರುತಿಸಿದರು. ಬಾಂಗ್ಲಾದೇಶದಿಂದ ಅಕ್ರಮ ವಲಸಿಗರು ಬಂದಿದ್ದಾರೆ ಎಂಬ ಗುಮಾನಿಯನ್ನು ಇದು ಹೆಚ್ಚು ಮಾಡಿತು. ಹಾಗಾಗಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳು ನಡೆದವು. ಸತತ 6 ವರ್ಷದ ಹೋರಾಟದಲ್ಲಿ 885 ಜನರು ಮೃತಪಟ್ಟರು. ಕೇಂದ್ರ ಸರ್ಕಾರ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕುವ ಮುಖಾಂತರ ಹಿಂಸಾಚಾರ, ಪ್ರತಿಭಟನೆ ನಿಂತಿತು.

ಈ ಒಪ್ಪಂದದ ಪ್ರಕಾರ 1971 ಮಾಚ್‌ರ್‍ 24ರ ನಂತರ ಬಂದವರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ. ಅನಂತರ ಬಂದ ವಿದೇಶಿಗರನ್ನು ಗಡಿಪಾರು ಮಾಡುಲು ಅಥವಾ ಬಂಧಿಸಲು ಅವಕಾಶವಿದೆ. ಈ ಗಡುವು ಏಕೆಂದರೆ ಭಾರತದಲ್ಲಿ ಇಂದಿರಾಗಾಂಧಿ ನೇತೃತ್ವದ ಸರ್ಕಾರ ಇದ್ದಾಗ 1971 ಮಾಚ್‌ರ್‍ 25ರಂದು ಬಾಂಗ್ಲಾ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಯಿತು. ಅಂತಿಮವಾಗಿ 1971ರ ಡಿಸೆಂಬರ್‌ 6ರಂದು ಪಾಕಿಸ್ತಾನದಿಂದ ಪ್ರತ್ಯೇಕಗೊಂಡು ಬಾಂಗ್ಲಾ ದೇಶ ಸ್ವತಂತ್ರವಾಯಿತು.

ಪೌರತ್ವ ಮಸೂದೆ: ಬೇಡದ ಇರುವೆ ಬಿಟ್ಕೊಂಡ ಪಾಕ್ ಪ್ರಧಾನಿ!

ಆ ಸಂದರ್ಭದಲ್ಲಿ ವಲಸಿಗರು ಅಕ್ರಮವಾಗಿ ಭಾರತದ ಅಸ್ಸಾಂಗೆ ಬಂದು ನೆಲೆಸಿದ್ದರು. ಹಾಗಾಗಿ ಅಸ್ಸಾಂ ಒಪ್ಪಂದದಲ್ಲಿ 1971ರ ಮಾಚ್‌ರ್‍ 24ರ ಗಡುವನ್ನು ನಿಗದಿಪಡಿಸಲಾಗಿದೆ. ಇತರ ರಾಜ್ಯಗಳಿಗೆ ಅದು 1951ನ್ನು ಗುಡುವಾಗಿ ಪರಿಗಣಿಸಲಾಗಿದೆ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆಯು ಈ ದಿನಾಂಕವನ್ನು 2014ಕ್ಕೆ ವಿಸ್ತರಿಸಿರುವುದು ಅಸ್ಸಾಂ ಒಪ್ಪಂದದ ಉಲ್ಲಂಘನೆ ಎಂಬುದು ಅಸ್ಸಾಂ ಸ್ಥಳೀಯರ ಹೋರಾಟಕ್ಕೆ ಕಾರಣ.

ಅಸ್ಸಾಂನಲ್ಲೇಕೆ ಹಿಂಸಾಚಾರ?

ಬಂಗಾಳಿ ಮಾತನಾಡುವ ಬರಾಕ್‌ ಕಣಿವೆ ಜನರನ್ನು ಹೊರತು ಪಡಿಸಿ ಅಸ್ಸಾಂನ ಇತರ ಭಾಗಗಳ ಜನರು ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧಿಸುತ್ತಿದ್ದಾರೆ. ಬಾಂಗ್ಲಾದೇಶದ ಲಕ್ಷಾಂತರ ಹಿಂದೂಗಳು ಸ್ಥಳೀಯ ಸಮುದಾಯಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಸಿದುಕೊಂಡು ಪ್ರಾಬಲ್ಯ ಸಾಧಿಸುತ್ತಾರೆ. ಮತ್ತು ಸ್ಥಳೀಯರ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಧಕ್ಕೆ ತರುತ್ತದೆ ಎಂಬುದು ಅವರ ಆತಂಕಕ್ಕೆ ಕಾರಣ. ಪೌರತ್ವ ತಿದ್ದುಪಡಿ ಕಾಯ್ದೆಯು ಕಟ್‌ ಆಫ್‌ ದಿನಾಂಕವನ್ನು 2014ರ ಡಿಸೆಂಬರ್‌ 31 ಎಂದು ನಿಗದಿಪಡಿಸಿದೆ.

ಆದರೆ ಮೂಲ ಅಸ್ಸಾಮಿಗರು 1950-1970ರ ವರೆಗೂ ವಲಸಿಗರ ಉಪಟಳವನ್ನು ಅನುಭವಿಸಿದ್ದಾರೆ. ಈಗ ವಲಸಿಗರಿಗೆ ವರವಾಗುವ ಕಾಯ್ದೆ ಅನುಷ್ಠಾನ ಮಾಡಿದರೆ ಮತ್ತೆ ರಾಜ್ಯದ ಸ್ಥಳೀಯರ ಮೇಲೆ ಅಸ್ತ್ರ ಪ್ರಯೋಗಿಸಿದಂತಾಗುತ್ತದೆ ಎನ್ನುವುದು ವಿರೋಧಕ್ಕೆ ಮತ್ತೊಂದು ಕಾರಣ. ಕೇಂದ್ರಸರ್ಕಾರ ಪೌರತ್ವ ಕಾಯ್ದೆಯಿಂದ ಅಸ್ಸಾಂ ಒಪ್ಪಂದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದೂ ಹೇಳಿದ್ದರೂ, ಪ್ರತಿಭಟನಾಕಾರರು ತಾವು ಕೇಂದ್ರಸರ್ಕಾರವನ್ನು ನಂಬುವುದಿಲ್ಲ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಅಸ್ಸಾಂ ಒಪ್ಪಂದವನ್ನು ರದ್ದುಗೊಳಿಸುತ್ತದೆ ಎಂದೇ ಹೇಳುತ್ತಿದ್ದಾರೆ.

ಪೌರತ್ವ ಮಸೂದೆ ಪಾಸ್: ಮಗುವಿಗೆ ‘ನಾಗರಿಕತಾ’ ಎಂದು ಹೆಸರಿಟ್ಟ ಪಾಕ್‌ ಮಹಿಳೆ!

ಸ್ಥಳೀಯರಿಗಿಂತ ವಲಸಿಗರೇ ಹೆಚ್ಚಾಗುತ್ತಾರೆ!

1826ರಲ್ಲಿ ಬ್ರಿಟಿಷರು ಅಸ್ಸಾಮನ್ನು ವಶಪಡಿಸಿಕೊಂಡ ನಂತರ ಪಶ್ಚಿಮ ಬಂಗಾಳದಿಂದ ಬಂಗಾಳಿ ಮಾತನಾಡುವ ಜನರು ಕೆಲಸ ಹುಡುಕಿಕೊಂಡು ವಲಸೆ ಬಂದರು. ಹೀಗೆ ವಲಸೆ ಬಂದವರು ಬ್ರಿಟಿಷ್‌ ಸರ್ಕಾರವನ್ನು ಓಲೈಸಿದರು ಮತ್ತು ಬಂಗಾಳಿಯನ್ನು ಅಸ್ಸಾಂನ ಅಧಿಕೃತ ಭಾಷೆಯಾಗಿ ಹೇರಲಾಯಿತು. 1873ರಲ್ಲಿ ಬ್ಯಾಪಿಸ್ಟ್‌ ಮಿಷನರಿಗಳ ಹೋರಾಟದಿಂದ ಅಸ್ಸಾಂ ಭಾಷೆ ಮತ್ತೆ ಸರಿಯಾದ ಸ್ಥಾನಮಾನ ಪಡೆಯಿತು. ಆದರೆ ಬಂಗಾಳಿ ಭಾಷೆಯ ಪ್ರಾಬಲ್ಯದ ಬಗ್ಗೆ ಅಸ್ಸಾಂ ಜನರಲ್ಲಿ ಇರುವ ಅಭದ್ರತೆಯ ಭಾವ ಮಾತ್ರ ಇನ್ನೂ ಹಾಗೇ ಉಳಿದಿದೆ.

ಬಂಗಾಳಿ ಜನರು ಖಾಯಂ ಪೌರತ್ವ ಪಡೆದರೆ ಇಲ್ಲಿನ ಸ್ಥಳೀಯರಿಗಿಂತ ವಲಸಿಗರೇ ಹೆಚ್ಚಾಗಲಿದ್ದಾರೆ. ಪೂರ್ವ ಬಂಗಾಳದಿಂದ ಬಂದ ಹಿಂದು-ಬಂಗಾಳಿ ವಲಸಿಗರು ತ್ರಿಪುರದಲ್ಲೀಗ ರಾಜಕೀಯವಾಗಿ ಪ್ರಾಬಲ್ಯ ಸಾಧಿಸಿದ್ದಾರೆ ಮತ್ತು ಮೂಲ ಬುಡಕಟ್ಟು ಜನಾಂಗದವರು ಮೂಲೆಗುಂಪಾಗಿದ್ದಾರೆ. ಅಸ್ಸಾಂನಲ್ಲೂ ಹೀಗೇ ಆಗಬಹುದು.

ಅದಕ್ಕೆ ಇಂಬು ನೀಡುವಂತೆ 2001ರ ಜನಗಣತಿ ಪ್ರಕಾರ ಅಸ್ಸಾಂನಲ್ಲಿ 1991ರಲ್ಲಿ ಅಸ್ಸಾಂ ಭಾಷೆ ಮಾತನಾಡುವವರ ಸಂಖ್ಯೆ58% ಇದ್ದರೆ, ಅದು 2001ರ ವೇಲೆಗೆ 48%ಗೆ ಇಳಿದಿದೆ. ಬಂಗಾಳಿ ಮಾತನಾಡುವವ ಸಂಖ್ಯೆ 25% ನಿಂದ 30%ಗೆ ಏರಿಕೆಯಾಗಿದೆ. ಬಂಗಾಳಿ ಹಿಂದುಗಳು ಮತ್ತು ಬಂಗಾಳಿ ಮುಸ್ಲಿಮರು ಒಗ್ಗಟ್ಟಾದರೆ ಆ ಭಾಷಿಗರೇ ಹೆಚ್ಚಾಗುತ್ತಾರೆ.

ಅಸ್ಸಾಂ ಒಪ್ಪಂದ ರದ್ದಾಗುತ್ತೆಂಬ ಆತಂಕ

ಪೌರತ್ವ ತಿದ್ದುಪಡಿ ಕಾಯ್ದೆಯು ಅಕ್ರಮ ವಲಸಿಗರಿಗೆ ಪೌರತ್ವ ನೀಡಿ, ಎನ್‌ಆರ್‌ಸಿಯನ್ನು ಅನಗತ್ಯವಾಗಿಸುತ್ತದೆ ಮತ್ತು ಅಸ್ಸಾಂ ಒಪ್ಪಂದದ 6ನೇ ವಿಧಿಯನ್ನು ಉಲಂಘಿಸುತ್ತದೆ ಎಂದು ಅಸ್ಸಾಂ ಗಣ ಪರಿಷತ್‌ನ ಆರೋಪ. ಅಸ್ಸಾಂ ಒಪ್ಪಂದದ 6ನೇ ವಿಧಿಯು ಅಸ್ಸಾಮಿಯ ಜನರ ಸಾಂಸ್ಕೃತಿಕ, ಸಾಮಾಜಿಕ, ಭಾಷಾ ಗುರುತು ಮತ್ತು ಪರಂಪರೆಯನ್ನು ರಕ್ಷಿಸಲು, ಸಂರಕ್ಷಿಸಲು ಮತ್ತು ಉತ್ತೇಜಿಸಲು ಹಾಗೂ ಸಾಂವಿಧಾನಿಕ, ಶಾಸಕಾಂಗ ಮತ್ತು ಆಡಳಿತಾತ್ಮಕ ಸುರಕ್ಷತೆಗಳಿಗೆ ಸಂಬಂಧಿಸಿದೆ.

ನೀವ್ಯಾರೂ ಹೆದರಬೇಕಿಲ್ಲ: ಈಶಾನ್ಯ ಜನತೆಗೆ ಮೋದಿ ಭರವಸೆ!

ಅಸ್ಸಾಂನ ಪ್ರತಿಭಟನೆ ಸ್ವರೂಪ

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಅಸ್ಸಾಂನಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆ ಹಿಂಸಾಚಾರವಾಗಿ ಪರಿವರ್ತನೆಯಾಗುತ್ತದೆ. ಅಸ್ಸಾಂ ವಿದ್ಯಾರ್ಥಿಗಳು ಕಾಯ್ದೆ ವಿರೋಧಿಸಿ ಬೀದಿಗಿಳಿದ ಬಳಿಕ ಪ್ರತಿಭಟನೆಯ ಸ್ವರೂಪವೇ ಬದಲಾಗಿದೆ. ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿ-ಪಾಸ್ತಿಯನ್ನು ಹಾಳುಗೆಡವುತ್ತಿದ್ದಾರೆ. ಗುವಾಹಟಿ, ದೀಬ್ರುಘರ್‌ನಲ್ಲಿ ಇನ್ನೂ ಪ್ರತಿಭಟನೆ ನಡೆಯುತ್ತಿದೆ.

ಮುಖ್ಯಮಂತ್ರಿ ಮತ್ತು ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ರಾಜ್ಯದ 10 ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ. ಹಲವು ವಿಮಾನಯಾನ ಸಂಸ್ಥೆಗಳು ದೀಬ್ರುಘರ್‌ನಿಂದ ಗುವಾಹಟಿಗೆ ವಿಮಾನ ಸಂಚಾರವನ್ನು ರದ್ದುಮಾಡಿವೆ. ರಣಜಿ ಟ್ರೋಫಿ ಕ್ರಿಕೆಟ್‌ ಮ್ಯಾಚನ್ನು ರದ್ದು ಮಾಡಿ, ಡ್ರಾ ಎಂದು ಘೋಷಿಸಲಾಗಿದೆ.

ಕಲ್ಲು ತೂರಾಟ ತಡೆಯಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದರ ಪರಿಣಾಮ ಮೂವರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಅಸ್ಸಾಂ ಮತ್ತು ತ್ರಿಪುರಾ ನಡುವೆ ಸಂಪರ್ಕ ಕಲ್ಪಿಸುವ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ. ಪ್ರತಿಭಟನೆ ಇನ್ನೂ ತಹಬದಿಗೆ ಬರದ ಕಾರಣ ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸುತ್ತಿದೆ.

ಅಸ್ಸಾಂನಲ್ಲಿ ಐಎಲ್‌ಪಿಗಾಗಿ ಬೇಡಿಕೆ

ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಂ ರಾಜ್ಯಗಳು ಇನ್ನರ್‌ ಪರ್ಮಿಟ್‌ ವ್ಯವಸ್ಥೆ (ಐಎಲ್‌ಪಿ)(ಬೇರೆ ರಾಜ್ಯದವರು ಅಥವಾ ಹೊರಗಿನವರು ಇನ್ನೊಂದು ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ಪಡೆಯುವ ವ್ಯವಸ್ಥೆ) ಹೊಂದಿವೆ. ಆದರೆ ಅಸ್ಸಾಂ ಈ ವ್ಯವಸ್ಥೆ ಇಲ್ಲ. ಅಸ್ಸಾಂಗೂ ಈ ವಿಶೇಷಾಧಿಕಾರ ನೀಡಬೇಕು ಎಂಬುದು ಪ್ರತಿಭಟನಾಕಾರರ ಇನ್ನೊಂದು ಬೇಡಿಕೆ.

ಪೌರತ್ವ ಕಾಯ್ದೆಯು ಚುನಾವಣೆ ಮೇಲೆ ಪ್ರಭಾವ ಬೀರುತ್ತಾ?

ಸಾಕಷ್ಟುವಿರೋಧದ ನಡುವೆಯೇ ಪೌರತ್ವ ತಿದ್ದುಪಡಿ ಮಸೂದೆಯು ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕಾರಗೊಂಡು ರಾಷ್ಟ್ರಪತಿ ಸಹಿಯೂ ಬಿದ್ದಿದೆ. ಇದೆ ಪ್ರಕ್ರಿಯೆಗಳ ಆರಂಭಕ್ಕೆ ಸುಪ್ರೀಂಕೋರ್ಟ್‌ ಉತ್ತರವೊಂದೇ ಬಾಕಿ. ಇದೇ ಸಮಯಕ್ಕೆ ಸರಿಯಾಗಿ ವಿವಿಧ ರಾಜ್ಯಗಳ ಚುನಾವಣೆಗಳೂ ಸನ್ನಿಹವಿವೆ. ದೆಹಲಿ ಮತ್ತು ಬಿಹಾರದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಇನ್ನು ಅಸ್ಸಾಂ, ಕೇರಳ, ಪಾಂಡೀಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿಯೂ 2021ರಲ್ಲಿ ಚುನಾವಣೆ ನಡೆಯಲಿದೆ.

ಈ 7 ರಾಜ್ಯಗಳಲ್ಲಿ ದೆಹಲಿ ಮತ್ತು ಬಿಹಾರ ಮತ್ತು ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶವು ನಿರ್ಣಾಯಕ. ಇಲ್ಲಿನ ಜನಾಭಿಪ್ರಾಯವು ಪೌರತ್ವ ಕಾಯ್ದೆ ಅನುಷ್ಠಾನದ ಪರಿಣಾಮ ಏನು ಎನ್ನುವುದನ್ನು ಸ್ಪಷ್ಟಪಡಿಸಲಿದೆ. ಏಕೆಂದರೆ ಈ ಮೂರು ರಾಜ್ಯಗಳಲ್ಲಿ ಬಾಂಗ್ಲಾ, ಪಾಕಿಸ್ತಾನ ಮತ್ತು ಅಷ್ಘಾನಿಸ್ತಾನದಿಂದ ವಲಸೆ ಬಂದ ಅಸಂಖ್ಯಾತ ಜನರಿದ್ದಾರೆ.