Asianet Suvarna News Asianet Suvarna News

ಪಾಕಿಸ್ತಾನದ 108 ಹಿಂದುಗಳಿಗೆ ಭಾರತೀಯ ಪೌರತ್ವ ವಿತರಣೆ

ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ 108 ಹಿಂದುಗಳಿಗೆ ಇಲ್ಲಿನ ಜಿಲ್ಲಾಡಳಿತ ಭಾರತೀಯ ಪೌರತ್ವ ನೀಡಿದೆ. ಇವರಿಗೆ ಗುಜರಾತ್‌ನ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಾಂಘ್ವಿ ಪೌರತ್ವ ಪ್ರಮಾಣ ಪತ್ರವನ್ನು ಹಸ್ತಾಂತರಿಸಿ ಅಭಿನಂದಿಸಿದರು.

Ahmedabad district administration has given Indian citizenship to 108 Hindus who had migrated to India from Pakistan akb
Author
First Published Sep 13, 2023, 7:18 AM IST

ಅಹಮದಾಬಾದ್‌: ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ 108 ಹಿಂದುಗಳಿಗೆ ಇಲ್ಲಿನ ಜಿಲ್ಲಾಡಳಿತ ಭಾರತೀಯ ಪೌರತ್ವ ನೀಡಿದೆ. ಇವರಿಗೆ ಗುಜರಾತ್‌ನ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಾಂಘ್ವಿ ಪೌರತ್ವ ಪ್ರಮಾಣ ಪತ್ರವನ್ನು ಹಸ್ತಾಂತರಿಸಿ ಅಭಿನಂದಿಸಿದರು. ಜೊತೆಗೆ ನವ ಭಾರತ ನಿರ್ಮಾಣಕ್ಕೆಕ ಸಂಪೂರ್ಣ ಬದ್ಧರಾಗಿರಬೇಕು ಎಂದು ತಿಳಿಸಿದರು. ಅಹಮದಾಬಾದ್‌ನಲ್ಲಿ (Ahmedabad) ಈವರೆಗೂ ಪಾಕಿಸ್ತಾನದಿಂದ ಬಂದ 1149 ಹಿಂದುಗಳಿಗೆ ಭಾರತೀಯ ಪೌರತ್ವ ವಿತರಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. 2016 ಹಾಗೂ 2018ರ ಗುಜರಾತ್ (Gujarat) ರಾಜ್ಯಪತ್ರವು ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ (Monority) ಭಾರತದ ಪೌರತ್ವ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ.

ಪಾಕಿಸ್ತಾನದ ಮಕ್ಕಳಿಗೆ ಭಾರತ ಪೌರತ್ವ ಸದ್ಯಕ್ಕಿಲ್ಲ: ಹೈಕೋರ್ಟ್‌
ಪಾಕಿಸ್ತಾನದ ತಂದೆ ಮತ್ತು ಭಾರತದ ತಾಯಿಗೆ ದುಬೈನಲ್ಲಿ (Dubai) ಜನಿಸಿರುವ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಭಾರತದ ಪೌರತ್ವ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ಹೈಕೋರ್ಟ್‌ ನಿರಾಕರಿಸಿದೆ. ತಮಗೆ ಭಾರತದ ಪೌರತ್ವ (Indian citizenship) ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನಲ್ಲಿ ನೆಲೆಸಿರುವ 17 ಮತ್ತು 14 ವರ್ಷದ ಇಬ್ಬರು ಪಾಕಿಸ್ತಾನದ ಅಪ್ರಾಪ್ತ ಮಕ್ಕಳು ಜಂಟಿಯಾಗಿ ತಮ್ಮ ತಾಯಿ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ (M. Nagaprasanna) ಅವರ ನ್ಯಾಯಪೀಠ ಆದೇಶಿಸಿದೆ.

ಪೌರತ್ವವನ್ನು ತ್ಯಜಿಸಲು 21 ವರ್ಷ ವಯಸ್ಸಾಗಬೇಕು ಎಂದು ಪಾಕಿಸ್ತಾನ ದೇಶದ ನಿಯಮವಿದೆ. ಹಾಗಾಗಿ, ಅರ್ಜಿದಾರರು ಭಾರತದ ಕಾನೂನುಗಳಿಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ. ಪಾಕಿಸ್ತಾನದ ಪೌರತ್ವವನ್ನು ತ್ಯಜಿಸಿದ ಬಳಿಕವೇ ಅರ್ಜಿದಾರರು ಭಾರತದ ಪೌರತ್ವ ಕೋರಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ಆದೇಶದಲ್ಲಿ ನಿರ್ದೇಶಿಸಿದೆ.

ಭಾರತೀಯ ಶ್ರೀಮಂತರು ಭಾರತ ಪೌರತ್ವ ತ್ಯಜಿಸ್ತಿರೋದು ಯಾಕೆ ಗೊತ್ತಾ?

ಪ್ರಕರಣದ ವಿವರ: ಭಾರತ ಮೂಲದ ಅಮೀನಾ (Amina), ದುಬೈನಲ್ಲಿರುವ ಪಾಕಿಸ್ತಾನದ ಪ್ರಜೆ ಅಸ್ಸಾದ್‌ ಮಲ್ಲಿಕ್‌ ಎಂಬುವರನ್ನು 2002ರಲ್ಲಿ ಷರಿಯಾ ಕಾನೂನಿನ (Shariya rules) ಪ್ರಕಾರ ವಿವಾಹವಾಗಿದ್ದರು. ದಂಪತಿಗೆ ದುಬೈನಲ್ಲಿಯೇ ಇಬ್ಬರು ಮಕ್ಕಳು ಜನಿಸಿದ್ದರು. ನಂತರ ಈ ದಂಪತಿ ದುಬೈ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಪಡೆದಿದ್ದರು. ಜತೆಗೆ, ಮಕ್ಕಳ ಮೇಲಿನ ಹಕ್ಕನ್ನು ತಾಯಿಗೆ (ಅಮೀನಾ) ಬಿಟ್ಟುಕೊಡಲಾಗಿತ್ತು. ಈ ಮಕ್ಕಳು ದುಬೈನಲ್ಲಿ ಉದ್ಯೋಗದಲ್ಲಿದ್ದ ತಾಯಿಯೊಂದಿಗೆ ನೆಲೆಸಿದ್ದರು.

ಆದರೆ, ದುಬೈನಲ್ಲಿ ಜೀವನ ನಡೆಸಲು ಅಸಾಧ್ಯವಾದ ಕಾರಣ ಅಮೀನಾ ಅವರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿದ್ದ ತನ್ನ ಪೋಷಕರ ಮನೆಗೆ 2021ರಲ್ಲಿ ಹಿಂದಿರುಗಲು ನಿರ್ಧರಿಸಿದರು. ಮಕ್ಕಳು ಪಾಕಿಸ್ತಾನಿ ಪ್ರಜೆಗಳಾಗಿದ್ದು, ಅಲ್ಲಿಯ ಪಾಸ್‌ಪೋರ್ಟ್‌ ಹೊಂದಿರುವ ಕಾರಣ ಭಾರತಕ್ಕೆ ಕರೆತರಲು ಅನುಮತಿ ಕೋರಿ ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಸಲ್ಲಿಸಿದ್ದರು. ಮನವಿ ಪರಿಗಣಿಸಿದ್ದ ಭಾರತದ ರಾಯಭಾರ (Embassy of India) ಕಚೇರಿಯ ಅಧಿಕಾರಿಗಳು, ಪಾಕಿಸ್ತಾನದ ಪಾಸ್‌ಪೋರ್ಟನ್ನು ಹಿಂದಿರುಗಿಸಿದ ಬಳಿಕ ಅವರ ಪೌರತ್ವದ ಕುರಿತು ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಷರತ್ತು ವಿಧಿಸಿ ಮಾನವೀಯತೆ ದೃಷ್ಟಿಯಿಂದ ತಾತ್ಕಾಲಿಕವಾಗಿ ಭಾರತಕ್ಕೆ ಬರಲು 2021ರ ಮೇ 31ರಂದು ಪಾಸ್‌ಪೋರ್ಟ್‌ ನೀಡಿದ್ದರು. 

ದುಬೈನಲ್ಲಿರುವ ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಪಾಕಿಸ್ತಾನದ (Islamic Republic of Pakistan) ರಾಯಭಾರಿ ಕಚೇರಿಯ ಅಧಿಕಾರಿಗಳು, ಇಬ್ಬರು ಅಪ್ರಾಪ್ತರಿಗೆ ಭಾರತದ ಪೌರತ್ವ ನೀಡುವುದಕ್ಕೆ ನಮಗೆ ಅಡ್ಡಿಯಿಲ್ಲ. ಆದರೆ, ಪಾಕಿಸ್ತಾನ ಪೌರತ್ವ ಕಾಯ್ದೆ ಪ್ರಕಾರ ಪಾಕಿಸ್ತಾನದ ಪೌರತ್ವ ತ್ಯಜಿಸಬೇಕಾದರೆ 21 ವರ್ಷ ವಯಸ್ಸಾಗಿರುವುದು ಕಡ್ಡಾಯ. ಅದರಂತೆ ಮಕ್ಕಳಿಗೆ 21 ವರ್ಷ ವಯಸ್ಸಾಗುವವರೆಗೂ ಪೌರತ್ವ ತ್ಯಜಿಸಲು ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

2022ರಲ್ಲಿ ಭಾರತದ ಪೌರತ್ವ ತೊರೆದು ಹೋದವರೆಷ್ಟು ಜನ... ಇಲ್ಲಿದೆ ಡಿಟೇಲ್ಸ್

ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಅಮೀನಾ ತನ್ನಿಬ್ಬರು ಮಕ್ಕಳಿಗೆ ಭಾರತದ ಪೌರತ್ವ ನೀಡುವಂತೆ ಕೇಂದ್ರ ಗೃಹ ಇಲಾಖೆಗೆ (Central Home Department) 2022ರ ಮೇ 5ರಂದು ಪತ್ರ ಬರೆದು ಕೋರಿದ್ದರು. ಅದಕ್ಕೆ ಕೇಂದ್ರ ಗೃಹ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಜುಲೈನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಅಮೀನಾ, ತನ್ನ ಮಕ್ಕಳಿಗೆ ಭಾರತದ ಪೌರತ್ವ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಈ ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ 2022ರ ಸೆಪ್ಟೆಂಬರ್‌ನಲ್ಲಿ ಅಮೀನಾ ಮನವಿಯನ್ನು ತಿರಸ್ಕರಿಸಿ ಗೃಹ ಸಚಿವಾಲಯ ಆದೇಶಿಸಿತ್ತು. ಇದೀಗ ಹೈಕೋರ್ಟ್‌ ಸಹ ಅಮೀನಾ ಮತ್ತವರ ಅಪ್ರಾಪ್ತ ಮಕ್ಕಳ ಮನವಿ ತಿರಸ್ಕರಿಸಿದೆ.

Follow Us:
Download App:
  • android
  • ios