ಪ್ರತಿ ದಿನ 90 ರೇಪ್ ಕೇಸ್ ದಾಖಲು, 15ದಿನದಲ್ಲಿ ವಿಚಾರಣೆ ಮುಗಿಸಲು ಮೋದಿಗೆ ಪ.ಬಂಗಾಳ ಸಿಎಂ ಪತ್ರ!
ವೈದ್ಯೆ ಪ್ರಕರಣದ ಬಿಸಿ ತಟ್ಟುತ್ತಿದ್ದಂತೆ ಪಶ್ಚಿಮ ಬಂಗಾಳ ಸಿಎಂ, ಪ್ರಧಾನಿ ಮೋದಿಗೆ ಪತ್ರ ಬರೆದು ಪ್ರತಿ ದಿನ 90 ಅತ್ಯಾಚಾರ ಕೇಸ್ ದಾಖಲಾಗುತ್ತಿದೆ ಎಂದು ಅಂಕಿ ಅಂಶ ನೀಡಿದ್ದಾರೆ. 15 ದಿನದಲ್ಲಿ ಫಾಸ್ಟ್ ಟ್ರಾಕ್ ಕೋರ್ಟ್ ಮೂಲಕ ವಿಚಾರಣೆ ಅಂತ್ಯಗೊಳಿಸಲು ದೀದಿ ಮನವಿ ಮಾಡಿದ್ದಾರೆ.
ಕೋಲ್ಕತಾ(ಆ.22) ಕೋಲ್ಕತಾ ವೈದ್ಯೆ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಇತ್ತ ಸುಪ್ರೀಂ ಕೋರ್ಟ್ ಕೂಡ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಛೀಮಾರಿ ಹಾಕಿದೆ. ದೇಶಾದ್ಯಂತ ಪ್ರತಿಭಟನೆಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆ ದೇಶದ ಅತ್ಯಾಚಾರ ಪ್ರಕರಣದ ಅಂಕಿ ಸಂಖ್ಯೆ ಹಿಡಿದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಪ್ರತಿ ದಿನ ದೇಶದಲ್ಲಿ ಸರಾಸರಿ 90 ಅತ್ಯಾಚಾರ ಪ್ರಕರಣ ದಾಖಲಾಗುತ್ತಿದೆ. ಈ ಪ್ರಕರಣಗಳ ಇತ್ಯರ್ಥಕ್ಕೆ ಫಾಸ್ಟ್ ಟ್ರಾಕ್ ಕೋರ್ಟ್ ಮೂಲಕ 15 ದಿನದಲ್ಲಿ ಮುಗಿಸಲು ಮಮತಾ ಬ್ಯಾನರ್ಜಿ ನವಿ ಮಾಡಿದ್ದಾರೆ.
ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ವೈದ್ಯೆ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಿಂದ ಪಶ್ಚಿಮ ಬಂಗಾಳ ಮಾತ್ರವಲ್ಲ ಇಡೀ ದೇಶವೇ ಆಕ್ರೋಶಗೊಂಡಿದೆ. ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಒಂದೊಂದೆ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಇದರ ನಡುವೆ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಪ್ರಕರಣಗಳ ಶೀಘ್ರ ವಿಚಾರಣೆಗೆ ಮನವಿ ಮಾಡಿದ್ದಾರೆ.
ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ರೇಪ್ & ಮರ್ಡರ್..! ಡಾಕ್ಟರ್ ಅಭಯಾ ಕೇಸ್ ಮುಚ್ಚಿ ಹಾಕೋ ಸಂಚು ನಡೆದಿತ್ತಾ
ಈ ಪತ್ರದ ಮೂಲಕ ಮಮತಾ ಬ್ಯಾನರ್ಜಿ ಪ್ರಮುಖವಾಗಿ ದೇಶದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಕುರಿತು ಬೆಳಕು ಚೆಲ್ಲಿದ್ದಾರೆ. ದೇಶದಲ್ಲಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ. ಸದ್ಯ ಲಭ್ಯವಿರುವ ದಾಖಲೆಗಳ ಪ್ರಕಾರ ದೇಶದಲ್ಲಿ ಪ್ರತಿ ದಿನ ಸರಾಸರಿ 90 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದೆ. ಇದು ದೇಶದ ಆತ್ಮವಿಶ್ವಾಸ, ಧೈರ್ಯವನ್ನೇ ಕುಂದುವಂತೆ ಮಾಡುತ್ತಿದೆ. ಹೀಗಾಗಿ ಈ ಪ್ರಕರಣಗಳಿಗೆ ಅಂತ್ಯಹಾಡಿ, ಮಹಿಳೆ ಹಾಗೂ ಮಕ್ಕಳ ಸುರಕ್ಷತೆ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅತ್ಯಂತ ಸೂಕ್ಷ್ಮ ಹಾಗೂ ಗಂಭೀರತೆ ಹೊಂದಿರುವ ಈ ಪ್ರಕರಣಗಳನ್ನು ಸಮಗ್ರ ಆಯಾಮಗಳಲ್ಲಿ ನೋಡಬೇಕಿದೆ. ಜೊತೆಗೆ ಅತ್ಯಂತ ಕಠಿಣ ಶಿಕ್ಷೆ ಮೂಲಕ ಘಟನೆಗಳಿಗೆ ಇತಿಶ್ರಿ ಹಾಡಬೇಕಿದೆ. ಇದಕ್ಕಾಗಿ ಫಾಸ್ಟ್ ಟ್ರಾಕ್ ಕೋರ್ಟ್‌ಗಳನ್ನು ಸ್ಥಾಪಿಸಿ 15 ದಿನಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗುವಂತೆ ಆಗಬೇಕು ಎಂದು ಮಮತಾ ಬ್ಯಾನರ್ಜಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ವೈದ್ಯೆಯ ರೇಪ್ ಆಂಡ್ ಮರ್ಡರ್ ಕೇಸ್; ಮಮತಾ ಬ್ಯಾನರ್ಜಿ ರಾಜೀನಾಮೆ ಕೊಟ್ರೆ ಮುಂದಿನ ಸಿಎಂ ಯಾರು?
ಇತ್ತೀಚೆಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣದ ವಿಚಾರಣೆ ನಡೆಸಿತ್ತು. ಈ ವೇಳೆ ಎಫ್ಐಆರ್ ದಾಖಲಿಸಲು ವಿಳಂಬ ನಡೆ ಅನುಸರಿಸಿದ್ದಕ್ಕೆ ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಇದೇ ವೇಳೆ ಗೂಂಡಾಗಳು ಆಸ್ಪತ್ರೆಗೆ ದಾಳಿ ನಡೆಸಿ ದಾಂಧಲೆ ನಡೆಸಿದ ಘಟನೆಯನ್ನೂ ಖಂಡಿಸಿ ಸರ್ಕಾರಕ್ಕೆ ಛೀಮಾರಿ ಹಾಕಿತ್ತು.