Asianet Suvarna News Asianet Suvarna News

India@75: ಬ್ರಿಟಿಷರ ದಾಳಿಯಿಂದ ಅರ್ಧ ದಿನಕ್ಕೆ ಸೀಮಿತವಾದ ದೇಸಾಯಿಗಳ ಗಣೇಶೋತ್ಸವ

ಸ್ವಾತಂತ್ರ್ಯ ಹೋರಾಟದಲ್ಲಿ ದೇಸಾಯಿ ಮನೆತನಗಳ ಸುಪರ್ದಿಯಲ್ಲಿದ್ದ ಧಾರವಾಡ ಜಿಲ್ಲೆಯ ದೇಸಗತಿ ಹಳ್ಳಿಗಳ ಕೊಡುಗೆ ಆಪಾರ. ಆ ಕಂದಾಯ ಗ್ರಾಮಗಳ ಸುಂಕವನ್ನು ವಸೂಲಿ ಮಾಡಿ ಬ್ರಿಟಿಷ್‌ ಸರ್ಕಾರಕ್ಕೆ ಒಪ್ಪಿಸುವ ಹೊಣೆ ಹೊತ್ತಿದ್ದ ದೇಸಾಯಿ ಮನೆತನದವರೇ ಬ್ರಿಟಿಷರ ದೌರ್ಜನ್ಯದ ವಿರುದ್ಧ ತಿರುಗಿಬಿದ್ದಿದ್ದರು. 

Azadi Ki Amrit Mahothsav Meet Dharwad Virupakshappa Family and Freedom Struggle hls
Author
Bengaluru, First Published Aug 5, 2022, 1:58 PM IST

ಸ್ವಾತಂತ್ರ್ಯ ಹೋರಾಟದಲ್ಲಿ ದೇಸಾಯಿ ಮನೆತನಗಳ ಸುಪರ್ದಿಯಲ್ಲಿದ್ದ ಧಾರವಾಡ ಜಿಲ್ಲೆಯ ದೇಸಗತಿ ಹಳ್ಳಿಗಳ ಕೊಡುಗೆ ಆಪಾರ. ಆ ಕಂದಾಯ ಗ್ರಾಮಗಳ ಸುಂಕವನ್ನು ವಸೂಲಿ ಮಾಡಿ ಬ್ರಿಟಿಷ್‌ ಸರ್ಕಾರಕ್ಕೆ ಒಪ್ಪಿಸುವ ಹೊಣೆ ಹೊತ್ತಿದ್ದ ದೇಸಾಯಿ ಮನೆತನದವರೇ ಬ್ರಿಟಿಷರ ದೌರ್ಜನ್ಯದ ವಿರುದ್ಧ ತಿರುಗಿಬಿದ್ದಿದ್ದರು.

ತಿಲಕರ ಕರೆಯಂತೆ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಕಲಘಟಗಿ ತಾಲೂಕಿನ ಬೋಗೇನಾಗರಕೊಪ್ಪ ಗ್ರಾಮದ ವಿರೂಪಾಕ್ಷಪ್ಪ ಅನಂತರಾವ್‌ ದೇಸಾಯಿ ದೇಸಾಯಿ ಮನೆತನದವರೂ ಗಣೇಶೋತ್ಸವ ಆಚರಿಸುತ್ತಿದ್ದರು. ಅನುಮಾನಗೊಂಡ ಬ್ರಿಟಿಷರು ದಾಳಿ ನಡೆಸಿದ್ದರಿಂದ ಗಣೇಶೋತ್ಸವನ್ನು ಅರ್ಧ ದಿನಕ್ಕೇ ಮೊಟಕುಗೊಳಿಸಬೇಕಾಯಿತು. ಅದರ ಕುರುಹಾಗಿ ಈಗಲೂ ಈ ಮನೆತನದವರ ಗಣೇಶೋತ್ಸವ ಅರ್ಧದಿನಕ್ಕೆ ಸೀಮಿತವಾಗಿದೆ.

ಹರ್ ಘರ್ ತಿರಂಗಾ ಅಭಿಯಾನ: ರಾಷ್ಟ್ರಧ್ವಜಕ್ಕೆ ಬಹುಬೇಡಿಕೆ

ವಿರೂಪಾಕ್ಷಪ್ಪ ದೇಸಾಯಿ ಊರಿನ ದೇಸಾಯಿ ಮನೆತನದವರು. ಮಂಗಲ ಪಾಂಡೆ ಬಲಿದಾನದಿಂದ ಪ್ರೇರಣೆಗೊಂಡು ಅವರು ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಇವರ ಅಧಿಕಾರ ವ್ಯಾಪ್ತಿಯಲ್ಲಿ ಹತ್ತಾರು ಕಂದಾಯ ಗ್ರಾಮಗಳು ಬರುತ್ತಿದ್ದವು. 1934ರ ಹೊತ್ತಿಗೆ ಕಲಘಟಗಿ ತಾಲೂಕಿನಲ್ಲಿ ವಿಪರೀತ ಬರ. ಹೀಗಾಗಿ ಯಾವ ಗ್ರಾಮಗಳು ಸುಂಕ ಕಟ್ಟಿರಲಿಲ್ಲ. ಉಪ್ಪಿಗೂ ಸುಂಕ ವಿಧಿಸಿದ್ದಕ್ಕೆ ವಿರೂಪಾಕ್ಷಪ್ಪ ದೇಸಾಯಿ ಬ್ರಿಟಿಷರ ವಿರುದ್ಧ ಸಿಡಿದೆದ್ದರು. ಆಗ ಬ್ರಿಟಿಷ್‌ ಅಧಿಕಾರಿ ಹಾಗೂ ದೇಸಾಯಿ ಅವರಿಗೂ ವಾಗ್ವಾದ ನಡೆದಿತ್ತು.

ಅರ್ಧದಿನದ ಗಣೇಶೋತ್ಸವ:

ಅದಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ಸಕ್ರಿಯರಾಗಿದ್ದ ಯುವಕ ವಿರೂಪಾಕ್ಷಪ್ಪ ದೇಸಾಯಿ ಹುಬ್ಬಳ್ಳಿಯಲ್ಲಿ ತಿಲಕರನ್ನು ಭೇಟಿಯಾಗಿ ಚರ್ಚಿಸಿದ್ದರು. ತಿಲಕರ ಸೂಚನೆಯಂತೆ ದೇಸಾಯಿಯವರ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಲಾಗಿತ್ತು. 1934ರಲ್ಲಿ ಮೊದಲ ವರ್ಷ 5 ದಿನ ಹಬ್ಬ ಆಚರಿಸಲಾಯಿತು.

1935ರಲ್ಲಿ ದೇಸಾಯಿಯವರ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದು ಬ್ರಿಟಿಷ್‌ ಅಧಿಕಾರಿಯೊಬ್ಬನಿಗೆ ಗೊತ್ತಾಯಿತು. ಬ್ರಿಟಿಷ್‌ ಸರ್ಕಾರದ ವಿರುದ್ಧ ಜನರನ್ನು ಒಟ್ಟುಗೂಡಿಸುವ ಕೆಲಸ ನಡೆದಿದೆ ಎಂದು ಸಿಟ್ಟುಗೊಂಡ ಆತ ದೇಸಾಯಿ ಅವರ ಮನೆ ಮೇಲೆ ದಾಳಿ ನಡೆಸಿದ. ವಿರೂಪಾಕ್ಷ ದೇಸಾಯಿ ಪೂಜೆ ಬಳಿಕ ಬಂದಿದ್ದ ಜನರಿಗೆಲ್ಲ ಪ್ರಸಾದ ಹಂಚಿ ಊಟಕ್ಕೆ ಹೋಗಬೇಕೆನ್ನುವಷ್ಟರಲ್ಲೇ ಬ್ರಿಟಿಷರ ಪಡೆ ಮನೆಗೆ ಮುತ್ತಿಗೆ ಹಾಕಿತ್ತು. ತಕ್ಷಣವೇ ದೇಸಾಯಿ ಅವರು ವಾಡೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಎದುರಿನ ಬಾವಿಯಲ್ಲಿ ವಿಸರ್ಜನೆ ಮಾಡಿ ಹಿಂದುಗಡೆಯ ಬಾಗಿಲಿನ ಮೂಲಕ ಪರಾರಿಯಾಗಿದ್ದರು. ಹೀಗಾಗಿ ಬ್ರಿಟಿಷರಿಗೆ ಗಣೇಶೋತ್ಸವ ಮಾಡಿದ್ದ ಕುರುಹು ಕೂಡ ಸಿಕ್ಕಿರಲಿಲ್ಲ. ಈ ಘಟನೆಯ ನಂತರ ಇಲ್ಲಿ ಪ್ರತಿವರ್ಷ ಬೆಳಗ್ಗೆ ಪ್ರತಿಷ್ಠಾಪನೆಯಾಗುವ ಗಣೇಶನನ್ನು ಮಧ್ಯಾಹ್ನದ ಹೊತ್ತಿಗೆ ವಿಸರ್ಜನೆ ಮಾಡಲಾಗುತ್ತಿದೆ.

India@75: ಹೋರಾಟಗಾರರ ಅಡ್ಡೆ ಚಿಕ್ಕೋಡಿಯ ಬಸವಪ್ರಭು ಕೋರೆ ಮನೆ

ಇಷ್ಟೇ ಅಲ್ಲದೇ, ಹಿರಿಯ ಸಾಹಿತಿ ದ.ರಾ.ಬೇಂದ್ರೆ ಆಪ್ತರಾಗಿದ್ದ ದೇಸಾಯಿ ದೇಶಪ್ರೇಮದ ಕುರಿತು ಲೇಖನಗಳನ್ನು ಪತ್ರಿಕೆಗಳಿಗೆ ಬರೆದು ಭೂಗತವಾಗುತ್ತಿದ್ದರು. ಮುಂದೆ ಬ್ರಿಟಿಷರ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದ ವಿರೂಪಾಕ್ಷ ದೇಸಾಯಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಗೋವಾ ವಿಮೋಚನಾ ಚಳವಳಿಯಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈಗಲೂ ನಮ್ಮ ಮನೆತನದಲ್ಲಿ ಅರ್ಧದಿನ ಮಾತ್ರ ಗಣೇಶೋತ್ಸವ ಆಚರಿಸಲಾಗುತ್ತದೆ ಎಂದು ಇವರ ಕುಟುಂಬಸ್ಥ ಮಧುಸೂದನ ಕೃಷ್ಣಾಜಿ ದೇಶಕುಲಕರ್ಣಿ ವಿವರಿಸುತ್ತಾರೆ.

- ಶಿವಾನಂದ ಗೊಂಬಿ

Follow Us:
Download App:
  • android
  • ios