Asianet Suvarna News Asianet Suvarna News

Health Tips: ಹಬ್ಬದೂಟ ಸವಿಯೋ ಜತೆಗೆ ದೇಹವನ್ನ ವಿಷಕಾರಿ ಅಂಶದಿಂದ ದೂರವಿಡಿ

ಹಬ್ಬಗಳ ಸೀಸನ್‌ ಬಂತೆಂದರೆ ಆಹಾರದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು. ಹಬ್ಬದೂಟದೊಂದಿಗೆ ಸಹಜವಾಗಿ ಅಧಿಕ ಕ್ಯಾಲರಿ ದೇಹ ಸೇರುತ್ತದೆ. ಹಾಗೆಯೇ, ಕರಿದ ತಿನಿಸುಗಳು, ಸಿಹಿತಿಂಡಿಗಳು ಹೊಟ್ಟೆ ಸೆರುತ್ತವೆ. ಹೀಗಾಗಿ, ದೇಹವನ್ನು ವಿಷಕಾರಿ ಅಂಶಗಳಿಂದ ರಕ್ಷಿಸಿಕೊಳ್ಳಲು ಕೆಲವು ಮಾರ್ಗೋಪಾಯ ಅನುಸರಿಸುವುದು ಅಗತ್ಯ. 
 

Tips to detox your body in this festive season food
Author
First Published Sep 27, 2022, 7:17 PM IST

ಹಬ್ಬಗಳ ಸಮಯವೆಂದರೆ ಸಂಭ್ರಮ. ಮೈ ತುಂಬ ಕೆಲಸದ ಸಮಯವಾದರೂ ಒಂದು ರೀತಿಯ ಸಡಗರ. ಮನೆಯಲ್ಲಿ ಹೇಗೆ ಆಚರಿಸಬೇಕು ಎನ್ನುವುದರಿಂದ ಹಿಡಿದು, ಯಾವ ಸ್ಥಳಕ್ಕೆ ಹೋಗಬೇಕು, ಯಾರ ಮನೆಯಲ್ಲಿ ಪೂಜೆಗೆ ಕರೆದಿದ್ದಾರೆ ಎನ್ನುವ ಲೆಕ್ಕಾಚಾರವೂ ಶುರುವಾಗುತ್ತದೆ. ಭಕ್ತಿಭಾವದ ಮೇಳೈಕೆಯೊಂದಿಗೆ ಹಬ್ಬದೂಟದ ಸಡಗರವೂ ಸೇರಿಕೊಳ್ಳುತ್ತದೆ. ಹಬ್ಬದೂಟ ಸವಿದಾಗ ಎಷ್ಟು ಖುಷಿಯೋ ಆ ಬಳಿಕ ಅಷ್ಟೇ ನೋವಾಗಲೂಬಹುದು. ಏಕೆಂದರೆ, ಮಧುಮೇಹ, ಕೊಬ್ಬಿನಂಶ, ಹೃದ್ರೋಗ ಹೀಗೆ ಹಲವು ಸಮಸ್ಯೆಗಳು ಈ ಅವಧಿಯಲ್ಲಿ ಹೆಚ್ಚಾಗಬಹುದು. ಹೀಗಾಗಿ, ಆಹಾರದ ಬಗ್ಗೆ ಕಟ್ಟುನಿಟ್ಟು ವಹಿಸುವುದು ಅತ್ಯಗತ್ಯ. ಆದರೂ ನೆಂಟರಿಷ್ಟರ ಮನೆಗಳಿಗೆ ಹೋದಾಗ ಸೌಜನ್ಯಕ್ಕೆಂದು ಸ್ವಲ್ಪ ಸಿಹಿ, ಖಾರ ಸೇವನೆ ಮಾಡಿದರೂ ದೇಹದೊಳಗೆ ಏರುಪೇರಾಗಲು ಅಷ್ಟೇ ಸಾಕಾಗುತ್ತದೆ. ಹೀಗಾಗಿ, ಈ ಸಮಯದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆಹಾರದಿಂದ ಲಿವರ್‌ ಕ್ಷಮತೆ ಕುಂದದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಪ್ರತಿದಿನವೂ ಲಿವರ್‌ ಗೆ ರಕ್ಷಣೆ ನೀಡುವಂತಹ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಿ, ಶುದ್ಧಗೊಳಿಸುವಂತಹ ಆಹಾರ-ವಿಹಾರಕ್ಕೆ ಆದ್ಯತೆ ನೀಡಬೇಕು. ಇವುಗಳನ್ನು ಎಲ್ಲ ಸಮಯದಲ್ಲೂ ಪಾಲಿಸುವುದು ಮುಖ್ಯ. ಹಬ್ಬಗಳ ಸಮಯಲ್ಲಂತೂ ಇನ್ನೂ ಅಗತ್ಯ.

•    ಬೆಚ್ಚಗಿನ ನೀರಿಗೆ (Warm Water) ಜೇನುತುಪ್ಪ (Honey) ಬೆರೆಸಿ ಸೇವಿಸಿ
ಸ್ವಲ್ಪ ಬೆಚ್ಚಗಿನ ನೀರಿಗೆ ಒಂದು ಸ್ಪೂನ್‌ ಜೇನುತುಪ್ಪ ಬೆರಸಿ ಕುಡಿಯುವುದು ಉತ್ತಮ. ಇದರಿಂದ ಜೀರ್ಣಾಂಗ ವ್ಯವಸ್ಥೆಗೆ (Digestive System) ಅನುಕೂಲವಾಗುತ್ತದೆ. ಕೆಲವು ಆಹಾರಗಳನ್ನು (Foods) ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೇನುತುಪ್ಪ ಯಾವುದೇ ರೀತಿಯ ಗ್ಯಾಸ್ಟ್ರೊಇಂಟೆಸ್ಟೈನಲ್‌ (Gastro Intestinal) ಕಾಯಿಲೆಗಳನ್ನು ದೂರವಿಡಲು ಸಹಕಾರಿ. ಆದರೆ, ಮಧುಮೇಹಿಗಳು (Diabetes) ಇದನ್ನು ಮಾಡುವಂತಿಲ್ಲ.

•    ಲಿವರ್‌ ಶುದ್ಧತೆಗೆ (Liver Cleanse) ಆದ್ಯತೆ ನೀಡಿ
ಲಿವರ್‌ ಅನ್ನು ಶುದ್ಧಗೊಳಿಸುವುದು ಮುಖ್ಯ. ಸಾಕಷ್ಟು ನೀರು (Water) ಕುಡಿಯುವುದು ಒಂದು ವಿಧಾನ. ಜತೆಗೆ, ದಿನವೂ ಬೆಳಗ್ಗೆ ಎದ್ದಾಕ್ಷಣ ಎರಡು ಗ್ಲಾಸ್‌ ಬಿಸಿನೀರನ್ನು ಸೇವಿಸಬೇಕು. ಇದು ಅತ್ಯುತ್ತಮ ವಿಧಾನ. ಅರ್ಧ ಗಂಟೆ ಬಿಟ್ಟು ಏನಾದರೂ ಸೇವಿಸಬಹುದು. ಹಾಗೂ ದಿನವಿಡೀ ದೇಹ ಹೈಡ್ರೇಟ್‌ (Hydrate) ಆಗಿರಲು ಮಜ್ಜಿಗೆ (Buttermilk), ಲಿಂಬೆಜ್ಯೂಸ್‌, ಹರ್ಬಲ್‌ ಟೀ (Herbal Tea) ಇಂಥವುಗಳನ್ನು ಸೇವಿಸಬಹುದು. ಅಧ್ಯಯನದ ಪ್ರಕಾರ, ಪುರುಷರು ದಿನಕ್ಕೆ 3.7 ಲೀಟರ್‌ ನೀರನ್ನು ಸೇವಿಸುವುದು ಉತ್ತಮ. ಮಹಿಳೆಯರು 2.7 ಲೀಟರ್‌ ನೀರು ಸೇವಿಸಿದರೂ ಸಾಕು. ಹಬ್ಬದ ಸಮಯದಲ್ಲಿ ಯಾವುದೇ ಕಾರಣಕ್ಕೂ ಆಲ್ಕೋಹಾಲ್‌ (Alcohol) ಸೇವನೆ ಮಾಡಬಾರದು. ಹಾಗೆಯೇ ಕೆಫೀನ್‌ ಯುಕ್ತ ಪಾನೀಯಗಳಾದ ಟೀ, ಕಾಫಿಗಳನ್ನೂ ದೂರ ಇಡಬೇಕು. 

ಇದನ್ನೂ ಓದಿ: ನಿಮ್ಮ ದಿನನಿತ್ಯದ ಆಹಾರದ ಪಟ್ಟಿ ಹೀಗಿರಲಿ, ಅನಾರೋಗ್ಯ ದೂರ ಮಾಡಿ..

•    ವ್ಯಾಯಾಮ ಮರೆಯಬೇಡಿ (Regular Exercise)
ದಿನವೂ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೇಹದೊಳಗಿನ ಎಲ್ಲ ಅಂಗಾಂಗಗಳ ಕಾರ್ಯಕ್ಷಮತೆ ಹೆಚ್ಚುತ್ತದೆ ಹಾಗೂ ದೇಹದಲ್ಲಿರುವ ವಿಷಕಾರಿ ಅಂಶ ಹೊರಹೋಗಲು ಸಹಕಾರಿಯಾಗುತ್ತದೆ. ವ್ಯಾಯಾಮದಿಂದ ಜೀರ್ಣಕಾರ್ಯ ಸುಗಮವಾಗುತ್ತದೆ. ದೀರ್ಘ ನಡಿಗೆ ಮಾಡುವುದರಿಂದಲೂ ತುಂಬ ಲಾಭವಾಗುತ್ತದೆ. ಹೆಚ್ಚು ಸಿಹಿ ತಿನಿಸು, ಕರಿದ ತಿಂಡಿಗಳನ್ನು ಸೇವನೆ ಮಾಡಿದಾಗ ವ್ಯಾಯಾಮ, ನಡಿಗೆ ಮಾಡುವುದು ಅತ್ಯಗತ್ಯ. ಆದರೆ, ಅತಿಯಾದ ವರ್ಕೌಟ್‌ ಬೇಡ.

•    ಮಧ್ಯಂತರ ಉಪವಾಸ (Intermittent Fast)
ಅಧಿಕ ಕ್ಯಾಲರಿಯುಳ್ಳ ಆಹಾರ (High Calorie Food) ಸೇವನೆ ಮಾಡಿದಾಗ ಮತ್ತೊಂದು ಹೊತ್ತಿನ ಊಟವನ್ನೂ ಕಡಿಮೆ ಮಾಡುವುದು ಜಾಣತನ. ಹಾಗೆಯೇ, ಒಂದೊಮ್ಮೆ ಮಧ್ಯೆ ಹಸಿವಾದರೂ ನೀರು ಕುಡಿಯುತ್ತಿರಬೇಕೇ ಹೊರತು ಪುನಃ ಮಧ್ಯೆ ಏನಾದರೂ ಸೇವಿಸಬಾರದು. ಗ್ರೀನ್‌ ಟೀ ಸೇವಿಸಬಹುದು.

ಇದನ್ನೂ ಓದಿ: Healthy Diet: ಅಬ್ಬಾ.. ರಾಗಿಯಿಂದ ನಮಗೆ ಸಿಗುತ್ತಾ ಈ ಅಚ್ಚರಿಯ ಲಾಭಗಳು

•    ಸಂಸ್ಕರಿತ ಆಹಾರ ಬೇಡ (Processed Food)
ಹಬ್ಬಗಳ ಸಮಯದಲ್ಲಿ ಸಂಸ್ಕರಿತ ಆಹಾರ ಸೇವನೆ ಮಾಡುವುದು ಅಪಾಯಕಾರಿ ಎನಿಸಬಹುದು. ಏಕೆಂದರೆ, ಮೊದಲೇ ಕ್ಯಾಲರಿ ಹೆಚ್ಚಿರುವ ಊಟ ಮಾಡುತ್ತೇವೆ, ಜತೆಗೆ ಸಂಸ್ಕರಿತ ಆಹಾರವೂ ಸೇರಿದರೆ ತೂಕ ಹೆಚ್ಚುವುದು ಸಹಜ. ಮೈದಾ, ಸಕ್ಕರೆ, ಹಾಲಿನ ಉತ್ಪನ್ನಗಳನ್ನು ಸೇವಿಸಬೇಡಿ. ಆದರೆ, ಸೇಬು, ನಟ್ಸ್‌, ಡಾರ್ಕ್‌ ಚಾಕೋಲೇಟ್‌, ತರಕಾರಿ ಸೇವಿಸುವುದು ಉತ್ತಮ. 


 

Follow Us:
Download App:
  • android
  • ios