ಎಲ್ಲ ಪೋಷಕರಿಗೂ ತಮ್ಮ ಮಕ್ಕಳನ್ನು ಬಹಳ ಚೆನ್ನಾಗಿ ಬೆಳೆಸಬೇಕೆಂಬ ಆಸೆ ಇರುತ್ತದೆ. ಅವರು ಸರಿಯಾದದ್ದನ್ನೇ ತಿನ್ನುತ್ತಿದ್ದಾರೆ, ಚೆನ್ನಾಗಿ ಓದುತ್ತಿದ್ದಾರೆ, ಅವರಿಗೆ ಎಲ್ಲಿಂದಲೂ ಫೋನ್ ನೋಡಲು ಸಿಗುತ್ತಿಲ್ಲ ಎಂಬುದನ್ನೆಲ್ಲ ಖಚಿತಪಡಿಸಿಕೊಳ್ಳುವುದರಿಂದ ಹಿಡಿದು ಮಕ್ಕಳು ಬೆಳೆಯುವ ಹಂತದಲ್ಲಿ ಹಲವಾರು ವಿಷಯಗಳ ಬಗ್ಗೆ ಪೋಷಕರು ಗಮನ ಹರಿಸುತ್ತಲೇ ಇರುತ್ತಾರೆ. ಆದರೂ ಕೂಡಾ ಸ್ಕ್ರೀನ್‌ಟೈಂ ವಿಷಯದಲ್ಲಿ ಪೋಷಕರಲ್ಲಿ ಒಂದು ಗೊಂದಲ ಇದ್ದೇ ಇರುತ್ತದೆ. ಸ್ಕ್ರೀನ್‌ಟೈಂ ಇಲ್ಲದಿದ್ದರೆ ತನ್ನ ಮಗು ಓರಗೆಯ ಮಕ್ಕಳಷ್ಟು ತಿಳಿದುಕೊಳ್ಳುವುದಿಲ್ಲವೇನೋ ಎಂಬ ಭಯ ಅವರನ್ನು ಕಾಡುವ ಜೊತೆಜೊತೆಗೆ ಇಂಟರ್ನೆಟ್ ಹಾಗೂ ಮೊಬೈಲ್ ಸ್ಕ್ರೀನ್  ಮಕ್ಕಳ ಮಾನಸಿಕ ಹಾಗೂ  ದೈಹಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದೂ ಇದಕ್ಕೆ ಕಾರಣ. 

ಸ್ಕ್ರೀನ್ ಟೈಂ ಬೇಡವೇ ಬೇಡ
ಮಕ್ಕಳು 6 ತಿಂಗಳಷ್ಟು ಸಣ್ಣವರಿರುವಾಗಲೇ ಸ್ಕ್ರೀನ್‌ಗೆ ಅಡಿಕ್ಟ್ ಆಗಿಬಿಡುತ್ತಾರೆ. ಹಾಗಾಗಿ ಅವರಿಗೆ ಸ್ಕ್ರೀನ್ ಟೈಂ ಬೇಡವೇ ಬೇಡ ಎನ್ನುತ್ತಾರೆ ತಜ್ಞರು. ಈ ಬಗ್ಗೆ ಹಲವಾರು ಪೋಷಕರು ಈಗ ಜಾಗೃತರಾಗಿ ಮಕ್ಕಳಿಗೆ ಮೊಬೈಲ್ ಕೊಡದಂತೆ ನೋಡಿಕೊಳ್ಳುತ್ತಾರೆ. ಕೊಟ್ಟರೂ ಅವರೇನು ನೋಡಬೇಕೆಂಬುದನ್ನು ತಾವೇ ನಿರ್ಧರಿಸುತ್ತಾರೆ. ಆದರೆ, ಸೆಕೆಂಡ್ ಹ್ಯಾಂಡ್ ಸ್ಕ್ರೀನಿಂಗ್ ಬಗ್ಗೆ ಅವರು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಸೆಕೆಂಡ್ ಹ್ಯಾಂಡ್ ಸ್ಕ್ರೀನಿಂಗ್ ಕೂಡಾ ಅತ್ಯಂತ ಅಪಾಯಕಾರಿ ಎನ್ನುತ್ತಾರೆ ತಜ್ಞರು. 

ಸೆಟ್ ಸುರಕ್ಷತೆ: ಈ ಐದು ಅಂಶಗಳನ್ನು ಮರೆಯದಿರಿ

ಸೆಕೆಂಡ್ ಹ್ಯಾಂಡ್ ಸ್ಕ್ರೀನಿಂಗ್ ಎಂದರೆ...
ಮೊಬೈಲ್‌ನಲ್ಲಿ ಮಕ್ಕಳು ನೋಡಬಾರದ್ದನ್ನು ಹಾಗೂ ನೋಡಬಹುದಾದದ್ದನ್ನು ಪೋಷಕರು ನಿರ್ಧರಿಸಬಹುದು. ಇದಕ್ಕಾಗಿ ಹಲವು ಆ್ಯಪ್‌ಗಳೂ ಸಹಾಯಕ್ಕೆ ನಿಲ್ಲುತ್ತವೆ. ಆದರೆ, ಪೋಷಕರ ನಿಯಂತ್ರಣದಲ್ಲಿರದ ಹಾಗೂ ಅವರು ಹೆಚ್ಚು ಗಮನ ವಹಿಸದ ಸಂಗತಿ ಎಂದರೆ ಸೆಕೆಂಡ್ ಹ್ಯಾಂಡ್ ಸ್ಕ್ರೀನ್ ಟೈಂ. ಮಗು ಜೊತೆಯಲ್ಲಿರುವಾಗ ಅದರ ಪೋಷಕರು, ಅಜ್ಜ ಅಜ್ಜಿ ಅಥವಾ ಹಿರಿಯ ಅಣ್ಣ ಅಕ್ಕ ಯಾರಾದರೂ ಬಹಳ ಹೊತ್ತಿನ ಕಾಲ ಫೋನ್ ಬಳಸುತ್ತಿದ್ದರೆ, ಅವರೇನು ನೋಡುತ್ತಿದ್ದಾರೆ, ಏನು ಹುಡುಕುತ್ತಿದ್ದಾರೆ ಎಲ್ಲವನ್ನೂ ಜೊತೆಯಲ್ಲಿರುವ ಮಗು ಗಮನಿಸುತ್ತಲೇ ಇರುತ್ತದೆ. ಆದರೆ, ಅವರು ಗಮನಿಸುತ್ತಿರುತ್ತಾರೆ ಎಂಬುದು ಹಲವರ ಗಮನಕ್ಕೆ ಬರುವುದಿಲ್ಲ. ಇದೇ ಸೆಕೆಂಡ್ ಹ್ಯಾಂಡ್ ಸ್ಕ್ರೀನ್ ಟೈಂ. ಈ ಬಗ್ಗೆ ಎಚ್ಚರಗೊಳ್ಳದಿದ್ದರೆ, ಇದು ಮಗುವಿನ ಬೆಳವಣಿಗೆಯ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರುತ್ತದೆ. 

ಇದೇಕೆ ಸಮಸ್ಯೆಯಾಗುತ್ತದೆ?
ಗೈಡ್‌ಲೈನ್ಸ್ ಪ್ರಕಾರ, 2ರಿಂದ 7 ವರ್ಷದ ಮಕ್ಕಳು ದಿನದಲ್ಲಿ 1 ಗಂಟೆಗೂ ಹೆಚ್ಚು ಕಾಲ ಯಾವುದೇ ರೀತಿಯ ಗ್ಯಾಜೆಟ್ ಬಳಕೆ ಮಾಡಕೂಡದು. 18 ತಿಂಗಳಿಗೂ ಸಣ್ಣ ಮಕ್ಕಳು ಸ್ಕ್ರೀನ್‌ನಿಂದ ಸಂಪೂರ್ಣವಾಗಿ ದೂರವುಳಿಯಬೇಕು. ಇಡೀ ದಿನ ಫೋನ್ ಅಥವಾ ಟಿವಿ ಸ್ಕ್ರೀನ್ ನೋಡುತ್ತಲೇ ಕಳೆವ ಪೋಷಕರೊಂದಿಗೆ ಇರುವ ಮಕ್ಕಳು ಸ್ಕ್ರೀನ್‌ಗೆ ಅಡಿಕ್ಟ್ ಆಗುವ ಅಪಾಯ ಹೆಚ್ಚು. ಅಲ್ಲದೆ, ಇದರಿಂದ  ಮಗು ಹಾಗೂ ಪೋಷಕರ ನಡುವಿನ ಸಂಬಂಧ ಹಾಳಾಗುತ್ತದೆ. 
ಅಲ್ಲದೆ, ಪೋಷಕರು ಮೈಮರೆತು ಸ್ಕ್ರೀನ್ ನೋಡುವಾಗ ಮಕ್ಕಳು ನೋಡಬಾರದ ಕಂಟೆಂಟ್‌ಗಳನ್ನು ನೋಡಿ, ಅದನ್ನು ಮಗುವೂ ನೋಡುವ ಅಪಾಯವಿರುತ್ತದೆ. ಸಂಶೋಧನೆಗಳ ಪ್ರಕಾರ, ಪೋಷಕರು ಹೆಚ್ಚು ಕಾಲ ಗ್ಯಾಜೆಟ್‌ನೊಂದಿಗೆ ಕಳೆಯುತ್ತಿದ್ದರೆ ಅಂಥವರ ಮಕ್ಕಳು ವಿಚಿತ್ರ ವರ್ತನೆಗಳನ್ನು ತೋರುತ್ತಾರೆ. ಅಂಥ ಮಕ್ಕಳಲ್ಲಿ ಸಣ್ಣಪುಟ್ಟದ್ದಕ್ಕೂ ಕಿರಿಕಿರಿ ಮಾಡುವ ಸ್ವಭಾವ, ಮೂಡ್ ಸ್ವಿಂಗ್ಸ್, ಭಾಷೆಯ ಕಲಿಕೆಯಲ್ಲಿ ಹಿನ್ನಡೆ, ಹೈಪರ್ ಆ್ಯಕ್ಟಿವಿಟಿ, ದೃಷ್ಟಿದೋಷ ಹಾಗೂ ಮೆದುಳಿನ ಕಾರ್ಯಗಳಲ್ಲಿ ನಿಧಾನಗತಿ ಕಂಡುಬರುತ್ತದೆ. ಇವಿಷ್ಟೇ ಅಲ್ಲದೆ, ಹೆಚ್ಚು ಸ್ಕ್ರೀನ್ ಟೈಂನಿಂದಾಗಿ ಮಕ್ಕಳ ಸೆಲ್ಫ್ ಎಸ್ಟೀಮ್‌ಗೆ ಹೊಡೆತ ಬಿದ್ದು, ಭಾವನೆಗಳನ್ನು ಸರಿಯಾಗಿ ಗುರುತಿಸುವಲ್ಲಿ ಸೋಲುತ್ತಾರೆ. 

ಅತಿ ಎಂದರೆ ಎಷ್ಟು?
ದಿನಕ್ಕೆ 1 ಅಥವಾ 1.5 ಗಂಟೆಗಳಿಂತ ಹೆಚ್ಚು ಸ್ಕ್ರೀನ್ ಟೈಂ  ಮಗುವಿನ ಬೆಳವಣಿಗೆಗೆ ಅಪಾಯಕಾರಿಯೇ. ಅಷ್ಟೇ ಅಲ್ಲ, ಮಕ್ಕಳು ಹದಿಹರೆಯ ಹಾಗೂ ಅದಕ್ಕೂ ಮುನ್ನಿನ ವಯಸ್ಸಿನ್ನು ತಲುಪಿದಾಗ ಅವರು ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಏನು ನೋಡುತ್ತಿದ್ದಾರೆಂಬ ಬಗ್ಗೆ ಮಾನಿಟರ್ ಮಾಡುವ ಅಗತ್ಯವಿದೆ. 

ಸ್ಕೀನ್ ನೋಡಿ ಕಣ್ಣಿಗೆ ಆಯಾಸ, ನಿಮ್ಮ ಮೊಬೈಲ್‌ನಲ್ಲಿ ಇದೇ ಪರಿಹಾರ

ಏನು ಮಾಡಬೇಕು?
ಮಕ್ಕಳು ದೊಡ್ಡವರನ್ನು ಕಾಪಿ ಮಾಡುತ್ತವೆ. ಅವರು ಸದಾ ದೊಡ್ಡವರ ವರ್ತನೆಯನ್ನು ಗಮನಿಸುತ್ತಲೇ ಇರುತ್ತವೆ. ಹಾಗಾಗಿ, ನೀವು ನಿಮ್ಮ ಸ್ಕ್ರೀನ್ ಟೈಂ ಕಡಿತಗೊಳಿಸಲು ಒಂದಕ್ಕಿಂತಾ ಹೆಚ್ಚು ಕಾರಣಗಳಿವೆ. ಮಕ್ಕಳು ಹೇಗಿರಬೇಕೆಂದು ಬಯಸುತ್ತೀರೋ ಅದಕ್ಕೆ ನೀವೇ ಉದಾಹರಣೆಯಾಗಿ. ಮಕ್ಕಳಿಗೆ ಅಂತರ್ಜಾಲದಲ್ಲಿ ಏನನ್ನು ನೋಡಬಾರದೆಂದು ಹೇಳುವ ಮೊದಲು ನೀವು ಕೂಡಾ ಅಂಥದ್ದನ್ನು ನೋಡದೆ ಉಳಿಯುವುದು ಅಭ್ಯಾಸ ಮಾಡಿಕೊಳ್ಳಿ. ನೀವು ಹೆಚ್ಚು ಟೈಂ ಫೋನ್ ಬಳಸಿದಷ್ಟೂ ಮಕ್ಕಳೂ ಅದನ್ನೇ ಅಭ್ಯಾಸ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಮಕ್ಕಳು ಸುತ್ತಮುತ್ತ ಇರುವಾಗ ಡಿಜಿಟಲ್ ಡಿಟಾಕ್ಸ್ ಅಭ್ಯಾಸ ಮಾಡಿಕೊಳ್ಳಿ. ಊಟ ಮಾಡುವಾಗ, ಇನ್ನೊಬ್ಬರೊಂದಿಗೆ ಮಾತನಾಡುವಾಗ ಫೋನ್ ಬಳಕೆ ಬೇಡ. ಟಿವಿ ಬಳಕೆ ಕೂಡಾ ಕಡಿಮೆ ಮಾಡಿ. ಬದಲಿಗೆ ಪುಸ್ತಕ ಓದುವ, ಯೋಗ ಮಾಡುವ, ಬರೆಯುವ ಅಭ್ಯಾಸ ರೂಢಿಸಿಕೊಂಡರೆ ಮಕ್ಕಳಿಗೂ ಅದೇ ಮಾದರಿಯಾದೀತು.