Asianet Suvarna News Asianet Suvarna News

ತುಂಬಾ ಬೆವರುತ್ತೀರಾ? ಚಿಂತಿಸಬೇಡಿ ನಿಮ್ಮಷ್ಟು ಬ್ಯೂಟಿಫುಲ್‌ ಯಾರಿಲ್ಲ!

ವಾಸನೆ ಹಾಗೂ ಅಂಟಂಟಾಗಿ ಕಿರಿಕಿರಿ ತರುವ ಬೆವರು ಯಾರಿಗೂ ಇಷ್ಟವಲ್ಲ. ಆದರೆ ಇದು ನಮ್ಮ ಆರೋಗ್ಯಕ್ಕೆ, ತ್ವಚೆ ಹಾಗೂ ಕೂದಲ ಆರೋಗ್ಯಕ್ಕೆ ಒಳ್ಳೆಯದು. ಹೇಗೆ ತಿಳಿಯಲು ಇಲ್ಲಿ ನೋಡಿ.

Surprising benefits of sweating for skin and hair
Author
Bangalore, First Published Feb 29, 2020, 3:40 PM IST

ಬೇಸಿಗೆ ಆರಂಭವಾಗಿದೆ. ಬೆವರಿನ ಸಮಸ್ಯೆ ಕಿರಿಕಿರಿ ತರಲಾರಂಭಿಸಿದೆ. ವಾಸನೆ ಹಾಗೂ ಒದ್ದೆಯಿಂದಾಗಿ ಮುಜುಗರ ತರುವ ಬೆವರಿನಿಂದ ಮುಕ್ತಿ ಹೊಂದುವುದು ಹೇಗಪ್ಪಾ ಎಂದು ನೀವೀಗಾಗಲೇ ಹಲವಾರು ಲೇಖನಗಳನ್ನು ಚೆಕ್ ಮಾಡಿರಬಹುದು. ಆದರೆ, ಬೆವರೆಂಬುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ತಿಳಿದರೆ, ಮತ್ತೆ ನೀವು ಬೆವರಿನಿಂದ ದೂರಾಗಲು ಬಯಸುವುದಿಲ್ಲ. ಹೌದು, ಬೆವರು ಶ್ರಮದ ಪ್ರತೀಕ. ದೈಹಿಕ ಶ್ರಮ, ವರ್ಕೌಟ್ ಮಾಡಿದಾಗ ಬೆವರು ಬರುತ್ತದಲ್ಲ ಆಗ ನಮ್ಮ ದೇಹ ಒಳ್ಳೆಯ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಇದಲ್ಲದೆ ಬೆವರು ಚರ್ಮದ ಹಾಗೂ ಕೂದಲ ಪೋಷಣೆಯನ್ನೂ ಮಾಡುತ್ತದೆ. 

ಬೆವರು ಎಂಬುದು ನೀರು ಹಾಗೂ ಕೆಲ ಕೆಮಿಕಲ್‌ಗಳ ಮಿಶ್ರಣ. ಅದರಲ್ಲಿ ಅಮೋನಿಯಾ, ಶುಗರ್, ಸಾಲ್ಟ್, ಯೂರಿಯಾಗಳಿರುತ್ತವೆ. ಸಾಮಾನ್ಯವಾಗಿ ವರ್ಕೌಟ್ ಮಾಡಿದಾಗ, ಜ್ವರವಿದ್ದಾಗ ಹಾಗೂ ಭಯಗೊಂಡಾಗ ನಾವು ಬೆವರುತ್ತೇವೆ. ಇದಲ್ಲದೆ ಆಲ್ಕೋಹಾಲ್, ಸ್ಪೈಸಿ ಆಹಾರ ಸೇವನೆ ಮಾಡಿದಾಗ ಕೂಡಾ ಬೆವರುತ್ತೇವೆ. ಕೇವಲ ಬೆವರಿಗೆ ವಾಸನೆ ಇರುವುದಿಲ್ಲ. ಅದರಲ್ಲಿರುವ ಬ್ಯಾಕ್ಟೀರಿಯಾ ಹಾಗೂ ಹಾರ್ಮೋನ್‌ಗಳ ಕಾರಣದಿಂದಾಗಿ ಬೆವರು ವಾಸನೆ ಪಡೆದುಕೊಳ್ಳುತ್ತದೆ. 

ಬೆವರಿನ ಇತರೆ ಲಾಭಗಳೇನು ನೋಡೋಣ...

ಬೆವರು ನ್ಯಾಚುರಲ್ ಕ್ಲೆನ್ಸರ್

ನಾವು ಬೆವರಿದಾಗ ನಮ್ಮ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಆಗ ನಮ್ಮ ದೇಹದಿಂದ ಕೊಳೆ ಹಾಗೂ ಬ್ಯಾಕ್ಟೀರಿಯಾಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಬೆವರಿನಲ್ಲಿರುವ ಗ್ಲೈಕೋಪ್ರೋಟೀನ್ ಬ್ಯಾಕ್ಟೀರಿಯಾವನ್ನು ಹೊರಹಾಕುತ್ತದೆ. ಇದೇ  ಕಾರಣಕ್ಕೆ ವರ್ಕೌಟ್ ಬಳಿಕ ಮುಖ, ಕೈಕಾಲನ್ನು ತೊಳೆದು ಒರೆಸಿಕೊಳ್ಳುವುದು ಮುಖ್ಯ. 

ನಿದ್ರೇನೇ ಬರೋಲ್ವಾ? ಹೀಗ್ ಮಾಡಿ, ಸೊಂಪಾಗಿ ನಿದ್ರಿಸಿ.......

ದೇಹದ ತಾಪಮಾನ ನಿರ್ವಹಣೆ

ಬೆವರಿನ ಮೂಲಕ ದೇಹವು ತನ್ನನ್ನು ತಾನು ತಂಪಾಗಿಸಿಕೊಳ್ಳುತ್ತದೆ. ನಮ್ಮ ದೇಹದೊಳಗಿನ ತಾಪಮಾನ ಹೆಚ್ಚಿದಾಗ, ಬೆವರಿನ ಗ್ರಂಥಿಗಳು ಚರ್ಮದ ಹೊರಗೆ ನೀರನ್ನು ದಬ್ಬುತ್ತವೆ. ಅವು ಆವಿಯಾಗುವುದರಿಂದ ಚರ್ಮ ತಣ್ಣಗಾಗುತ್ತದೆ. ಆಮೂಲಕ ಚರ್ಮದ ಕೆಳಗೆ ಹರಿವ ರಕ್ತದ ಉಷ್ಣತೆ ಕೂಡಾ ಕಡಿಮೆಯಾಗುತ್ತದೆ. 

ಒಳಗಿನಿಂದ ಹೊಳಪು

ದೈಹಿಕ ಕಸರತ್ತಿನಿಂದ ಬೆವರಿದಾಗ ರಕ್ತ ಸಂಚಲನವೂ ಚೆನ್ನಾಗಿ ಆಗುತ್ತದೆ. ಆಗ ತ್ವಚೆಗೆ ಒಳಗಿನಿಂದಲೇ ಹೊಳಪು ದೊರೆಯುತ್ತದೆ. ಇದಲ್ಲದೇ, ಬೆವರಿದ ಬಳಿಕ ತ್ವಚೆ ಮೃದುವಾಗುವುದರಿಂದ ನೈಸರ್ಗಿಕವಾಗಿಯೇ ತ್ವಚೆಗೆ ಕಳೆ ಸಿಗುತ್ತದೆ. 

ಕೂದಲ ಬೆಳವಣಿಗೆ

ನೆತ್ತಿಯು ಬೆವರಿದಾಗ ಕೂದಲ ಬುಡದಿಂದ ಕೊಳೆ ಹೊರ ಹೋಗುತ್ತದೆ. ಇದು ಕೂದಲ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ. ಆದರೆ, ಅತಿಯಾಗಿ ಬೆವರಿದಾಗ ಮೈಲ್ಡ್ ಶಾಂಪೂ ಬಳಸಿ ತಲೆಕೂದಲನ್ನು ತೊಳೆಯುವುದು ಮುಖ್ಯ. ಇಲ್ಲದಿದ್ದಲ್ಲಿ ತಲೆತುರಿಕೆ ಕಾಣಿಸಿಕೊಳ್ಳುತ್ತದೆ. 

ನೀವ್‌ ಕೂತ್ಕೊಳೋ ಜಾಗದಲ್ಲಿ ಈ ಸಸ್ಯಗಳಿದ್ರೆ ಏಕ್‌ದಂ ಆರೋಗ್ಯ!...

ಮೂಡ್

ಬೆವರು ವರ್ಕೌಟ್‌ನಿಂದ ಬಂದಾಗ ದೇಹದಲ್ಲಿ ಎಂಡೋರ್ಫಿನ್ ಹಾರ್ಮೋನ್ ಹೆಚ್ಚಾಗಿ ಬಿಡುಗಡೆಯಾಗುತ್ತವೆ. ಇವು ಹ್ಯಾಪಿ ಹಾರ್ಮೋನ್‌ಗಳಾಗಿದ್ದು, ಕೊಲ್ಯಾಜನ್ ಉತ್ಪಾದನೆ ತಗ್ಗಿಸಿ ಮೂಡನ್ನು ಚೆನ್ನಾಗಿಡುತ್ತವೆ. 

ಹೆವೀ ಮಟಲ್ ಡಿಟಾಕ್ಸ್

2016ರಲ್ಲಿ ಚೀನಾದಲ್ಲಿ ನಡೆಸಿದ ಅಧ್ಯಯನ ವರದಿಯಂತೆ, ಪ್ರತಿದಿನ ದೈಹಿಕ ಕಸರತ್ತು ನಡೆಸುವವರ ದೇಹದಲ್ಲಿ ಹೆವೀ ಮೆಟಲ್ಸ್ ಕಡಿಮೆ ಇರುತ್ತದೆ. ಅಂದರೆ, ಇವು ವರ್ಕೌಟ್ ಮಾಡುವವರ ಬೆವರು ಹಾಗೂ ಮೂತ್ರದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಂದರೆ ಬೆವರಿನ ಮೂಲಕ ದೇಹವು ಹೆವೀ ಮೆಟಲನ್ನು ಡಿಟಾಕ್ಸ್ ಮಾಡುತ್ತದೆ. ಇದಲ್ಲದೆ ದೇಹದಲ್ಲಿ ಸೇರಿಕೊಂಡ ವಿಷಕಾರಿ ಪದಾರ್ಥಗಳು ಸೋಡಿಯಂ, ಕೊಲೆಸ್ಟೆರಾಲ್ ಹಾಗೂ ಆಲ್ಕೋಹಾಲ್‌ಗಳನ್ನು ಕೂಡಾ ಬೆವರು ಹೊರಹಾಕಿ ದೇಹವನ್ನು ಒಳಗಿನಿಂದ ಸ್ವಚ್ಛವಾಗಿರಬಲ್ಲದು. 

ಆ್ಯಂಟಿಬಯೋಟಿಕ್

ಬೆವರೇ ಅತಿ ಪರಿಣಾಮಕಾರಿ ಆ್ಯಂಟಿಬಯೋಟಿಕ್‌ಗಳನ್ನು ಉತ್ಪಾದಿಸುವಾಗ ಆ್ಯಂಟಿಬ್ಯಾಕ್ಟೀರಿಯಲ್ ಆಯಿಂಟ್‌ಮೆಂಟ್ ಯಾರಿಗೆ ಬೇಕು? ಹೌದು, ಸಣ್ಣ ಪುಟ್ಟ ಗಾಯ, ಗೀರು, ಸೊಳ್ಳೆ ಕಡಿತ ಮುಂತಾದವಕ್ಕೆ ಬೆವರಿನಲ್ಲಿ ಬಿಡುಗಡೆ ಆಗುವ ಆ್ಯಂಟಿಬಯೋಟಿಕ್ ಏಜೆಂಟ್‌ಗಳಾದ ಡೆರ್ಮ್‌ಸಿಡಿನ್ ಆ್ಯಂಟಿ ಬ್ಯಾಕ್ಟೀರಿಯಲ್ ಆಗಿ ಕೆಲಸ ಮಾಡುತ್ತದೆ. 

ಕಿಡ್ನಿ ಸ್ಟೋನ್ ವಿರುದ್ಧ ಹೋರಾಟ

ಕಿಡ್ನಿ ಸ್ಟೋನ್ ಆದಾಗ ಆಗುವ ನೋವು ಹೆರಿಗೆ ನೋವಿಗಿಂತ ಭಯಂಕರ ಎಂದು ಹೇಳುತ್ತಾರೆ. ಹಾಗಾಗಿ, ಕಿಡ್ನಿಯಲ್ಲಿ ಕಲ್ಲಾಗದಂತೆ ನೋಡಿಕೊಳ್ಳುವಲ್ಲಿ ಬೆವರು ಪ್ರಮುಖ ಪಾತ್ರ ವಹಿಸುತ್ತದೆ. ನೀವು ಹೆಚ್ಚು ನೀರು ಕುಡಿದು, ವರ್ಕೌಟ್ ಮಾಡಿ ಬೆವರುತ್ತಿದ್ದಲ್ಲಿ, ದೇಹವು ಒಳಗಿನ ಬೇಡದ ಕೆಮಿಕಲ್‌ಗಳು ಶೇಖರಣೆಯಾಗದಂತೆ ನೋಡಿಕೊಂಡು ಪ್ರತಿದಿನ ಅವನ್ನೆಲ್ಲ ಹೊರ ಫ್ಲಶ್ ಮಾಡುತ್ತದೆ. 

Follow Us:
Download App:
  • android
  • ios