ನಮ್ಮ ದಿನಚರಿಯಲ್ಲಿ ಬಹಳ ಭಾಗ ಕುಳಿತೇ ಕಳೀತೀವಿ, ನಮ್ಮ ಉದ್ಯೋಗಗಳೂ ಹಾಗೇ ಇವೆ. ಮನೆಯಲ್ಲೂ ಕುಳಿತೇ ಇರ್ತೀವಿ, ಆಫೀಸಲ್ಲೂ ಕುಳಿತೇ ಇರ್ತೀವಿ. ಕೆಲವು ಆಪೀಸ್‌ಗಳಂತೂ ಗಾಜಿನಿಂದ ಆವರಿಸಲ್ಪಟ್ಟು, ಎಸಿ ಆನ್‌ ಮಾಡಿಕೊಂಡು, ಹೊರಗಿನ ಗಾಳಿಯನ್ನು ಒಳಗೆ ಬರೋಕೆ ಬಿಡದೆ, ಒಳಗಿನ ಗಾಳಿಯನ್ನು ಹೊರಗ ಕಳಿಸದೆ ತುಂಬ ಅನಾರೋಗ್ಯಕರವಾಗಿ ಇರ್ತವೆ. ಇಂಥ ಹೊತ್ತಿನಲ್ಲಿ ನಮ್ಮ ಆರೋಗ್ಯವನ್ನು ಸ್ವಲ್ಪ ಮಟ್ಟಿಗಾದರೂ ಹೆಲ್ದಿಯಾಗಿಡೋಕೆ ಒಂದು ಚೆನ್ನಾಗಿರೋ ಉಪಾಯ ಅಂದ್ರೆ ಕೆಲವು ಆರೋಗ್ಯಕಾರಿ ಸಸ್ಯಗಳನ್ನು ನೀವು ಕುಳಿತುಕೊಳ್ಳೋ ಜಾಗದ ಹತ್ರಾನೇ ಇಟ್ಟುಕೊಳ್ಳೋದು. ಅದು ಮನೆಯಲ್ಲಿರಲಿ, ಆಫೀಸಿನಲ್ಲಿರಲಿ. ಅರೋಗ್ಯ ಖಚಿತ.

ಸ್ಪೈಡರ್‌ ಪ್ಲಾಂಟ್‌
ಈ ಗಿಡ ನಿಮ್ಮ ಮನೆಯ ಒಳಗಿನ ವಾತಾವರಣದಲ್ಲಿರುವ ಫಾರ್ಮಾಲ್ಡಿಹೈಡ್‌ನ್ನು ಹೀರಿಕೊಳ್ಳುತ್ತದೆ. ಈ ಫಾರ್ಮಾಲ್ಡಿಹೈಡ್‌ ನೀವು ಮನೆಗೆ ತರುವ ಅನೇಕ ವಸ್ತುಗಳ ಮೂಲಕ ಆಗಮಿಸುತ್ತದೆ- ಪೇಪರ್‌, ಪ್ಲಾಸ್ಟಿಕ್‌ ಬ್ಯಾಗ್‌, ಪೇಂಟ್‌, ಪ್ಲೈವುಡ್‌, ನ್ಯಾಪ್‌ಕಿನ್‌, ಇತ್ಯಾದಿ. ಈ ಗಿಡ ಅವುಗಳಿಂದ ವಾತಾವರಣಕ್ಕೆ ಬಿಡುಗಡೆಯಾಗುವ ಫಾರ್ಮಾಲ್ಡಿಹೈಡನ್ನು ಹೀರಿಕೊಂಡು ಆಮ್ಲಜನಕವನ್ನು ಶುದ್ಧವಾಗಿಸುತ್ತದೆ. ಈ ಗಿಡಕ್ಕೆ ನೇರ ಬಿಸಿಲು ಬೇಕಾಗಿಲ್ಲ. ಹೀಗಾಗಿ ಮನೆಯ ಒಳಗೆ ಎಲ್ಲೇ ಇಟ್ಟರೂ ಆ ಜಾಗಕ್ಕೆ ಆರಾಮವಾಗಿ ಹೊಂದಿಕೊಳ್ಳುತ್ತದೆ. ನೆರಳು ಇದ್ದಲ್ಲಿ ಬೆಳೆಯುತ್ತದೆ.

ಲ್ಯಾವೆಂಡರ್‌
ಲ್ಯಾವೆಂಡರ್‌ ಸಸ್ಯದಲ್ಲಿ ನಸು ನೇರಳೆ ಬಣ್ಣದ ಪುಟ್ಟ ಪುಟ್ಟ ಹೂಗಳು ಬಿಡುತ್ತವೆ. ಇದು ನಸುವಾದ ಪರಿಮಳವನ್ನು ಸೂಸುತ್ತವೆ. ನಿಮ್ಮ ಒತ್ತಡವೆಲ್ಲ ಈ ಪರಿಮಳದಿಂದ ಮಾಯವಾಗುತ್ತದೆ. ಇದು ನಿಮ್ಮ ಬೆಡ್‌ರೂಮಿನಲ್ಲಿ ಇಡಲು ಪ್ರಶಸ್ತ. ಕಚೇರಿಯಲ್ಲಿ ಟೇಬಲ್ ಪಕ್ಕದಲ್ಲಿ ಇಟ್ಟುಕೊಂಡರೆ ಮನಸ್ಸು ಒತ್ತಡಯುಕ್ತವಾಗಿ ಇರುವುದಿಲ್ಲ. ಇವುಗಳಿಗೆ ಹೆಚ್ಚು ಗಾಳಿ ಬೆಳಕು ಬೇಕಿಲ್ಲ. ಈ ಲ್ಯಾವೆಂಡರನ್ನು ಪ್ರಸಾಧನ ಸಾಮಗ್ರಿಗಳಲ್ಲಿ, ಪರಿಮಳದ ಸಾಬೂನು ಇತ್ಯಾದಿಗಳಲ್ಲಿ ಬಳಸುತ್ತಾರೆ. ಪುಟ್ಟ ಗಿಡ, ಹೆಚ್ಚು ಜಾಗವನ್ನೂ ಬೇಡುವುದಿಲ್ಲ.

ಸ್ನೇಕ್‌ ಪ್ಲಾಂಟ್‌
ಮನೆಯಲ್ಲಿಡಬಹುದಾದ ಇನ್ನೊಂದು ಅದ್ಭುತ ಸಸ್ಯ ಎಂದರೆ ಸ್ನೇಕ್‌ ಪ್ಲಾಂಟ್‌. ನೋಡಲು ಸ್ನೇಕ್‌ನ ಹಾಗಿರುವ ಇದರ ಎಲೆಗಳು ಇದು ಹೆಚ್ಚಾಗಿ ತನ್ನ ಕೆಲಸ ಮಾಡುವುದು ರಾತ್ರಿಯಲ್ಲಿ. ವಾತಾವರಣದಲ್ಲಿರುವ ಹೆಚ್ಚಿನ ಪ್ರಮಾಣದ ಕಾರ್ಬನ್‌ ಡಯಾಕ್ಸೈಡನ್ನು ಹೀರಿಕೊಂಡು, ಆಮ್ಲಜನಕವನ್ನು ಇದು ಹೊರಗೆ ಬಿಡುತ್ತದೆ. ಗಾಳಿಯಲ್ಲಿರುವ ಬೇರೆ ವಿಷಕಾರಿ ಅಂಶಗಳಾದ ಟ್ರೈಕ್ಲೋರೋ ಎಥಿಲೀನ್‌, ಫಾರ್ಮಾಲ್ಡಿಹೈಡ್‌, ತೌಲೀನ್‌, ಬೆಂಜೀನ್‌ಗಳನ್ನೂ ಪರಿಶುದ್ಧೀಕರಿಸುತ್ತದೆ. ನೇರ ಬಿಸಿಲು ಬಿದ್ದರೆ ಚೆನ್ನ. ಇಲ್ಲವಾದರೂ ಆತಂಕವಿಲ್ಲ. ಆರೆಂಟು ಗಿಡಗಳು ಮನೆಯಲ್ಲಿದ್ದರೆ, ಬೇರೆ ಮರಗಳೇ ಮನೆ ಸುತ್ತ ಬೇಕಿಲ್ಲ.

ರೋಸ್‌ಮೇರಿ
ಈ ಗಿಡ ಪುರಾತನ ಕಾಲದಿಂದಲೂ ಜಾನಪದ ಹಳ್ಳಿಮದ್ದಾಗಿ ಉಪಯೋಗಿಸಲ್ಪಡುತ್ತಿತ್ತು. ಏಕಾಗ್ರತೆ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಬಳಸಲಾಗುತ್ತಿತ್ತು. ಇದರ ಪರಿಮಳಕ್ಕೆ ಒಡ್ಡಿಕೊಂಡವರಲ್ಲಿ ಏಕಾಗ್ರತೆ ಹಾಗೂ ನೆನಪಿನ ಶಕ್ತಿಯು ಹೆಚ್ಚಾಗಿರುವುದನ್ನು ಆಧುನಿಕ ಸರ್ವೇಗಳು ಕೂಡ ತೋರಿಸಿವೆ. ಇದಕ್ಕೆ ನೇರ ಬಿಸಿಲು ಬೀಳಬೇಕು. ಹೆಚ್ಚು ನೀರು ಹಾಕುವ ಅಗತ್ಯವಿಲ್ಲ. ನಿಮ್ಮ ಊಟದ ಟೇಬಲ್‌ ಮೇಲಿಡಲು ಬೆಸ್ಟ್ ಗಿಡ.

ದಿನವಿಡೀ ಕಂಪ್ಯೂಟರ್ ನೋಡ್ತೀರಾ? ಈ ಸಿಂಡ್ರೋಮ್ ಇರ್ಬೋದು ಜೋಕೆ..!

ಪೀಸ್‌ ಲಿಲ್ಲಿ
ಪುಟ್ಟಿಯಈ ಪುಟ್ಟ ಗಿಡದಲ್ಲಿ ಎಲೆಯಂತೆಯೇ ಕಾಣುವ ಪುಟ್ಟ ಬಿಳೀ ಹೂಗಳು ಕಾಣಿಸಿಕೊಂಡಾಗ, ಈ ಗಿಡದ ಸೌಂದರ್ಯಕ್ಕೆ ಸಾಟಿಯೇ ಇರುವುದಿಲ್ಲ. ಚೆಲುವು ಮಾತ್ರ ಇದರ ಗುಣವಲ್ಲ. ವಾತಾವರಣದಲ್ಲಿ ವಿಷಕಾರಿ ಅನಿಲಗಳಾದ ಬೆಂಜೀನ್‌, ಕ್ಸೈಲೀನ್‌, ಅಮೋನಿಯಾಗಳನ್ನು ಇದು ಹೀರಿಕೊಂಡು ಶುದ್ಧ ಗಾಳಿಯನ್ನು ನಿಮಗೆ ಉಳಿಸುತ್ತದೆ. ಎಲೆಗಳು ಮತ್ತು ಹೂಗಳು ನಸು ಪರಿಮಳವನ್ನೂ ಹೊಂದಿದ್ದು, ಮನಸ್ಸಿಗೆ ಮುದವನ್ನುಂಟುಮಾಡುತ್ತವೆ.

ದಿನಾ ಶುಂಠಿ ನೀರು ಕುಡಿದ್ರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ? 

ಅಲೋವೆರಾ
ಇದು ನಿಮ್ಮಲ್ಲಿ ಬಹಳ ಮಂದಿಗೆ ಗೊತ್ತಿರೋ ಸಸ್ಯವೇ. ದಪ್ಪ ದಪ್ಪ ಎಲೆಗಳ ಈ ಸಸ್ಯ, ನೀರಿಲ್ಲದ ಜಾಗದಲ್ಲೂ, ನೆರಳಿನಲ್ಲೂ ಚೆನ್ನಾಗಿ ಬೆಳೆಯಬಲ್ಲದು, ಬೆಳೆಸಲು ಕಷ್ಟವೇನಿಲ್ಲ. ಶತಮಾನಗಳ ಕಾಲದಿಂದಲೂ ಇದನ್ನು ನಮ್ಮ ಜನರು, ಚರ್ಮದ ಅಲರ್ಜಿಗಳಿಗೆ ಮದ್ದಾಗಿ ಬಳಸುತ್ತ ಬಂದಿದ್ದಾರೆ. ಇದರ ಎಲೆಗಳ ಒಳಗಿನ ತಂಪಾದ ಲೋಳೆ, ಮುಖಕ್ಕೆ ಹಚ್ಚಿಕೊಂಡರೆ ಮುಖಕಾಂತಿ ಹಾಗೂ ಆರೋಗ್ಯಕರ ಚರ್ಮ ಖಚಿತ. ನಿಮ್ಮ ಕಿಟಕಿಯಲ್ಲಿಡಲು ಬೆಸ್ಟ್‌ ಸಸ್ಯ.