ಟೊಮೆಟೋ ಬಾತ್! ಬೆಲೆ ಏರಿಕೆಯಿಂದ ಉಗಿಸಿಕೊಳ್ಳುತ್ತಿರುವ ಕೆಂಪು ಸುಂದರಿ ಮನದ ಮಾತು

ಟೊಮೆಟೋ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ಟೊಮೆಟೋಗೆ ಸೆಕ್ಯುರಿಟಿ ಗಾರ್ಡ್‌, ಟೊಮೆಟೋ ಕಳ್ಳತನ ಹೀಗೆ ವಿಚಿತ್ರ ಪ್ರಕರಣಗಳು ವರದಿಯಾಗ್ತಿವೆ. ಈ ಮಧ್ಯೆ ಬೆಲೆ ಏರಿಕೆಯಿಂದ ಉಗಿಸಿಕೊಳ್ಳುತ್ತಿರುವ ಕೆಂಪು ಸುಂದರಿ ಮನದ ಮಾತುಗಳು ಇಲ್ಲಿವೆ.

Self talk of The red beauty Tomato regarding price hike Vin

- ಲಕ್ಷ್ಮೀಕಾಂತ್‌

ನಾನು ಟೊಮೆಟೋ. ನನ್ನನ್ನು ಬಡವರ ಆ್ಯಪಲ್, ಕೆಂಪು ಸುಂದರಿ ಎಂದೆಲ್ಲಾ ವರ್ಣನೆ ಮಾಡುತ್ತಾರೆ. ಈ ಹೆಸರನ್ನೆಲ್ಲಾ ಯಾರು, ಯಾವಾಗ ಇಟ್ಟರೋ ನನಗಂತೂ ನೆನಪಿಲ್ಲ. ನನ್ನ ಮೂಲ ಈ ದೇಶ ಅಲ್ಲ. ದಕ್ಷಿಣ ಅಮೆರಿಕ ಖಂಡದ ಪೆರು, ಸುತ್ತಮುತ್ತಲ ರಾಷ್ಟ್ರಗಳಲ್ಲಿ ನಾನು ಮೊದಲು ಕಂಡುಬಂದೆನಂತೆ. ಕುತೂಹಲಕ್ಕಾಗಿ ಯಾರೋ ಮೊದಲು ತಿಂದರು. ಅಡುಗೆಗೆ ಬಳಸಿದರು. ನಿಧಾನವಾಗಿ ನಾನು ಜನರಿಗೆ ಪರಿಚಯವಾಗುತ್ತಾ ಹೋದೆ. ಆರಂಭದಲ್ಲಿ ಯುರೋಪಿಯನ್ನರು ನನ್ನನ್ನು ಅನುಮಾನದಿಂದ ಕಂಡರು. ನಿತ್ಯ ಅವರ ಕಣ್ಣಿಗೆ ಬೀಳುತ್ತಿದ್ದ ವಿಷಪೂರಿತ ಗಿಡವೊಂದು ನನ್ನಂತೆಯೇ ಇತ್ತು. ನಾನೂ ಅದರ ಒಂದು ತಳಿಯೇ ಇರಬೇಕು ಎಂದು ಭೀತಿ ಪಟ್ಟರು. ಇದರ ಮಧ್ಯೆ ಒಮ್ಮೆ ಶ್ರೀಮಂತ ಕುಟುಂಬವೊಂದು ನನ್ನನ್ನು ತಿಂದ ಬಳಿಕ ಸಾವಿಗೀಡಾಯಿತಂತೆ. ಈ ಬೆಳವಣಿಗೆಯಿಂದ ಯುರೋಪಿಯನ್ನರಿಗೆ ನನ್ನ ಮೇಲೆ ಇದ್ದ ಅನುಮಾನ ಖಾತ್ರಿಯಾಗಿ ಹೋಯಿತು. ಕಾಲಾನಂತರದಲ್ಲಿ ಪರಿಣತರು ಅದು ಸುಳ್ಳು ಎಂದು ಸಾಬೀತುಪಡಿಸಿದರು. ಅಲ್ಲಿಂದ ನಾನು ಜನಪ್ರಿಯವಾಗುತ್ತಾ ಹೋಗಿ ಈ ಹಂತಕ್ಕೆ ಬಂದಿದ್ದೇನೆ.

16ನೇ ಶತಮಾನದಲ್ಲಿ ಪೋರ್ಚುಗೀಸರು ನನ್ನನ್ನು ಭಾರತಕ್ಕೆ ಪರಿಚಯಿಸಿದರು. ಬ್ರಿಟಿಷರ ಆಳ್ವಿಕೆಯಲ್ಲಿ ನಾನು ನನ್ನ ವಿಶಿಷ್ಟ ರುಚಿಯಿಂದಾಗಿ ಬಲು ಬೇಗನೆ ಅಡುಗೆ ಮನೆಗಳಿಗೆ ಲಗ್ಗೆ ಇಡಲು ಆರಂಭಿಸಿದೆ. ಈಗ ನೋಡಿ ನಾನು ಇಲ್ಲದ ಅಡುಗೆ ಮನೆಯೇ ಇಲ್ಲ, ಆಹಾರ ಪದಾರ್ಥವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಗೋಬಿ ಮಂಚೂರಿಗೆ ಬಳಸುವ ಸಾಸ್‌ನಿಂದ ಹಿಡಿದು, ಫಿಂಗರ್‌ ಚಿಪ್ಸ್, ಸಮೋಸ ತಿನ್ನುವಾಗ ಅದ್ದಿಕೊಳ್ಳಲು ನನ್ನಿಂದ ಮಾಡುವ ಕೆಚಪ್ ಇರಬೇಕು. ಇಲ್ಲದೇ ಹೋದರೆ ಜನರಿಗೆ ಏನೋ ಅಪೂರ್ಣವಾದಂತೆ. ಚಿತ್ರಾನ್ನ, ರಸಂ, ಸಾಂಬರ್‌ನಿಂದ ಹಿಡಿದು ಸೂಪ್‌ಗಳು, ಜನ ಚಪ್ಪರಿಸಿ ತಿನ್ನುವ ಬಿರಿಯಾನಿ ಸೇರಿದಂತೆ ನಾನ್‌ವೆಜ್‌ನ ಹಲವು ಐಟಂಗಳಿಗೆ ನಾನಿರಲೇಬೇಕು. ಪಿಜ್ಜಾ, ಬರ್ಗರ್ ಪ್ರಿಯರಿಗೂ ನಾನು ಅಚ್ಚುಮೆಚ್ಚು. ರಸ್ತೆ ಬದಿ ಮಾರುವ ಚುರುಮುರಿಯವನಿಗೂ ನಾನಿಲ್ಲದೆ ಆಗುವುದಿಲ್ಲ. ನನ್ನ ಬೆಲೆ ಕೆ.ಜಿ.ಗೆ 1 ರು. ಇದ್ದಾಗಲೂ ಬರಿ 1 ಟೊಮೆಟೋವನ್ನೇ 30 ರು.ಗೆ ಮಾರುವ ಕಲೆ ಆತನಿಗೊಬ್ಬನಿಗೇ ಸಿದ್ಧಿಸಿರುವುದು.

ತಾಯಿಗಾಗಿ ದುಬೈನಿಂದ 10 ಕೆಜಿ ಟೊಮೆಟೊ ತಂದ ಮಗಳು, ವರ್ಷದ ಬೆಸ್ಟ್‌ ಡಾಟರ್ ನೀನಮ್ಮ ಎಂದ ನೆಟ್ಟಿಗರು

ಎಲ್ಲರೂ ನನಗೆ ಬೈತಾರೆ
ನನ್ನ ಬೆಲೆ ಕೇಜಿಗೆ 100 ರು. ದಾಟಿ ಮೂರು ವಾರಗಳು ಕಳೆದು ಹೋಗಿವೆ. ಬೆಲೆ ಮಾತ್ರ ಇಳಿಯುತ್ತಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಇರುವವರು ನನ್ನ ಬಗ್ಗೆ ರೀಲ್ಸ್ ಮಾಡಿ (ಟೊಮೆಟೋ ಖರೀದಿಸಲು ಆಗದಿದ್ದರೂ) ಲೈಕ್ಸ್‌ಗಳನ್ನಂತೂ ಪಡೆಯುತ್ತಿದ್ದಾರೆ. ಎಂದೂ ತರಕಾರಿ ಅಂಗಡಿಯತ್ತ ತಿರುಗಿಯೂ ನೋಡದ ಅಂಕಲ್‌ಗಳು ಬೈಕ್, ಸ್ಕೂಟರ್, ಕಾರು, ಬಸ್‌ನಲ್ಲಿ ಹೋಗುವಾಗ ಕಾಣುವ ತರಕಾರಿ ಅಂಗಡಿಗಳಲ್ಲಿ ನನ್ನ ಬಳಿ ನೇತು ಹಾಕಿರುವ ಫಲಕವನ್ನು ಕಂಡು ‘ನನ್ ಮಗಂದು... ಇನ್ನೂ ಇಳಿದಿಲ್ಲ’ ಎಂದು ಬೈದುಕೊಂಡು ಹೋಗುತ್ತಾರೆ. ಅಂಗಡಿಗೆ ಬರುವ ಆಂಟಿಯರು ‘ಇದಕ್ಕೇನು ಬಂದಿದೆ ದೊಡ್ಡ ರೋಗ... ಈ ಪರಿ ದುಬಾರಿಯಾಗಿದೆ’ ಎಂದು ಗೊಣಗಾಡುತ್ತಾರೆ. ಅರಳಿಕಟ್ಟೆ, ಬಸ್ ನಿಲ್ದಾಣ, ಪಾರ್ಕುಗಳಲ್ಲಿ ಸೇರುವ ಎಲ್ಲರ ಬಾಯಲ್ಲೂ ನನ್ನದೇ ಮಾತು. ನನ್ನ ಬೆಲೆ ದುಬಾರಿಯಾಗಿರುವುದರಿಂದ ಜನರು ಈಗ ಕಡಿಮೆ ಬಳಸುತ್ತಿದ್ದಾರೆ. ನಾನು ದುಬಾರಿಯಾಗುವುದು ವರ್ಷಕ್ಕೆ ಒಂದೆರಡು ಬಾರಿ ಅಷ್ಟೆ. ಬಾಕಿ ಅವಧಿಯಲ್ಲಿ ಕೈಗೆಟಕುವ ದರದಲ್ಲಿ ಸಿಗುತ್ತೇನೆ. ಒಂದೆರಡು ತಿಂಗಳಂತೂ ಜನರು ನನ್ನನ್ನು ಕಾಲಕಸದಂತೆ ಕಾಣುತ್ತಾರೆ. ಕೆಲವೊಮ್ಮೆ ನನ್ನನ್ನು ಬೆಳೆದ ರೈತರೇ ಟ್ರ್ಯಾಕ್ಟರ್‌ನಲ್ಲಿ ತುಂಬಿ ರಸ್ತೆ ಬದಿ ಅಥವಾ ತಿಪ್ಪೆಯಲ್ಲಿ ಸುರಿದು ಹೋಗಿಬಿಡುತ್ತಾರೆ. ಬೆಳೆದ ಖರ್ಚೂ ಹುಟ್ಟಲಿಲ್ಲ ಎಂದು ಹಿಡಿಶಾಪ ಹಾಕುತ್ತಾರೆ. ಆಗ ಜನರು ಇರಲಿ, ಹಸುಗಳು ಕೂಡ ನನ್ನನ್ನು ಮುಟ್ಟುವುದಿಲ್ಲ. ಅವಕ್ಕೂ ನನ್ನನ್ನು ನೋಡಿ ವಾಕರಿಕೆ ಬಂದುಬಿಟ್ಟಿರುತ್ತದೆ.

ಬೆಲೆ ದುಬಾರಿಯಾದ ಕಾರಣ ಕೆಲವು ರೈತರು ವಾರ ಒಪ್ಪತ್ತಿನಲ್ಲಿ ಲಕ್ಷ, ಕೋಟಿ ಗಳಿಸಿ ಮಿಂಚುತ್ತಿದ್ದಾರೆ. ಹಾಗಂತ ನನ್ನನ್ನು ಬೆಳೆವ ಎಲ್ಲ ರೈತರೂ ಖುಷಿಯಾಗಿದ್ದಾರಾ? ಖಂಡಿತ ಇಲ್ಲ. ನಾವು ಬೆಳೆದಾಗ ಕೈಕೊಟ್ಟಿತು, ಈಗ ನೋಡಿದರೆ ದುಬಾರಿಯಾಗಿದೆ ಎಂದು ಈಗಲೂ ಹಲವಾರು ಅನ್ನದಾತರು ಕಿಡಿಕಾರುತ್ತಾರೆ. ನನ್ನದು ಒಂದು ರೀತಿ ಅಡಕತ್ತರಿಯ ಪರಿಸ್ಥಿತಿ. ದುಬಾರಿಯಾದಾಗಲೂ ಬೈಸಿಕೊಳ್ಳುತ್ತೇನೆ, ಅಗ್ಗವಿದ್ದಾಗಲೂ ನಿಂದಿಸಿಕೊಳ್ಳುತ್ತೇನೆ. ಏನು ಮಾಡೋಣ ಹೇಳಿ.... ಅನುಭವಿಸಬೇಕು. ನಮ್ಮ ಕರ್ಮ.

ಟೊಮ್ಯಾಟೋ ಬಗ್ಗೆ ಮಾತಾಡಿ ಹಿಗ್ಗಾಮುಗ್ಗ ಟ್ರೋಲ್ ಆದ ಸುನಿಲ್ ಶೆಟ್ಟಿ: ಕೊನೆಗೂ ಬಹಿರಂಗ ಕ್ಷಮೆ ಕೇಳಿದ ನಟ

ಹುಣಸೇಹಣ್ಣು ಎಲ್ಲಿ ಹೋಯಿತು?
ನನ್ನದು ಒಂದು ಪ್ರಶ್ನೆ. ನಾನು ಬಲು ದುಬಾರಿ ಎಂದು ಕಿಡಿಕಾರುತ್ತಿರುವ ಜನರು ನನ್ನನ್ನು ಏಕೆ ಈ ಪರಿ ಅವಲಂಬಿಸಿದ್ದಾರೆ? ಪೋರ್ಚುಗೀಸರು ನನ್ನನ್ನು ಈ ದೇಶಕ್ಕೆ ಪರಿಚಯಿಸುವ ಮುನ್ನ ಹಾಗೂ ಅದಾಗಿ ನೂರಾರು ವರ್ಷಗಳ ಬಳಿಕವೂ ಅಡುಗೆಗೆ ಇಲ್ಲಿ ನನ್ನನ್ನು ಬಳಸುತ್ತಿರಲೇ ಇಲ್ಲ. ಹುಳಿಯ ರುಚಿಗಾಗಿ ಹುಣಸೆಹಣ್ಣು ಜನರಿಗೆ ನೆಚ್ಚಿನ ಆಯ್ಕೆಯಾಗಿತ್ತು. ಆದರೆ ಭಾರತೀಯರಿಗೆ ಒಂದು ದೌರ್ಬಲ್ಯವಿದೆ- ವಿದೇಶಿ ವ್ಯಾಮೋಹ. ಸ್ವದೇಶದಲ್ಲಿ ಅತ್ಯುತ್ತಮ ವಸ್ತುಗಳಿದ್ದರೂ ಇವರಿಗೆ ವಿದೇಶದ್ದು ಚೆನ್ನಾಗಿ ಕಾಣುತ್ತದೆ. ನನ್ನಂತೆಯೇ ಹಲವು ತರಕಾರಿಗಳು ಈ ದೇಶದ ಅಡುಗೆ ಮನೆಯ ಅವಿಭಾಜ್ಯ ಅಂಗವಾಗಿ ಹೋಗಿವೆ. ಈ ದೇಶದ ತರಕಾರಿಗಳು ಇಲ್ಲಿನವರಿಗೆ ಮರೆತೇ ಹೋಗಿವೆ. ಹುಳಿಯ ಜತೆಗೆ ವಿಶಿಷ್ಟ ಸ್ವಾದ ಇರುತ್ತದೆ ಎಂಬುದಕ್ಕೆ ನಾನು ಫೇಮಸ್ ಆಗಿಬಿಟ್ಟಿದ್ದೇನೆ ಎಂಬುದೇನೋ ನಿಜ. ವರ್ಷಕ್ಕೆ ಒಂದೆರಡು ಬಾರಿ ದುಬಾರಿಯಾದಾಗಲೇ ವರ್ಷವಿಡೀ ನನ್ನನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬ ಬಗ್ಗೆ ಐಡಿಯಾ ಮಾಡಬಹುದಲ್ಲ? ಬೆಂಕಿ ಬಿದ್ದಾಗ ಬಾವಿ ತೋಡುವ ಗುಣ.

ಈ ದೇಶಕ್ಕೆ ಅನಿವಾರ್ಯ ನಾನಲ್ಲ
ಟೊಮೆಟೋದಲ್ಲಿ ಎಷ್ಟು ತಳಿ ಎಂದು ಒಮ್ಮೆ ಯಾರನ್ನಾದರೂ ಕೇಳಿ ನೋಡಿ. ಹುಳಿ ಅಥವಾ ಹೈಬ್ರಿಡ್/ನಾಟಿ ಅಥವಾ ಫಾರ್ಮ್ ಎಂಬ ಉತ್ತರ ಸಾಮಾನ್ಯವಾಗಿ ಬರುತ್ತದೆ. ವಿಶ್ವಾದ್ಯಂತ ನನ್ನದು ಹತ್ತಾರು ಸಾವಿರ ತಳಿಗಳಿವೆ. ಭಾರತದಲ್ಲೇ 1000ಕ್ಕೂ ಹೆಚ್ಚು ಬಗೆಯ ತಳಿಗಳನ್ನು ಬೆಳೆಯುತ್ತಾರೆ. ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ, ಒಡಿಶಾ, ಗುಜರಾತ್‌ನಲ್ಲಿ ಭಾರತದಲ್ಲಿ ಉತ್ಪಾದನೆಯಾಗುವ ಟೊಮೆಟೋ ಪೈಕಿ ಶೇ.50ರಷ್ಟು ಬೆಳೆಯುತ್ತಾರೆ. ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ, ಮಹಾರಾಷ್ಟ್ರ, ಉತ್ತರಪ್ರದೇಶ, ಹರ್‍ಯಾಣ, ತೆಲಂಗಾಣದಂತಹ ರಾಜ್ಯಗಳ ಬೆಳೆಗಳನ್ನೂ ಗಣನೆಗೆ ತೆಗೆದುಕೊಂಡರೆ ಒಟ್ಟು ಉತ್ಪಾದನೆಯಲ್ಲಿ ಶೇ.90ರಷ್ಟಾಗುತ್ತದೆ. ಅಂದಹಾಗೆ, ಈ ದೇಶದ ಜನರು ಅತಿಯಾಗಿ ನೆಚ್ಚಿಕೊಂಡಿರುವ ಈರುಳ್ಳಿ, ಆಲೂಗಡ್ಡೆಯಷ್ಟೂ ಅನಿವಾರ್ಯ ನಾನಲ್ಲ. ಈರುಳ್ಳಿ ಬೆಲೆ ಏರಿಕೆಯಾದಾಗ ಸರ್ಕಾರ ಉರುಳಿದ ನಿದರ್ಶನ ಈ ದೇಶದಲ್ಲಿದೆ. ಅಲ್ಲದೆ ಜನರು ಬೀದಿಗಿಳಿದು ಪ್ರತಿಭಟನೆ ಕೂಡ ಮಾಡುತ್ತಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಹೆಚ್ಚಾದಾಗಲೂ ಜನರು ಹೋರಾಟ ಮಾಡುತ್ತಾರೆ. ಆದರೆ ಈಗ ನಾನು ಗ್ಯಾಸ್ ಸಿಲಿಂಡರ್ ಬಿಟ್ಟು ಉಳಿದವೆಲ್ಲಕ್ಕಿಂತ ದುಬಾರಿ. ಯಾರಾದರೂ ಪ್ರತಿಭಟಿಸಿದ್ದಾರಾ? ಉಹೂಂ. ಯಾರೂ ಮಾಡೋಲ್ಲ. ಅಲ್ಲೇ ಗೊತ್ತಾಗುತ್ತೆ, ನಾನು ಇಲ್ಲಿನವರೆಗೆ ಎಷ್ಟು ಅನಿವಾರ್ಯ ಎಂದು. ಇದೆಲ್ಲ ನನಗೂ ಗೊತ್ತಿದೆ.

ಟೊಮೆಟೋ ಹಣ್ಣಿನ ರಾಶಿ ಮಧ್ಯದಲ್ಲಿ ಸರ್ಪರಾಜ: ಮುಟ್ಟಲು ಹೋದವರನ್ನೇ ಕಚ್ಚಲು ಬಂದ ಹಾವು..!

ಪೇಸ್ಟ್ ಮಾಡ್ತಾರಂತೆ ಪೇಸ್ಟು
ಈಗ ನನ್ನ ಬೆಲೆ ವಿಪರೀತ ದುಬಾರಿಯಾಗಿರುವುದಕ್ಕೆ ಕಾರಣ ಏನೆಂದು ಗೊತ್ತಾ? ಮನುಷ್ಯರ ದುರಾಸೆಯಿಂದ ಹವಾಮಾನದಲ್ಲಿ ಆಗಿರುವ ವೈಪರೀತ್ಯವೂ ಒಂದು ಕಾರಣ ಎಂಬುದು ತಿಳಿದಿದೆಯಾ? ರೈತರು ಜನವರಿಯಲ್ಲಿ ನನ್ನನ್ನು ಬೆಳೆದರು. ಆದರೆ ವಾತಾವರಣದಲ್ಲಿ ಬಿಸಿಲು ಹೆಚ್ಚಾಯಿತು. ಮಳೆ ಬರಲಿಲ್ಲ. ರೋಗ ಬಂದು ಬೆಳೆ ನಾಶವಾಯಿತು. ಉಳಿದ ರೈತರು ಎಚ್ಚೆತ್ತರು. ಕೆಲವರು ಬೀನ್ಸ್, ಮತ್ತಿತರೆ ತರಕಾರಿ ಮೊರೆ ಹೋದರು. ಒಂದಷ್ಟು ಮಂದಿ ತಡವಾಗಿ ಬಿತ್ತನೆ ಮಾಡಿದಾಗ ಮಳೆ ಬಂದು ಬೆಳೆ ಹಾಳಾದ ನಿದರ್ಶನಗಳೂ ಇವೆ. ಕೋಲಾರದಂತಹ ಊರುಗಳಲ್ಲಿ ಬಂಗಾಳದಿಂದ ಬಂದು ನೆಲೆಯೂರಿದಂತಹ ವ್ಯಾಪಾರಿಗಳು ನನ್ನ ಮೇಲೆ ಕಣ್ಣಿಟ್ಟಿರುತ್ತಾರೆ. ಉತ್ತಮ ಗುಣಮಟ್ಟದ್ದನ್ನು ಆರಿಸಿಕೊಂಡು ಬಂಗಾಳ, ಬಾಂಗ್ಲಾದೇಶಗಳಿಗೆ ಕಳುಹಿಸಿಬಿಡುತ್ತಾರೆ. ನನ್ನ ಬೆಲೆ ಈಗ ಅಟ್ಟಕ್ಕೇರಿರುವುದರಿಂದ ಕೇಂದ್ರ ಸರ್ಕಾರದ ಅಧಿಕಾರಿಗಳು ಟೊಮೆಟೋ ಫಸಲು ಜಾಸ್ತಿ ಬಂದಾಗ ಪೇಸ್ಟ್ ರೂಪದಲ್ಲಿ ಮಾಡಿಟ್ಟು, ಬೆಲೆ ದುಬಾರಿಯಾದಾಗ ಬಳಸಬಹುದು ಎಂದು ಹೇಳುತ್ತಿದ್ದಾರೆ. ಇನ್ನೊಂದಿಷ್ಟು ವಾರ ತಾಳಿ, ಪೇಸ್ಟ್ ಅಂದರೆ ಟೂತ್ ಪೇಸ್ಟಾ ಅಂತ ಅವರೇ ಕೇಳುತ್ತಾರೆ. ನಾನು ಮರೆತೇ ಹೋಗಿರುತ್ತೇನೆ.

ನಾನು ಹಣ್ಣೋ? ತರಕಾರಿಯೋ?
1 ಹೆಕ್ಟೇರ್ ಪ್ರದೇಶದಲ್ಲಿ ಜಾಗತಿಕ ಸರಾಸರಿ 37 ಟನ್ ಇಳುವರಿ ಕೊಡುತ್ತೇನೆ. ಭಾರತದಲ್ಲಿ ಇದು 25 ಟನ್ ಮಾತ್ರವೇ ಇದೆ. ಏಕೆ ಹೀಗೆ ಎಂಬುದನ್ನು ಹುಡುಕುವ ಪ್ರಯತ್ನಗಳು ಗಂಭೀರವಾಗಿ ಆಗಿಲ್ಲ. ಇನ್ನೂ ಒಂದು ವಿಷಯ ಹೇಳ್ತಿನಿ ಇರಿ. ಭಾರತದಲ್ಲಿ ನನ್ನ ಉತ್ಪಾದನೆ ಕಡಿಮೆಯಾಗುತ್ತಿದೆ. 2019-20ನೇ ಸಾಲಿನಲ್ಲಿ 21.18 ದಶಲಕ್ಷ ಟನ್‌ನಷ್ಟು ಟೊಮೆಟೋವನ್ನು ರೈತರು ಬೆಳೆದಿದ್ದರು. ಅದು 2021-22ರಲ್ಲಿ 20.69 ದಶಲಕ್ಷ ಟನ್, 2022-23ರಲ್ಲಿ 20.62 ದಶಲಕ್ಷ ಟನ್‌ಗೆ ಕುಸಿದಿದೆ. ಭವಿಷ್ಯದಲ್ಲಿ ಇನ್ನಷ್ಟು ಇಳಿದರೆ, ವಿದೇಶದಿಂದ ತರಿಸಿ ಸರ್ಕಾರದವರು ನಿಮಗೆ ಕೊಡಬೇಕೆನೋ. ಯಾವುದಕ್ಕೂ ತಿಳಿದಿರಲಿ ಅಂತ ಹೇಳಿದೆ. ಈ ದೇಶದಲ್ಲಿ ನನ್ನನ್ನೂ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ‘ಟೊಮೆಟೋ ಸಾಸ್’ ಎಂದು ಸಿಗುವ ಕೆಲವೊಂದು ಉತ್ಪನ್ನಗಳಲ್ಲಿ ನಾನಿರುವುದೇ ಇಲ್ಲ. ಕೇಳಿದರೆ ‘ಮೈಸೂರು ಪಾಕ್’ನಲ್ಲಿ ಮೈಸೂರು ಇರುತ್ತಾ ಅಂತ ಆವಾಜ್ ಹಾಕುವವರೂ ಇಲ್ಲಿದ್ದಾರೆ. ಮತ್ತೊಂದು ತಮಾಷೆ ಕೇಳಿ. ಸಸ್ಯಶಾಸ್ತ್ರದ ಪ್ರಕಾರ ನಾನು ತರಕಾರಿ ಅಲ್ಲವೇ ಅಲ್ಲ. ನಾನೊಂದು ಹಣ್ಣು. ಇದೇ ವಿಷಯವನ್ನು ಇಟ್ಟುಕೊಂಡು ರಫ್ತುದಾರನೊಬ್ಬ ಅಮೆರಿಕ ಸರ್ಕಾರದ ತೆರಿಗೆ ತಪ್ಪಿಸಿಕೊಳ್ಳಲು ಪ್ರಬಲ ವಾದ ಮಾಡಿದ. ಆದರೆ ಚಾಣಾಕ್ಷ ಜಡ್ಜ್‌ವೊಬ್ಬರು, ‘ಸಸ್ಯಶಾಸದ ಪ್ರಕಾರ ಹಣ್ಣಿನ ಜಾತಿಗೆ ಸೇರಿದ್ದರೂ, ಅದನ್ನು ಯಾರೂ ಹಣ್ಣಿನ ಜತೆ ತಿನ್ನುವುದಿಲ್ಲ. ತರಕಾರಿ ಜತೆ ಬಳಸುತ್ತಾರೆ. ಹೀಗಾಗಿ ಅದೊಂದು ತರಕಾರಿ’ ಎಂದು ತೀರ್ಪು ಕೊಟ್ಟಿದ್ದರಿಂದ ತರಕಾರಿ ಆದೆ. ನನ್ನದೂ ಒಂದು ರೀತಿ ಗಂಡೋ-ಹೆಣ್ಣೋ ಎಂಬ ದ್ವಂದ್ವ ಪರಿಸ್ಥಿತಿ. ಮಜಾ ಎಂದರೆ, ಏರಿದ್ದೆಲ್ಲಾ ಇಳಿಯಲೇಬೇಕು, ಅದು ಜಗದ ನಿಯಮ ಎಂದು ಇದೇ ದೇಶದಲ್ಲಿ ಜನ ಮಾತಾಡುತ್ತಾರೆ. ಆದರೆ ನನ್ನ ದರ ಏರಿಕೆಯಾದಾಗ ಹೌಹಾರುತ್ತಾರೆ. ಅವರದ್ದೂ ಒಂದು ರೀತಿ ದ್ವಂದ್ವ ನೀತಿ.

Latest Videos
Follow Us:
Download App:
  • android
  • ios