Manikarnika Ghat: ಇಲ್ಲಿ ಬಣ್ಣಗಳಿಂದಲ್ಲ, ಚಿತಾಭಸ್ಮದಿಂದ ಆಡುತ್ತಾರೆ ಹೋಳಿ!
ಜಗತ್ತಿನಾದ್ಯಂತ ಹೋಳಿಯನ್ನು ಬಣ್ಣಗಳಿಂದ ಆಡುವುದು ಗೊತ್ತೇ ಇದೆ. ಆದರೆ, ಇಲ್ಲಿ ಮಾತ್ರ ಬಣ್ಣಗಳಿಂದಲ್ಲ, ಭಸ್ಮದಿಂದ ಅಂದೂ ಸತ್ತವರ ಚಿತಾಭಸ್ಮದಿಂದ ಹೋಳಿಯಾಡಲಾಗುತ್ತದೆ. ಅದೂ ಸ್ಮಶಾನದಲ್ಲಿ ನಿಂತು. ಎಲ್ಲಿ ಗೊತ್ತಾ?
ಹೋಳಿ(Holi) ಎಂದರೆ ಗೆಳೆಯ ಗೆಳತಿಯರೊಡಗೂಡಿ ಒಬ್ಬರಿಗೊಬ್ಬರು ಬಣ್ಣಗಳನ್ನು ಎರಚುವ ಸಂಭ್ರಮ, ಕುಟುಂಬದೊಡನೆ ಓಕುಳಿಯಾಡುವ ಹಬ್ಬ.. ಅದರಲ್ಲೂ ಉತ್ತರ ಭಾರತದಲ್ಲಿ ಇದರ ಹವಾ ಜೋರು. ಮಥುರಾ, ವಾರಣಸಿ, ವೃಂದಾವನದಲ್ಲಿ ಹೋಳಿಯ ಆಚರಣೆ ನೋಡುವುದೇ ಒಂದು ಹಬ್ಬ. ಆದರೆ, ಇಲ್ಲಿ ಹಾಗಲ್ಲ, ಹೋಳಿ ಎಂದರೆ ಸ್ಮಶಾನದಲ್ಲಿ ನಿಂತು ಶವಗಳನ್ನು ಸುಟ್ಟ ಬೂದಿಯನ್ನು ತೆಗೆದುಕೊಂಡು ಒಬ್ಬರ ಮೇಲೊಬ್ಬರು ಎರಚುವ ಹಬ್ಬ.
ನಾವೆಲ್ಲೋ ದಾರಿಯಲ್ಲಿ ಹೋಗುವಾಗ ಫರ್ಲಾಂಗ್ ದೂರದಲ್ಲಿ ಸ್ಮಶಾನವಿದೆ ಎಂದರೇ ಹೆದರಿ ಹೌಹಾರುತ್ತೇವೆ. ಸತ್ತವರಿಗೆ ಸಂಬಂಧಿಸಿದ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳಲು ಹೆದರುತ್ತೇವೆ. ಮೂಳೆ ಮತ್ತೊಂದು ವಸ್ತು ದೊರಕಿದರೆ ಅದೇನೋ ಅನಿಷ್ಠದ ಸೂಚನೆ ಎಂದುಕೊಳ್ಳುತ್ತೇವೆ. ಆದರೆ, ಇಲ್ಲಿ ಸ್ಮಶಾನವೇ ಹಬ್ಬಕ್ಕೆ ವೇದಿಕೆ ಒದಗಿಸುತ್ತದೆ. ಬಣ್ಣ ಎರಚಾಡಲು ಚಿತಾ ಭಸ್ಮವನ್ನೂ ನೀಡುತ್ತದೆ. ಡೋಲು ನಗಾರಿಗಳು ಮೊಳಗುತ್ತವೆ.
ಹೌದು, ಕಾಶಿಯ ಪ್ರಸಿದ್ಧ ಮಣಿಕರ್ಣಿಕಾ ಘಾಟ್‌ನಲ್ಲಿ ಹೋಳಿಯನ್ನು ಆಚರಿಸುವುದೇ ಹೀಗೆ. ಕಾಶಿಯ ಮೋಕ್ಷದಾಯಿನಿ ಸ್ಮಶಾನ ಮಣಿಕರ್ಣಿಕಾ ಘಾಟ್‌ನಲ್ಲಿ ಚಿತೆಯ ಬೆಂಕಿಯು ಎಂದಿಗೂ ತಣ್ಣಗಾಗುವುದಿಲ್ಲ. ಸದಾ ಇಲ್ಲಿ ಒಂದಿಲ್ಲೊಂದು ಅಂತ್ಯಸಂಸ್ಕಾರ ನಡೆಯುತ್ತಲೇ ಇರುತ್ತದೆ. ಅಂತ್ಯಸಂಸ್ಕಾರಕ್ಕಿಲ್ಲಿ ಅಂತ್ಯವೇ ಇಲ್ಲ. ಇಂಥ ಸ್ಥಳದಲ್ಲಿ ಉರಿವ ಚಿತೆಗಳ ನಡುವೆಯೇ ಜನರು ಸಂಭ್ರಮದಿಂದ ಭಸ್ಮ ಹೋಳಿಯಾಡುವುದು ವಿಚಿತ್ರವಾದರೂ ಅದಕ್ಕೆ ಹಿನ್ನೆಲೆ ಇದೆ.
ಇಲ್ಲಿ ರಂಗ್‌ಭರಿ ಏಕಾದಶಿಯ ಮರು ದಿನ ನೂರಾರು ಜನ ಮಹಾಸ್ಮಶಾನ ಎನಿಸಿಕೊಂಡ ಮಣಿಕರ್ಣಿಕಾ ಘಾಟ್(Manikarnika Ghat)ನಲ್ಲಿ ಸೇರುತ್ತಾರೆ. ಇಲ್ಲಿರುವ ಮಹಾಸ್ಮಶಾನ್‌ನಾಥ್ ದೇವಾಲಯದಲ್ಲಿ ಮೊದಲು ಪ್ರಾರ್ಥಿಸುತ್ತಾರೆ. ನಂತರ ಭಸ್ಮಧಾರಿಯಾಗಿಯೇ ಗುರುತಿಸಿಕೊಂಡಿರುವ ಮಹಾಶಿವನಿಗೆ ಚಿತಾಭಸ್ಮ ಬಳಿಯುತ್ತಾರೆ. ನಂತರ ಉರಿಯುತ್ತಿರುವ ಚಿತೆಗಳ ನಡುವೆಯೇ ಭಸ್ಮ ಹಾಗೂ ಬಣ್ಣವನ್ನು ತೆಗೆದುಕೊಂಡು ಒಬ್ಬರಿಗೊಬ್ಬರು ಹಚ್ಚಿ ಸಂಭ್ರಮಿಸುತ್ತಾರೆ. ಡಮರು, ಗಂಟೆ, ಘರಿಯಾಲ್, ಮೃದಂಗ ಸೇರಿದಂತೆ ವಾದ್ಯಗಳ ಹಿಮ್ಮೇಳ ಉತ್ಸಾಹ ಹೆಚ್ಚಿಸುತ್ತಲೇ ಹೋಗುತ್ತವೆ. ಈ ಸಂಭ್ರಮದ ನಡುವೆಯೇ ಭೋಲೇನಾಥನ ನಾಮಸ್ಮರಣೆ ಮಾಡುತ್ತಾರೆ. ಇಷ್ಟಕ್ಕೂ ಕಾಯುವ ಶಿವನೇ ಸ್ಮಶಾನವಾಸಿಯಾಗಿರುವಾಗ ಭಕ್ತರು ಹೆದರುವ ಅಗತ್ಯವಾದರೂ ಏನಿದೆ ಅಲ್ಲವೇ?
Vermilion Remedies: ಹಣಕಾಸಿನ ಸಮಸ್ಯೆಗೆ ಕುಂಕುಮದ ಪರಿಹಾರ
ಇತಿಹಾಸ
ಸಾವಿರಾರು ವರ್ಷಗಳ ಇತಿಹಾಸವಿರುವ ಈ ನಗರದಲ್ಲಿ ಸಾವನ್ನು ಕೂಡಾ ಸಂಭ್ರಮವೆಂಬಂತೆ ನೋಡುವ, ಮೋಕ್ಷದ ಹಾದಿ ಎಂದು ವಾಸ್ತವ ಒಪ್ಪಿಕೊಂಡು ಬಿಡುವ ಈ ಚಿತಾಭಸ್ಮ ಆಚರಣೆ ಇಂದು ನಿನ್ನೆಯದಲ್ಲ. ಸ್ಕಂದ ಪುರಾಣ(Skand Purana) ಸೇರಿದಂತೆ ಹಲವಾರು ಹಳೆಯ ಪುರಾಣ ಗ್ರಂಥಗಳಲ್ಲಿ ಈ ಚಿತಾಭಸ್ಮ ಹೋಳಿಯ ಕುರಿತ ಉಲ್ಲೇಖವಿದೆ. ಈ ರೀತಿ ಚಿತಾಭಸ್ಮದ ಹೋಳಿಯಿಂದಾಗಿ ಮೋಕ್ಷ(salvation) ಸಾಧಿಸಬಹುದು ಎಂಬ ನಂಬಿಕೆ ಇದೆ. ಅಲ್ಲದೆ, ಬದುಕಿನಲ್ಲಿ ಸಂತೋಷ, ಸಮೃದ್ಧಿ ಹೆಚ್ಚುತ್ತದೆ.
ಪುರಾಣದ ಪ್ರಕಾರ, ರಂಗ್‌ಭರಿ ಏಕಾದಶಿಯಂದು ಇಲ್ಲಿಗೆ ಪತ್ನಿ ಪಾರ್ವತಿಯೊಂದಿಗೆ ಬರುವ ಶಿವನು ಭಕ್ತರೊಂದಿಗೆ ಕಾಶಿ ವಿಶ್ವನಾಥ ದೇವಾಲಯದಲ್ಲಿ ಭಸ್ಮದೊಂದಿಗೆ ಹೋಳಿಯಾಡುತ್ತಾನೆ ಎಂಬ ನಂಬಿಕೆ ಇದೆ.
ಈ ಚಿತಾಭಸ್ಮ ಹೋಳಿಯ ಆಯೋಜಕರ ಪ್ರಕಾರ, ಶಿವನ ಗಣಗಳಾದ ದೆವ್ವಗಳಿಗೆ ಆತನೊಂದಿಗೆ ರಂಗ್‌ಭರಿ ಏಕಾದಶಿಯಂದು ಬಣ್ಣಗಳೊಂದಿಗೆ ಹೋಳಿಯಾಡಲು ಅವಕಾಶ ಸಿಗುವುದಿಲ್ಲ. ಹೀಗಾಗಿ, ಅದರ ಮರುದಿನ ಸ್ಮಶಾನಕ್ಕೆ ಬಂದು ಅವುಗಳೊಂದಿಗೆ ಚಿತಾಭಸ್ಮದಲ್ಲಿ ಹೋಳಿಯಾಡುತ್ತಾನೆ.
Uttara Kannada: ಹೋಳಿಯ ಸಂಭ್ರಮ ಹೆಚ್ಚಿಸಿದ ಹಾಲಕ್ಕಿ ಸುಗ್ಗಿ
ಈ ಸಂಪ್ರದಾಯವನ್ನು ಈಗ ಕಾಶಿಯಲ್ಲಿರುವ ಅಘೋರಿಗಳು, ಸನ್ಯಾಸಿಗಳು ಸೇರಿದಂತೆ ಸಾಮಾನ್ಯ ಜನರೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ದೆವ್ವ, ಪಿಶಾಚಿ ಎಂದರೆ ಭಯ ಹೋಗುವ ಜೊತೆಗೆ, ಅವೂ ನಮ್ಮಂತೆಯೇ ಇದ್ದು ಹೋದವಲ್ಲವೇ ಎಂಬ ಭಾವ ಹುಟ್ಟುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.