ಹಂಪಿಯ ಅಂಜನಾದ್ರಿಯೇ ಆಂಜನೇಯ ಜನ್ಮಸ್ಥಳ; ಹನುಮನ ಜನ್ಮಸ್ಥಳ ಮತ್ತು ವಾದಗಳು!

ಇತ್ತೀಚೆಗೆ ಹನುಮನ ಜನ್ಮಸ್ಥಳ ಕುರಿತಂತೆ ವಾದ ವಿವಾದಗಳು ನಡೆಯುತ್ತಿವೆ. ಹನುಮನ ಜನ್ಮಸ್ಥಳ ತಿರುಪತಿಯಲ್ಲಿರುವ ಆಂಜನಾದ್ರಿ ಎಂದೂ ಅವನ ಜನ್ಮಸ್ಥಳ ಗೋಕರ್ಣ ಹಾಗೂ ವಾಸಸ್ಥಳ ಕಿಷ್ಕಿಂಧವೆಂಬ ಹೇಳಿಕೆಗಳನ್ನು ಗಮನಿಸಬಹುದು. ಪುರಾಣಪ್ರಿಯರ ಇಂತಹ ಹೇಳಿಕೆಗಳು ಆಗಾಗ ಉದ್ಭವಿಸಿ ಮರೆಯಾಗುತ್ತಿರುತ್ತವೆ.

Karnataka Hampi Anjanadri Betta the Hanuman Janmabhoomi for and against Arguments vcs

ಡಾ. ವಾಸುದೇವ ಬಡಿಗೇರ

ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಸಮರ್ಥಿಸುತ್ತಿರುವ ಯಾವ ದಾಖಲೆಗಳಿಗೂ ಪ್ರಾಚೀನ ಪರಂಪರೆ ಮತ್ತು ಪುರಾತತ್ವ ಹಿನ್ನೆಲೆ ಇಲ್ಲದಿರುವುದು ಗಮನಾರ್ಹ. ಹಾಗಾದರೆ ಆಂಜನೇಯನ ಜನ್ಮಸ್ಥಳ ಯಾವುದು? ಆಂಜನೇಯ ಹುಟ್ಟಿದ್ದು ನಿಜವೇ ಎಂಬ ಮೂಲಭೂತ ಪ್ರಶ್ನೆಗಳೂ ಇವೆ. ಅತ್ಯಂತ ಪ್ರಾಚೀನ ಕಾಲದಿಂದ ಜನಪದರಲ್ಲಿ ಸೃಷ್ಟಿಯಾದ ಐತಿಹ್ಯ ಮತ್ತು ಪುರಾಣಗಳು ಮೌಖಿಕ ಪರಂಪರೆಯ ಮೂಲಕ ಜನಮನದಲ್ಲಿ ಆಳವಾಗಿ ಬೇರೂರಿ ನಂತರ ಅಕ್ಷರ ರೂಪ ಪಡೆದುಕೊಳ್ಳುವುದು ಸಹಜ. ಅಕ್ಷರ ರೂಪ ಪಡೆದ ಐತಿಹ್ಯ ಮತ್ತು ಸ್ಥಳ ಪುರಾಣಗಳ ಕಥೆಯ ಸಾರಾಂಶಗಳು ಏಕರೂಪವಾಗಿದ್ದರೂ ಅವುಗಳು ಕಾಲ ಕಾಲಕ್ಕೆ ಹಿಗ್ಗುವ ಕುಗ್ಗುವ ಕ್ರಿಯೆಯಿಂದ ರೂಪಾಂತರ ಪಡೆಯುತ್ತ ಬರುತ್ತವೆ. ಆದ್ದರಿಂದ ಅವುಗಳ ಕಾಲವನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಐತಿಹ್ಯ ಮತ್ತು ಪುರಾಣಗಳ ಸಾರಾಂಶ ಪುರಾತತ್ವ ಆಕರಗಳಲ್ಲಿ ಮೂಡಿಬಂದರೆ ಐತಿಹಾಸಿಕವಲ್ಲದಿದ್ದರೂ ನಂಬಿಕೆ, ಸಂಪ್ರದಾಯ ಹಾಗೂ ಆಚರಣೆಗೆಳು ಎಷ್ಟುವರ್ಷಗಳ ಹಿಂದಿನಿಂದ ರೂಢಿಗತವಾಗಿದ್ದವು ಎಂಬುದನ್ನು ನಿರ್ದಿಷ್ಟವಾಗಿ ಹೇಳಬಹುದು.

ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಕಥೆ ಇಡೀ ಭಾರತ ಮತ್ತು ಅದರಾಚೆ ಜನಮನದಲ್ಲಿ ಗಟ್ಟಿಗೊಂಡಿದೆ. ಈ ಕಥಾನಕ ಸನ್ನಿವೇಶಗಳನ್ನು ಅಲ್ಪ ವ್ಯತ್ಯಾಸಗಳೊಂದಿಗೆ ಜನಪದರು ಮತ್ತು ಬುಡಕಟ್ಟು ಸಮುದಾಯಗಳ ಜನರು ಮೌಖಿಕ ಪರಂಪರೆಯಲ್ಲೂ ಉಳಿಸಿಕೊಂಡು ಬಂದಿದ್ದಾರೆ. ಈ ಮಹಾಕಾವ್ಯದಲ್ಲಿ ಉಲ್ಲೇಖವಾದ ಅನೇಕ ಹೆಸರುಗಳು, ಹಂಪಿ-ಆನೆಗುಂದಿ ಪ್ರದೇಶದ ಭೌಗೋಳಿಕ ಲಕ್ಷಣ, ಪ್ರಾಗಿತಿಹಾಸ ಕಾಲದ ಅವಶೇಷಗಳು, ಶಾಸನಗಳು ಮತ್ತು ಆ ಭಾಗದಲ್ಲಿ ಪ್ರಚಲಿತವಿರುವ ಐತಿಹ್ಯ- ಪುರಾಣಗಳನ್ನು ಪರಿಶೀಲಿಸಿ ವ್ಯಾಪಕ ಅಧ್ಯಯನದ ಮೂಲಕ ಹಂಪಿ-ಆನೆಗುಂದಿ ಪ್ರಾಚೀನ ಕಿಷ್ಕಿಂಧವಾಗಿತ್ತೆಂದು ಡಾ.ಅ. ಸುಂದರ ಅವರು ಸಮರ್ಥಿಸುತ್ತಾರೆ.

Karnataka Hampi Anjanadri Betta the Hanuman Janmabhoomi for and against Arguments vcs

ಸ್ಕಂದ ಪುರಾಣದ ಭಾಗವಾಗಿರುವ ಮತ್ತು ಈ ಪರಿಸರದ ಸ್ಥಳ ಪುರಾಣವೆಂದು ಕರೆಯಲ್ಪಡುವ ಪಂಪಾ ಮಹಾತ್ಮೆಯಲ್ಲಿ ಮಾಲ್ಯವಂತಗಿರಿ, ಋುಷ್ಯಮೂಕ, ಕಿಷ್ಕಿಂಧಾದ್ರಿ, ಹೇಮಕೂಟ, ವಿಪ್ರಕೂಟ, ಗಂಧರ್ವಗಿರಿ, ಜಂಬುನಾಥಗಿರಿ, ಸೋಮಪರ್ವತ, ಮಾಣಿಭದ್ರೇಶ್ವರ ಪರ್ವತ ಮುಂತಾದವು ವಾಲ್ಮೀಕಿ ರಾಮಾಯಣದಲ್ಲಿ ಬರುವ ಹೆಸರುಗಳಿಗೆ ಪೂರಕವಾಗಿಯೇ ಇವೆ. ರಾಮಾಯಣದಲ್ಲಿ ಉಲ್ಲೇಖಗೊಂಡ ಕಾರ್ತಿಕೇಯ ತಪೋವನ ಕುಡಿತಿನಿಯಲ್ಲಿದ್ದ ಬಗೆಗೆ ರಾಷ್ಟ್ರಕೂಟರಿಂದ ಹೊಯ್ಸಳರ ಕಾಲಾವಧಿಯ ಶಾಸನಗಳು ಮಾಹಿತಿಯನ್ನು ಒದಗಿಸುತ್ತವೆ. ಇದು ಕಬ್ಬಿಣ ಉಪಕರಣಗಳನ್ನು ತಯಾರಿಸುವ ಕಾರ್ಯಾಗಾರವಾಗಿ ರೂಪಗೊಂಡಿತು. ಅಲ್ಲದೆ ಇಂದಿಗೂ ಕುಡಿತಿನಿ, ಸಂಡೂರು ಕುಮಾರಸ್ವಾಮಿ ಬೆಟ್ಟಕಾರ್ತಿಕೇಯನ ಪ್ರಮುಖ ಸ್ಥಳಗಳಾಗಿ ಪ್ರಸಿದ್ಧಿ ಪಡೆದಿವೆ.

ಇಲ್ಲಿಯ ತುಂಗಭದ್ರಾ ನದಿ ದಂಡೆಯ ಮೇಲೆ ಪಂಪಾವನ, ಮಾನಸ ಸರೋವರ, ಹತ್ತಿರದ ಬೆಟ್ಟದಲ್ಲಿ ಶಬರಿ ಗುಹೆ, ಆಂಜನಾದ್ರಿ, ಆನೆಗುಂದಿ ಹತ್ತಿರ ಬಲಮುರಿ ಸಾಲಿನ ಒಂದು ಭಾಗ ವಾಲಿ ಭಂಡಾರ ಹಾಗೂ ಈ ನದಿಯ ಇನ್ನೊಂದು ಭಾಗದಲ್ಲಿ ಸುಗ್ರೀವ ಗುಹೆ, ಸೀತೆಯ ಸೆರಗು, ಮತಂಗ ಪರ್ವತ, ಹೇಮಕೂಟ, ರತ್ನಕೂಟ ಮೊದಲಾದವು ಕಂಡುಬರುತ್ತವೆ.

ತಿರುಮಲವೇ ಆಂಜನೇಯನ ಜನ್ಮಸ್ಥಳ: ಟಿಟಿಡಿ ಘೋಷಣೆ! 

ಮೇಲಿನ ಸ್ಥಳಗಳಿಗೆ ಪೂರಕವೆಂಬಂತೆ ಬೆಳಗಾವಿ ಜಿಲ್ಲೆಯ ಶಿರಸಂಗಿ ಕಾಳಮ್ಮನ ಗುಡಿಯಲ್ಲಿರುವ ಕ್ರಿ.ಶ. 1186ರ ಶಾಸನದಲ್ಲಿ ಹಿಮವತ್ಪರ್ಭತ ವಿಂಧ್ಯಶ್ಯಳಪತಿ ಕಿಷ್ಕಿಂಧಾದ್ರಿ ಯಿಮೂ“ು ಭೂದ್ರಮೆ ಪೂವ್ರ್ವಾಪರ ವಾದ್ರ್ಧಿಯಾಂಕೆ ನಿಜವಿಸ್ತಾರಕ್ಕೆನಲು ನೀಳ್ದವಾ ಹಿಮವದ್ವಿಂಧ್ಯದರಾಧರಂಗಳೆರಡಕ್ಕಂ ತಾನೆ ಮೇಲಾದೆ(ದುದು)ತ್ತಮ ಕಿಷ್ಕಿಂಧ ಗಿರೀಂದ್ರವೆ(ವು)ತ್ತಮ ಜನೌಘಂ ತಂನೊಳೊಪುತ್ತಿರಲು ಅವರಾರನೆ ತರದಿಂ ಬಾಲಿ ಮರುತ್ಸುತಾಂಗದ ದಿನೇಶಾಪತ್ಯತಾರಾ ಮನೋಹರಿ ವಿಪ್ರರ್ಷಿ ಮತಂಗ ಹಂಸ ಕಪಿಲ ಶ್ರೀಶೌನಕಾಗಸ್ತ್ಯ ಸಚ್ಚರಿತೋದ್ಭಾಸಿ ವಿಭಾಂಡಕ ಪ್ರಿಯಸುತ ಶ್ರೀ ರಿಶ್ಯ]ಂಗ ಬ್ರತೀಶ್ವರರ್ಗಾಯಿತಾಶ್ರಯವಂತದೆಂಬೆನಿ“æಯಂ ಕಿಷ್ಕಿಂಧಮಂ ಬಣ್ನಿಸಲು ಎಂಬ ವಿಷಯವಿದೆ (ಕ.ಇ. ಸಂ.1, 24). ಇದರಿಂದ ಪೂರ್ವ ಪಶ್ಚಿಮ ಹಾಗೂ ಸಮುದ್ರ ಪರ್ಯಂತ ವಿಸ್ತಾರವಾದ ಭೂಮಿಗೆ ಹಿಮವತ್ಪರ್ವತ, ವಿಂದ್ಯ, ಕಿಷ್ಕಿಂಧ ಈ ಮೂರು ಪರ್ವತಗಳು ಉನ್ನತವಾದವು. ಇವುಗಳಲ್ಲಿ ಅತ್ಯಂತ ಶ್ರೇಷ್ಠವಾದುದು, ಉತ್ತಮವಾದುದು ಎಂದರೆ ಕಿಷ್ಕಿಂಧ ಗಿರಿ. ಇದು ಜನನಿಬಿಡವಾದ ನಗರವಾಗಿತ್ತು. ಅದರಲ್ಲಿ ವಾಲಿ, ಮರುತ್ಸ, ಅಂಗದ, ದಿನೇಶ, ಮತಂಗ, ಹಂಸ, ಕಪಿಲ, ಶಾರ್ಗ, ಅಗಸ್ತ್ಯ, ವಿಭಾಂಡಕನ ಪುತ್ರ ಋುಶ್ಯಶೃಂಗ ಮೊದಲಾದ ಋುಷಿಗಳಿಗೆ ಆಶ್ರಯ ಸ್ಥಾನವಾಗಿತ್ತೆಂದು ವರ್ಣಿಸುತ್ತದೆ. ಅಲ್ಲದೆ ಕಿಷ್ಕಿಂಧೆಗೆ ಭೇಟಿಯಿತ್ತ ರಾಮ, ಲಕ್ಷ್ಮಣ, ಸೀತಾ, ಹನುಮಂತ ಸಹಿತ ಋುಶ್ಯಶೃಂಗ ಆಶ್ರಮಕ್ಕೆ ಬಂದು ತಮ್ಮ ಹೆಸರಿನ ಶಿವಲಿಂಗಗಳನ್ನು ಸ್ಥಾಪಿಸಿದರೆಂದಿದೆ.

Karnataka Hampi Anjanadri Betta the Hanuman Janmabhoomi for and against Arguments vcs

ಹಂಪಿಯಿಂದ 10 ಕಿ.ಮೀ. ದೂರದಲ್ಲಿರುವ ದೇವಿಘಾಟ್‌ ಎಂಬಲ್ಲಿಯ ಕ್ರಿ.ಶ. 1059ರ ಚಾಳುಕ್ಯ ಅರಸ ಮೊದಲನೆಯ ಸೋಮೇಶ್ವರನ ಕಾಲದ ಶಾಸನ ತುಂಗಭದ್ರ ತಟದ ಬಡಗ ಕಿಷ್ಕಿಂಧಾಮಿ ಪರ್ವತಂ ಎಂದು ಆ ಸ್ಥಳವು ಕಿಷ್ಕಿಂಧ ಪರ್ವತದಲ್ಲಿರುವುದನ್ನು ಉಲ್ಲೇಖಿಸುತ್ತದೆ(ಕ.ವಿ.ಶಾ,ಸಂ.2, ಪು.314-315). 10-12ನೆಯ ಶತಮಾನದ ಶಾಸನಗಳಲ್ಲಿ ಹಂಪಿಯನ್ನು ಕಿಷ್ಕಿಂಧವೆಂದು ಕರೆದಿರುವುದರಿಂದ ಇದು ಸುಮಾರು ಐನೂರು ವರ್ಷಗಳ ಹಿಂದಿನಿಂದಲೂ ಗುರುತಿಸಿಕೊಂಡಿರಲು ಸಾಧ್ಯತೆ ಇದೆ.

ರಾಮಾಯಣದ ಕಿಷ್ಕಿಂಧ ಕಾಂಡದಲ್ಲಿ ವಾಲಿ, ಸುಗ್ರೀವ, ಹನುಮಂತ, ಜಾಂಬವಂತರ ಹೆಸರುಗಳು ಪ್ರಧಾನವಾಗಿ ಗುರುತಿಸಿಕೊಳ್ಳುತ್ತವೆ. ಈ ಹೆಸರಿನಿಂದ ಕರೆಯಲ್ಪಡುವ ಸಾಂಕೇತಿಕ ಸ್ಥಳಗಳು ಹಂಪಿ - ಆನೆಗುಂದಿ ಪರಿಸರದಲ್ಲಿರುವುದು ವಿಶೇಷ. ತುಂಗಭದ್ರ ನದಿ ದಂಡೆಯಲ್ಲಿರುವ ಕೋದಂಡರಾಮ ದೇವಾಲಯದ ಹತ್ತಿರ ಸೀತೆ ಸೆರಗಿಗೆ ಹೊಂದಿಕೊಂಡಿರುವ ಸುಗ್ರೀವ ಗುಹೆ, ಈ ನದಿಯ ಉತ್ತರಭಾಗದಲ್ಲಿ ವಾಲಿ ಭಂಡಾರ, ಬುಕ್ಕಸಾಗರದ ಹತ್ತಿರ ವಾಲಿದಿಬ್ಬ, ಹನುಮನಹಳ್ಳಿಯ ಆಂಜನಾದ್ರಿ ಬೆಟ್ಟಮತ್ತು ಹೊಸಪೇಟೆಯ ಹತ್ತಿರ ಜಂಬುನಾಥ (ಜಾಂಬವಂತ) ಪರ್ವತಗಳು ಇಂದಿಗೂ ಚಿರಪರಿಚಿತ ಸ್ಥಳಗಳು.

ಆಂಜನೇಯ ಜನ್ಮ ರಹಸ್ಯದ ಮಹಾ ಸತ್ಯ ಅನಾವರಣ : ಅಂಜನಾದ್ರಿ ಸಾಕ್ಷ್ಯ

ಆಂಜನೇಯನ ಜನ್ಮಸ್ಥಳ:

ಕನ್ನಡದ ಸುಪ್ರಸಿದ್ಧ ಕವಿಯಾದ ಹರಿಹರನ ಮಹಾಕಾವ್ಯ ಗಿರಿಜಾಕಲ್ಯಾಣ, ಶಿವ - ಪಾರ್ವತಿಯರ ಮದುವೆಯ ಕುರಿತಾಗಿದೆ. ಅದು ಪಂಪಾ ವಿರೂಪಾಕ್ಷನ ವಂದಿಸುವ ಮೂಲಕ ಪ್ರಾರಂಭವಾಗಿ ಪುನಃ ಅದೇ ವಂದನೆಗಳೊಂದಿಗೆ ಮುಕ್ತಾಯವಾಗುತ್ತದೆ. ಈ ಕೃತಿಯ ಅನೇಕ ಪದ್ಯಗಳಲ್ಲಿ ವಿರೂಪಾಕ್ಷನನ್ನು ಹಂಪಿಯಾಳ್ದ ಇಲ್ಲವೆ ಹಂಪಿಯರಸನೆಂದು ಹೇಳಲಾಗಿದೆ. ಈತನ ಇನ್ನೊಂದು ಕೃತಿ ರಕ್ಷಾಶತಕದ ಪ್ರತಿ ಪದ್ಯವೂ ಪಂಪಾಪುರದ ವಿರೂಪಾಕ್ಷ ರಕ್ಷಿಪುದೆನಂ ಎಂದು ಮುಕ್ತಾಯವಾಗುತ್ತದೆ. ರಾಘವಾಂಕನ ಹರಿಶ್ಚಂದ್ರ ಕಾವ್ಯದ ಆರಂಭದಲ್ಲಿ ಪಂಪಾ ವಿರೂಪಾಕ್ಷರ ಸ್ತುತಿ ಇದೆ. ಹರಿಹರ ಕವಿ ಪಂಪಾಪುರದ ಮೂಡಣ ಬಾಗಿಲಲ್ಲಿ ಕಿನ್ನರೇಶ್ವರ, ತೆಂಕಣ ಬಾಗಿಲಲ್ಲಿ ಜಂಬುಕೇಶ್ವರ, ಪಶ್ಚಿಮ ಬಾಗಿಲಲ್ಲಿ ಸೋಮೇಶ್ವರ, ಉತ್ತರ ಬಾಗಿಲಲ್ಲಿ ಮಾಣಿಭದ್ರೇಶ್ವರ ನೆಲೆಸಿದ್ದಾರೆಂದು ಹೇಳಿದ್ದಾನೆ. ಇವು ಪಂಪಾ ವಿರೂಪಾಕ್ಷ ಸ್ಥಾನವರ್ಣನಂ ಮತ್ತು ಶ್ರೀ ಪಂಪಾ ಮಹಾತ್ಮೆಯಲ್ಲಿಯೂ ಉಲ್ಲೇಖವಾಗಿವೆ. ಹೇಮಕೂಟಕ್ಕೆ ನಾಲ್ಕು ಮುಖ್ಯದ್ವಾರಗಳಲ್ಲದೆ ನಾಲ್ಕು ಉಪದ್ವಾರಗಳೂ ಇದ್ದವು.

ಈ ಪಂಪಾಪುರದ ನಾಲ್ಕು ದ್ವಾರಗಳಲ್ಲಿ ಪಶ್ಚಿಮ ದ್ವಾರದ ಸೋಮೇಶ್ವರವೂ ಒಂದು. ಈ ಸೋಮೇಶ್ವರ ಬೆಟ್ಟಇಂದಿನ ಕೊಪ್ಪಳ ಜಿಲ್ಲೆಯ ಶಿವಪೂರದಲ್ಲಿದೆ. ಗುಹೆಯನ್ನು ಒಳಗುಮಾಡಿ ನಿರ್ಮಿಸಿರುವ ಸೋಮೇಶ್ವರ ದೇವಾಲಯವು ಎತ್ತರದ ಬೆಟ್ಟದ ಮೇಲಿದೆ. ಗುಹೆಯಲ್ಲಿ ಭಗ್ನ ಈಶ್ವರಲಿಂಗ ಹಾಗೂ ಹೊರಭಾಗ ಭಗ್ನ ನಂದಿ ವಿಗ್ರಹಗಳಿವೆ. ಆ ಗುಹೆಯ ಬಲಭಾಗದ ಬಂಡೆಯಲ್ಲಿ ಕ್ರಿ.ಶ. 1033ರ ಶಾಸನವಿದೆ (ಕ.ವಿ.ಶಾ.ಸಂ.2, ಪು.152-153). ಅದರಲ್ಲಿ ಕಲ್ಯಾಣ ಚಾಲುಕ್ಯ ಅರಸ ತ್ರೈಲೋಕ್ಯಮಲ್ಲನ (ಜಯಸಿಂಹ ಐಐ) ಸಾಮಂತ ಕದಂಬ ಕುಲದ ನನ್ನಿದೇವ ತ್ರೈಲೋಕ್ಯಮಲ್ಲ ಆಳುತ್ತಿರುವಾಗ ಅವನ ಸಾಮಂತ ಪಂಪರಸನು ಬೆಟ್ಟದ ಸೋಮೇಶ್ವರನಿಗೆ 50 ಮತ್ತರು ಭೂಮಿ ದಾನ ನೀಡಿದ ವಿಷಯವಿದೆ. ಇದೆ ಗವಿಯ ಮುಂಭಾಗ ಬಂಡೆಯ ಮೇಲಿನ ಶಾಸನದಲ್ಲಿ ಮಾದವ ಭಟ್ಟರ ಕುಲಸ್ವಾಮಿ ಸೋಮೇಶ್ವರ ಎಂದು ಬರೆದಿದೆ. ಬೆಟ್ಟಕ್ಕೆ ಹತ್ತುವ ಮೆಟ್ಟಿಲು ಎಡಪಕ್ಕದಲ್ಲಿ ಮಲ್ಲಿಸೆಟ್ಟಿಹೆಂಡತಿ ವಿರುಪಕ್ಕ ಸೋಮೇಶ್ವರನ ಸೇವೆ ಮಾಡಿದಳು ಎಂದಿದೆ. ಗುಹೆಯ ಮುಂಭಾಗದಲ್ಲಿ ಪ್ರಾಚೀನ ದೇವಾಲಯದ ಅವಶೇಷಗಳೂ ಹರಡಿವೆ. ಈ ಗುಹೆಯ ಮೇಲೆ ಇನ್ನೊಂದು ಗುಹೆಯಲ್ಲಿ್ಲದ್ದ ಶಿವಲಿಂಗ ಹಾಳಾಗಿದೆ. ಪಕ್ಕದ ಬೆಟ್ಟಶಿಖರದ ಮೇಲೆ ಒಂದು ಚಿಕ್ಕ ಕೋಟೆಯೂ ನಿರ್ಮಾಣವಾಗಿದೆ. ಅಲ್ಲಿರುವ ಪ್ರಾಗಿತಿಹಾಸ ಕಾಲದ ಶಿಲಾಗೋರಿಗಳನ್ನು ‘ಮೊರೆಯರ ಮನೆ’ ಎಂದು ಜನರು ಕರೆಯುತ್ತಾರೆ. ಈ ಬೆಟ್ಟದ ಸೋಮೇಶ್ವರನನ್ನು ಕೇಂದ್ರೀಕರಿಸಿ ಬೆಳೆದ ಐತಿಹ್ಯ ಪಂಪಾಮಹಾತ್ಮೆಯ ಸ್ಥಳ ಪುರಾಣದಲ್ಲಿಯೂ ಮೂಡಿಬಂದಿದೆ. ಅದರ ಸಾರಾಂಶ ಈ ರೀತಿಯಾಗಿದೆ-

Karnataka Hampi Anjanadri Betta the Hanuman Janmabhoomi for and against Arguments vcs

ಪಂಪಾಪುರದಿಂದ ಪಂಚಕ್ರೋಶ ದೂರದ ಈ ಬೆಟ್ಟದಲ್ಲಿ ಶಿವನು ಸೋಮ(ಚಂದ್ರ)ನನ್ನು ಧರಿಸಿ ಸೋಮೇಶ್ವರ ಎಂಬ ಹೆಸರಿನಿಂದ ಉಮಾ ಸಹಿತ ನೆಲೆಸಿದ್ದಾನೆ. ಈ ಸೋಮಗಿರಿಯು ಶಂಭೂವಿಗೆ ಸರ್ವಾನಂದದ ಮಹಾಮನೆಯಗಿದೆ. ಎರಡನೆಯದು ಹೇಮಕೂಟಗಿರಿ, ತದನಂತರದು ಕೈಲಾಸ ಪರ್ವತವೆಂದು ಹೇಳಲ್ಪಡುವುದು. ಈ ಗಿರಿಗಳಲ್ಲಿಯೇ ಅತ್ಯಂತ ಶ್ರೇಷ್ಠವಾದುದು ಸೋಮಗಿರಿ. ಸನ್ಮತನೆಂಬ ಭೈರವನು ಸಾಧಕರ ಹಿತಾರ್ಥವಾಗಿ ಸೋಮಗಿರಿಯಲ್ಲಿ ವಾಸಮಾಡಿಕೊಂಡಿರುವನು. ಈ ಗಿರಿಯಲ್ಲಿ ಸೋಮತೀರ್ಥವೆಂಬ ಪಾವನ ತೀರ್ಥವುಂಟು.

ಗೌತಮ ಮುನಿಯು ತನ್ನ ಇಬ್ಬರೂ ಗಂಡು ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು, ಮಗಳನ್ನು ಕೈಹಿಡಿದು ನಡೆಸುತ್ತ ಸೋಮಗಿರಿಯನ್ನು ಏರುತ್ತಿದ್ದನು. ಮಗಳನ್ನು ಮೇಲೆತ್ತಿಕೊಳ್ಳಲಿಲ್ಲ ಗಂಡು ಮಕ್ಕಳನ್ನು ಕೆಳಗಿಳಿಸಲಿಲ್ಲ. ಆಗ ಮಗಳು ಹೇ ಪಿತನೆ, ‘ಅನ್ಯರಿಗೆ ಹುಟ್ಟಿದ ಈ ಇಬ್ಬರೂ ಗಂಡುಮಕ್ಕಳನ್ನು ವಾತ್ಸಲ್ಯದಿಂದ ಹೆಗಲ ಮೇಲೆ ಕೂರಿಸಿಕೊಂಡು ಒಯುತ್ತಿರುವಿ. ನಿನಗೆ ಹುಟ್ಟಿದ ಮಗಳಾದ ನನ್ನನ್ನು ಕರುಣೆಯಿಲ್ಲದೆ ನಡೆಸುತ್ತಿರುವಿ. ಧರ್ಮಜ್ಞನಾದ ನೀನು ಹೀಗೆ ಮಾಡಬಹುದೇ’ ಎಂದು ಕೇಳುತ್ತಾಳೆ. ಮಗಳಿಗೆ, ‘ನೀನು ಮತ್ಸರದಿಂದ ಮಾತನಾಡುತ್ತಿರುವಿ ನಿನ್ನ ಮಾತುಗಳು ಪ್ರಮಾಣಬದ್ಧವಾಗಿರುವವೇ?, ಎಲೆ ಪಾಪಾತ್ಮಳೆ ನೀನು ಯೋಗ್ಯರೀತಿಯಲ್ಲಿ ಮಾತನಾಡಲಿಲ್ಲ. ನಿನ್ನ ಮಾತುಗಳು ಸತ್ಯವೆಂದು ಹೇಗೆ ತೋರಿಸುವಿ’ ಎಂದನು. ಆಗ ಮಗಳು, ಇಲ್ಲಿಯ ಸೋಮತೀರ್ಥವು ಆಶ್ಚರ್ಯದಿಂದ ಕೂಡಿದೆ. ಇಲ್ಲಿಯೇ ಧರ್ಮಾಧರ್ಮವನ್ನು ನಿರ್ಣಯಿಸಲು ಸಾಧ್ಯವಿದೆ ಎಂದು ಹೇಳುತ್ತ, ‘ಈ ಪುಣ್ಯ ತೀರ್ಥದಲ್ಲಿ ಒಮ್ಮೆ ಮುಳುಗಿ ಮೇಲೆದ್ದರೆ ತನ್ನ ಮೊದಲಿನ ರೂಪದಲ್ಲಿರುತ್ತಾನೆ. ಪಾಪಾತ್ಮನಾಗಿದ್ದರೆ ವಿಕೃತ ರೂಪ ಪಡೆಯುತ್ತಾನೆ. ಈ ನಿನ್ನ ಇಬ್ಬರು ಗಂಡು ಮಕ್ಕಳು ಇದೇ ರೂಪ ಧರಿಸಿ ಮೇಲೆದ್ದರೆ ಅವರು ನಿನಗೆ ಹುಟ್ಟಿದವರೆಂದು ತಿಳಿ, ಅದೇ ಪ್ರಕಾರ ನನ್ನನ್ನೂ ತಿಳಿ’ ಎಂದು ಹೇಳುತ್ತಾಳೆ. ಮಗಳ ಮಾತಿನಂತೆ ಗೌತಮನು ಇಬ್ಬರನ್ನೂ ಸೋಮತೀರ್ಥದಲ್ಲಿ ಸ್ನಾನ ಮಾಡಿಸಿದನು. ತತ್‌ಕ್ಷಣವೇ ಅವರು ಕಪಿರೂಪದಿಂದ ಮೇಲೆದ್ದರು. ಮಗಳೂ ಸಹ ಈ ತೀರ್ಥದಲ್ಲಿ ಸ್ನಾನ ಮಾಡಿದಳು ಅವಳ ರೂಪವು ಅಳಿಯಲಿಲ್ಲ.

ಅವಮಾನವನ್ನು ಸಹಿಸಲಾಗದೆ ಗೌತಮನು ತನ್ನ ತಪೋದೃಷ್ಟಿಯಿಂದ ಈರ್ವರು ದೇವೇಂದ್ರ ಮತ್ತು ಸೂರ್ಯರಿಗೆ ಹುಟ್ಟಿದವರೆಂದು ಅರಿತು, ಕಡುಕೋಪದಿಂದ ಕಲ್ಲಾಗು ಎಂದು ಪತ್ನಿಯನ್ನು ಶಪಿಸಿದನು. ಅಹಲ್ಯೆಯು ಭಯದಿಂದ ನಡುಗುತ್ತ ಶಾಪವಿಮೋಚನೆಯನ್ನು ಬೇಡಿದಳು. ಪುನಃ ಅವಳನ್ನು ಅನುಗ್ರಹಿಸುತ್ತ, ತ್ರೇತಾಯುಗದಲ್ಲಿ ರಾಮನ ಪಾದದ ಧೂಳು ನಿನಗೆ ಸೋಂಕಿದಾಕ್ಷಣವೇ ಸ್ತ್ರೀ ಆಗುವೆ ಎಂದು ಹೇಳಿ ತಪಸ್ಸಿಗೆ ಹೋದನು.

ಕಪಿಗಳ ರೂಪಧರಿಸಿದ ಇಬ್ಬರು ಮಕ್ಕಳಲ್ಲಿ, ಯಾವನು ತಾಯಿಯ ಜಡೆಯನ್ನು ಹಿಡಿದು ಕಪಿಚೇಷ್ಟೆಯಿಂದ ವರ್ತಿಸಿದನೋ ಅವನು ವಾಲಿ ಎನಿಸಿದನು. ಯಾವನು ತಾಯಿಯ ಕೊರಳನ್ನು ಮುಟ್ಟಿದನೋ ಅವನು ಸುಗ್ರೀವನಾದನು. ಇದರಿಂದ ದುಃಖಿತಳಾದ ತಾಯಿ ಅಜ್ಞಾನದಿಂದ ಮಾಡಲ್ಪಟ್ಟಕರ್ಮವನ್ನು ನೀನು ಇದ್ದಕ್ಕಿದ್ದಂತೆ ಪ್ರಕಾಶ ಪಡಿಸಿದೆ. ನೀನು ಹೆಣ್ಣು ಕಪಿಯಾಗೆಂದು ಮಗಳನ್ನು ಶಪಿಸಿದಳು. ಅಹಲ್ಯಾದೇವಿಯ ಮಗಳು ಅಂಜನಾದೇವಿಯಾಗಿ ಆಂಜನೇಯನನ್ನು ಹೆತ್ತಳು. ಕಿಷ್ಕಿಂಧೆಯ ಪಂಪಾಪುರದಲ್ಲಿ ಆಂಜನೆಯನು ಜನ್ಮ ತಳೆದ ಸ್ಥಳವನ್ನು ಆಂಜನಾದ್ರಿ ಪರ್ವತವೆಂದು ಕರೆಯಲಾಯಿತು.

ಹನುಮ ಜನ್ಮಸ್ಥಳ ವಿವಾದ: ಇತಿಹಾಸ ತಜ್ಞರಿಂದ ಸಂಶೋಧನೆ ಅಗತ್ಯ, ಲಿಂಬಾವಳಿ 

ಮೇಲಿನ ಉಲ್ಲೇಖಿತ ಆಧಾರಗಳನ್ನು ಗಮನಿಸಿದರೆ ಹಂಪಿ-ಆನೆಗುಂದಿ ಪರಿಸರದಲ್ಲಿರುವ ಆಂಜನಾದ್ರಿ ಪರ್ವತ ಬಹಳ ಪವಿತ್ರವಾದುದೆಂಬ ನಂಬಿಕೆ ಅತ್ಯಂತ ಪ್ರಾಚಿನ ಕಾಲದ್ದು. ಅದನ್ನು ಜನಪದರು ಐತಿಹ್ಯಗಳ ಮೂಲಕ ಕಾಪಾಡಿಕೊಂಡು ಬಂದಿದ್ದಾರೆ. ಅಲ್ಲದೆ ಇಲ್ಲಿಯ ಗ್ರಾಮವನ್ನು ಹನುಮನಹಳ್ಳಿ ಎಂದು ನಾಮಕರಣ ಮಾಡಲಾಗಿದೆ. ಹನುಮನ ಜನ್ಮಸ್ಥಳವೆಂಬ ಪರಿಕಲ್ಪನೆಯಲ್ಲಿ ಈ ಪರಿಸರದಲ್ಲಿ ಹೇರಳವಾಗಿ ಆಂಜನೇಯನ ದೇವಾಲಯಗಳು ನಿರ್ಮಾಣವಾಗಿವೆ. ವಿಜಯನಗರ ಆಡಳಿತವಿರುವ ವಿವಿಧ ಸ್ಥಳಗಳಲ್ಲಿ ಆಂಜನೇಯನ ದೇವಾಲಯಗಳನ್ನು ನಿರ್ಮಿಸಿದ್ದಲ್ಲದೆ ಕ್ರಮೇಣ ಗ್ರಾಮ, ಬೆಟ್ಟ, ನದಿ ಮೊದಲಾದ ಸ್ಥಳಗಳಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಇವು ವಿಸ್ತೃತಗೊಂಡವು.

ಈಗ ತಿರುಪತಿ ತಿರುಮಲ ದೇವಾಲಯದ ಆಡಳಿತ ಮಂಡಳಿ ಹೇಳುತ್ತಿರುವ ಆಂಜನೇಯನ ಜನ್ಮಸ್ಥಳ ತಿರುಪತಿಯ ಆಂಜನಾದ್ರಿ ಮತ್ತು ಕಿಷ್ಕಿಂಧೆಗೆ ಪೂರಕವಾದ ಶಾಸನಾಧಾರಗಳು ಅಲ್ಲಿ ಕಾಣಸಿಗುವುದಿಲ್ಲ. ಇದುವರೆಗೆ ಪರಿಶೀಲಿಸಿದಂತೆ ಬಹುಶಃ ರಾಮಾಯಣ ಮಹಾಕಾವ್ಯದ ಕಿಷ್ಕಿಂಧ ಕಾಂಡದಲ್ಲಿರುವ ಭೌಗೋಳಿಕ ಪರಿಸರ ಹಾಗೂ ಸ್ಥಳಗಳು ಸುಮಾರು 1000 ವರ್ಷಗಳ ಹಿಂದಿನ ಉಲ್ಲೇಖಗಳು ಹಂಪಿ- ಆನೆಗುಂದಿ ಪರಿಸರದ ಶಾಸನಗಳಲ್ಲಿ ಹಾಗೂ ಈ ಪ್ರದೇಶವನ್ನೇ ಕೇಂದ್ರೀಕರಿಸಿದ ಕರ್ನಾಟಕದ ಇತರೆ ಶಾಸನಗಳಲ್ಲಿ ಮಾತ್ರ ಕಾಣಸಿಗುತ್ತವೆ. ಅಲ್ಲದೆ ಹಂಪಿ ಪರಿಸರದ ಪ್ರಾಗಿತಿಹಾಸ ಕಾಲದ ಅವಶೇಷಗಳೂ ರಾಮಾಯಣ ಕಥೆಯಲ್ಲಿ ಬರುವ ವ್ಯಕ್ತಿ, ಸನ್ನಿವೇಶ ಮತ್ತು ಘಟನೆಗಳಿಗೆ ತಳುಕು ಹಾಕಿಕೊಂಡಿರುವುದರಿಂದ ಸುಮಾರು 1-2ನೆಯ ಶತಮಾನದಲ್ಲಿಯೇ ಈ ಪರಿಸರ ಕಿಷ್ಕಿಂಧ ಎಂಬ ಹೆಸರಿನಿಂದ ಗುರುತಿಸಿಕೊಂಡಿರಬಹುದು.

(ಲೇಖಕರು: ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ)

Latest Videos
Follow Us:
Download App:
  • android
  • ios