Asianet Suvarna News Asianet Suvarna News

ಗದಗ: ಇಟಗಿಯಲ್ಲಿ ಜೋಗತಿಯರ ನೃತ್ಯ ಸಿಡಿ ಉತ್ಸವ..!

ಭೀಮಾಂಬಿಕಾ ದೇವಿ ನೆಲೆಸಿದ ಇಟಗಿ ಗ್ರಾಮದಲ್ಲಿ ಸಿಡಿ ಆಡುವ ಆಟವನ್ನು ಕಣ್ತುಂಬಿಕೊಳ್ಳಲು ಗದಗ, ವಿಜಯಪುರ, ರಾಯಚೂರು, ಧಾರವಾಡ, ಕಲಬುರಗಿ, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೀದರ, ಉತ್ತರ ಕನ್ನಡ ಮುಂತಾದ ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಜೋಗತಿ ನೃತ್ಯವನ್ನು ಕಣ್ತುಂಬಿ ಕೊಂಡರು.

Jogatis Dance CD Festival Held at Itagi in Gadag grg
Author
First Published Sep 13, 2023, 10:55 AM IST

ರೋಣ(ಸೆ.13):  ತಾಲೂಕಿನ ಇಟಗಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಸಿಡಿ ಉತ್ಸವವು ಮಂಗಳವಾರ ವೈಭವಯುತವಾಗಿ ಜರುಗಿದ್ದು, ಜೋಗಪ್ಪ, ಜೋಗತಿಯರ ನೃತ್ಯ ಪ್ರದರ್ಶನ, ವಿವಿಧ ಕಸರತ್ತುಗಳು ಹುಬ್ಬೇರಿಸುವಂತೆ ಜರುಗಿದವು.

ಕೈಯಲ್ಲಿ ಚವಡಕಿ, ತುಂತುನಿ ತಾಳು ಹಿಡಿದು ಉತ್ತರ ಕರ್ನಾಟಕದ ಗಂಡು ಧ್ವನಿಯಲ್ಲಿ ಜೋಗತಿಯ ಹಾಡಿನ ತಾಳಕ್ಕೆ ಹೆಜ್ಜೆ ಹಾಕುತ್ತಾ ಕುಣಿವ ಜೋಗಪ್ಪ, ಜೋಗಮ್ಮ ಉಡುಗೆ ತೊಟ್ಟ ಯುವಕರು ವಿವಿಧ ರೀತಿಯ ಕಸರತ್ತು ಪ್ರದರ್ಶಿಸುತ್ತಾ ಕಣ್ಮನ ಸೆಳೆದರು.

ಹೊಸ ದಾಖಲೆ ಬರೆದ ಮುಂಬೈ ಗಣೇಶ ಹಬ್ಬ, ಲಾಲ್‌ಬೌಗುಚಾ ರಾಜಾನಿಗೆ 26. 5 ಕೋಟಿ ವಿಮೆ!

ಭೀಮಾಂಬಿಕಾ ದೇವಿ ನೆಲೆಸಿದ ಇಟಗಿ ಗ್ರಾಮದಲ್ಲಿ ಸಿಡಿ ಆಡುವ ಆಟವನ್ನು ಕಣ್ತುಂಬಿಕೊಳ್ಳಲು ಗದಗ, ವಿಜಯಪುರ, ರಾಯಚೂರು, ಧಾರವಾಡ, ಕಲಬುರಗಿ, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೀದರ, ಉತ್ತರ ಕನ್ನಡ ಮುಂತಾದ ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಜೋಗತಿ ನೃತ್ಯವನ್ನು ಕಣ್ತುಂಬಿ ಕೊಂಡರು.

ಗ್ರಾಮದ ಶ್ರೀ ಧರ್ಮರ ಮಠದಿಂದ ಪ್ರಾರಂಭಗೊಂಡ ಸಿಡಿ ನೃತ್ಯವು ಅನ್ನದಾನೇಶ್ವರ ದೇವಸ್ಥಾನ ಆವರಣ, ಗ್ರಾಮದ ಮುಖ್ಯ ರಸ್ತೆ, ಹಳೆ ಗ್ರಾಮ ಪಂಚಾಯಿತಿ ಆವರಣ, ಗ್ರಾಮೀಣ ವಿಕಾಸ ಬ್ಯಾಂಕ್ ಆವರಣ, ಗ್ರಾಮದ ಪ್ರಮುಖ ರಸ್ತೆ, ಭೀಮಾಂಬಿಕಾ ದೇವಸ್ಥಾನ ಆವರಣದಲ್ಲಿ ಸಿಡಿ ಆಟ ಪ್ರದರ್ಶನಗೊಂಡಿತು.

ರೋಮಾಂಚನಗೊಳಿಸಿದ ನೃತ್ಯ ಪ್ರದರ್ಶನ

ಪಂಜಿನ ಜೋಗಪ್ಪ, ಪಡಲಗಿ ಜೋಗಿನ ಚೌಡಕಿ ಜೋಗಪ್ಪ, ಜೋಗತಿಯರು ಸೇರಿದಂತೆ 35ಕ್ಕೆ ಹೆಚ್ಚು ಯುವಕರ ಜೋಗತಿ ಉಡುಗೆ ತೊಟ್ಟು ಸಿಡಿಯಾಟವಾಡಿದರು.

ಏನಿದು ಜೋಗತಿ ನೃತ್ಯ?

ಎಲ್ಲಮ್ಮನ ಪ್ರತಿರೂಪವಾದ ಜೋಗತಿಯನ್ನು ಇಲ್ಲಿ ಅನುಕರಿಸಲಾಗುತ್ತದೆ. ಕಾಲಲ್ಲಿ ದೊಡ್ಡ ಗೆಜ್ಜೆ ಕೈಯಲ್ಲಿ ಹಸಿರು ಬಂಗಾರ ಬಳೆ ಕೊರಳಲ್ಲಿ ಜೋಗತಿ ಸರ ಕಿವಿಯಲ್ಲಿ ಬೆಂಡೋಲೆ, ಮೂಗಿನಲ್ಲಿ ಮುತ್ತಿನ ಹರಳುಳ್ಳ ಮೂಗುತಿ, ಕೊರಳಲ್ಲಿ ಭಂಡಾರದ ಚೀಲ, ಹಸಿರು ಸೀರೆ, ಕಪ್ಪು ತಲೆ ಮೇಲೆ ಸಿಂಬೆಯ ಸಹಾಯವಿಲ್ಲದೆ ನೀರು ತುಂಬಿದ ತಾಮ್ರದ ಕೊಡ ಇಟ್ಟುಕೊಂಡು ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತ ವಿವಿಧ ರೀತಿಯಲ್ಲಿ ಕಸರತ್ತು ಪ್ರ ದರ್ಶಿಸಲಾಯಿತು. ಕಠಿಣ ಪರಿಶ್ರಮ ಮತ್ತು ಕಸರತ್ತಿನಿಂದ ಕೂಡಿದ ಸಿಡಿಯಾಟವು ಕಲಾ ನೈಪುಣ್ಯತೆ ಎನ್ನೊಳಗೊಂಡಿತ್ತು. ಪ್ರತಿ ಮೂರು ವರ್ಷಕ್ಕೊಮ್ಮೆ ಆಚರಿಸುವ ಈ ಸಿಡಿಯಾಟವನ್ನು ಶ್ರಾವಣ ಮಾಸದ ಕೊನೆಯ ಮಂಗಳವಾರ ಆಚರಿಸಲಾಗುತ್ತದೆ.

ಸಿಡಿಯಾಡಲು ಕಾರಣ

ಬರಗಾಲ ಬಿದ್ದು ಜನರ ಸಂಕಷ್ಟವನ್ನು ದೂರ ಮಾಡಲು ಅನೇಕ ದಶಕಗಳ ಹಿಂದೆ ಭೀಮಾಂಬಿಕೆ ದೇವಿಯಲ್ಲಿ ಗ್ರಾಮಸ್ಥರು ಪ್ರಾರ್ಥಿಸಿದಾಗ, ಸಿಡಿ ಆಡಿದರೆ ಸಂಕಷ್ಟಗ‍ಳು ಸಿಡಿದು ಹೋಗಿ ಸಮೃದ್ಧಿ ಮಳೆ ಬೆಳೆಯಾಗುವ ಸಲಹೆ ನೀಡಿದಳಂತೆ. ಅಂದಿನಿಂದ ಹಿಂದೂವರೆಗೂ ಸುಮಾರು 11 ದಶಕಗಳಿಂದ ಈ ಸಿಡಿಯಾಟವನ್ನು ಆಚರಿಸುತ್ತಾ ಬಂದಿದ್ದಾರೆ.

ಸಿಡಿಯಾಟದ ಕಸರತ್ತು ತಲೆಯ ಮೇಲೆ ಕೊಡ ಮತ್ತು ಜೋಗತಿ ವೇಷಧಾರಿ ಯುವಕರು ಚೌಡ್ಕಿ ಬಾರಿಸುತ್ತಾ ಹಾಡಿಗೆ ತಕ್ಕಂತೆ ಕುಣಿಯುತ್ತಾರೆ. ಕೈಯಿಂದ ಮುಟ್ಟದೆ ನೀರು ತುಂಬಿದ ತಾಮ್ರ ಕೊಡವನ್ನು ಭುಜದ ಮೇಲೆ, ಬೆನ್ನಿನ ಮೇಲೆ ತಂದು ಮತ್ತೆ ತಲೆಯ ಮೇಲೆ ಒಯ್ಯುತ್ತಾರೆ. ಬೆನ್ನು ಮೇಲೆ ಕೊಡ ಇಟ್ಟು ನಡೆಯುತ್ತಾರೆ. ಕೊಡದ ಮೇಲೆ ಶಾವಿಗೆ ಮಣೆ ಇಟ್ಟು ಅದರ ಮೇಲೆ ಕೊಡ ಹೊತ್ತು ಕುಳಿತು ತಿರುಗುತ್ತಾರೆ. ಹಲ್ಲಿನಿಂದ ಕೊಡ ಎತ್ತುವುದು ಭುಜದ ಮೇಲಿಟ್ಟು ನಂತರ ತಲೆ ಮೇಲಿಟ್ಟುಕೊಳ್ಳುವುದು ಸರ್ರನೆ ತಿರುಗುವುದು ನೆಗೆಯುವುದು ಒಂದೇ ಕಾಲಲ್ಲಿ ನಿಲ್ಲೋದು ನಡೆಯುವುದು ನೆಲೆಯ ಮೇಲಿಟ್ಟು ನೋಟವನ್ನು ಹನಿ ಅಥವಾ ಬಾಯಿಂದ ತೆಗೆದುಕೊಳ್ಳುವುದು, ದೀಡ್ ನಮಸ್ಕಾರ ಹಾಕುವುದು ಹೀಗೆ ಅನೇಕ ರೀತಿಯ ಸಾಹಸಗಳಿಂದ ಸಿಡಿಯಾಟ ಕೂಡಿತ್ತು . ಜೋಗತಿ ಹೊತ್ತ ಯುವಕನೊಬ್ಬ ನೀರು ತುಂಬಿದ ತಾಮ್ರದ ಕೊಡವನ್ನು ಹೊತ್ತು ತಾಳಕ್ಕೆ ತಕ್ಕಂತೆ ನೃತ್ಯ ಮಾಡಿ ಜನ ಮೆಚ್ಚುಗೆ ಪಡೆದ ತಲೆಯ ಮೇಲೆ ಬಾಯಲ್ಲಿ ತೋಳ ಬಗಲಲ್ಲಿ ಕೊಡವನ್ನು ಹೊತ್ತು ತಾಳಕ್ಕೆ ತಕ್ಕಂತೆ ಕುಣಿದ ರೀತಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಸಾವಿರಾರು ಜನ ರಸ್ತೆಯೂದ್ದಕ್ಕೂ, ಮನೆ, ಅಂಗಡಿ ಮೇಲೆ ನಿಂತಿ ಸಂಭ್ರಮಿಸಿದರು.

ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪುಗಳನ್ನೆಲ್ಲಾ ಮಾಡ್ಬೇಡಿ!

ಸಿಡಿ ಸಂಭ್ರೋತ್ಸವದ ಮೆರಗನ್ನು ಹೆಚ್ಚಿಸುವಲ್ಲಿ ಗಂಡು ಜೋಗಮ್ಮಳಾಗಿ ನಾಗರಾಜ ಧರ್ಮರಮಠ, ಶೇಖಪ್ಪಜ್ಜ ಧರ್ಮರಮಠ, ಧರ್ಮಪ್ಪ‌ ಜಡದೆಲಿ, ನೀಲಪ್ಪಮಾಸ್ತರ ಜಡದೆಲಿ,ಶರಪ್ಪ ಮಳಗಿ, ಪ್ರಕಾಶ ಬಡಿಗೇರ, ಶರಣಪ್ಪ ಜಡದೆಲಿ, ಮಲ್ಲಪ್ಪ‌ ಮಡಿವಾಳರ, ಲಾಡಸಾಬ ಪಿಂಜಾರ, ಧರ್ಮಪ್ಪ‌ ಓಲಿ, ಸಂಗಪ್ಪ ಮಡಿವಾಳರ, ಹೊನ್ನಪ್ಪ ಜಡದೆಲಿ, ಚಂದ್ರಪ್ಪ‌ ಪಲ್ಲೇದ ಮತ್ತು ಮಹೇಶ ಭೋವಿ ಭಾಗವಹಿಸಿದ್ದರು.

ಹೆಣ್ಣು ಜೋಗಮ್ಮಳಾಗಿ ಮುತ್ತಪ್ಪ ಕೋರಿ, ನಾಗರಾಜ ಹಡಪದ, ಈರಣ್ಣ ಜಡದೆಲಿ, ಮಂಜುನಾಥ ಜಡದೆಲಿ, ಭೀಮಪ್ಪ ಮೇಟಿ, ಸಚಿನ ಜಡದೆಲಿ, ಮಂಜುನ ಜಡದೆಲಿ, ಭೀಮಪ್ಪ ವಡಗೇರಿ, ಮುತ್ತಪ್ಪ ಹದ್ದಣ್ಣವರ, ಮುತ್ತಪ್ಪ ತೆಗ್ಗಿನಮನಿ, ಸಂತೋಷ ಹಂಡಿ, ಧರ್ಮಪ್ಪ ಭೋವಿ, ಸುದೀಪ ಬೋವಿ, ಸಂಗನಗೌಡ ಪಾಟೀಲ, ಧರ್ಮರಾಜ ಜಡದೆಲಿ, ಅನಿಲ ಜಡದೆಲಿ, ಪ್ರವೀಣ ಕುರಿ, ಈಶ್ವರ ಮತ್ತು ಭೀಮಪ್ಪ ಗೋಸಲ ಭಾಗವಹಿಸಿದ್ದರು. ಪಂಜಿನ‌ ಜೋಗಪ್ಪಗಳಾಗಿ ಅರ್ಜುನ ಕಿಲ್ಲೇದ, ವೀರಪ್ಪ ತೇಗಿನಕೇರಿ ಮತ್ತು ಹನಮಂತಪ್ಪ ಗುಜಮಾಗಡಿ ಭಾಗವಹಿಸಿದ್ದರು.

Follow Us:
Download App:
  • android
  • ios