ವರಮಹಾಲಕ್ಷ್ಮೀ, ಗೌರಿ ವ್ರತಕ್ಕೆ ಗೆಜ್ಜೆವಸ್ತ್ರ ರೆಡಿ ಮಾಡ್ಕೊಂಡ್ರಾ?
ದೇವರಿಗೆ ವಿಶೇಷ ಹಬ್ಬಗಳ ಸಂದರ್ಭದಲ್ಲಿ ಗೆಜ್ಜೆವಸ್ತ್ರ ಮಾಡಿ ಏರಿಸುವುದರಿಂದ ಜನ್ಮಜನ್ಮಾಂತರಗಳ ದಾರಿದ್ರ್ಯದಿಂದ ಮುಕ್ತರಾಗಬಹುದು. ಅಂದ ಹಾಗೆ ಗೆಜ್ಜೆ ವಸ್ತ್ರ ಸೀಸನ್ ಶುರುವಾಗಿದೆ. ನೀವೂ ಮಾಡಲು ಶುರು ಹಚ್ಕೊಂಡ್ರಾ?
ಆಷಾಢ, ಶ್ರಾವಣ ಬಂತೆಂದರೆ ಮಲೆನಾಡು ಭಾಗಗಳಲ್ಲಿ ಹೆಂಗಸರು ಬೇಗ ಬೇಗ ಮನೆ ಕೆಲಸ ಮುಗಿಸಿಕೊಂಡು ಹತ್ತಿ ಹಿಡಿದು ಗೆಜ್ಜೆವಸ್ತ್ರ ಮಾಡಲು ಕುಳಿತುಕೊಳ್ಳುತ್ತಾರೆ. ಬೆಂಗಳೂರಿನ ಮಹಿಳೆಯರು ಗೆಜ್ಜೆವಸ್ತ್ರ ಖರೀದಿಯಲ್ಲಿ ಭಾಗವಹಿಸುತ್ತಾರೆ. ಟಿಕ್ಲಿ ಇತ್ಯಾದಿ ಹಾಕಿ ಅಲಂಕಾರಿಕವಾಗಿ ತಯಾರಿಸುವ ಗೆಜ್ಜೆವಸ್ತ್ರ ಈಗೀಗ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಬೇಕು, ಗಣಪತಿಗೆ ಬೇಕು, ಗೌರಿ ವ್ರತಕ್ಕೆ ಬೇಕು ಎಂದು ಒಂದಕ್ಕಿಂತ ಒಂದ ಚೆಂದವಿರುವ ಹತ್ತಿರ ಹಾರಗಳನ್ನು ಕೊಂಡಿಟ್ಟುಕೊಳ್ಳುತ್ತಾರೆ. ಪೂಜೆಯಲ್ಲಿ ಕಳಸಕ್ಕೆ, ದೇವರಿಗೆ ಗೆಜ್ಜೆವಸ್ತ್ರ ಏರಿಸುವುದು ಬಹಳ ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ..
ಇಷ್ಟಕ್ಕೂ ಪೂಜೆಯಲ್ಲಿ ಈ ಗೆಜ್ಜೆವಸ್ತ್ರದ ಮಹತ್ವವೇನು? ಗೆಜ್ಜೆ ವಸ್ತ್ರ ಯಾವ ರೀತಿಯಾಗಿರಬೇಕು? ಎಷ್ಟು ಎಳೆಯ ಗೆಜ್ಜೆ ವಸ್ತ್ರ ಹಾಕಿದರೆ ಒಳ್ಳೆಯದು? ಬಳಕೆ ಮಾಡುವ ವಿಧಾನವೇನು? ಎಷ್ಟು ದಿನ ಹಾಕಿಡಬಹುದು? ಇತ್ಯಾದಿಗಳ ಬಗ್ಗೆ ವಿವರಗಳನ್ನು ನೋಡೋಣ.
ಗೆಜ್ಜೆವಸ್ತ್ರದ ಮಹತ್ವ
ದೇವರಿಗೆ ಭಕ್ತರು ಸಲ್ಲಿಸುವ ಸೇವೆಗಳಲ್ಲಿ ಗೆಜ್ಜೆವಸ್ತ್ರ ಸೇವೆಯು ಉತ್ತಮವಾದುದಾಗಿದೆ. ಇದು ಕೇವಲ ದೇವರಿಗೆ ಅಲಂಕಾರವಲ್ಲ, ಶ್ರೇಷ್ಠ ಸೇವೆ ಕೂಡಾ ಎನಿಸಿಕೊಂಡಿದೆ. ಸಾಮಾನ್ಯವಾಗಿ ಪ್ರತಿ ದಿನ ದೇವರಿಗೆ ಪೂಜಿಸುವಾಗ ವಸ್ತ್ರಂ ಸಮರ್ಪಯಾಮಿ ಎಂದುಕೊಂಡು ಅಕ್ಷತೆಯನ್ನೋ, ಹೂವನ್ನೋ ಹಾಕುತ್ತೇವೆ. ಆದರೆ, ವಿಶೇಷ ಪೂಜೆಗಳ ಸಂದರ್ಭದಲ್ಲಿ ನಿಜವಾಗಿಯೂ ದೇವರಿಗೆ ವಸ್ತ್ರವಾಗಿಯೇ ಹತ್ತಿಯ ಗೆಜ್ಜೆವಸ್ತ್ರ ಸಮರ್ಪಣೆ ಮಾಡಲಾಗುತ್ತದೆ. ನಮ್ಮಲ್ಲಿ ಬಾಗೀನ ನೀಡುವಾಗ ಕೇವಲ ಸೀರೆ ಕೊಡುವುದಿಲ್ಲ, ಜೊತೆಗೆ ಬ್ಲೌಸ್‌ಪೀಸನ್ನೂ ಕೊಡುವ ಕ್ರಮವಿದೆ. ಗಂಡಸರಿಗಾದರೆ ಪಂಚೆ ಕೊಟ್ಟರೆ ಜೊತೆಗೆ ಕರವಸ್ತ್ರ ಇಲ್ಲವೇ, ಶಲ್ಯ ಕೊಡಲಾಗುತ್ತದೆ. ಅಂತೆಯೇ ಗೆಜ್ಜೆವಸ್ತ್ರ ದೇವರಿಗೆ ಅರ್ಪಿಸುವಾಗ ಜೊತೆಗೆ ಎರಡು ವಸ್ತ್ರವನ್ನು ಎರಡೂ ತುದಿಗಳಲ್ಲಿಟ್ಟು ಏರಿಸಬೇಕು. ಗೆಜ್ಜೆವಸ್ತ್ರದ ಅರ್ಪಣೆಯಿಂದ ಜನ್ಮಜನ್ಮಾಂತರದಲ್ಲೂ ದಾರಿದ್ರ್ಯದಿಂದ ಮುಕ್ತರಾಗಬಹುದು ಎನ್ನಲಾಗುತ್ತದೆ.
Lord Shiva Temple: ಶಿವನ ಮಹಿಮೆ ಸಾರುವ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳಿ..
ಗೆಜ್ಜೆವಸ್ತ್ರ ಹೇಗಿರಬೇಕು?
- ಗೆಜ್ಜೆವಸ್ತ್ರಕ್ಕೆ ಬಳಸುವ ಹತ್ತಿ ಪೂರ್ತಿ ಶುದ್ಧವಾಗಿರಬೇಕು. ಆ ಹತ್ತಿ(Cotton)ಯನ್ನು ಬೇರಾವುದಕ್ಕೂ ಬಳಸಿರಬಾರದು.
- ಒಂದೇ ಎಳೆಯ ಗೆಜ್ಜೆವಸ್ತ್ರ ಒಳ್ಳೆಯದಲ್ಲ. ಸಾಮಾನ್ಯವಾಗಿ 21 ಹತ್ತಿಯ ಉಂಡೆಗಳನ್ನು ಹೊಂದಿದ ಕುಂಕುಮ ಲೇಪಿಸಿದ ಗೆಜ್ಜೆವಸ್ತ್ರ ಶ್ರೇಷ್ಠವಾಗಿದೆ. ಎಳೆಯ ಲೆಕ್ಕದಲ್ಲಿ ಮಾಡುವುದಾದರೂ 21 ಎಳೆಗಳ ಗೆಜ್ಜೆವಸ್ತ್ರ ಶ್ರೇಷ್ಠವೆನಿಸಿಕೊಂಡಿದೆ. ಇನ್ನು ಗೌರಿ ವ್ರತಕ್ಕೆ 16 ಎಳೆಯ, ಗಣಪತಿ ವ್ರತಕ್ಕೆ 21 ಎಳೆಯ ಗೆಜ್ಜೆವಸ್ತ್ರ ಅರ್ಪಿಸಲಾಗುತ್ತದೆ.
- ಯಾವುದೇ ಪೂಜೆಗೆ ಕಳಶಕ್ಕೆ ಗೆಜ್ಜೆ ವಸ್ತ್ರ ಏರಿಸುವುದಾದರೆ ಎರಡು ಅಥವಾ 5 ಎಳೆಯ ಗೆಜ್ಜೆ ವಸ್ತ್ರವನ್ನು ಹಾಕಬಹುದು. ತಿರುಪತಿ ತಿಮ್ಮಪ್ಪನಿಗೆ ಏರಿಸುವ ಗೆಜ್ಜೆವಸ್ತ್ರ 3 ಎಳೆಯಲ್ಲಿರಬೇಕು. ವಿಷ್ಣುವಿನ ಪೂಜೆಗೆ 24 ಎಳೆಯನ್ನು ಬಳಸಬೇಕು.
- ಯಾವುದೇ ದೇವಿಗೆ 18 ತಂತುಗಳು ಇರುವ ಗೆಜ್ಜೆವಸ್ತ್ರ ಉತ್ತಮ. ಇದು 18 ಮೊಳ ಸೀರೆ(Saree)ಯನ್ನು ಸಂಕೇತಿಸುತ್ತದೆ.
- ಗೆಜ್ಜೆವಸ್ತ್ರ ಏರಿಸುವಾಗ ಜೊತೆಯಲ್ಲಿ ವಸ್ತ್ರ ಇಡುವುದು ಕಡ್ಡಾಯ.
- ಪ್ರಥಿ ಬಾರಿ ದೇವರ ವಿಗ್ರಹ ತೊಳೆದಾದ ಬಳಿಕ ಗೆಜ್ಜೆವಸ್ತ್ರ ಬದಲಿಸಬೇಕು. ಹಳೆಯ ಗೆಜ್ಜೆವಸ್ತ್ರವನ್ನೇ ಮತ್ತೆ ಏರಿಸಬಾರದು.
- ಹೂಗಳು ಇಲ್ಲದ ಸಂದರ್ಭದಲ್ಲಿ ಗೆಜ್ಜೆವಸ್ತ್ರವನ್ನೇ ದೇವರಿಗೆ ಏರಿಸಿ ಪೂಜೆ ಮಾಡಬಹುದು.
- ನಾಗನಿಗೆ ಪೂಜೆ ಮಾಡುವಾಗ, ಪುರುಷ ದೇವರಿಗೆ ಪೂಜಿಸುವಾಗ ಗೆಜ್ಜೆವಸ್ತ್ರಕ್ಕೆ ಅರಿಷಿಣ ಹಚ್ಚಿ ಏರಿಸಬೇಕು. ದೇವಿಗಾದರೆ ಕುಂಕುಮ ಹಚ್ಚಬೇಕು.
ನಾಗರ ಪಂಚಮಿ: ಹಾವುಗಳ ಕುರಿತ ಈ ವಿಷ್ಯ ಕೇಳಿದ್ರೆ ಅಚ್ಚರಿ ಪಡ್ತೀರಾ..
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.