ಜ್ಯೋತಿರ್ಲಿಂಗ ಸರಣಿ: 6 ಬಾರಿ ದಾಳಿಗೂ ಜಗ್ಗದೆ ನಿಂತ ಸೋಮನಾಥ, ಪುರಾಣ ಪುಣ್ಯ ಕತೆ ಕೇಳಿ..

ದೇಶದಲ್ಲಿರುವ 12 ಮಹಾ ಜ್ಯೋತಿರ್ಲಿಂಗಗಳಲ್ಲಿ ಗುಜರಾತ್‌ನ ಸೋಮನಾಥ ದೇವಾಲಯ ಮೊದಲನೆಯದು. ಈ ದೇವಾಲಯವು ಸುಲ್ತಾನ ದೊರೆಗಳಿಂದ 6 ಬಾರಿ ದಾಳಿಗೊಳಗಾದರೂ ಜಗ್ಗದೆ ನಿಂತಿರುವುದಷ್ಟೇ ಅಲ್ಲ, ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. 

Even after 6 brutal attacks this Somnath temple abode of Shiva remains with grandeur skr

ಶಿವನೇ ಪರಂಜ್ಯೋತಿಯಾಗಿ ಜ್ಯೋತಿರ್ಲಿಂಗವಾಗಿ ಭಾರತ ಹಾಗೂ ನೇಪಾಳದ 64 ಕಡೆ ಇದ್ದಾನೆ. ಅವುಗಳಲ್ಲಿ 12 ಮಹಾ ಜ್ಯೋತಿರ್ಲಿಂಗಗಳಾಗಿದ್ದು, ಮೊದಲನೆಯ ಜ್ಯೋತಿರ್ಲಿಂಗವು ಗುಜರಾತ‌್‌ನ ಸೋಮನಾಥ ದೇವಾಲಯದಲ್ಲಿದೆ. 
ಈ ಸೋಮನಾಥ ದೇವಾಲಯವು ಜಗತ್ತಿನಲ್ಲೇ ಅತಿ ಪ್ರಮುಖ ಶಿವಾಲಯವಾಗಿದ್ದು, ಅತ್ಯಂತ ಶ್ರೀಮಂತ ಮತ್ತು ಶಕ್ತಿಯುತವಾದ ಇತಿಹಾಸವನ್ನು ಹೊಂದಿದೆ. ಭಗವಾನ್ ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಈ ದೇವಾಲಯವನ್ನು ಚಂದ್ರದೇವ್ ಸೋಮರಾಜ್ ನಿರ್ಮಿಸಿರುವುದನ್ನು ಋಗ್ವೇದದಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಮೋದಿ ಸರ್ಕಾರ ಈ ದೇವಾಲಯವನ್ನು ಸುಂದರಗೊಳಿಸಲು ಮತ್ತು ಹೊಸ ಸೌಲಭ್ಯಗಳೊಂದಿಗೆ ಪೂರ್ಣಗೊಳಿಸಲು ಕೆಲಸ ಮಾಡುತ್ತಿದೆ.  ಇಂದು, ಶಿವನ ಈ ಪವಿತ್ರ ನಿವಾಸದ ಸಂಪೂರ್ಣ ಕಥೆಯನ್ನು ತಿಳಿಸುತ್ತೇವೆ ಕೇಳಿ..

ಪೌರಾಣಿಕ ಹಿನ್ನಲೆ(Mythology)
ಬ್ರಹ್ಮನ ಮಾನಸ ಪುತ್ರ ಮತ್ತು ಶಿವನ ಮಾವನಾದ ದಕ್ಷ ಪ್ರಜಾಪತಿಯು ತನ್ನ 27 ಹೆಣ್ಣುಮಕ್ಕಳನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಿದ. ಎಲ್ಲ ಹೆಣ್ಣುಮಕ್ಕಳನ್ನೂ ಸಮಾನವಾಗಿ ನೋಡಲು ಚಂದ್ರನಿಂದ ಮಾತು ತೆಗೆದುಕೊಂಡ. ಆದರೆ, ಚಂದ್ರನಿಗೆ ನಾಲ್ಕನೇ ಮಗಳಾದ ರೋಹಿಣಿಯ ಮೇಲೆ ಮೋಹ ಹೆಚ್ಚಿತು. ಚಂದ್ರನ ಈ ವರ್ತನೆ ಉಳಿದ ಹೆಣ್ಣುಮಕ್ಕಳಿಗೆ ಕೋಪ, ಮತ್ಸರ ತರಿಸಿತು. ಅವರು ದಕ್ಷನಲ್ಲಿ ಈ ಬಗ್ಗೆ ದೂರಿದರು. ಈ ಬಗ್ಗೆ ದಕ್ಷ ಚಂದ್ರನಿಗೆ ಎಚ್ಚರಿಸಿದರೂ ಚಂದ್ರ ಮಾತ್ರ ರೋಹಿಣಿಯನ್ನು ಮಾತ್ರ ಹೆಚ್ಚು ಹೆಚ್ಚು ಪ್ರೀತಿಸತೊಡಗಿದ. ಆಗ ದಕ್ಷನು ಚಂದ್ರನಿಗೆ ಮಕ್ಕಳಾಗಬಾರದೆಂದೂ, ಆತನ ರೂಪ ಹದಗೆಡಲಿ ಎಂದೂ ಶಪಿಸಿದ. ಈ ಶಾಪ ನಿಜವಾಗತೊಡಗಿದಾಗ ಬೆದರಿದ ಚಂದ್ರ ಸಹಾಯ ಕೋರಿ ಬ್ರಹ್ಮನ ಬಳಿ ಹೋದ. ಆಗ ಬ್ರಹ್ಮನು ಈ ವಿಚಾರವಾಗಿ ತನ್ನ ಅಸಹಾಯಕತೆ ವ್ಯಕ್ತಪಡಿಸುತ್ತಾ, ಸೋಮನಾಥ ದೇವಾಲಯದಲ್ಲಿ ಸ್ಪರ್ಶ ಲಿಂಗ ಪೂಜಿಸುವಂತೆ ಸಲಹೆ ನೀಡಿದ. ಆರು ತಿಂಗಳು ಚಂದ್ರ ನಿಷ್ಠೆಯಿಂದ ಸೋಮನಾಥನ ಸೇವೆ ಮಾಡಿದ. ಆಗ ಒಲಿದ ಶಿವ ಚಂದ್ರನಿಗೆ ಶಾಶ್ವತತೆಯ ವರವನ್ನು ನೀಡಿ, ಶಾಪದಿಂದ ಅರ್ಧ ಮುಕ್ತವಾಗಿಸಿದ. ಇನ್ನು ಮುಂದೆ ಕೃಷ್ಣ ಪಕ್ಷದಲ್ಲಿ ಸೌಂದರ್ಯ ಕಳೆದುಕೊಳ್ಳುತ್ತಾ, ಶುಕ್ಲ ಪಕ್ಷದಲ್ಲಿ ಕಾಂತಿ ಹೆಚ್ಚಿಸಿಕೊಳ್ಳುತ್ತಾ ಇರುವಂತೆ ಶಿವ ವರ ನೀಡಿದ. ಇದರಿಂದ ಸಮಾಧಾನಗೊಂಡ ಚಂದ್ರನು ಶಿವನಿಗೆ ಸೋಮನಾಥದಲ್ಲಿಯೇ ನೆಲೆಸಿ ಭಕ್ತರ ಕಷ್ಟ ನೀಗಿಸುವಂತೆ ಕೋರಿದ. ಅದಕ್ಕೆ ಒಪ್ಪಿದ ಶಿವ ಸೋಮನಾಥದಲ್ಲಿ ನೆಲೆಸಿದ. ಆಗ ರಾಜ ಸೋಮರಾಜ ಇಲ್ಲಿ ದೇವಾಲಯ ನಿರ್ಮಿಸಿ, ಶಿವನ ಜಟೆಯಲ್ಲಿ ಚಂದ್ರನಿರುವಂಥ ಮೂರ್ತಿ ನೆಲೆಗೊಳಿಸಿ ಅದಕ್ಕೆ ಸೋಮನಾಥ ಎಂಬ ಹೆಸರು ನೀಡಿದ. 

Lord Shiva Temple: ಶಿವನ ಮಹಿಮೆ ಸಾರುವ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳನ್ನು ಕಣ್ತುಂಬಿಕೊಳ್ಳಿ..

ಸೋಮನಾಥ ದೇವಾಲಯದ ಇತಿಹಾಸ(History)
ಗುಜರಾತ್‌ನ ವೆರಾವಲ್ ಬಂದರಿನಲ್ಲಿರುವ ಸೋಮನಾಥ ದೇವಾಲಯದ ಇತಿಹಾಸವು ಅನೇಕ ಏರಿಳಿತಗಳಿಂದ ಕೂಡಿದೆ. ಅರೇಬಿಕ್ ಪ್ರವಾಸಿ ಅಲ್-ಬಿರುನಿಯ ಪ್ರವಾಸ ಕಥನದಲ್ಲಿ ಸೋಮನಾಥ ದೇವಾಲಯದ ವೈಭವದ ಬಗ್ಗೆ ಕೇಳಿದಾಗ, ಅದರಿಂದ ಪ್ರಭಾವಿತನಾದ ವಿದೇಶಿ ಆಕ್ರಮಣಕಾರ ಮಹ್ಮದ್ ಘಜ್ನಿ ಹತ್ತನೇ ಶತಮಾನದಲ್ಲಿ ದೇವಾಲಯದ ಮೇಲೆ ದಾಳಿ ಮಾಡಿದ. ಘಜ್ನಿಯು ದೇವಾಲಯದ ಎಲ್ಲ ಆಸ್ತಿಯನ್ನು ಲೂಟಿ ಮಾಡಿದ್ದಲ್ಲದೆ ಅದನ್ನು ನಾಶ ಪಡಿಸಿದನು.

Even after 6 brutal attacks this Somnath temple abode of Shiva remains with grandeur skr

5 ಸಾವಿರ ಜನರೊಂದಿಗೆ ಘಜ್ನಿ ದೇವಸ್ಥಾನದ ಮೇಲೆ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಬಹಳಷ್ಟು ಸಂಖ್ಯೆಯ ಜನರನ್ನು ಹತ್ಯೆ ಮಾಡಲಾಯಿತು. ದೇವಾಲಯದ ರಕ್ಷಣೆಗಾಗಿ ಅಪಾರ ಸಂಖ್ಯೆಯ ಜನರು ಪ್ರಾಣ ತ್ಯಾಗ ಮಾಡಿದ್ದರು. ದಾಳಿಯ ನಂತರ ದೇವಾಲಯವು ಹೆಚ್ಚು ಹಾನಿಗೊಳಗಾದರೂ ಅದರ ಖ್ಯಾತಿ ಕಡಿಮೆಯಾಗಲಿಲ್ಲ.

ಇತಿಹಾಸಕಾರರ ಪ್ರಕಾರ, ಗುಜರಾತಿನ ರಾಜ ಭೀಮ ಮತ್ತು ಮಾಳವದ ರಾಜ ಭೋಜ್ ನಂತರ ದೇವಾಲಯವನ್ನು ಪುನರ್ನಿರ್ಮಿಸಿದರು. ಇದರ ನಂತರ, 1297ರಲ್ಲಿ, ದೆಹಲಿ ಸುಲ್ತಾನರು ಗುಜರಾತ್ ಮೇಲೆ ದಾಳಿ ಮಾಡಿದಾಗ, ಮತ್ತೊಮ್ಮೆ ಈ ದೇವಾಲಯವನ್ನು ನಾಶಪಡಿಸಲಾಯಿತು. ದೆಹಲಿಯ ಸುಲ್ತಾನ್ ಅಲಾವುದ್ದೀನ್ ಖಿಲ್ಜಿ ಗುಜರಾತ್ ಮೇಲೆ ದಾಳಿಗೆ ಆದೇಶಿಸಿದಾಗ, ಅವನ ಸೇನಾಪತಿ ನುಸ್ರತ್ ಖಾನ್ ಕೂಡ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿ ಉಗ್ರವಾಗಿ ಲೂಟಿ ಮಾಡಿದನು.

ನುಸ್ರತ್ ಖಾನ್ ದಾಳಿಯ ನಂತರವೂ ದೇವಾಲಯದ ಖ್ಯಾತಿ ಕಡಿಮೆಯಾಗಲಿಲ್ಲ ಮತ್ತು ಹಿಂದೂ ರಾಜರು ಅದನ್ನು ಪುನಃ ನಿರ್ಮಿಸಿದರು. ಆದರೆ 1395ರಲ್ಲಿ, ಈ ಪವಿತ್ರ ದೇವಾಲಯದ ಮೇಲೆ ಮೂರನೇ ಬಾರಿಗೆ ದಾಳಿ ಮಾಡಲಾಯಿತು. ಗುಜರಾತಿನ ಸುಲ್ತಾನ ಮುಜಾಫರ್ ಷಾ ಸೋಮನಾಥ ದೇವಾಲಯವನ್ನು ಧ್ವಂಸ ಮಾಡಿ ಎಲ್ಲ ಆಸ್ತಿಯನ್ನು ಲೂಟಿ ಮಾಡಿದನು. ದೇವಾಲಯವನ್ನು ನವೀಕರಿಸಲಾಯಿತು ಆದರೆ 1412 ರಲ್ಲಿ ಮುಜಾಫರ್ ಷಾನ ಮಗ ಅಹ್ಮದ್ ಷಾ ದೇವಾಲಯದ ಮೇಲೆ ದಾಳಿ ಮಾಡಿ ಮತ್ತೆ ಲೂಟಿ ಮಾಡಿದನು.

Nag Panchmi 2022: ಶ್ರಾವಣ ಸೋಮವಾರದಂದೇ ನಾಗರಪಂಚಮಿ! ಹಬ್ಬದ ದಿನಾಂಕ ಏನು?

ಸೋಮನಾಥ ದೇವಾಲಯದ ಮೇಲಿನ ದಾಳಿಯ ಸರಣಿಯು ಇಲ್ಲಿಗೆ ಕೊನೆಗೊಂಡಿಲ್ಲ. ಮೊಘಲ್ ದೊರೆ ಔರಂಗಜೇಬ್ ಕೂಡ ದೇವಾಲಯವನ್ನು ಎರಡು ಬಾರಿ ನೆಲಸಮಗೊಳಿಸಿದನು. ಆದರೂ ಈ ಪುಣ್ಯ ಧಾಮದ ಮೇಲಿನ ಭಕ್ತರ ನಂಬಿಕೆ ಕಡಿಮೆಯಾಗದೇ ಇಲ್ಲಿ ಪೂಜೆ ನಡೆಯುತ್ತಲೇ ಇತ್ತು.

ಸೋಮನಾಥದಲ್ಲಿ ಈಗ ಅಸ್ತಿತ್ವದಲ್ಲಿರುವ ದೇವಾಲಯವನ್ನು 1950ರಲ್ಲಿ ಅಂದಿನ ಭಾರತದ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸೂಚನೆಯ ಮೇರೆಗೆ ಪುನರ್ನಿರ್ಮಿಸಲಾಯಿತು. ಈ ದೇವಾಲಯವು 6 ಬಾರಿ ವಿಧ್ವಂಸವಾಗಿದೆ. ಆದರೆ ಪೂಜೆ ನಿಲ್ಲಲಿಲ್ಲ. ಶಿವ ಭಕ್ತರು ಹತಾಶರಾಗಲಿಲ್ಲ. ಈಗ ಭಾರತ ಸರ್ಕಾರವು ಈ ದೇವಾಲಯವನ್ನು ಸುಂದರಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ. ಇಲ್ಲಿ ಕಡಲತೀರದಲ್ಲಿ ಒಂದು ಕಿಲೋಮೀಟರ್ ಉದ್ದದ ಸಮುದ್ರ ದರ್ಶನದ ನಡಿಗೆ-ಪಥವನ್ನು ಸಿದ್ಧಪಡಿಸಲಾಗುತ್ತಿದೆ. ಇದಲ್ಲದೇ ಕೋಟ್ಯಂತರ ರೂ.ಗಳ ಹಲವು ಯೋಜನೆಗಳಿಗೆ ನಿರ್ಧರಿಸಲಾಗಿದೆ.

Latest Videos
Follow Us:
Download App:
  • android
  • ios